ADVERTISEMENT

ಡಿಜಿಟಲ್‌ ಪಾವತಿ ವ್ಯವಸ್ಥೆ

​ಪ್ರಜಾವಾಣಿ ವಾರ್ತೆ
Published 23 ಆಗಸ್ಟ್ 2016, 19:30 IST
Last Updated 23 ಆಗಸ್ಟ್ 2016, 19:30 IST
ಡಿಜಿಟಲ್‌ ಪಾವತಿ ವ್ಯವಸ್ಥೆ
ಡಿಜಿಟಲ್‌ ಪಾವತಿ ವ್ಯವಸ್ಥೆ   

ಭಾರತದಲ್ಲಿ ಡಿಜಿಟಲ್‌ ಪಾವತಿ ಮಾರುಕಟ್ಟೆಯು ವೇಗವಾಗಿ ಬೆಳವಣಿಗೆ ಕಾಣುತ್ತಿದೆ. ಸ್ಮಾರ್ಟ್‌ಫೋನ್‌ಗಳ ಬಳಕೆ ಹೆಚ್ಚಾಗುತ್ತಿರುವುದೇ ಇದಕ್ಕೆ ಪ್ರಮುಖ ಕಾರಣವಾಗಿದೆ. ದೇಶದ ಒಟ್ಟು ಆಂತರಿಕ ಉತ್ಪನ್ನಕ್ಕೆ (ಜಿಡಿಪಿ) ಈ ಮಾರುಕಟ್ಟೆಯ ಕೊಡುಗೆ ಶೇ 15ರಷ್ಟಿದೆ.

ಡಿಜಿಟಿಲ್‌ ಪಾವತಿ ಮಾರುಕಟ್ಟೆಯು 2020ರ ವೇಳೆಗೆ ₹ 33.20 ಲಕ್ಷ ಕೋಟಿಗಳಿಗೆ ತಲುಪಲಿದೆ ಎಂದು ಗೂಗಲ್‌ ಮತ್ತು ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ (ಬಿಸಿಜಿ) ನಡೆಸಿದ ಡಿಜಿಟಲ್‌ ಪೇಮೆಂಟ್ಸ್‌–2020’ ವರದಿಯಲ್ಲಿ ತಿಳಿಸಲಾಗಿದೆ. 2023ರ ಹೊತ್ತಿಗೆ ನಗದುರಹಿತ ವಹಿವಾಟು ಪ್ರಮಾಣವು ನಗದು ವಹಿವಾಟಿಗಿಂತಲೂ ಹೆಚ್ಚಾಗಲಿದೆ ಎಂದು ಬೋಸ್ಟನ್‌ ಕನ್ಸಲ್ಟಿಂಗ್‌ ಗ್ರೂಪ್‌ನ ಹಿರಿಯ ಪಾಲುದಾರ ಅಲ್ಪೇಶ್‌ ಷಾ ಹೇಳಿದ್ದಾರೆ.

2005 ರಿಂದ 2015ರ ಅವಧಿಯಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆಯು ಶೇ 2 ರಿಂದ ಶೇ 7ರಷ್ಟು ವೃದ್ಧಿಸಿದೆ. ಮುಂದಿನ  ನಾಲ್ಕು ವರ್ಷದಲ್ಲಿ ಶೇ 10ಕ್ಕೆ ತಲುಪುವ ನಿರೀಕ್ಷೆ ಮಾಡಲಾಗಿದೆ.

ಸ್ಮಾರ್ಟ್‌ಫೋನ್‌ ಯುಗ:  ಸ್ಮಾರ್ಟ್‌ಫೋನ್‌ ಬಳಕೆಯು ದೇಶದಲ್ಲಿ ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಸಂಚಲನ ಮೂಡಿಸಿದೆ. ಇದರಿಂದ 2023ರ ವೇಳೆಗೆ ದೇಶದಲ್ಲಿ ನಗದು ರಹಿತ ವಹಿವಾಟು ಪ್ರಮಾಣವೇ ಹೆಚ್ಚಾಗಲಿದೆ. ಮೊಬೈಲ್‌ ವಾಲೆಟ್ ಪರಿಕಲ್ಪನೆಯು  ದಿನೇ ದಿನೇ ಜನಪ್ರಿಯವಾಗುತ್ತಿದೆ.

ದೇಶದಲ್ಲಿ ಸದ್ಯಕ್ಕೆ 10 ರಿಂದ 12 ಮೊಬೈಲ್‌ ವಾಲೆಟ್‌ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿವೆ. ಅನೇಕ ವಾಲೆಟ್‌ಗಳಿಂದ ಹಣ ಪಾವತಿ ಮಾಡಿದರೆ ಕೆಲ ಸಂಸ್ಥೆಗಳು ರಿಯಾಯ್ತಿಗಳನ್ನು ಕೊಡುತ್ತಿವೆ. ಮೊಬೈಲ್‌ ರಿಚಾರ್ಜ್‌, ಆನ್‌ಲೈನ್‌ ದಿನಸಿ ಖರೀದಿ, ಕ್ಯಾಬ್‌ ಬಾಡಿಗೆ ಪಾವತಿ ಆಚೆಗೂ ಇವುಗಳ ಬಳಕೆ ಹೆಚ್ಚುತ್ತಿದೆ.

ಏನಿದು ಮೊಬೈಲ್‌ ವಾಲೆಟ್‌?: ಮೊಬೈಲ್‌ ವಾಲೆಟ್‌ ಎನ್ನುವುದು ಕಿಸೆಯಲ್ಲಿನ ಪರ್ಸ್‌ ಇದ್ದಂತೆ.  ಮೊಬೈಲ್‌ಗೆ ವಾಲೆಟ್‌ ಆ್ಯಪ್‌ ಡೌನ್‌ಲೋಡ್‌ ಮಾಡಿಕೊಂಡ  ಬ್ಯಾಂಕ್‌ ಖಾತೆ ಅಥವಾ ಕ್ರೆಡಿಟ್‌ ಕಾರ್ಡ್‌ನಿಂದ ಹಣ ವರ್ಗಾಯಿಸಬೇಕಾಗುತ್ತದೆ.   ಪರ್ಸ್‌ನಲ್ಲಿ  ನಗದು ಇಟ್ಟುಕೊಳ್ಳುವಂತೆ.

ಮೊಬೈಲ್‌ ವಾಲೆಟ್‌ ಖಾತೆಗೆ  ಹಣ ಜಮೆ ಮಾಡಿ ಖರ್ಚು ಮಾಡಬೇಕಾಗುತ್ತದೆ. ಸರಕು ಮತ್ತು ಸೇವೆಗಳ ಖರೀದಿಯಲ್ಲಿ ಮೊಬೈಲ್‌ ಆ್ಯಪ್‌ ಮೂಲಕವೇ ಹಣವನ್ನು  ಪಾವತಿಸಬಹುದು. ಸಾಕಷ್ಟು ಸುರಕ್ಷತೆಯೂ ಇರುವುದರಿಂದ ಹಿಂಜರಿಕೆ ಇಲ್ಲದೆ ಬಳಸಬಹುದಾಗಿದೆ. ವಾಲೆಟ್‌ನಲ್ಲಿ ಇರಿಸಬಹುದಾದ ಗರಿಷ್ಠ ಮೊತ್ತ ₹ 10 ಸಾವಿರ.

***
ಭಾರತದ 10 ಲಕ್ಷಕ್ಕೂ ಅಧಿಕ ಬಳಕೆದಾರರು ಪಾವತಿ ವ್ಯವಸ್ಥೆಗೆ ಮೊಬೈಲ್‌ ವಾಲೆಟ್‌ ಬಳಸುತ್ತಿದ್ದಾರೆ. ಸ್ಮಾರ್ಟ್‌ಫೋನ್‌ನಿಂದಾಗಿ ಡಿಜಿಟಲ್‌ ಪಾವತಿ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ಕಂಡುಬಂದಿದೆ.
-ಎಂ. ಸಿನ್ಹಾ, ಮೊಬಿಕ್ವಿಕ್‌ ಸಿಒಒ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.