ADVERTISEMENT

ನಾಳೆ ಬ್ಯಾಂಕ್‌ ನೌಕರರ ಮುಷ್ಕರ

​ಪ್ರಜಾವಾಣಿ ವಾರ್ತೆ
Published 27 ಜುಲೈ 2016, 19:30 IST
Last Updated 27 ಜುಲೈ 2016, 19:30 IST
ನಾಳೆ ಬ್ಯಾಂಕ್‌ ನೌಕರರ ಮುಷ್ಕರ
ನಾಳೆ ಬ್ಯಾಂಕ್‌ ನೌಕರರ ಮುಷ್ಕರ   

ಬೆಂಗಳೂರು: ಕೇಂದ್ರ ಸರ್ಕಾರದ ಜನವಿರೋಧಿ ಬ್ಯಾಂಕಿಂಗ್ ನೀತಿ ಖಂಡಿಸಿ ಸರ್ಕಾರಿ ಮತ್ತು ಖಾಸಗಿ ವಲಯದ ಹತ್ತು ಲಕ್ಷಕ್ಕೂ ಅಧಿಕ ಬ್ಯಾಂಕ್‌ ನೌಕರರು ಶುಕ್ರವಾರ (ಜು. 29) ದೇಶವ್ಯಾಪಿ ಮುಷ್ಕರ ನಡೆಸಲಿದ್ದಾರೆ.

ಬ್ಯಾಂಕ್‌ ನೌಕರರ ಸಂಯುಕ್ತ ವೇದಿಕೆ (ಯುಎಫ್‌ಬಿಯು) ಅಡಿಯಲ್ಲಿ ಬರುವ ಒಂಬತ್ತು ಬ್ಯಾಂಕ್‌ಗಳು ಹಾಗೂ ಅಧಿಕಾರಿಗಳ ಸಂಘಟನೆಗಳು ಮುಷ್ಕರದಲ್ಲಿ ಭಾಗವಹಿಸಲಿವೆ.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸೇರಿದಂತೆ ಗ್ರಾಮೀಣ ಮತ್ತು ಸಹಕಾರಿ ಬ್ಯಾಂಕ್‌ಗಳ ಖಾಸಗೀಕರಣ ಹಾಗೂ ವಿಲೀನ ಕೈಬಿಡಬೇಕು, ಬ್ಯಾಂಕಿಂಗ್‌ ವಲಯದಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಅವಕಾಶ ನೀಡಬಾರದು– ಎನ್ನುವುದು ಪ್ರಮುಖ ಬೇಡಿಕೆಗಳಾಗಿವೆ ಎಂದು ಅಖಿಲ ಭಾರತ ಬ್ಯಾಂಕ್‌ ನೌಕರರ ಸಂಘಟನೆಯ (ಐಎನ್‌ಬಿಇಎಫ್) ಕರ್ನಾಟಕ ಘಟಕದ ಪ್ರಧಾನ ಕಾರ್ಯದರ್ಶಿ ಎಂ.ಕೆ. ನರಸಿಂಹ ಮೂರ್ತಿ ಅವರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

ರಾಜ್ಯದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮತ್ತು ಬೆಂಗಳೂರಿನ ಕೆಂಪೇಗೌಡ ರಸ್ತೆಯಲ್ಲಿರುವ ಮೈಸೂರು ಬ್ಯಾಂಕ್‌ನಲ್ಲಿ (ಎಸ್‌ಬಿಎಂ) ಬೆಳಿಗ್ಗೆ 10 ಗಂಟೆಗೆ ‘ಯುಎಫ್‌ಬಿಯು’ ನೇತೃತ್ವದಲ್ಲಿ ಸಾಂಕೇತಿಕ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.