ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ನಂಜಮಣಿ ವಿಶ್ವನಾಥ, ಬೆಂಗಳೂರು
* ವೃತ್ತಿಯಲ್ಲಿ ದಂತ ವೈದ್ಯೆ. ಎಂಡಿಸ್‌ ಓದಿದ್ದೇನೆ. ವಯಸ್ಸು 38. ನನಗೆ ನನ್ನ 60 ವರ್ಷ ವಯಸ್ಸಿನಲ್ಲಿ ₹ 15–20 ಸಾವಿರ ಪಿಂಚಣಿ ರೂಪದಲ್ಲಿ ಪಡೆಯಲು ಉತ್ತಮ ಪಿಂಚಣಿ ಯೋಜನೆ ತಿಳಿಸಿರಿ. ನಾನು ಅಟಲ್‌ ಬಿಹಾರಿ ವಾಜಪೇಯಿ ಪೆನ್ಶನ್‌ ಯೋಜನೆಗೆ ಸೇರಬಹುದೇ? ಅಥವಾ ಎನ್‌ಪಿಎಸ್‌ ಯೋಜನೆಗೆ ಸೇರಲೇ, ಯಾವುದು ಉತ್ತಮ. ನಾನು ಎಷ್ಟು ತಿಂಗಳಿಗೆ ಹಣ ಕಟ್ಟಬೇಕು ದಯಮಾಡಿ ತಿಳಿಸಿರಿ.
ಉತ್ತರ:
ನೀವು ಸ್ವಂತ ಉದ್ಯೋಗ ಹಾಗೂ ಕಾಲೇಜಿನಲ್ಲಿ ಕೆಲಸ ಮಾಡುತ್ತಿರಬಹುದು. ಪ್ರಶ್ನೆಯಲ್ಲಿ ಒಟ್ಟು ಆದಾಯ ತಿಳಿಸಿಲ್ಲ. ₹ 15–20 ಸಾವಿರ ಪಿಂಚಣಿ ರೂಪದಲ್ಲಿ, ನೀವು ನಿಮ್ಮ 60ನೇ ವರ್ಷದಲ್ಲಿ ಪಡೆಯುವ ಇಚ್ಚೆ ವ್ಯಕ್ತಪಡಿಸಿದ್ದೀರಿ. ಇಂದಿನ ಹಣದುಬ್ಬರದ ವೇಗ ಪರಿಗಣಿಸುವಾಗ ₹ 15–20 ಸಾವಿರ,  ಇನ್ನು 22 ವರ್ಷಗಳ ನಂತರ ಅಂತಹ ಪರಿಣಾಮಕಾರಿ ಫಲಿತಾಂಶ ಕೊಡಲಾರದು. ಕನಿಷ್ಠ ₹ 50,000 ವಾದರೂ ಬರುವಂತಿರಬೇಕು. ಅಟಲ್‌ ಪಿಂಚಣಿ ಯೋಜನೆಯಲ್ಲಿ ವಯೋಮಿತಿ 18–40 ಇದ್ದು ನೀವು ಈ ಯೋಜನೆ ಕೈಕೊಳ್ಳಬಹುದು. ಇಲ್ಲಿ ಪಡೆಯಬಹುದಾದ ಗರಿಷ್ಠ ತಿಂಗಳ ಪಿಂಚಣಿ

₹ 5,000 ಮಾತ್ರ. ಇನ್ನು ಎನ್‌ಪಿಎಸ್‌ ವಿಚಾರ. ಇಲ್ಲಿ ಹೂಡುವ ಹಣ ವಯಸ್ಸಿಗನುಗಣವಾಗಿ ಷೇರು ಮಾರುಕಟ್ಟೆ ಸರ್ಕಾರಿಯೇತರ ಕಂಪೆನಿಗಳಲ್ಲಿ ಹಾಗೂ ಸರ್ಕಾರಿ ಬಾಂಡುಗಳಲ್ಲಿ ತೊಡಗಿಸುತ್ತಾರೆ. ವ್ಯಕ್ತಿಯ 35 ವರ್ಷ ತನಕ ಷೇರು ಮಾರುಕಟ್ಟೆಯಲ್ಲಿ ಶೇ 50, ಸರ್ಕಾರೇತರ ಕಂಪೆನಿಗಳಲ್ಲಿ ಶೇ 30, ಹಾಗೂ ಸರ್ಕಾರಿ ಬಾಂಡುಗಳಲ್ಲಿ ಶೇ 20 ತೊಡಗಿಸುತ್ತಾರೆ.

ನಂತರ ಷೇರು ಮಾರುಕಟ್ಟೆಯಲ್ಲಿ ಹಾಗೂ ಸರ್ಕಾರೇತರ ಕಂಪೆನಿಗಳಲ್ಲಿ ಸ್ವಲ್ಪ ಸ್ವಲ್ಪ ಕಡಿಮೆ ಮಾಡುತ್ತಾ ಸರ್ಕಾರಿ ಬಾಂಡುಗಳಲ್ಲಿ ಹೆಚ್ಚಿನ ಹಣ ತೊಡಗಿಸುತ್ತಾರೆ. ಅಟಲ್‌ ಪಿಂಚಣಿ ಬದಲಾಗಿ ಎನ್‌.ಪಿ.ಎಸ್‌. ಆರಿಸಿಕೊಳ್ಳಿ. ಇಲ್ಲಿ ತಿಂಗಳಿಗೆ ₹ 5000–8000 ತುಂಬುತ್ತಾ ಬನ್ನಿ. ಇದೇ ವೇಳೆ ₹ 10,000 ಬ್ಯಾಂಕ್‌ ಆರ್‌.ಡಿ. 10 ವರ್ಷಗಳ ಅವಧಿಗೆ ಮಾಡಿ ಅಂತ್ಯಕ್ಕೆ ₹ 18.36 ಲಕ್ಷ ಪಡೆಯಿರಿ. ಈ ಪ್ರಕ್ರಿಯೆ ಇನ್ನು ಎರಡು ಬಾರಿ ಜೀವನದಲ್ಲಿ ಮಾಡಬಹುದು. ಎನ್‌ಪಿಎಸ್‌, ಬ್ಯಾಂಕ್‌ ಆರ್‌.ಡಿ. ಇವುಗಳಿಂದ ನಿಮ್ಮ ಜೀವನದ ಸಂಜೆಯಲ್ಲಿ ನಿರಂತರವಾಗಿ ₹ 60 ಸಾವಿರ ತನಕ ಪಿಂಚಣಿ ರೂಪದಲ್ಲಿ ಪಡೆಯಬಹುದು.

ಮಧು. ಜೆ., ದಾವಣಗೆರೆ
*ಸರ್ಕಾರಿ ನೌಕರಳು. ತಿಂಗಳ ಸಂಬಳ ₹ 25,000, ಪಿ.ಜಿ. ₹ 200 ಕಡಿತವಾಗಿ ₹ 24800 ಕೈಗೆ ಸಿಗುತ್ತದೆ. ನನಗೆ ಟಿ.ಡಿ.ಎಸ್‌. ಎಂದರೆ ಏನು ಎಂಬುದು ತಿಳಿಯಬೇಕಾಗಿದೆ. ನನಗೆ ತೆರಿಗೆ ಬರುತ್ತದೆಯೇ, ಬಂದರೆ ತೆರಿಗೆ ವಿನಾಯತಿ ಪಡೆಯುವ ಬಗೆ ತಿಳಿಸಿರಿ..
ಉತ್ತರ:
ನಿಮ್ಮ ಸಂಬಳ ₹ 25000ವಿದ್ದು, ನಿಮ್ಮ ವಾರ್ಷಿಕ ಆದಾಯ ₹ 3 ಲಕ್ಷವಾಗುತ್ತದೆ. ₹ 2.50 ಲಕ್ಷಗಳ ತನಕ ನಿಮಗೆ ತೆರಿಗೆ ಇರುವುದಿಲ್ಲ ಹಾಗೂ ಉಳಿದ ₹ 50,000ಕ್ಕೆ ಶೇ 10 ಆದಾಯ ತೆರಿಗೆ ಬರುತ್ತದೆ. ನಿಮಗೆ ಇದುವರೆಗೆ ವಿಮೆ ಇಲ್ಲವಾದಲ್ಲಿ ವಾರ್ಷಿಕವಾಗಿ ₹ 25,000, ಎಲ್‌.ಐ.ಸಿ.ಯ  ಜೀವನ ಆನಂದ ಪಾಲಿಸಿಯಲ್ಲಿ ತೊಡಗಿಸಿರಿ. ನೀವು ಪಿಂಚಣಿಗೆ ಒಳಗಾಗದಿರುವಲ್ಲಿ ಎನ್‌.ಪಿ.ಎಸ್‌. ಕಡ್ಡಾಯವಾಗಿರುತ್ತದೆ.

ವಿಮೆ, ಎನ್‌.ಪಿ.ಎಸ್‌. ಹಾಗೂ 5 ವರ್ಷಗಳ ಬ್ಯಾಂಕ್‌ ಠೇವಣಿ ಎಲ್ಲಾ ಸೇರಿಸಿ ಗರಿಷ್ಠ ₹ 50,000 ತನಕ ವಾರ್ಷಿಕವಾಗಿ ಉಳಿತಾಯ ಮಾಡಿ ಆದಾಯ ತೆರಿಗೆ ಸಂಪೂರ್ಣ ವಿನಾಯತಿ ಪಡೆಯಬಹುದು. ಟಿ.ಡಿ.ಎಸ್‌. ಎಂದರೆ ಆದಾಯದ ಮೂಲದಲ್ಲಿಯೇ ತೆರಿಗೆ ಮುರಿಯುವುದು ಎಂದರ್ಥ.

ನೌಕರರು ಪಡೆಯುವ ಸಂಬಳದಲ್ಲಿ, ಅಂತಹ ನೌಕರರು ಆದಾಯ ತೆರಿಗೆಗೆ ಒಳಗಾದಲ್ಲಿ, ಉದ್ಯೋಗದಾತರು ಮುರಿಯುವ ತೆರಿಗೆ ಟಿ.ಡಿ.ಎಸ್‌. ಆಗಿರುತ್ತದೆ. ಅದೇ ರೀತಿ ಬ್ಯಾಂಕ್‌ ಠೇವಣಿ ಇರಿಸಿ ವಾರ್ಷಿಕವಾಗಿ ₹ 10,000ಕ್ಕೂ ಹೆಚ್ಚಿನ ಬಡ್ಡಿ ಪಡೆಯುವಲ್ಲಿ ಕೂಡಾ, ಬಡ್ಡಿಯ ಮೂಲದಿಂದಲೇ ತೆರಿಗೆ ಕಡಿತವಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಟಿ.ಡಿ.ಎಸ್‌. ಎಂಬುದಾಗಿ ಕರೆಯುತ್ತಾರೆ.

ಶಿವಶಂಕರ, ಧಾರವಾಡ
* ಬ್ಯಾಂಕಿನಲ್ಲಿ ಕೆಲಸ ಮಾಡುತ್ತೇನೆ. ನನಗೆ ಸಂಬಳದ ಹಿಂಬಾಕಿ ಬಂದಿರುತ್ತದೆ. ನಿಮ್ಮ ಅಂಕಣದಲ್ಲಿ , ಹಿಂಬಾಕಿ ಹಣ ಆಯಾ  ವರ್ಷಗಳಿಗೆ ಸೇರಿಸಿ ತೆರಿಗೆ ಕೊಡುವ ಸೌಲತ್ತು ಇದೆ ಎಂಬುದಾಗಿ ತಿಳಿಸಿದ್ದೀರಿ. ನಾನು ಕಳೆದ ವರ್ಷ ರಿಟರ್ನ್ಸ್‌ ಫೈಲ್‌ ಮಾಡಲಿಲ್ಲ. ಕಳೆದ ವರ್ಷ ಎನ್‌ಎಸ್‌ಸಿ ಕೊಂಡಿದ್ದೆ. ಕಳೆದ ವರ್ಷದ ಆದಾಯಕ್ಕೆ ಈಗ ರಿಫಂಡ್‌ ಪಡೆಯಬಹುದೇ.

ಉತ್ತರ: ಸೆಕ್ಷನ್‌ 89(1) ಆಧಾರದ ಮೇಲೆ ನೌಕರರು ಸಂಬಳ ಪರಿಷ್ಕರಣೆಯಾಗಿ ಹಿಂದಿನ ವರ್ಷಗಳ ಬಡ್ತಿ ಹಿಂಬಾಕಿ ಹಣ ಪಡೆದಲ್ಲಿ ನಾನು ಈ ಹಿಂದೆ ಲೇಖನದಲ್ಲಿ ತಿಳಿಸಿದಂತೆ, ರಿಟರ್ನ್ಸ್‌ ಫೈಲ್‌ ಮಾಡಿ, ರಿಫಂಡ್‌ ಪಡೆಯಬಹುದು. ನೀವು ಕಳೆದ ವರ್ಷ ತೆರಿಗೆ  ರಿಟರ್ನ್ಸ್‌  ಸಲ್ಲಿಸಿರುವಲ್ಲಿ, ಈ ವರ್ಷ ಹಿಂದಿನ ವರ್ಷದ  ರಿಟರ್ನ್ಸ್‌  ಫೈಲ್‌ ಮಾಡಬಹುದು ಹಾಗೂ ಹೆಚ್ಚಿಗೆ ತೆರಿಗೆ ಕೊಟ್ಟಲ್ಲಿ, ರಿಫಂಡ್‌ ಪಡೆಯಬಹುದು. ನಿಮಗೆ ಇನ್ನೂ ಗೊಂದಲವಿರುವಲ್ಲಿ ನಿಮಗೆ ಸಮೀಪದ ಚಾರ್ಟರ್‌್ಡ ಅಕೌಂಟೆಂಟ್‌ ಸಂಪರ್ಕಿಸಿ.

ಪ್ರದೀಪ್‌. ಎ. ಗೌಡ, ರಾಮನಗರ
* ತಂದೆ ಹೆಸರಿನಲ್ಲಿರುವ ಒಂದು ಎಕರೆ ಜಮೀನು ₹ 45 ಲಕ್ಷಕ್ಕೆ ಮಾರಾಟ ಮಾಡಿದ್ದು, ಅದರಲ್ಲಿ ಮನೆ ಕಟ್ಟಲು ₹ 20 ಲಕ್ಷ ನನ್ನ ಮದುವೆಗೆ ಹಾಗೂ ಇತರೆ ಖರ್ಚಿಗೆ ₹ 10 ಲಕ್ಷ ಉಪಯೋಗಿಸಿ, ಉಳಿದ ₹ 15 ಲಕ್ಷ ನಿವೇಶನ ಕೊಂಡುಕೊಳ್ಳಬೇಕೆಂದಿದ್ದೇವೆ. ನಿವೇಶನ ಕೊಂಡುಕೊಳ್ಳುವವರೆಗೆ ಆ ಹಣ ಬ್ಯಾಂಕಿನಲ್ಲಿ ಇಟ್ಟರೆ ಆದಾಯ ತೆರಿಗೆ ಬರುತ್ತಿದೆಯೇ. ಬ್ಯಾಂಕಿನಲ್ಲಿ ಎಷ್ಟು ಬಡ್ಡಿ ಕೊಡುತ್ತಾರೆ. ನಮಗೆ ಸಂಪೂರ್ಣ ಮಾಹಿತಿ ನೀಡಿ.

ಉತ್ತರ: ನಿಮ್ಮೊಡನಿರುವ ₹ 15 ಲಕ್ಷ ಸದ್ಯ ಎಲ್ಲಿದೆ, ಯಾವ ಖಾತೆಯಲ್ಲಿದೆ ಎನ್ನುವುದನ್ನು ನೀವು ತಿಳಿಸಿಲ್ಲ. ಈ ಹಣ ಉಳಿತಾಯ ಖಾತೆಯಲ್ಲಿ ಇರಬಹುದು. ಆದಾಯ ತೆರಿಗೆ ಭಯ ನಿಮಗಿಲ್ಲ. ತಕ್ಷಣ ₹ 15 ಲಕ್ಷ ಒಂದು ವರ್ಷದ ಅವಧಿ ಠೇವಣಿಯಲ್ಲಿ ನಿಮ್ಮ ಮನೆಗೆ ಸಮೀಪದ ಅಥವಾ ನೀವು ಖಾತೆ ಹೊಂದಿದ ಬ್ಯಾಂಕಿನಲ್ಲಿ ಇಡಿರಿ. ಈ ಅವಧಿಯೊಳಗೆ ನಿವೇಶನ ಕೊಳ್ಳುವ ಸಂದರ್ಭ ಒದಗಿದಲ್ಲಿ, ಅವಧಿಗೆ ಮುನ್ನ ಕೂಡಾ ಠೇವಣಿ ಪಡೆಯುವ ಹಕ್ಕು ನಿಮಗಿದೆ.

ಶೇ 8ರ ಬಡ್ಡಿ ದರದಲ್ಲಿ ₹ 15 ಲಕ್ಷ ಠೇವಣಿಗೆ ವಾರ್ಷಿಕವಾಗಿ ಬಡ್ಡಿ ₹ 1.20 ಲಕ್ಷ ಬರುತ್ತದೆ. ನೀವು 15ಜಿ ನಮೂನೆಯ ಫಾರಂ ಬ್ಯಾಂಕಿಗೆ ಸಲ್ಲಿಸಿ, ಇದರಿಂದ ಬ್ಯಾಂಕಿನವರು ತೆರಿಗೆ ಮುರಿಯುವುದಿಲ್ಲ. ಜೊತೆಗೆ ವಾರ್ಷಿಕ ₹ 1.20 ಲಕ್ಷ ಆದಾಯಕ್ಕೆ ಆದಾಯ ತೆರಿಗೆ ಕೂಡಾ ಬರುವುದಿಲ್ಲ.

ಸಿದ್ಧಾರ್ಥ, ಚಾಮರಾಜನಗರ
*ಖಾಸಗಿ ಕೆಲಸದಲ್ಲಿದ್ದೇನೆ. ತಿಂಗಳ ಸಂಬಳ ₹ 6,000 (ಊಟ ವಸತಿ ಉಚಿತ) ನನ್ನ ತಾಯಿಗೆ ವಯಸ್ಸಾಗಿದೆ. ಒಂದು ಎಕರೆ ಮಳೆ ಆಶ್ರಿತ ಜಮೀನಿದೆ. ನನಗೆ ಇಬ್ಬರು ಸಹೋದರಿಯರು, ಇವರಲ್ಲಿ ಒಬ್ಬರಿಗೆ ಮದುವೆಯಾಗಿದೆ, ಸಣ್ಣವಳಿಗೆ 2017 ರಲ್ಲಿ ಮದುವೆ ಮಾಡಬೇಕು. ಮದುವೆಗೆ ಕನಿಷ್ಠ ₹ 2 ಲಕ್ಷ ಬೇಕಾಗುತ್ತದೆ. ನಮಗೆ ಬೇರೆ ಆದಾಯ
ಮೂಲಗಳಿಲ್ಲ, ಮಾರ್ಗದರ್ಶನ ನೀಡಿ.
ಉತ್ತರ:
ನಿಮ್ಮ ಆದಾಯ ಹಾಗೂ ಆರ್ಥಿಕ ಪರಿಸ್ಥಿತಿಗೆ ಸಾಲ ಮರುಪಾವತಿಸುವ ಸಾಮರ್ಥ್ಯವಿಲ್ಲವಾದ್ದರಿಂದ ಬ್ಯಾಂಕುಗಳಿಂದ ಸಾಲ ಸಿಗಲಾರದು. ಖಾಸಗಿ ಸಾಲ ಪಡೆದರೆ ಶೇ 24–36 ಬಡ್ಡಿ ತೆರಬೇಕಾದೀತು. ಜಾಗ್ರತೆ ಇರಲಿ, ಮದುವೆಗೆ ಎಷ್ಟು ಬೇಕಾದರೂ ಖರ್ಚು ಮಾಡಬಹುದು. ಆದರೆ ಇದು ಒಂದೆರಡು ದಿವಸಗಳ ವೈಭವ ಮಾತ್ರ ನೆನಪಿಡಿ.

ಮುಂದೆ ನೀವು ಹಾಗೂ ನಿಮ್ಮ ಇಳಿ ವಯಸ್ಸಿನ ಹೆತ್ತವರು ಜೀವನ ಪರ್ಯಂತ ಕಷ್ಟ ಅನುಭವಿಸಬೇಕಾದೀತು. ಸದ್ಯದ ಪರಿಸ್ಥಿತಿಯಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಕಡಿಮೆ ಇರುವುದರಿಂದ ವರನ ಕಡೆಯವರ ಬೇಡಿಕೆ ಇರುವುದಿಲ್ಲ. ನಿಮ್ಮ ಮನೆ ಬಾಗಿಲಿನಲ್ಲಿ ಅಥವಾ ಊರ ದೇವಸ್ಥಾನದಲ್ಲಿ, ಬಹಳ ಸಣ್ಣ ರೀತಿಯಲ್ಲಿ, ಬರೇ ನೆಂಟರಿಸ್ಟರನ್ನು ಮಾತ್ರ ಕರೆದು ಸಣ್ಣ ರೀತಿಯಲ್ಲಿ ಮದುವೆ ಮಾಡಿರಿ. ಯಾವುದೇ ಕಾರಣಕ್ಕೆ ಮದುವೆಗೆ ₹ 50,000ಕ್ಕೂ ಹೆಚ್ಚಿನ ಖರ್ಚು ಮಾಡದಿರಿ. ಈ ಹಣ ನೀವು ಕೆಲಸ ಮಾಡುವ ಕಂಪೆನಿ ಅಥವಾ ಬಂಧು ಮಿತ್ರರಿಂದ ಕೈಗಡವಾಗಿ ಪಡೆಯಿರಿ.

ಮಂಜುನಾಥ, ಬೆಂಗಳೂರು
* ವಯಸ್ಸು 27. ಅವಿವಾಹಿತ. ಎಂ.ಎಸ್‌.ಸಿ. ಯಲ್ಲಿದ್ದೇನೆ. ತಿಂಗಳ ಸಂಬಳ ₹ 20,000. ನಾನು ನನ್ನ ತಮ್ಮ ತಂದೆ ತಾಯಿ ಎಲ್ಲರೂ ಒಟ್ಟಿಗೆ ₹ 8,000 ಬಾಡಿಗೆ ಮನೆಯಲ್ಲಿದ್ದೇವೆ. ಅನುವಂಶಿಕ ಆದಾಯದಿಂದ ₹ 14 ಲಕ್ಷ ಪಡೆಯುವವರಿದ್ದೇವೆ. ನನಗೆ ಈ ಕೆಳಗಿನ ಪ್ರಶ್ನೆಗಳಿಗೆ ಉತ್ತರ ಬೇಕಾಗಿದೆ. (1) ಅನುವಂಶಿಕ ಆಸ್ತಿಯಿಂದ ಬರುವ ಹಣಕ್ಕೆ ತೆರಿಗೆ ಇದೆಯೇ; (2) ಬಂದರೆ ಎಷ್ಟು ಬರಬಹುದು; (3) ನಾವು ಈ ಹಣ ನಿವೇಶನ ಹಾಗೂ ಮನೆಕಟ್ಟಲು ಬಳಸಬಹುದೇ; (4) ಮನೆ ಅಥವಾ ಫ್ಲ್ಯಾಟ್‌ ಕೊಂಡುಕೊಳ್ಳುವಲ್ಲಿ, ಉಳಿದ ಹಣಕ್ಕೆ ಗೃಹ ಸಾಲ ಪಡೆಯಬೇಕಾದೀತು, ಹಾಗೂ ನನ್ನ ಸಂಬಳದ ಆಧಾರದ ಮೇಲೆ ನನಗೆ ಸಾಲ ದೊರೆಯಬಹುದೇ; (5) ಒಂದು ವೇಳೆ ಸಾಲ ಸಿಗದಿರುವಲ್ಲಿ ಬರುವ ₹ 14 ಲಕ್ಷ ಹೇಗೆ ಉಪಯೋಗಿಸಲು ಮತ್ತು ಕುಟುಂಬದ ಹಿತದೃಷ್ಟಿಯಿಂದ ಎಲ್ಲಿ ಹೂಡಲಿ.

ಉತ್ತರ: ಅನುವಂಶಿಕವಾಗಿ ಬರುವ ಆಸ್ತಿ ಅಥವಾ ಹಣಕ್ಕೆ ತೆರಿಗೆ ಬರುವುದಿಲ್ಲ. ನಿಮ್ಮ ಸಂಬಳದಲ್ಲಿ ಮನೆ ಬಾಡಿಗೆ ಕಳೆದು ಉಳಿಯುವ ಮೊತ್ತ ₹ 12,000 ಮಾತ್ರ. ಈ ಮೊತ್ತ ನಾಲ್ಕು ಜನರ ಸಾಮಾನ್ಯ ಜೀವನಕ್ಕೆ ಸರಿಹೋಗಬಹುದು.

ನಿಮಗೆ ಬರುವ ₹ 14 ಲಕ್ಷ ನಿವೇಶನಕೊಳ್ಳಲು ಅಥವಾ ಮನೆ ಕಟ್ಟಲು ಬಳಸಬಹುದಾದರೂ, ಹೀಗೆ ಕೊಳ್ಳಲು ಇನ್ನೂ ಬೇಕಾಗುವ ಹಣ ನಿಮ್ಮ ಸಂಬಳದ ಆಧಾರದ ಮೇಲೆ ಗೃಹ ಸಾಲ ಪಡೆಯಲು ಸಾಧ್ಯವಿಲ್ಲ. ಗೃಹ ಸಾಲ ವಿತರಿಸುವಾಗ ಸಾಲ ಮರುಪಾವತಿಸುವ ಸಾಮರ್ಥ್ಯ ನೋಡುತ್ತಾರೆ. ಸದ್ಯಕ್ಕೆ ಈ ಮಾರ್ಗ ಮುಂದೂಡಿರಿ.

ನಿಮಗೆ ಬರುವ ₹ 14 ಲಕ್ಷ, ಅಂಚೆ ಕಚೇರಿ ಎಂ.ಐ.ಎಸ್‌. (ಮನಿ ಇನ್‌ಕಮ್‌ ಸ್ಕೀಮ್‌) ನಿಮ್ಮ ತಂದೆ ತಾಯಿ ಹೆಸರಿನಲ್ಲಿ ₹ 9 ಲಕ್ಷ ಹಾಗೂ ನಿಮ್ಮ ಮತ್ತು ತಮ್ಮನ ಹೆಸರಿನಲ್ಲಿ ₹ 5 ಲಕ್ಷ ವಿಂಗಡಿಸಿ ಇರಿಸಿರಿ. ಇಲ್ಲಿ ಶೇ 7.8ರ ಬಡ್ಡಿ ಠೇವಣಿಯ ಮೇಲೆ ದೊರೆಯುತ್ತದೆ. ಸದ್ಯಕ್ಕೆ ಇದಕ್ಕಿಂತ ಮಿಗಿಲಾದ ದಾರಿ ಬೇರೊಂದಿಲ್ಲ.

ಪ್ರಸಾದ್‌, ಊರು ಬೇಡ
* ವಯಸ್ಸು 30, ವಿವಾಹಿತ, ವಿದೇಶದಲ್ಲಿ ಕೆಲಸ. ₹ 2 ಲಕ್ಷ ತಿಂಗಳಿಗೆ ಉಳಿತಾಯವಿದೆ. ನೆಲಮಂಗಲದಲ್ಲಿ 30X45 ಅಳತೆ ನಿವೇಶನ ಇದೆ. ಇನ್ನು ಎರಡು ವರ್ಷಗಳಲ್ಲಿ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡುವ ಉದ್ದೇಶವಿದೆ. ನಿಮ್ಮ ಅಭಿಪ್ರಾಯ ಹಾಗೂ ಮಾರ್ಗದರ್ಶನ ನನಗೆ ಬೇಕಾಗಿದೆ.

ಉತ್ತರ: ನೀವು ಇದುವರೆಗೆ ಮಾಡಿರುವ ಉಳಿತಾಯದ ವಿವರ ತಿಳಿಸಿಲ್ಲ. ಬೆಂಗಳೂರಿನಲ್ಲಿ 30’X40’ ಅಳತೆಯ ಒಂದು ಸಣ್ಣ ನಿವೇಶನ ಕೊಂಡು ಮನೆ ಕಟ್ಟಲು ₹ 1.50 ಕೋಟಿ ಬೇಕಾಗುತ್ತದೆ. ನಿಮ್ಮ ನೆಲಮಂಗಲ ನಿವೇಶನದ ಗರಿಷ್ಠ ಬೆಲೆ ₹ 25 ಲಕ್ಷವಿರಬಹುದು. ಈ ವಿಚಾರ ಗಮನದಲ್ಲಿಟ್ಟು ಬೆಂಗಳೂರಿನಲ್ಲಿ ನೆಲೆಸುವ ಅಭಿಪ್ರಾಯ ಮುಂದುವರಿಸಿರಿ. ನೀವು ಭಾರತಕ್ಕೆ ಬಂದ ನಂತರವೂ ಉತ್ತಮ ನೌಕರಿ ಪಡೆಯುವಲ್ಲಿ, ಮನೆ ಕಟ್ಟಲು ಗೃಹ ಸಾಲ ದೊರೆಯುತ್ತದೆ.

ಪ್ರಕಾಶ್‌ ಲಮಾನಿ, ಊರು ಬೇಡ
* ಬಿ.ಎ. ಪದವೀಧರ. ನನ್ನೊಡನೆ ಪ್ಯಾಸೆಂಜರ್‌ –ಗೂಡ್ಸ್ ವಾಹನ ಚಲಿಸುವ ಡ್ರೈವಿಂಗ್‌ ಲೈಸೆನ್ಸ್ ಇದೆ. ನಾನು ಸ್ವಂತ ವಾಹನ ಪಡೆದು ಸ್ವಂತ ಉದ್ಯೋಗ ಮಾಡಲು ಸಾಲ ಸಿಗಬಹುದೇ, ಹಾಗೂ ಯಾವ ಬ್ಯಾಂಕಿನಲ್ಲಿ ಸಾಲಕ್ಕೆ ಅರ್ಜಿ ಸಲ್ಲಿಸಲಿ ತಿಳಿಸಿ.
ಉತ್ತರ: ನೀವು ಪ್ರಾರಂಭದಲ್ಲಿ ದೊಡ್ಡ ವಾಹನ ಕೊಂಡು ಸ್ವಂತ ಉದ್ಯೋಗ ಮಾಡುವುದರ ಬದಲಾಗಿ, ಒಳ್ಳೆ ಕಂಪೆನಿಯ ಕಾರು ಖರೀದಿಸಿ, ಪಬ್ಲಿಕ್‌ ಟ್ಯಾಕ್ಸಿ ಓಡಿಸುವುದು ಉತ್ತಮ ಹಾಗೂ ಲಾಭದಾಯಕ. ನೀವು ಬಿ.ಎ. ಪಧವೀಧರರಿದ್ದು ಸ್ವಂತ ಉದ್ಯೋಗ ಮಾಡಲು, ಅಂದರೆ ನಿಮ್ಮ ವಿಚಾರದಲ್ಲಿ ಕಾರು ಕೊಳ್ಳಲು ಪಿ.ಎಂ.ಎಂ.ವೈ. (ಪ್ರಧಾನ  ಮಂತ್ರಿ ಮುದ್ರಾ ಯೋಜನೆ) ಅಡಿಯಲ್ಲಿ ರಾಷ್ಟ್ರೀಕೃತ ಅಥವಾ ಖಾಸಗಿ ಬ್ಯಾಂಕುಗಳಿಂದಲೂ ಸಾಲ ಪಡೆಯಬಹುದು.

ಈ ಯೋಜನೆಯಲ್ಲಿ ‘ಶಿಶು’, ‘ಕಿಶೋರ್‌’ ಹಾಗೂ ‘ತರುಣ್‌’ ಎನ್ನುವ ಮೂರು ಯೋಜನೆಗಳಿವೆ. ಈ ಮೂರು ಯೋಜನೆಗಳಲ್ಲಿ ಕ್ರಮವಾಗಿ ₹ 50000 ತನಕ, 50000–5 ಲಕ್ಷಗಳ ತನಕ, ಹಾಗೂ ₹ 5 ಲಕ್ಷದಿಂದ ₹ 10 ಲಕ್ಷಗಳತನಕ, ಸ್ವಂತ ಉದ್ಯೋಗಕ್ಕೆ ಸಾಲ ದೊರೆಯುತ್ತದೆ. ನೀವು ‘ಕಿಶೋರ್‌’ ಯೋಜನೆ ಆರಿಸಿಕೊಳ್ಳಿ. ಸಾಲದ ಬಡ್ಡಿ ದರ ಶೇ 12 ಇರುತ್ತದೆ. ಸಾಲ ಪಡೆದ ನಂತರ ಸಾಲದ ಕಂತು ಹಾಗೂ ಬಡ್ಡಿ ತಪ್ಪದೇ ತುಂಬಿರಿ. ಹೀಗೆ ಮಾಡಿದಲ್ಲಿ ಮುಂದೆ ದೊಡ್ಡ ವಾಹನ ಕೂಡಾ ಕೊಳ್ಳಲು ಬ್ಯಾಂಕ್‌ ಸಾಲ ಕೊಡುತ್ತದೆ.

ವಿ. ವಿಜಯಲಕ್ಷ್ಮಿ, ಊರು ಬೇಡ
* ವಯಸ್ಸು 33. ನನಗೆ ಎರಡೂವರೆ ವರ್ಷದ ಮಗಳಿದ್ದಾಳೆ. ನಾವಿಬ್ಬರೂ ನನ್ನ ತಂದೆಯ ಮೇಲೆ ಅವಲಂಬಿಸಿ ಕೊಂಡಿದ್ದೇವೆ. ಬಹಳಷ್ಟು ಸಂದರ್ಶನಕ್ಕೆ ಹಾಜರಾದರೂ ₹ 5000 ಸಂಬಳದ ಕೆಲಸವೂ ಸಿಗಲಿಲ್ಲ. ನನ್ನ ಉಳಿತಾಯದ ₹ 10,000 ನನಗೆ ಏನಾದರೂ ಮಾಡಬೇಕೆಂದಿದೆ ಹಾಗೂ ತಂದೆಗೆ ಸಹಾಯ ಮಾಡಬೇಕೆಂದಿರುವೆ. ನಿಮ್ಮ ಸಲಹೆ ನನಗೆ ಬೇಕಾಗಿದೆ.

ಉತ್ತರ: ಮನುಷ್ಯನಿಗೆ ಅಸಾಧ್ಯವೆನ್ನುವುದಿಲ್ಲ. ಹಣಗಳಿಸಲು ನೌಕರಿಯೇ ಬೇಕೆಂದಿಲ್ಲ. ಬ್ಯೂಟಿ ಪಾರ್ಲರ್‌, ಐಸ್‌ಕ್ರೀಮ್‌ ಪಾರ್ಲರ್‌, ಮಹಿಳೆಯರಿಗೆ ಬೇಕಾಗುವ ಫ್ಯಾನ್ಸಿ ವಸ್ತುಗಳ ಅಂಗಡಿ, ಹೀಗೆ ನಿಮಗೆ ಸಾಧ್ಯವಾಗುವ ಯಾವುದಾದರೊಂದು ಸ್ವಯಂ ಉದ್ಯೋಗ ಆರಿಸಿಕೊಳ್ಳಿ.

ಈ ಉದ್ಯೋಗಕ್ಕೆ  ಮುದ್ರಾ ಯೋಜನೆಯಡಿಯಲ್ಲಿ ಬ್ಯಾಂಕುಗಳಲ್ಲಿ ಸಾಲ ಸಿಗುತ್ತದೆ. ಪ್ರಾರಂಭಿಕವಾಗಿ ಈ ಯೋಜನೆಯಲ್ಲಿ ‘ಶಿಶು’ ಯೋಜನೆಯಲ್ಲಿ ₹ 50,000 ಸಾಲ ಪಡೆಯಿರಿ. ಮಾರ್ಜಿನ್‌ ಮನಿ, ಬೇರಾವ ಆಧಾರ ಕೊಡುವ ಅವಶ್ಯವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.