ADVERTISEMENT

ನೇರ ತೆರಿಗೆ ಸಂಗ್ರಹ ಶೇ 11 ಏರಿಕೆ

ಏಪ್ರಿಲ್‌–ಫೆಬ್ರುವರಿ ಅವಧಿ

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2015, 19:30 IST
Last Updated 5 ಮಾರ್ಚ್ 2015, 19:30 IST

ನವದೆಹಲಿ(ಪಿಟಿಐ): ಪ್ರಸಕ್ತ ಹಣಕಾಸು ವರ್ಷದ ಮೊದಲ 11 ತಿಂಗಳಿನಲ್ಲಿ ನೇರ ತೆರಿಗೆ ಸಂಗ್ರಹ ಪ್ರಮಾಣ ರೂ 6.12 ಲಕ್ಷ ಕೋಟಿಗೇರಿದೆ. ಕಳೆದ ಹಣಕಾಸು ವರ್ಷದ ಇದೇ ಅವಧಿಗಿಂತ ಶೇ 10.67­ರಷ್ಟು ಹೆಚ್ಚಳವಾಗಿದೆ.

ಕಳೆದ ಹಣಕಾಸು ವರ್ಷದ ಏಪ್ರಿಲ್‌–ಫೆಬ್ರುವರಿ ಅವಧಿಯಲ್ಲಿ ನೇರ ತೆರಿಗೆಯಿಂದ ರೂ 5.53 ಲಕ್ಷ ಕೋಟಿ ಸಂಗ್ರಹಿಸಲಾಗಿತ್ತು.
2014–15ನೇ ಹಣಕಾಸು ವರ್ಷದಲ್ಲಿ ನೇರ ತೆರಿಗೆ ಮೂಲಕ ಒಟ್ಟು ರೂ7.36 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜನ್ನು ಬಜೆಟ್‌ನಲ್ಲಿ ಪ್ರಕಟಿಸ­ಲಾಗಿತ್ತು. ನಂತರದ ಬಜೆಟ್‌ನಲ್ಲಿ ರೂ7.05 ಲಕ್ಷ ಕೋಟಿಗೆ ತಗ್ಗಿಸಲಾಗಿದೆ.

ಈ ಪರಿಷ್ಕೃತ ಅಂದಾಜಿನಂತೆ, ಕಳೆದ ವರ್ಷದ ರೂ6.38 ಲಕ್ಷ ಕೋಟಿಗೆ ಹೋಲಿಸಿದರೆ ಈ ಬಾರಿ ಶೇ 10.5ರಷ್ಟು ಹೆಚ್ಚು ತೆರಿಗೆ ಸಂಗ್ರಹವಾಗಲಿದೆ.

ಪ್ರಸಕ್ತ ಹಣಕಾಸಿನ 11 ತಿಂಗಳ ಅವಧಿಯಲ್ಲಿ ಕಾರ್ಪೊರೇಟ್‌ ತೆರಿಗೆ ಸಂಗ್ರಹವು ಶೇ 9.99­ರಷ್ಟು ಹೆಚ್ಚಿದ್ದು, ರೂ3.79 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷ ರೂ3.45 ಲಕ್ಷ ಕೋಟಿ­ಗಳಷ್ಟಾಗಿತ್ತು.

ಅಂತೆಯೇ, ವೈಯಕ್ತಿಕ ಆದಾಯ ತೆರಿಗೆ ಸಂಗ್ರಹವೂ ಏಪ್ರಿಲ್‌–ಫೆಬ್ರುವರಿ ಅವಧಿಗೆ ಶೇ 11.10ರಷ್ಟು ಅಂದರೆ, ರೂ2.25 ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ರೂ2.02 ಲಕ್ಷ ಕೋಟಿಗಳಷ್ಟು  ತೆರಿಗೆ ಸಂಗ್ರಹವಾಗಿತ್ತು.

ಷೇರು ಮತ್ತು ಬಾಂಡ್‌ ವಹಿವಾಟು ತೆರಿಗೆ (ಎಸ್‌ಟಿಟಿ) ಸಂಗ್ರಹ ಶೇ 45.44ರಷ್ಟು ಹೆಚ್ಚಾಗಿದ್ದು, ರೂ6,280 ಕೋಟಿಗೆ ತಲುಪಿದೆ.
ಒಟ್ಟು ನಿವ್ವಳ ನೇರ ತೆರಿಗೆ ಸಂಗ್ರಹವು ಶೇ 6.88ರಷ್ಟು ಹೆಚ್ಚಿದ್ದು, ರೂ5.06 ಲಕ್ಷ ಕೋಟಿಗೆ ತಲುಪಿದೆ. ಕಳೆದ ವರ್ಷ ರೂ4.74 ಲಕ್ಷ ಕೋಟಿಗಳಷ್ಟಿತ್ತು.

ಮೂಲದಲ್ಲಿಯೇ ತೆರಿಗೆ ಕಡಿತ (ಟಿಡಿಎಸ್‌) ಕಳೆದ ವರ್ಷಕ್ಕಿಂತ ಇಳಿಕೆಯಾಗಿದೆ. ಕಳೆದ ವರ್ಷದ 11 ತಿಂಗಳಿನಲ್ಲಿ ಶೇ 16.69ರಷ್ಟಿದ್ದಿದ್ದು, ಈ ಬಾರಿ 7.49ರಷ್ಟು ದಾಖಲಾಗಿದೆ.

2014–15ರ 11 ತಿಂಗಳಿನಲ್ಲಿ ಮುಂಗಡ ತೆರಿಗೆ ಸಂಗ್ರಹವೂ ಶೇ 13.41ರಷ್ಟು ಹೆಚ್ಚಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಮುಂಗಡ ತೆರಿಗೆ ಸಂಗ್ರಹವು ಶೇ 8.67ರಷ್ಟಿತ್ತು.

ಪ್ರಸಕ್ತ ಹಣಕಾಸು ವರ್ಷಕ್ಕೆ ಒಟ್ಟಾರೆ ತೆರಿಗೆ ಸಂಗ್ರಹವನ್ನು (ಪರೋಕ್ಷ ತೆರಿಗೆ ಒಳಗೊಂಡು) ರೂ12.51 ಲಕ್ಷ ಕೋಟಿ­ಗಳಿಗೆ ತಗ್ಗಿಸಲಾಗಿದೆ. ಈ ಮೊದಲು ಬಜೆಟ್‌ನಲ್ಲಿ ರೂ13.6 ಲಕ್ಷ ಕೋಟಿ ಸಂಗ್ರಹಿಸುವ ಅಂದಾಜು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.