ADVERTISEMENT

ಪೇಟೆ ಮೇಲೆ ಬಜೆಟ್‌ ಪ್ರಭಾವ

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2015, 19:30 IST
Last Updated 1 ಮಾರ್ಚ್ 2015, 19:30 IST

ನವದೆಹಲಿ(ಪಿಟಿಐ): ದೇಶದಲ್ಲಿ ಹೂಡಿಕೆ­ದಾರರ ಚಟುವಟಿಕೆ ಹೆಚ್ಚಿಸಲು 2015–16ನೇ ಹಣಕಾಸು ವರ್ಷದ ಬಜೆಟ್‌ನಲ್ಲಿ ಉತ್ತಮ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಇದು ಮುಂದಿನ ಷೇರುಪೇಟೆ ವಹಿವಾಟಿನ ಮೇಲೆ ಉತ್ತಮವಾದ ಪ್ರಭಾವ ಬೀರಲಿದೆ ಎಂದು ಪರಿಣತರು ವಿಶ್ಲೇಷಿಸಿದ್ದಾರೆ.

ಬಜೆಟ್‌ನಲ್ಲಿ ಮುಖ್ಯವಾಗಿ,  ಕಾರ್ಪೊರೇಟ್‌ ತೆರಿಗೆಯನ್ನು ನಾಲ್ಕು ವರ್ಷಗಳ ಅವಧಿಯಲ್ಲಿ ಶೇ 30ರಿಂದ ಶೇ 25ಕ್ಕೆ ಹಂತ ಹಂತವಾಗಿ ಇಳಿಸಲು ನಿರ್ಧರಿಸಲಾಗಿದೆ. ತೆರಿಗೆ ವಂಚನೆ ತಡೆಗೆ ‘ಜಿಎಎಆರ್‌ ನಿಯಮ’ವನ್ನು ಎರಡು ವರ್ಷಗಳ ನಂತರ ಜಾರಿಗೊಳಿಸಲು ನಿರ್ಧರಿಸ­ಲಾಗಿದೆ. ಈ ನಿರ್ಧಾರಗಳು ಹೂಡಿಕೆದಾರರನ್ನು ಹೆಚ್ಚು ಬಂಡವಾಳ ತೊಡಗಿಸುವಂತೆ ಆಕರ್ಷಿಸಲಿವೆ ಎಂದು ಅಭಿಪ್ರಾಯಪಟ್ಟಿದ್ದಾರೆ.

‘ಶನಿವಾರದ ವಹಿವಾಟಿನ ಅಂತ್ಯವನ್ನು ಗಮನಿಸಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೀತಿಯಲ್ಲಿ ವಹಿವಾಟು ನಡೆದು,  ಸೂಚ್ಯಂಕ ಗರಿಷ್ಠ ಮಟ್ಟ ತಲುಪುವ ಲಕ್ಷಣಗಳು ಗೋಚರಿಸುತ್ತಿವೆ.  ಆದರೆ ತಕ್ಷಣದ ಮಟ್ಟಿಗೆ ವಿದೇಶಿ ಹೂಡಿಕೆದಾರರಿಂದ ಪ್ರತಿಕ್ರಿಯೆ ನಿರೀಕ್ಷಿಸಲಾಗದು’ ಎಂದು ರೆಲಿಗೇರ್ ಸೆಕ್ಯುರಿಟೀಸ್‌ನ ರಿಟೇಲ್‌ ವಿಭಾಗದ ಅಧ್ಯಕ್ಷ ಜಯಂತ ಮಾಂಗ್ಲಿಕ್‌ ಹೇಳಿದ್ದಾರೆ.

ಡಾಲರ್‌ ಎದುರು ರೂಪಾಯಿ ಮೌಲ್ಯ ವ್ಯತ್ಯಯ ಮತ್ತು ಕಚ್ಚಾತೈಲ ಬೆಲೆಯೂ ವಹಿವಾಟಿನ ಮೇಲೆ  ಪ್ರಭಾವ ಬೀರುವ ಪ್ರಮುಖ  ಅಂಶಗಳಾಗಿವೆ. ಬಜೆಟ್‌ನಲ್ಲಿ ತೆಗೆದುಕೊಂಡಿರುವ ನಿರ್ಧಾರಗಳು ದೀರ್ಘಾವಧಿಯಲ್ಲಿ  ಷೇರುಪೇಟೆಗೆ ಲಾಭವಾಗಿ  ಪರಿಣಮಿಸಲಿವೆ. ಮುಂದಿನ ಎರಡು ಮೂರು ವರ್ಷಗಳಲ್ಲಿ ಶೇ 15ರಿಂದ ಶೇ 20ರಷ್ಟು ಪ್ರಗತಿ ನಿರೀಕ್ಷಿಸಬಹುದು  ಎಂದು ಆನಂದ ರಾಟಿ ಫೈನಾನ್ಷಿಯಲ್‌ ಸರ್ವಿಸಸ್‌ ಅಧ್ಯಕ್ಷ ಆನಂದ ರಾಟಿ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.