ADVERTISEMENT

ದೆಹಲಿ: ಈರುಳ್ಳಿ ಕೆ.ಜಿ ₹40

ಬೆಲೆ ನಿಯಂತ್ರಣಕ್ಕಾಗಿ 10 ಸಾವಿರ ಟನ್‌ ಆಮದು; ಕೇಂದ್ರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2015, 19:30 IST
Last Updated 27 ಜುಲೈ 2015, 19:30 IST

ನವದೆಹಲಿ (ಪಿಟಿಐ): ಈರುಳ್ಳಿ ಧಾರಣೆ ದಿನೇ ದಿನೇ ಏರಿಕೆ ಆಗುತ್ತಲೇ ಇದೆ. ನವದೆಹಲಿಯಲ್ಲಿ ಸದ್ಯ ಚಿಲ್ಲರೆ ಮಾರಾಟದಲ್ಲಿ ಈರುಳ್ಳಿ ಬೆಲೆ ಕೆ.ಜಿ.ಗೆ ₹40ಕ್ಕೇರಿದೆ.

ಹೆಚ್ಚುತ್ತಿರುವ ಈರುಳ್ಳಿ ಬೆಲೆಯನ್ನು ನಿಯಂತ್ರಿಸುವುದಕ್ಕಾಗಿ ಕೇಂದ್ರ ಸರ್ಕಾರ 10 ಸಾವಿರ ಟನ್‌ ಈರುಳ್ಳಿ ಆಮದು ಮಾಡಿಕೊಳ್ಳಲು ನಿರ್ಧರಿಸಿದೆ.
ಪಾಕಿಸ್ತಾನ, ಚೀನಾ ಮತ್ತು ಈಜಿಪ್ಟ್‌ ಸೇರಿದಂತೆ ವಿವಿಧ ದೇಶಗಳಿಂದ ಒಟ್ಟು 10 ಸಾವಿರ ಟನ್‌ ಈರುಳ್ಳಿಯನ್ನು ಆದಷ್ಟೂ ಬೇಗ ಆಮದು ಮಾಡಿಕೊಳ್ಳಲು ಕ್ರಮ ಕೈಗೊಳ್ಳುವಂತೆ ವಾಣಿಜ್ಯ  ಸಚಿವಾಲಯಕ್ಕೆ ಸೂಚಿಸಲಾಗಿದೆ.

ನ್ಯಾಷನಲ್‌ ಅಗ್ರಿಕಲ್ಚರ್‌ ಕೊ-ಆಪರೇಟಿವ್‌ ಮಾರ್ಕೆಟಿಂಗ್ ಫೆಡರೇಷನ್‌ (ನಾಫೆಡ್‌) 10 ಸಾವಿರ ಟನ್‌ ಈರುಳ್ಳಿ ಆಮದು ಸಲುವಾಗಿ ಟೆಂಡರ್‌ ಕರೆದಿದೆ. ಪಾಕಿಸ್ತಾನ, ಚೀನಾ, ಈಜಿಪ್ಟ್‌ ಅಥವಾ ಬೇರಾವುದೇ ದೇಶದಿಂದ ಆಮದು ಮಾಡಿಕೊಳ್ಳಲು ಯೋಜಿಸಿದೆ.

ದೇಶದಲ್ಲಿ ಸದ್ಯ ಸಾಕಷ್ಟು ಪ್ರಮಾಣದಲ್ಲಿ ಈರುಳ್ಳಿ ಸಂಗ್ರಹವಿದೆ. ಹಾಗಾಗಿ ಪೂರೈಕೆಗೇನೂ ತೊಡಕಾಗದು. ಧಾರಣೆ ಏರಿಕೆ ಬಗ್ಗೆ ಆತಂಕ ಬೇಡ ಎಂದು ಕೇಂದ್ರ ವಾಣಿಜ್ಯ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆಗೆ ಪ್ರತಿಕ್ರಿಯಿಸಿದ್ದಾರೆ.‌

28 ಲಕ್ಷ ಟನ್‌ ದಾಸ್ತಾನು: ಹಿಂಗಾರು ಅವಧಿಯಲ್ಲಿ ಕೊಯ್ಲು ಮಾಡಲಾಗಿರುವ ಈರುಳ್ಳಿಯೇ 28 ಲಕ್ಷ ಟನ್‌ಗಳಷ್ಟು ದಾಸ್ತಾನಾಗಿದೆ. ಇದು ದೇಶದ ಎರಡು ತಿಂಗಳ ಬೇಡಿಕೆಯನ್ನು ಪೂರೈಸಲು ಸಾಕಾಗುವಷ್ಟಿದೆ. ಮೂರನೇ ತಿಂಗಳ ವೇಳೆಗೆ ಈಗಿನ ಮುಂಗಾರು ಅವಧಿಯಲ್ಲಿ ಆಂಧ್ರಪ್ರದೇಶದಲ್ಲಿ ಬಿತ್ತನೆ ಮಾಡಲಾಗಿರುವ ಈರುಳ್ಳಿ ಫಸಲು ಕೊಯ್ಲಿಗೆ ಬರುತ್ತದೆ. ಹಾಗಾಗಿ ಈರುಳ್ಳಿ ಪೂರೈಕೆಯಲ್ಲಿ ಯಾವುದೇ ಕೊರತೆ ಆಗದು ಎಂದು ನಾಸಿಕ್‌ ಮೂಲದ ನ್ಯಾಷನಲ್‌ ರೀಸರ್ಚ್‌ ಆ್ಯಂಡ್‌ ಡೆವಲಪ್‌ಮೆಂಟ್‌ ಫೌಂಡೇಷನ್‌ನ (ಎನ್ಎಚ್‌ಆರ್‌ಡಿಎಫ್‌) ನಿರ್ದೇಶಕ ಆರ್‌.ಪಿ.ಗುಪ್ತಾ ಭರವಸೆ ಮಾತನಾಡಿದ್ದಾರೆ.

ಲಾಸಲ್‌ಗಾಂವ್ ಪ್ರಭಾವ: ದೇಶದ ವಿವಿಧೆಡೆಯ ಈರುಳ್ಳಿ ಸಗಟು ಮಾರುಕಟ್ಟೆಗಳು ಧಾರಣೆ ವಿಚಾರದಲ್ಲಿ ಮಹಾರಾಷ್ಟ್ರದ ನಾಸಿಕ್‌ನಲ್ಲಿನ ಲಾಸಲ್‌ಗಾಂವ್‌ ಸಗಟು ಮಾರುಕಟ್ಟೆಯಿಂದಲೇ ಪ್ರಭಾವಿತವಾಗುತ್ತವೆ. ಕಳೆದ ಕೆಲವು ವಾರಗಳಿಂದ ಲಾಸಲ್‌ಗಾಂವ್‌ ಮಾರುಕಟ್ಟೆಯಲ್ಲಿಯೂ ಈರುಳ್ಳಿ ಧಾರಣೆ ಶೇ 66ರವರೆಗೂ ಏರಿಕೆ ಕಂಡಿದೆ. ಜುಲೈ ಆರಂಭದಲ್ಲಿ ಕೆ.ಜಿ.ಗೆ ₹15ರಷ್ಟಿದ್ದ ಈರುಳ್ಳಿ ಸಗಟು ಧಾರಣೆ, ಈಗ ₹25ಕ್ಕೇರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.