ADVERTISEMENT

ಜಿಎಸ್‌ಟಿ: ದೋಷಪೂರಿತ ಮಾಹಿತಿ ಮರುಪಾವತಿ ವಿಳಂಬಕ್ಕೆ ಕಾರಣ

ಪಿಟಿಐ
Published 25 ಫೆಬ್ರುವರಿ 2018, 20:15 IST
Last Updated 25 ಫೆಬ್ರುವರಿ 2018, 20:15 IST
ಜಿಎಸ್‌ಟಿ: ದೋಷಪೂರಿತ ಮಾಹಿತಿ ಮರುಪಾವತಿ ವಿಳಂಬಕ್ಕೆ ಕಾರಣ
ಜಿಎಸ್‌ಟಿ: ದೋಷಪೂರಿತ ಮಾಹಿತಿ ಮರುಪಾವತಿ ವಿಳಂಬಕ್ಕೆ ಕಾರಣ   

ನವದೆಹಲಿ: ರಫ್ತುದಾರರು ಸಲ್ಲಿಸಿದ ದೋಷಪೂರಿತ ಮಾಹಿತಿಯಿಂದಾಗಿಯೇ ಸರಕು ಮತ್ತು ಸೇವಾ ತೆರಿಗೆಯ (ಜಿಎಸ್‌ಟಿ) ಶೇ 70ರಷ್ಟು ಮರು ಪಾವತಿಯು ಸಮರ್ಪಕವಾಗಿ ಕಾರ್ಯಗತಗೊಂಡಿಲ್ಲ.

ಅಂತಿಮ ರಿಟರ್ನ್ಸ್‌ನಲ್ಲಿ ಲೋಪಗಳನ್ನು ಸರಿಪಡಿಸಿದರೆ ಮಾರ್ಚ್‌ ತಿಂಗಳಲ್ಲಿ ತೆರಿಗೆ ಮರುಪಾವತಿ ಮಾಡಲು ಸಾಧ್ಯವಾಗಲಿದೆ ಎಂದು ಎಕ್ಸೈಸ್‌ ಮತ್ತು ಕಸ್ಟಮ್ಸ್‌ ಕೇಂದ್ರೀಯ ಮಂಡಳಿಯು (ಸಿಬಿಇಸಿ) ತಿಳಿಸಿದೆ.

ಅಕ್ಟೋಬರ್ ತಿಂಗಳಿನಿಂದೀಚೆಗೆ ರಫ್ತುದಾರರಿಗೆ ₹ 4,000 ಕೋಟಿಗಳಷ್ಟು ಮೊತ್ತವನ್ನು ಹಿಂತಿರುಗಿಸಲು ‘ಸಿಬಿಇಸಿ’  ಮಂಜೂರಾತಿ ನೀಡಿದೆ. ಜಿಎಸ್‌ಟಿಆರ್‌ 1 ಅಥವಾ ಪಟ್ಟಿ 6ಎ ಅಥವಾ ಜಿಎಸ್‌ಟಿಆರ್‌ 3ಬಿನಲ್ಲಿ ನೀಡಿರುವ ದೋಷಪೂರಿತ ಮಾಹಿತಿ ಮತ್ತು ಕಸ್ಟಮ್ಸ್‌ನಲ್ಲಿ ಭರ್ತಿ ಮಾಡಿರುವ ರಫ್ತು ವಹಿವಾಟಿನ ಬಿಲ್‌ನಲ್ಲಿರುವ ಮಾಹಿತಿ ತಪ್ಪಾಗಿರುವುದರಿಂದ ₹ 10 ಸಾವಿರ ಕೋಟಿಗಳಷ್ಟು ತೆರಿಗೆ ಮರುಪಾವತಿ ಬೇಡಿಕೆಗಳು ಇತ್ಯರ್ಥಗೊಳ್ಳದೆ ಬಾಕಿ ಉಳಿದಿವೆ.

ADVERTISEMENT

ಜಿಎಸ್‌ಟಿಆರ್‌1 ಮತ್ತು ‘ಪಟ್ಟಿ 6ಎ’ಗೆ ಸಂಬಂಧಿಸಿದ ಶೇ 32ರಷ್ಟು ದಾಖಲೆಗಳು ಮಾತ್ರ ಜಿಎಸ್‌ಟಿಎನ್‌ನಿಂದ ಕಸ್ಟಮ್ಸ್‌ ಇಲಾಖೆಗೆ ವರ್ಗಾಯಿಸಲಾಗಿದೆ. ರಿಟರ್ನ್ಸ್‌ಗಳಲ್ಲಿ ದೋಷಗಳು ಕಡಿಮೆಯಾಗುತ್ತಿದ್ದರೂ, ಬಹುಸಂಖ್ಯಾತ ರಫ್ತುದಾರರು ಅಪೂರ್ಣ ‘ಜಿಎಸ್‌ಟಿಆರ್‌ 1’ ಗಳನ್ನು ಸಲ್ಲಿಸುತ್ತಿದ್ದಾರೆ. ಇಂತಹ ರಿಟರ್ನ್ಸ್‌ಗಳನ್ನು ಜಿಎಸ್‌ಟಿಎನ್‌, ಕಸ್ಟಮ್ಸ್ ಇಲಾಖೆಗೆ ರವಾನೆ ಮಾಡುತ್ತಿಲ್ಲ. ತಮ್ಮ ದಾಖಲೆಗಳನ್ನು ಸರಿಪಡಿಸಲು ರಫ್ತುದಾರರಿಗೆ ಇ–ಮೇಲ್‌ ಮೂಲಕ ಕೇಳಿಕೊಳ್ಳಲಾಗಿದೆ ಎಂದು ‘ಸಿಬಿಇಸಿ’ ತಿಳಿಸಿದೆ.

ರಫ್ತುದಾರರು ಪಾವತಿಸಿದ ಜಿಎಸ್‌ಟಿಗಿಂತ ಮರು ಪಾವತಿಗೆ ಕೋರಿರುವ ಮೊತ್ತ ಹೆಚ್ಚಿಗೆ ಇರುವುದು ಬಹುತೇಕ ಪ್ರಕರಣಗಳಲ್ಲಿ  ಕಂಡು ಬಂದಿರುವುದು ಕೂಡ ಮರು ಪಾವತಿ ವಿಳಂಬಕ್ಕೆ ಕಾರಣವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.