ADVERTISEMENT

ಟಾಟಾ ಅಧ್ಯಕ್ಷ ಮಿಸ್ತ್ರಿ ವಜಾ

ಕಾರ್ಪೊರೇಟ್‌ ವಲಯದಲ್ಲಿ ದಿಗ್ಭ್ರಮೆ ಮೂಡಿಸಿದ ಹಠಾತ್‌ ಬೆಳವಣಿಗೆ

ಪಿಟಿಐ
Published 24 ಅಕ್ಟೋಬರ್ 2016, 19:34 IST
Last Updated 24 ಅಕ್ಟೋಬರ್ 2016, 19:34 IST
ರತನ್‌ ಟಾಟಾ ಜತೆ ಸೈರಸ್  ಪಿ. ಮಿಸ್ತ್ರಿ
ರತನ್‌ ಟಾಟಾ ಜತೆ ಸೈರಸ್ ಪಿ. ಮಿಸ್ತ್ರಿ   

ಮುಂಬೈ: ಹಠಾತ್‌ ಮತ್ತು ನಾಟಕೀಯ ಬೆಳವಣಿಗೆಯೊಂದರಲ್ಲಿ ಸೈರಸ್ ಪಿ. ಮಿಸ್ತ್ರಿ ಅವರನ್ನು ಟಾಟಾ ಗ್ರೂಪ್‌ನ ಅಧ್ಯಕ್ಷ ಹುದ್ದೆಯಿಂದ ತಕ್ಷಣದಿಂದ ಜಾರಿಗೆ ಬರುವಂತೆ ವಜಾಗೊಳಿಸಲಾಗಿದೆ.

ಉಪ್ಪು ತಯಾರಿಕೆಯಿಂದ ಸಾಫ್ಟ್‌ವೇರ್‌ವರೆಗಿನ ವಾರ್ಷಿಕ ₹ 6.70 ಲಕ್ಷ ಕೋಟಿಗಳಷ್ಟು ವರಮಾನದ ದೈತ್ಯ ಕೈಗಾರಿಕಾ ಸಮೂಹದ ಈ ನಿರ್ಧಾರವು  ದೇಶಿ ಕಾರ್ಪೊರೇಟ್‌ ವಲಯದ ಪಾಲಿಗೆ ತೀರಾ ಅನಿರೀಕ್ಷಿತ ಬೆಳವಣಿಗೆಯಾಗಿದೆ.  

ಸಂಸ್ಥೆಯ ದೀರ್ಘಾವಧಿ ಹಿತಾಸಕ್ತಿ ರಕ್ಷಣೆಯ ಉದ್ದೇಶಕ್ಕೆ ಮಿಸ್ತ್ರಿ ಅವರನ್ನು ಅಧ್ಯಕ್ಷ ಹುದ್ದೆಯಿಂದ ಹೊರಗೆ ಹಾಕಲಾಗಿದೆ ಎಂದು ಟಾಟಾ ಸನ್ಸ್‌ನ ಹೇಳಿಕೆಯಲ್ಲಿ ತಿಳಿಸಲಾಗಿದೆ. ಮಿಸ್ತ್ರಿ ಅವರನ್ನು 2011ರ ನವೆಂಬರ್‌ನಲ್ಲಿ ರತನ್‌ ಟಾಟಾ ಅವರ ಉತ್ತರಾಧಿಕಾರಿಯನ್ನಾಗಿ ನೇಮಿಸಲಾಗಿತ್ತು. 

ಇದು, ಟಾಟಾ ಕುಟುಂಬ ಮತ್ತು ಟಾಟಾ ಸಮೂಹದ ಅತಿದೊಡ್ಡ ಪಾಲುದಾರ ಸಂಸ್ಥೆಯಾಗಿರುವ ಶಪೂರ್ಜಿ ಪಲ್ಲೊಂಜಿ  ಸಮೂಹದ ಮಧ್ಯೆ ಸಂಘರ್ಷಕ್ಕೆ ಕಾರಣವಾಗಲಿದೆ ಎಂದು ಶಂಕಿಸಲಾಗಿದೆ. ಮಿಸ್ತ್ರಿ ವಜಾ ಕ್ರಮ ಕಾನೂನುಬಾಹಿರ ಎಂದು ಪಲ್ಲೊಂಜಿ ಸಮೂಹವು ಹೇಳಿದೆ. ಇದರ ವಿರುದ್ಧ ಕಾನೂನು ಹೋರಾಟದ ಸುಳಿವು ನೀಡಿದೆ. ಮಿಸ್ತ್ರಿ ಅವರು ಶಪೂರ್ಜಿ ಪಲ್ಲೊಂಜಿ  ಸಮೂಹದ ಮುಖ್ಯಸ್ಥ ಪಲ್ಲೊಂಜಿ ಮಿಸ್ತ್ರಿ ಅವರ ಕಿರಿಯ ಪುತ್ರ.

ಹಂಗಾಮಿ ಅಧ್ಯಕ್ಷ: ಸೋಮವಾರ ಇಲ್ಲಿ ನಡೆದ ಟಾಟಾ ಸನ್ಸ್‌ ಲಿಮಿಟೆಡ್‌ನ ಆಡಳಿತ ಮಂಡಳಿ ಸಭೆಯಲ್ಲಿ 48 ವರ್ಷದ ಮಿಸ್ತ್ರಿ ಅವರನ್ನು ತಕ್ಷಣದಿಂದಲೇ ಜಾರಿಯಾಗುವಂತೆ ಬದಲಿಸಿ,  78 ವರ್ಷದ ರತನ್‌ ಟಾಟಾ ಅವರನ್ನು ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ.

ಶೋಧನಾ ಸಮಿತಿ: ಮಿಸ್ತ್ರಿ ಅವರ ಉತ್ತರಾಧಿಕಾರಿಯನ್ನು ನಾಲ್ಕು ತಿಂಗಳಲ್ಲಿ ಗುರುತಿಸಲು ಐದು ಮಂದಿ ಸದಸ್ಯರ ಶೋಧನಾ ಸಮಿತಿಯೊಂದನ್ನು ರಚಿಸಲಾಗಿದೆ.

ಸಮಿತಿಯಲ್ಲಿ ರತನ್‌ ಟಾಟಾ, ಟಿವಿಎಸ್‌ ಗ್ರೂಪ್‌ ಮುಖ್ಯಸ್ಥ ವೇಣು ಶ್ರೀನಿವಾಸನ್‌, ಬೈನ್‌ ಕ್ಯಾಪಿಟಲ್‌ನ ಅಮಿತ್‌ ಚಂದ್ರ, ಮಾಜಿ ರಾಜತಾಂತ್ರಿಕ ರೋನೆನ್‌ ಸೇನ್‌ ಮತ್ತು ಲಾರ್ಡ್‌ ಕುಮಾರ್‌ ಭಟ್ಟಾಚಾರ್ಯ ಅವರು ಇದ್ದಾರೆ. ಭಟ್ಟಾಚಾರ್ಯ ಅವರನ್ನು ಹೊರತುಪಡಿಸಿ ಉಳಿದವರೆಲ್ಲ ಟಾಟಾ ಸನ್ಸ್‌ನ ಆಡಳಿತ ಮಂಡಳಿಯಲ್ಲಿ ಇದ್ದಾರೆ. ನಾಲ್ಕು ತಿಂಗಳಲ್ಲಿ ಹೊಸ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಳಿಸಲು ಸೂಚಿಸಲಾಗಿದೆ.

ಉದ್ದಿಮೆ ಸಮೂಹ ಬೆಳೆಸಲು ರತನ್‌ ಟಾಟಾ ಅವರು ಕೈಗೊಂಡಿದ್ದ ಕ್ರಮಗಳಿಗೆ ವ್ಯತಿರಿಕ್ತವಾಗಿ ಇವರು ಸಮೂಹದ ಸಂಪತ್ತು ಕಡಿಮೆ ಮಾಡಲು ಹೊರಟಿದ್ದರು.  ಅವುಗಳ ಪೈಕಿ   ವಿಶೇಷವಾಗಿ ಟಾಟಾ ಸ್ಟೀಲ್‌ ಯುರೋಪ್‌ ಘಟಕವನ್ನು ಮಾರಾಟ ಮಾಡಿದ್ದರು.

ತಾಜ್‌ ಸಮೂಹದ ಹೋಟೆಲ್‌ಗಳನ್ನು ನಿರ್ವಹಿಸುವ, ಇಂಡಿಯನ್‌ ಹೋಟೆಲ್ಸ್‌ ಕಂಪೆನಿ ಲಿಮಿಟೆಡ್‌ (ಐಎಚ್‌ಸಿಎಲ್‌), ತಾಜ್‌ ಬೋಸ್ಟನ್‌ ಹೋಟೆಲ್‌ ಅನ್ನು ಅಂದಾಜು ₹ 839 ಕೋಟಿಗಳಿಗೆ ಮಾರಾಟ ಮಾಡಿತ್ತು.

ದೂರಸಂಪರ್ಕ ವಲಯದ ಜಪಾನಿನ ಡೊಕೊಮೊ ಸಂಸ್ಥೆ ಜತೆಗಿನ ಜಂಟಿ ಉದ್ದಿಮೆ (ಟಾಟಾ ಡೊಕೊಮೊ) ಕುರಿತು ಟಾಟಾ ಸಮೂಹವು 
ಜಪಾನ್‌ ಸಂಸ್ಥೆ ಜತೆ ಕಾನೂನು ಹೋರಾಟದಲ್ಲಿ ತೊಡಗಿತ್ತು. ಈ ಎಲ್ಲ ವಿಷಯಗಳಲ್ಲಿ ಮಿಸ್ತ್ರಿ ಅವರು ತಳೆದ  ಧೋರಣೆಯೇ ಅವರಿಗೆ ಮುಳುವಾಗಿ ಪರಿಣಮಿಸಿತು ಎಂದು ವಿಶ್ಲೇಷಿಸಲಾಗುತ್ತಿದೆ.

ಸೈರಸ್‌ ಮಿಸ್ತ್ರಿ ಅವರ ಒಟ್ಟಾರೆ ಆಡಳಿತ ನಿರ್ವಹಣೆ ಬಗ್ಗೆ ಆಡಳಿತ ಮಂಡಳಿಯಲ್ಲಿ ತೀವ್ರ ಭಿನ್ನಾಭಿಪ್ರಾಯಗಳು ಮೂಡಿದ್ದವು ಎನ್ನಲಾಗಿದೆ.
*
ಅಂಕಿ ಅಂಶ
₹6.70ಲಕ್ಷ
ಕೋಟಿ ಟಾಟಾ ಸಮೂಹ ವಾರ್ಷಿಕ ವರಮಾನ
18.4% ಶಪೂರ್ಜಿ ಪಲ್ಲೊಂಜಿ ಗ್ರೂಪ್‌ನ ಪಾಲು ಬಂಡವಾಳ
66% ಟಾಟಾ ಕುಟುಂಬ  ಒಡೆತನದ ಟ್ರಸ್ಟ್‌ನ ಪಾಲು ಬಂಡವಾಳ
7 ಲಕ್ಷ ಸಿಬ್ಬಂದಿ ಸಂಖ್ಯೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.