ADVERTISEMENT

ತೃಪ್ತಿ ನೀಡದ ಶೇಷಸಾಯಿ ವಿವರಣೆ

ನಿರ್ದೇಶಕ ಮಂಡಳಿ ಸಮಜಾಯಿಷಿಗೆ ಪೈ, ಬಾಲಕೃಷ್ಣನ್‌ ಟೀಕೆ

ಪಿಟಿಐ
Published 14 ಫೆಬ್ರುವರಿ 2017, 19:30 IST
Last Updated 14 ಫೆಬ್ರುವರಿ 2017, 19:30 IST
ತೃಪ್ತಿ ನೀಡದ ಶೇಷಸಾಯಿ ವಿವರಣೆ
ತೃಪ್ತಿ ನೀಡದ ಶೇಷಸಾಯಿ ವಿವರಣೆ   

ನವದೆಹಲಿ (ಪಿಟಿಐ): ಕಾರ್ಪೊರೇಟ್‌ ಆಡಳಿತ ಪಾಲನೆಗೆ ಸಂಬಂಧಿಸಿದಂತೆ ಇನ್ಫೊಸಿಸ್‌ ನಿರ್ದೇಶಕ ಮಂಡಳಿಯು ನೀಡಿರುವ ಸಮಜಾಯಿಷಿಗೆ ಸಂಸ್ಥೆಯ ಮಾಜಿ ಮುಖ್ಯ ಹಣಕಾಸು ಅಧಿಕಾರಿಗಳಾದ (ಸಿಎಫ್‌ಒ) ಟಿ. ವಿ. ಮೋಹನದಾಸ್‌ ಪೈ ಮತ್ತು ವಿ. ಬಾಲಕೃಷ್ಣನ್‌ ಅವರು ನಿರಾಶೆ ವ್ಯಕ್ತಪಡಿಸಿದ್ದಾರೆ.

ನಿರ್ದೇಶಕ ಮಂಡಳಿಯ ಎಲ್ಲ ವಿವಾದಾತ್ಮಕ ನಿರ್ಧಾರಗಳನ್ನು ಅಧ್ಯಕ್ಷ ಆರ್‌. ಶೇಷಸಾಯಿ ಅವರು ಸಮರ್ಥಿಸಿಕೊಂಡ ನಂತರ ಎನ್‌. ಆರ್‌. ನಾರಾಯಣ ಮೂರ್ತಿ ಅವರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ, ಅವರ ಬೆಂಬಲಕ್ಕೆ ನಿಂತಿದ್ದ ಇಬ್ಬರು ಮಾಜಿ ‘ಸಿಎಫ್‌ಒ’ಗಳು ಶೇಷಸಾಯಿ ಹೇಳಿಕೆಯನ್ನು ತೀಕ್ಷ್ಣವಾಗಿ ಟೀಕಿಸಿದ್ದಾರೆ. ‘ರಾಜೀವ್‌ ಬನ್ಸಲ್‌ ಅವರ ನಿರ್ಗಮನ ಮತ್ತು ಅವರಿಗೆ ನೀಡಲಾದ ಪರಿಹಾರ ಮೊತ್ತ ಕುರಿತು ಆಡಳಿತ ಮಂಡಳಿಯು ಅಗತ್ಯ ವಿವರಗಳನ್ನು ಮೊದಲಿಗೆ ಬಹಿರಂಗಪಡಿಸಿರಲಿಲ್ಲ. ಮಾಧ್ಯಮಗಳಲ್ಲಿ  ಈ ಬಗ್ಗೆ ವರದಿಯಾದ ನಂತರವೇ ಸಂಸ್ಥೆಯು ವಿವರಗಳನ್ನು ನೀಡಿತ್ತು’ ಎಂದು ಪೈ ಪ್ರತಿಕ್ರಿಯಿಸಿದ್ದಾರೆ. ಸಾಂಸ್ಥಿಕ ಹೂಡಿಕೆದಾರರು ಸಂಸ್ಥೆಯ ಸ್ಥಾಪಕರ ಬೆಂಬಲಕ್ಕೆ ನಿಲ್ಲಬೇಕು ಎಂದೂ ಅವರು ಒತ್ತಾಯಿಸಿದ್ದಾರೆ.

‘ಸಿಇಒ ವಿಶಾಲ್‌ ಸಿಕ್ಕಾ ಅವರ ವೇತನ ಕೊಡುಗೆ ಮತ್ತು ಮಾಜಿ ಉನ್ನತ ಅಧಿಕಾರಿಗಳಿಗೆ ಗುತ್ತಿಗೆ ಒಪ್ಪಂದದ ಅನ್ವಯ ಹೆಚ್ಚುವರಿ ಪರಿಹಾರ ನೀಡಿರುವುದಕ್ಕೆ ಸಂಸ್ಥೆಯು ನೀಡಿರುವ ಉತ್ತರ ತೃಪ್ತಿದಾಯಕವಾಗಿಲ್ಲ. ಸಹ ಸ್ಥಾಪಕರು ವ್ಯಕ್ತಪಡಿಸಿರುವ ಆತಂಕ ದೂರ ಮಾಡಲು ನಿರ್ದೇಶಕ ಮಂಡಳಿಯು ಮೊದಲ ಹೆಜ್ಜೆ ಇಡಬೇಕಾಗಿದೆ’ ಎಂದು ಬಾಲಕೃಷ್ಣನ್‌ ಹೇಳಿದ್ದಾರೆ.

‘ನಿರ್ದೇಶಕ ಮಂಡಳಿ ಸದಸ್ಯರು ವಿವರಣೆ ನೀಡಿರುವುದು ಸಮಾಧಾನ ತಂದಿಲ್ಲ. ವಿವಾದವನ್ನು  ಸೂಕ್ತ ರೀತಿಯಲ್ಲಿ ನಿಭಾಯಿಸಲಾಗಿದೆ ಎಂದೂ  ನನಗೆ ಅನಿಸುತ್ತಿಲ್ಲ.
‘ನಾನು ಷೇರುದಾರರಿಂದ ಆಯ್ಕೆಯಾಗಿರುವೆ. ನಾನು ನನ್ನ ಹುದ್ದೆಯಲ್ಲಿ ಮುಂದುವರೆಯುವೆ’ ಎಂದು ಅಧ್ಯಕ್ಷ ರಾಮಸ್ವಾಮಿ ಶೇಷಸಾಯಿ ಹೇಳಿರುವುದಕ್ಕೂ ಬಾಲಕೃಷ್ಣನ್‌ ಆಕ್ಷೇಪಿಸಿದ್ದಾರೆ.

‘ನಾವು ವಿಷಯ ಪ್ರಸ್ತಾಪಿಸಿದ್ದೇವೆ.ಈಗ ನಿರ್ದೇಶಕ ಮಂಡಳಿ ಮೊದಲ ಹೆಜ್ಜೆ ಇಡಬೇಕಾಗಿದೆ. ಸಹ ಸ್ಥಾಪಕರ ಜತೆ ನೇರವಾಗಿ ಸಂಪರ್ಕದಲ್ಲಿ ಇರಬೇಕೆ ಹೊರತು ನ್ಯಾಯವಾದಿಗಳ ಮೂಲಕ ಅಲ್ಲ. ಅಗತ್ಯ ಬಿದ್ದರೆ ಮಂಡಳಿಯನ್ನು ಪುನರ್‌ ರಚಿಸಬೇಕು’ ಎಂದು ಹೇಳಿದ್ದಾರೆ.

***

ಸ್ಥಾಪಕರ ಜತೆ ನಿರಂತರ ಸಂಪರ್ಕದಲ್ಲಿ ಇರುವುದಾಗಿ ನಿರ್ದೇಶಕರು ಹೇಳುತ್ತಾರೆ. ಆದರೆ ಇನ್ನೂ ಅವರಿಗೆ ಸಮಸ್ಯೆ ಮನವರಿಕೆಆದಂತೆ ಕಾಣುತ್ತಿಲ್ಲ
- ಮೋಹನದಾಸ್‌ ಪೈ, ಮಾಜಿ ಸಿಎಫ್‌ಒ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.