ADVERTISEMENT

ಟಾಟಾ ಸನ್ಸ್‌ ಈಗ ಪ್ರೈವೇಟ್‌ ಕಂಪೆನಿ

ಸೈರಸ್‌ ಮಿಸ್ತ್ರಿಗೆ ಇನ್ನೊಂದು ಹಿನ್ನಡೆ

ಪಿಟಿಐ
Published 21 ಸೆಪ್ಟೆಂಬರ್ 2017, 19:30 IST
Last Updated 21 ಸೆಪ್ಟೆಂಬರ್ 2017, 19:30 IST
ಟಾಟಾ ಸನ್ಸ್‌ ಈಗ ಪ್ರೈವೇಟ್‌ ಕಂಪೆನಿ
ಟಾಟಾ ಸನ್ಸ್‌ ಈಗ ಪ್ರೈವೇಟ್‌ ಕಂಪೆನಿ   

ಮುಂಬೈ : ಟಾಟಾ ಸಮೂಹದ ಪ್ರವರ್ತಕ ಸಂಸ್ಥೆಯಾಗಿರುವ ಟಾಟಾ ಸನ್ಸ್‌, ಪ್ರೈವೇಟ್‌ ಲಿಮಿಟೆಡ್‌ ಕಂಪೆನಿಯಾಗಿ ಪರಿವರ್ತನೆಗೊಳ್ಳಲು ಷೇರುದಾರರು ಸಮ್ಮತಿ ನೀಡಿದ್ದಾರೆ.

ಗುರುವಾರ ಇಲ್ಲಿ ನಡೆದ ಕಂಪೆನಿಯ ವಾರ್ಷಿಕ ಸರ್ವ ಸದಸ್ಯರ (ಎಜಿಎಂ) ಸಭೆಯಲ್ಲಿ ಹೆಸರು ಬದಲಾವಣೆಗೆ ಸಂಬಂಧಿಸಿದ ಎಲ್ಲ ಗೊತ್ತುವಳಿಗಳಿಗೆ ಷೇರುದಾರರಿಂದ ಅಗತ್ಯವಾದ ಬೆಂಬಲ ಸಿಕ್ಕಿದೆ ಎಂದು ಸಂಸ್ಥೆಯ ಮೂಲಗಳು ತಿಳಿಸಿವೆ.‌

ಮತದಾನದ ವಿವರಗಳು ತಕ್ಷಣಕ್ಕೆ ತಿಳಿದು ಬಂದಿಲ್ಲ. ಈ ಗೊತ್ತುವಳಿಗೆ ಕನಿಷ್ಠ ಶೇ 75ರಷ್ಟು ಷೇರುದಾರರ ಬೆಂಬಲ ಅಗತ್ಯವಾಗಿತ್ತು.

ADVERTISEMENT

ಪಬ್ಲಿಕ್‌ ಲಿಮಿಟೆಡ್‌ ಕಂಪೆನಿಯಲ್ಲಿ ಷೇರುದಾರರು ತಮ್ಮ ಪಾಲನ್ನು ಯಾರಿಗೆ ಬೇಕಾದರೂ ಮಾರಲು ಅವಕಾಶ ಇರುತ್ತದೆ.

ಪ್ರೈವೇಟ್‌ ಲಿಮಿಟೆಡ್‌ ಸಂಸ್ಥೆಯಲ್ಲಿ ಷೇರುಗಳನ್ನು ಹೊರಗಿನವರಿಗೆ ಮಾರಾಟ ಮಾಡುವುದರ ಮೇಲೆ ನಿರ್ಬಂಧ ಇರುತ್ತದೆ. ಇನ್ನು ಮುಂದೆ ಸೈರಸ್‌ ಮಿಸ್ತ್ರಿ ಕುಟುಂಬವು ತನ್ನ ಪಾಲನ್ನು ಹೊರಗಿನವರಿಗೆ ಮಾರಾಟ ಮಾಡಲು  ಸಾಧ್ಯವಾಗಲಾರದು. ಟಾಟಾ ಸನ್ಸ್‌ನ ಪದಚ್ಯುತ ಅಧ್ಯಕ್ಷ ಸೈರಸ್ ಮಿಸ್ತ್ರಿ ಅವರಿಗೆ ಇದರಿಂದ ಇನ್ನಷ್ಟು ಹಿನ್ನಡೆಯಾಗಿದೆ.

ಟಾಟಾ ಸನ್ಸ್‌ನಲ್ಲಿ ಶೇ 18.4 ರಷ್ಟು ಪಾಲು ಹೊಂದಿದ್ದ ಸೈರಸ್‌ ಮಿಸ್ತ್ರಿ ಕುಟುಂಬವು, ಈ ಪ್ರಸ್ತಾವದ ವಿರುದ್ಧ ಮತ ಚಲಾಯಿಸುವುದಾಗಿ ಹೇಳಿತ್ತು.  ಸಂಸ್ಥೆಯಲ್ಲಿ ಇರುವ ಕಡಿಮೆ ಪ್ರಮಾಣದ ಷೇರುದಾರರನ್ನು ಬಹುಸಂಖ್ಯಾತ ಷೇರುದಾರರು ತುಳಿಯುವ ಇನ್ನೊಂದು ಪ್ರಯತ್ನ ಇದಾಗಿದೆ. ಸಾರ್ವಜನಿಕ ಪಾಲುದಾರರ ಹಿತಾಸಕ್ತಿಗೆ ವಿರುದ್ಧವಾಗಿದೆ ಎಂದು ಸೈರಸ್‌ ಇನ್‌ವೆಸ್ಟ್‌ಮೆಂಟ್ಸ್‌, ಟಾಟಾ ಸನ್ಸ್‌ ನಿರ್ದೇಶಕ ಮಂಡಳಿಗೆ ಪತ್ರ ಬರೆದು ತನ್ನ ಆಕ್ಷೇಪ ದಾಖಲಿಸಿತ್ತು.

ಜೆಆರ್‌ಡಿ ಟಾಟಾ ಅವರು ಟಾಟಾ ಸನ್ಸ್‌ನ ಅಧ್ಯಕ್ಷರಾದಾಗ  ಅವರ ಕಿರಿಯ ಸೋದರ ದೋರಬ್‌ ಅವರು ತಮ್ಮ ಪಾಲು ಬಂಡವಾಳವನ್ನು  ಪಲ್ಲೊಂಜಿ ಮಿಸ್ತ್ರಿ ಅವರಿಗೆ ಮಾರಾಟ ಮಾಡಿದ್ದರು. ಈ ಪಾಲನ್ನು ಶಪೂರ್‌ ಮಿಸ್ತ್ರಿ ಮತ್ತು ಸೈರಸ್‌ ಮಿಸ್ತ್ರಿ ಅವರಲ್ಲಿ ಸಮಾನವಾಗಿ ಹಂಚಲಾಗಿತ್ತು.

ಒಳ್ಳೆಯ ಉದ್ದೇಶಕ್ಕೆ ಕಾರ್ಪೊರೇಟ್‌ ಸ್ವರೂಪ ಬದಲಿಸಲು ಸಂಸ್ಥೆಯ ನಿರ್ದೇಶಕ ಮಂಡಳಿ ಉದ್ದೇಶಿಸಿದೆ ಎಂದು ಟಾಟಾ ಸನ್ಸ್‌ ವಕ್ತಾರರು ಪ್ರತಿಕ್ರಿಯಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.