ADVERTISEMENT

ಜಿಎಸ್‌ಟಿ: ರಫ್ತು ಹೆಚ್ಚಳ

ಪಿಟಿಐ
Published 23 ಮಾರ್ಚ್ 2017, 19:36 IST
Last Updated 23 ಮಾರ್ಚ್ 2017, 19:36 IST
ನಿರ್ಮಲಾ ಸೀತಾರಾಮನ್‌
ನಿರ್ಮಲಾ ಸೀತಾರಾಮನ್‌   

ನವದೆಹಲಿ: ಜಿಎಸ್‌ಟಿ ಜಾರಿಯಿಂದ ರಫ್ತು ವಹಿವಾಟು ಮತ್ತಷ್ಟು ಸ್ಪರ್ಧಾತ್ಮಕವಾಗಲಿದೆ ಎಂದು ಕೇಂದ್ರ ವಾಣಿಜ್ಯ ಸಚಿವೆ ನಿರ್ಮಲಾ ಸೀತಾರಾಮನ್‌
ಅಭಿಪ್ರಾಯಪಟ್ಟರು.

ಜಿಎಸ್‌ಟಿ ಜಾರಿಯಿಂದ ಭಾರತದಲ್ಲಿ ಒಂದೇ ಮಾರುಕಟ್ಟೆ ಇದೆ ಎನ್ನುವ ಭಾವನೆ ಮೂಡುತ್ತದೆ. ವ್ಯಾಪಾರ ನಡೆಸಲು ರಾಜ್ಯಗಳ ಮಧ್ಯೆ ಇರುವ ಅಡೆತಡೆ ನಿವಾರಣೆಯಾಗಲಿವೆ ಎಂದರು.

ದೇಶದೊಳಗೆ ಸರಕು ಸಾಗಣೆಗೆ ಯಾವುದೆ ತೊಡಕುಗಳಿರುವುದಿಲ್ಲ. ಸ್ಪರ್ಧಾತ್ಮಕವಾಗಿ ಹೆಚ್ಚು ವೆಚ್ಚವಿಲ್ಲದೇ ರಫ್ತು ವಹಿವಾಟು ನಡೆಸಬಹುದು ಎಂದರು.

‘ಆ್ಯಪಲ್‌  ಕಂಪೆನಿಯ  ಬೇಡಿಕೆ ಒಪ್ಪಿಲ್ಲ’
ಆ್ಯಪಲ್‌ ಕಂಪೆನಿ ಮುಂದಿಟ್ಟಿರುವ ಎಲ್ಲಾ ಬೇಡಿಕೆಗಳನ್ನೂ ಸರ್ಕಾರ ಒಪ್ಪಿಕೊಂಡಿಲ್ಲ ಎಂದು ನಿರ್ಮಲಾ ಸೀತಾರಾಮನ್  ಸ್ಪಷ್ಟಪಡಿಸಿದ್ದಾರೆ.

ಆ್ಯಪಲ್‌ ಕಂಪೆನಿ ಬೆಂಗಳೂರಿನಲ್ಲಿ ಐಫೋನ್‌ ತಯಾರಿಕಾ ಘಟಕ ಸ್ಥಾಪಿಸಲು ಮುಂದಾಗಿದೆ. ಈ ಸಂಬಂಧ ಆ್ಯಪಲ್‌ ಕಂಪೆನಿ ತೆರಿಗೆ ಮತ್ತು ನೀತಿಯಲ್ಲಿ ಕೆಲವು ವಿನಾಯಿತಿ ನೀಡುವಂತೆ ಬೇಡಿಕೆ ಸಲ್ಲಿಸಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಕ್ರಿಯೆ ನೀಡಿದ ಅವರು, ಕಂಪೆನಿಯ ಎಲ್ಲ ಬೇಡಿಕೆಗಳನ್ನೂ ಒಪ್ಪಿಕೊಂಡಿಲ್ಲ ಎಂದು ಹೇಳಿದ್ದಾರೆ.

ತಯಾರಿಕಾ ವೆಚ್ಚ ತಗ್ಗಿಸುವ ಉದ್ದೇಶದಿಂದ ಆ್ಯಪಲ್‌ ಕಂಪೆನಿ ಭಾರತದಲ್ಲಿ ತಯಾರಿಕಾ ಘಟಕ ಸ್ಥಾಪನೆಗೆ ಮುಂದಾಗಿದೆ. ಆದರೆ, ನೇರವಾಗಿ ಭಾರತದಲ್ಲಿ ಐಫೋನ್‌ ತಯಾರಿಸುವುದಿಲ್ಲ. ಹೊರಗುತ್ತಿಗೆ ನೀಡುವ ಮೂಲಕ ಫೋನ್‌ ತಯಾರಿಸಲಿದೆ.

ತಯಾರಿಕಾ ಘಟಕ ಸ್ಥಾಪಿಸುವ ಕುರಿತು ಸರ್ಕಾರ ಮತ್ತು ಕಂಪೆನಿ ಮಧ್ಯೆ ಬಹಳ ದಿನಗಳಿಂದ ಮಾತುಕತೆ ನಡೆಯುತ್ತಿದೆ. ಬೆಂಗಳೂರಿನ ಪೀಣ್ಯ ಕೈಗಾರಿಕಾ  ಪ್ರದೇಶದಲ್ಲಿ ಘಟಕ ಸ್ಥಾಪನೆಗೆ ಕಂಪೆನಿ ಒಪ್ಪಿಗೆ ನೀಡಿದೆ ಎಂದು ಐ.ಟಿ ಸಚಿವ ಪ್ರಿಯಾಂಕ ಖರ್ಗೆ  ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT