ADVERTISEMENT

ಜಿಎಸ್‌ಟಿ: ಒಣದ್ರಾಕ್ಷಿ ಬೆಲೆ ಕುಸಿತದ ಭೀತಿ

ಡಿ.ಬಿ, ನಾಗರಾಜ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಕೃಪೆ: ವಿಕಿಪೀಡಿಯಾ
ಕೃಪೆ: ವಿಕಿಪೀಡಿಯಾ   

ವಿಜಯಪುರ: ಸರಕು ಮತ್ತು ಸೇವಾ ತೆರಿಗೆ (ಜಿ.ಎಸ್‌.ಟಿ) ಅನುಷ್ಠಾನಕ್ಕೆ ಮುನ್ನವೇ ಒಣದ್ರಾಕ್ಷಿಯ ಬೆಲೆ ಕುಸಿದಿದ್ದು, ಜುಲೈ 1ರ ಬಳಿಕ ಇನ್ನಷ್ಟು ಕುಸಿಯುವ ಭೀತಿ ಬೆಳೆಗಾರರನ್ನು ಕಾಡುತ್ತಿದೆ. ರಾಜ್ಯದಲ್ಲಿ ಒಣದ್ರಾಕ್ಷಿಗೆ ಸದ್ಯಕ್ಕೆ ಶೇ 2 ಮೌಲ್ಯವರ್ಧಿತ ತೆರಿಗೆ ಇತ್ತು. ಇದೀಗ ಜಿ.ಎಸ್‌.ಟಿ ಮಂಡಳಿಯು ಶೇ 5 ತೆರಿಗೆ ನಿರ್ಧರಿಸಿದ್ದು, ರಾಜ್ಯದ ಅಂದಾಜು 20 ಸಾವಿರ ಒಣದ್ರಾಕ್ಷಿ ಉತ್ಪಾದಕರನ್ನು ಆತಂಕಕ್ಕೆ ದೂಡಿದೆ.

‘ವಿಜಯಪುರ ಮಾರುಕಟ್ಟೆಯಲ್ಲಿ ಒಂದು ಕೆ.ಜಿ. ಒಣದ್ರಾಕ್ಷಿ ಬೆಲೆ  ₹ 62ರಿಂದ 90ಕ್ಕೆ ನಿಗದಿಗೊಂಡರೆ, ಮಹಾರಾಷ್ಟ್ರದ ಸಾಂಗ್ಲಿ, ತಾಸ್ಕಗಾಂವ್‌ ಮಾರುಕಟ್ಟೆಯಲ್ಲಿ ₹ 90ರಿಂದ 130ರಂತೆ ಮಾರಾಟವಾಗುತ್ತಿದೆ. ಮಹಾರಾಷ್ಟ್ರದಲ್ಲಿ ಒಣದ್ರಾಕ್ಷಿ ವಹಿವಾಟಿಗೆ ತೆರಿಗೆ ವಿಧಿಸದೇ ಇರುವುದರಿಂದ ಅಲ್ಲಿ ಬೆಳೆಗಾರರಿಗೆ ಹೆಚ್ಚಿನ ದರವೇ ಸಿಗುತ್ತದೆ’ ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ ಅಭಯಕುಮಾರ ಎಸ್‌.ನಾಂದ್ರೇಕರ ತಿಳಿಸಿದ್ದಾರೆ.
‘ಒಣದ್ರಾಕ್ಷಿಯೂ ಜಿ.ಎಸ್‌.ಟಿ ವ್ಯಾಪ್ತಿಗೆ ಬಂದಿದ್ದು ಹೇಳಿಕೊಳ್ಳಲಾಗದ ನೋವು. ಆದರೂ ಇನ್ನು ಮುಂದೆ ದೇಶದ ಎಲ್ಲೆಡೆ ಒಂದೇ ತೆರಿಗೆ ನಿಗದಿಯಾಗಲಿರುವುದರಿಂದ ಹೊರ ರಾಜ್ಯದ ವ್ಯಾಪಾರಿಗಳು ನಮ್ಮತ್ತ ಬಂದರೆ ಬೆಲೆ ಏರಿಕೆಯಾಗಬಹುದು. ಈ ನಿಟ್ಟಿನಲ್ಲಿ ಬೆಳೆಗಾರರ ಸಂಘವು ಎ.ಪಿ.ಎಂ.ಸಿ ಅಧಿಕಾರಿಗಳ ಜತೆ ಮಾತುಕತೆ ನಡೆಸಿದ್ದು, ಹೊರ ರಾಜ್ಯಗಳ ವ್ಯಾಪಾರಿಗಳನ್ನು ಆಹ್ವಾನಿಸಲು ನಿರ್ಧರಿಸಿದೆ. ಇದರ ಜತೆಯಲ್ಲೇ ಆನ್‌ಲೈನ್‌ ವಹಿವಾಟಿಗೆ ಚಾಲನೆ ನೀಡುವಂತೆ ಸರ್ಕಾರದ ಮೇಲೆ ಒತ್ತಡ ಹಾಕಲಿದೆ’ ಎಂದು ನಾಂದ್ರೇಕರ ಹೇಳುತ್ತಾರೆ.

ರೈತರಿಗೆ ಹೊರೆ: ‘ಶೇ 2 ತೆರಿಗೆ ನಮ್ಮಲ್ಲಿರುವುದರಿಂದ ಮಹಾರಾಷ್ಟ್ರಕ್ಕಿಂತ ಕಡಿಮೆ ಬೆಲೆಗೆ ಉತ್ಪನ್ನ ಮಾರಾಟವಾಗುತ್ತಿತ್ತು. ಇದುವರೆಗೂ ₹ 100ರ ಮೌಲ್ಯದ ಉತ್ಪನ್ನವನ್ನು ವ್ಯಾಪಾರಸ್ಥರು ₹ 98ಕ್ಕೆ ಖರೀದಿಸುತ್ತಿದ್ದರು. ಜಿಎಸ್‌ಟಿ ಅನುಷ್ಠಾನಗೊಂಡರೆ ₹ 95ಕ್ಕೆ ಕೇಳಲಿದ್ದಾರೆ.
‘ವರ್ತಕರು ಯಾವತ್ತೂ ತಮ್ಮ ಲಾಭದಲ್ಲಿ ತೆರಿಗೆ ಕಟ್ಟುವುದಿಲ್ಲ. ಅದನ್ನೆಲ್ಲ ರೈತರಿಗೇ ವರ್ಗಾಯಿಸುವುದರಿಂದ ಬೆಲೆ ಮತ್ತಷ್ಟು ಕುಸಿಯಲಿದೆ. ಈಗಂತೂ ‘ಜಿ.ಎಸ್‌.ಟಿ ಗುಮ್ಮ’ದ ಹೆಸರಿನಲ್ಲಿ ವಹಿವಾಟೇ ನಡೆಯುತ್ತಿಲ್ಲ. ಇದರಿಂದಾಗಿ ಒಣದ್ರಾಕ್ಷಿ ಬೆಲೆ ಕುಸಿಯುತ್ತಿದೆ’ ಎಂದು ಉಪ್ಪಲದಿನ್ನಿಯ ಸೋಮನಾಥ ಶಿವನಗೌಡ ಬಿರಾದಾರ ಹೇಳಿದ್ದಾರೆ.

ADVERTISEMENT

‘ಸಂಕಷ್ಟದ ಸುಳಿಯಲ್ಲಿ ಸಿಲುಕಿರುವ ದ್ರಾಕ್ಷಿ ಬೆಳೆಗಾರರ ರಕ್ಷಣೆಗೆ ಸರ್ಕಾರವೇ ಮುಂದಾಗಬೇಕು. ಉತ್ಪನ್ನಕ್ಕೆ ಜಿ.ಎಸ್‌.ಟಿ ಅಡಿಯಲ್ಲೂ ತೆರಿಗೆ ವಿನಾಯ್ತಿ ನೀಡಿದರೆ ಮಾತ್ರ ಉಸಿರಾಡಬಹುದು’ ಎಂದು ಕೊಲ್ಹಾರದ ಸಿದ್ಧಪ್ಪ ದುಂಡಪ್ಪ ಬಾಲಗೊಂಡ ಹೇಳಿದ್ದಾರೆ.
ಅನುಕೂಲ: ‘ಒಣದ್ರಾಕ್ಷಿಗೆ ಆಂಧ್ರಪ್ರದೇಶ, ಬಿಹಾರದಲ್ಲಿ ಶೇ 12.5, ನವದೆಹಲಿ, ತಮಿಳುನಾಡಿನಲ್ಲಿ ಶೇ 5ರಷ್ಟು ತೆರಿಗೆ ಇತ್ತು. ಇದೀಗ ದೇಶದ ಎಲ್ಲೆಡೆ ಒಂದೇ ತೆರಿಗೆ ನಿರ್ಧಾರವಾಗಿದೆ. ಇನ್ನು ಮುಂದೆ ‘ಸೆಕೆಂಡ್ಸ್‌’ ವಹಿವಾಟಿಗೆ ಅವಕಾಶವಿರಲ್ಲ. ಬಿಲ್ಲಿಂಗ್‌ ವಹಿವಾಟು ನಡೆಸಬೇಕು. ಜಿ.ಎಸ್‌.ಟಿ ಅನುಷ್ಠಾನದಿಂದ ಬೆಲೆಯಲ್ಲಿ ಸಾಕಷ್ಟು ಏರಿಳಿತಗಳಾಗಬಹುದು ಎಂದು ವಹಿವಾಟನ್ನೇ ಸ್ಥಗಿತಗೊಳಿಸಿದ್ದೇವೆ’ ಎಂದು ವ್ಯಾಪಾರಿ ನಿರ್ಮಲ್‌ ರುಣವಾಲ ತಿಳಿಸಿದರು.

ವಿನಾಯ್ತಿಗೆ ಮೊರೆ
‘ದ್ರಾಕ್ಷಿ ಬೆಳೆಗಾರರು ದಯನೀಯ ಸ್ಥಿತಿಯಲ್ಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ತೆರಿಗೆ ವಿಧಿಸಿದ್ದು ಬೆಳೆಗಾರರಿಗೆ ನುಂಗಲಾರದ ತುತ್ತಾಗಿದೆ. ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸುವ ಜತೆಗೆ, ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರನ್ನು ಭೇಟಿ ಮಾಡಿ ವಿನಾಯ್ತಿ ನೀಡುವಂತೆ ಮನವಿ ಮಾಡಲಾಗುವುದು’ ಎಂದು ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ಅಧ್ಯಕ್ಷ  ಅಭಯಕುಮಾರ ಎಸ್‌.ನಾಂದ್ರೇಕರ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.

ವಿವಿಧ ರಾಜ್ಯಗಳಲ್ಲಿ ತೆರಿಗೆ ದರದಲ್ಲಿ ಸಾಕಷ್ಟು ವ್ಯತ್ಯಾಸವಿತ್ತು. ಇದೀಗ ಒಣದ್ರಾಕ್ಷಿಗೆ ಒಂದೇ ತೆರಿಗೆ ನಿಗದಿಯಾಗಿದ್ದು, ರೈತರಿಗೆ ಅನುಕೂಲವಾಗಲಿದೆ

ನಿರ್ಮಲ್ ರುಣವಾಲ,
ಒಣದ್ರಾಕ್ಷಿ ವ್ಯಾಪಾರಿ

ಒಣದ್ರಾಕ್ಷಿಯೂ ಜಿಎಸ್‌ಟಿ ವ್ಯಾಪ್ತಿಗೊಳಪಟ್ಟಿರುವುದು ರೈತರಿಗೆ ಹೊರೆಯಾಗಲಿದೆ. ವ್ಯಾಪಾರಸ್ಥರು  ಈ ತೆರಿಗೆ ಹೊರೆಯನ್ನು ರೈತರಿಗೇ ವರ್ಗಾಯಿಸುತ್ತಾರೆ
ಸೋಮನಾಥ ಶಿವನಗೌಡ ಬಿರಾದಾರ,
ದ್ರಾಕ್ಷಿ ಬೆಳೆಗಾರ

ಅಂಕಿ–ಅಂಶ

ರಾಜ್ಯದ 16 ಜಿಲ್ಲೆಗಳಲ್ಲಿ ದ್ರಾಕ್ಷಿ ಬೆಳೆ

4- ಜಿಲ್ಲೆಗಳಲ್ಲಿ ಒಣದ್ರಾಕ್ಷಿ ತಯಾರಿಕೆ

48 - ಸಾವಿರ ಎಕರೆಯ ಬೆಳೆ ಒಣದ್ರಾಕ್ಷಿ ಉತ್ಪನ್ನಕ್ಕೆ

₹3- ಸಾವಿರ ಕೋಟಿ ವಾರ್ಷಿಕ ವಹಿವಾಟು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.