ADVERTISEMENT

ಪಾವತಿ ಬ್ಯಾಂಕ್‌ ತೆರೆಯಲು ಪೇಟಿಎಂ ನಿರ್ಧಾರ: ಬದಲಾಗಲಿವೆ ಮೊಬೈಲ್‌ ವ್ಯಾಲೆಟ್‌ ಖಾತೆಗಳು

ಏಜೆನ್ಸೀಸ್
Published 17 ಮೇ 2017, 12:49 IST
Last Updated 17 ಮೇ 2017, 12:49 IST
ಪಾವತಿ ಬ್ಯಾಂಕ್‌ ತೆರೆಯಲು ಪೇಟಿಎಂ ನಿರ್ಧಾರ:  ಬದಲಾಗಲಿವೆ ಮೊಬೈಲ್‌ ವ್ಯಾಲೆಟ್‌ ಖಾತೆಗಳು
ಪಾವತಿ ಬ್ಯಾಂಕ್‌ ತೆರೆಯಲು ಪೇಟಿಎಂ ನಿರ್ಧಾರ: ಬದಲಾಗಲಿವೆ ಮೊಬೈಲ್‌ ವ್ಯಾಲೆಟ್‌ ಖಾತೆಗಳು   

ಮುಂಬೈ: ಡಿಜಿಟಲ್‌ ಪಾವತಿ ಹಾಗೂ ವಾಣಿಜ್ಯ ಕಂಪೆನಿ ಪೇಟಿಎಂ ದೇಶದಾದ್ಯಂತ ಪಾವತಿ(ಪೇಮೆಂಟ್‌) ಬ್ಯಾಂಕ್‌ಗಳನ್ನು ತೆರೆಯಲು ರಿಸರ್ವ್‌ ಬ್ಯಾಂಕ್‌ನಿಂದ ಅನುಮತಿ ಪಡೆದುಕೊಂಡಿದೆ ಎಂದು ಪೇಟಿಎಂನ ಹಿಡುವಳಿದಾರ ಕಂಪೆನಿ ಒನ್‌97 ಕಮ್ಯನಿಕೇಟಿವ್ಸ್‌ ಪ್ರೈವೇಟ್‌ ಲಿಮಿಟೆಡ್‌ ಹೇಳಿದೆ.

ಈ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಕಂಪೆನಿಯ ವಕ್ತಾರ, ‘ನಾವು ಮೇ23ರಂದು ಬ್ಯಾಂಕ್‌ಗಳನ್ನು ಆರಂಭಿಸಲು ಸಿದ್ದತೆ ನಡೆಸುತ್ತಿದ್ದೇವೆ. ಪಾವತಿ ಬ್ಯಾಂಕುಗಳ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ(ಸಿಇಒ) ಆಗಲಿರುವ ರೇಣು ಸತ್ತಿ ಅವರು ಇತ್ತೀಚೆಗೆ ಆರ್‌ಬಿಐನಿಂದ ಅನುಮತಿ ಪತ್ರ ಪಡೆದುಕೊಂಡಿದ್ದಾರೆ’ ಎಂದು ತಿಳಿಸಿದ್ದಾರೆ.

(ಶಿಂಜಿನಿ ಕುಮಾರ್‌)

ADVERTISEMENT

‘ಸದ್ಯ ಪೇಟಿಎಂನ ಆರ್ಥಿಕ ವ್ಯವಹಾರದ ಉಪಾಧ್ಯಕ್ಷರಾಗಿರುವ ರೇನು ಸತ್ತಿ ಅವರು ಪಾವತಿ ಬ್ಯಾಂಕುಗಳ ಸಿಇಒ ಆಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದು ಕಂಪೆನಿ ಹೇಳಿಕೊಂಡಿದೆ. ಆದರೆ, ಕೆಲ ಮೂಲಗಳು ‘ಪೇಟಿಎಂನ ಸಲಹಾ ಸಂಸ್ಥೆ ಪ್ರೈಸ್‌ ವಾಟರ್‌ಹೌಸ್‌ ಕೂಪರ್ಸ್‌ ನಿರ್ದೇಶಕಿ ಶಿಂಜಿನಿ ಕುಮಾರ್‌ ಅವರು ಪಾವತಿ ಬ್ಯಾಂಕ್‌ಗಳನ್ನು ಮುನ್ನಡೆಸಲು ಫೆಬ್ರವರಿಯಲ್ಲಿಯೇ ನೇಮಕವಾಗಿದ್ದಾರೆ’ ಎಂದು ತಿಳಿಸಿವೆ.

ಪೇಟಿಎಂ ಜನವರಿಯಲ್ಲಿಯೇ ಆರ್‌ಬಿಐನಿಂದ ಅನುಮತಿ ಪತ್ರ ಪಡೆದು ಒಂದೆರಡು ತಿಂಗಳಲ್ಲಿ ಬ್ಯಾಂಕ್‌ಗಳನ್ನು ಆರಂಭಿಸುವುದಾಗಿ ಹೇಳಿತ್ತು.

‘ಆರ್‌ಬಿಐನ ನಿರ್ದೇಶನದಂತೆ ಮೊಬೈಲ್‌ ವ್ಯಾಲೆಟ್‌ ಖಾತೆಗಳನ್ನು ಪಾವತಿ ಬ್ಯಾಂಕ್‌ ಖಾತೆಗಳಾಗಿ ವರ್ಗಾಯಿಸಾಗುತ್ತದೆ’ ಎಂದು ಪೇಟಿಎಂ ಸಂಸ್ಥಾಪಕ ಹಾಗೂ ಸಿಇಒ ವಿಜಯ್‌ ಶೇಖರ್‌ ಶರ್ಮಾ ತಿಳಿಸಿದ್ದಾರೆ.

(ವಿಜಯಶೇಖರ್‌ ಶರ್ಮಾ)

‘ತಮ್ಮ ಮೊಬೈಲ್‌ ವ್ಯಾಲೆಟ್‌ಗಳನ್ನು ಪಾವತಿ ಬ್ಯಾಂಕ್‌ ಖಾತೆಗೆ ವರ್ಗಾಯಿಸಲು ಇಚ್ಛಿಸದ ಗ್ರಾಹಕರು ನಮಗೆ ಅಭಿಪ್ರಾಯ ತಿಳಿಸಲು ಮೇ 23ರವರೆಗೆ ಅವಕಾಶವಿದ್ದು, ಅಷ್ಟರಲ್ಲಿ ತಮ್ಮ ಅಭಿಪ್ರಾಯ ತಿಳಿಸಬೇಕು. ಜತೆಗೆ ನಿಗದಿತ ದಿನಾಂಕದೊಳಗೆ ಗ್ರಾಹಕರು ಸೂಚಿಸುವ ಖಾತೆಗಳನ್ನಷ್ಟೇ ವರ್ಗಾಯಿಸಲಾಗುತ್ತದೆ. ಯಾವುದೇ ಪ್ರತಿಕ್ರಿಯೆಗಳನ್ನು ನೀಡದ ಗ್ರಾಹಕರ ಖಾತೆಗಳನ್ನೂ ಸಹ ಆರು ತಿಂಗಳವರೆಗೆ ಗೌಪ್ಯವಾಗಿ ಮಂದುವರಿಸಲಾಗುತ್ತದೆ’ ಎಂದು ಸಹ ಪೇಟಿಎಂ ತಿಳಿಸಿದೆ.

ಬ್ಯಾಂಕ್‌ ಆರಂಭಿಸಿದ ಒಂದು ವರ್ಷದೊಳಗೆ ಉಳಿತಾಯ, ಚಾಲ್ತಿ ಖಾತೆಗಳು ಹಾಗೂ ಮೊಬೈಲ್‌ ವ್ಯಾಲೆಟ್‌ ಸೇರಿದಂತೆ 20 ಕೋಟಿ ಖಾತೆಗಳನ್ನು ತೆರೆಯಲು ಪೇಟಿಎಂ ಉದ್ದೇಶಿಸಿದ್ದು, 2020ರ ವೇಳೆಗೆ 50ಕೋಟಿ ತಲುಪುವ ಗುರಿಹೊಂದಿದೆ.

ಇದಕ್ಕೂ ಮೊದಲು ಏರ್‌ಟೆಲ್‌ ಹಾಗೂ ಇಂಡಿಯಾ ಪೋಸ್ಟ್‌ಗಳು ಪಾವತಿ ಬ್ಯಾಂಕ್‌ಗಳನ್ನು ತೆರೆದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.