ADVERTISEMENT

ಪ್ರಯೋಗಾಲಯಕ್ಕೆ ಚಿನ್ನದ ತ್ಯಾಜ್ಯ

ಹೈದರಾಬಾದ್‌ ಲೋಹ ಸಂಶೋಧನಾ ಕೇಂದ್ರಕ್ಕೆ 180 ಟನ್‌ ರವಾನೆ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 19:30 IST
Last Updated 26 ಸೆಪ್ಟೆಂಬರ್ 2016, 19:30 IST
ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯ ಆವರಣದಲ್ಲಿ ಸಂಗ್ರಹಿಸಿದ ಅದಿರಿನ ತ್ಯಾಜ್ಯ
ರಾಯಚೂರು ಜಿಲ್ಲೆ ಹಟ್ಟಿ ಚಿನ್ನದ ಗಣಿಯ ಆವರಣದಲ್ಲಿ ಸಂಗ್ರಹಿಸಿದ ಅದಿರಿನ ತ್ಯಾಜ್ಯ   

ಹಟ್ಟಿ ಚಿನ್ನಗ ಗಣಿ (ರಾಯಚೂರು ಜಿಲ್ಲೆ):  ‘ಚಿನ್ನ ಬೇರ್ಪಡಿಸಿದ ನಂತರ ಉಳಿಯುವ ತ್ಯಾಜ್ಯವನ್ನು ಸಂಶೋಧನೆಗಾಗಿ ಹೈದರಾಬಾದ್‌ನಲ್ಲಿರುವ ರಕ್ಷಣಾ ಇಲಾಖೆಯ ಲೋಹ ಸಂಶೋಧನಾ ಪ್ರಯೋಗಾಲಯ(ಡಿಎಂಆರ್‌ಎಲ್‌)ಗೆ ರವಾನಿಸಲಾಗುತ್ತಿದೆ’ ಎಂದು ಹಟ್ಟಿ ಚಿನ್ನದ ಗಣಿ ಪ್ರಧಾನ ವ್ಯವಸ್ಥಾಪಕ (ಸಮನ್ವಯ) ಡಾ.ಪ್ರಭಾಕರ ಸಂಗೂರಮಠ ಅವರು ತಿಳಿಸಿದರು.

ಸೋಮವಾರ ಸುದ್ದಿಗಾರರಿಗೆ ಮಾಹಿತಿ ನೀಡಿದ ಅವರು ‘ಗಣಿಯಿಂದ ತೆಗೆದ ಅದಿರನ್ನು ಲೋಹ ವಿಭಾಗದಲ್ಲಿ ಸಂಸ್ಕರಿಸಿ ಚಿನ್ನದ ಅಂಶವನ್ನು ಬೇರ್ಪಡಿಸಲಾಗುತ್ತದೆ. ಹೀಗೆ ಬೇರ್ಪಡಿಸಿದ ನಂತರವೂ ಅದರಲ್ಲಿ ಸಿಲೈಟ್‌, ತಾಮ್ರ, ಬೆಳ್ಳಿ ಸೇರಿದಂತೆ ಇನ್ನಿತರ ಖನಿಜಾಂಶ ಉಳಿದಿರುತ್ತವೆ. ಅದಿರು ರೂಪದ ಈ ತ್ಯಾಜ್ಯವನ್ನು ಇದುವರೆಗೆ ಸಂಗ್ರಹಿಸಿ ಇಡಲಾಗುತ್ತಿತ್ತು. ಈಗ ಕೇಂದ್ರ ಸರ್ಕಾರದ ಆದೇಶದಂತೆ ಡಿಎಂಆರ್‌ಎಲ್‌ಗೆ ಸಂಶೋಧನಾ ಉದ್ದೇಶಕ್ಕಾಗಿ ನೀಡಲಾಗುತ್ತಿದೆ’ ಎಂದು ತಿಳಿಸಿದರು.

‘ಸಂಶೋಧನೆ ಮತ್ತು ಅಭಿವೃದ್ಧಿ ಉದ್ದೇಶಕ್ಕಾಗಿ ಮಾತ್ರ ಈ ತ್ಯಾಜ್ಯ ಬಳಸಲಾಗುತ್ತಿದೆ. ಕಂಪೆನಿಯಿಂದ 180 ಟನ್‌ ತ್ಯಾಜ್ಯವನ್ನು ಹೈದರಾಬಾದ್‌ಗೆ ತೆಗೆದುಕೊಂಡು ಹೋಗಲಾಗಿದೆ’ ಎಂದರು.

‘ಹಟ್ಟಿ ಚಿನ್ನದ ಗಣಿ ಕಂಪೆನಿ ಈ ಹಿಂದೆ ಸಿಲೈಟ್‌ ಅನ್ನು ಬೇರ್ಪಡಿಸುವ ಪ್ರಯತ್ನ ನಡೆಸಿತ್ತು. ಆದರೆ ಸಂಸ್ಕರಿಸುವ ತಂತ್ರಜ್ಞಾನ ಆರ್ಥಿಕವಾಗಿ ಲಾಭದಾಯಕವಲ್ಲದ ಕಾರಣ ಯೋಜನೆ ಕೈಬಿಡಲಾಗಿತ್ತು’ ಎಂದು ಡಾ. ಸಂಗೂರಮಠ ಅವರು ತಿಳಿಸಿದರು.

ಬೇರ್ಪಡಿಸಲಾಗದ ಖನಿಜಗಳನ್ನು ಒಳಗೊಂಡ ತ್ಯಾಜ್ಯವನ್ನು ಸಂಶೋಧನೆಗೆ ಒಳಪಡಿಸಲು ಕೇಂದ್ರ ಸರ್ಕಾರ ಸಮಿತಿ ರಚಿಸಿದೆ. ಈ ಸಮಿತಿ ದೇಶದ ವಿವಿಧ ಗಣಿಗಳಿಂದ ತ್ಯಾಜ್ಯದ ಅದಿರು ಸಂಗ್ರಹಿಸಿ ಸಂಶೋಧನೆಗೆ ಒಳಪಡಿಸುತ್ತಿದೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.