ADVERTISEMENT

ಪ್ರಶ್ನೋತ್ತರ

​ಪ್ರಜಾವಾಣಿ ವಾರ್ತೆ
Published 13 ಜೂನ್ 2017, 19:30 IST
Last Updated 13 ಜೂನ್ 2017, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ಎನ್‌.ಕೆ. ಲಾದ್ವಾ, ಧಾರವಾಡ
* ನಾನು ನಮ್ಮ ಪರಿಚಯಸ್ಥರಾದ 20 ಜನರಿಂದ, ಚೀಟಿ ವ್ಯವಹಾರದಲ್ಲಿ ಹಣ ತೊಡಗಿಸುತ್ತಿದ್ದೇನೆ. ಈ ಹಣ ನನ್ನ ಪಿಂಚಣಿಯಿಂದ ಸಂದಾಯ ಮಾಡುತ್ತಿದ್ದೇನೆ. ಚೀಟಿ ವ್ಯವಹಾರ ಮುಂದುವರಿಸಲೇ ಅಥವಾ ಬೇರೆ ಉತ್ತಮ ಮಾರ್ಗವಿದ್ದರೆ ತಿಳಿಸಿ.

ಉತ್ತರ: ಖಾಸಗಿ ಚೀಟಿ ವ್ಯವಹಾರದಲ್ಲಿ ಭದ್ರತೆ ಇರುವುದಿಲ್ಲ. ಚೀಟಿ ವ್ಯವಹಾರದಲ್ಲಿ ತೊಡಗಿಸಿದ ಜನರ ಸಮ್ಮತಿಯಿಂದಲೇ ಹಣ ತುಂಬಿ ವಾಪಸು ಪಡೆಯಬೇಕಾಗುತ್ತದೆ. ಚೀಟಿ ಹಣ ಪಡೆಯುವರ (ಚೀಟಿ ಎತ್ತಿದ ವ್ಯಕ್ತಿ) ಆರ್ಥಿಕ ಪರಿಸ್ಥಿತಿ ಸರಿ ಇರದಿರುವಲ್ಲಿ, ಚೀಟಿ ವ್ಯವಹಾರದಲ್ಲಿ ತೊಡಗಿದ ಗುಂಪು ಸಂಕಷ್ಟಕ್ಕೆ ಒಳಗಾಗಬೇಕಾಗುತ್ತದೆ. ಕೆಲವೊಮ್ಮೆ ಇಂತಹ ವ್ಯವಹಾರ ಕೆಲವು ಕಾಲ ಚೆನ್ನಾಗಿ ನಡೆದು ಲಾಭ ತರುವುದೂ ಉಂಟು. ಆದರೆ ಇಲ್ಲಿ ಕಂಟಕ (RISK) ಸದಾ ಇರುತ್ತದೆ. ನನ್ನ ಅಭಿಪ್ರಾಯದಲ್ಲಿ ಈ ವ್ಯವಹಾರದಿಂದ ನೀವು ಹೊರಗೆ ಬರುವುದೇ ಲೇಸು. ಚೀಟಿ ಕಟ್ಟುವ ಹಣ ಬ್ಯಾಂಕ್‌ ಆರ್‌.ಡಿ. ಮಾಡಿ ನಿಶ್ಚಿಂತೆಯಿಂದ ಬಾಳಿರಿ.

***

ADVERTISEMENT

ವೀರಯ್ಯ. ಎಂ.ವಿ., ದಾವಣಗೆರೆ
* ನಾನು ಎಸ್‌ಬಿಎಂ ದಾವಣಗೆರೆಯಿಂದ ಗೃಹ ಸಾಲ ₹ 12.28 ಲಕ್ಷ ಪಡೆದಿದ್ದೆ. ಗೃಹ ಸಾಲದ ಮೇಲೆ ವಿಮೆ ಮಾಡಲಾಗಿದೆ. ವಾರ್ಷಿಕ ಪ್ರೀಮಿಯಂ ಹಣ ಎಷ್ಟು ಬರುತ್ತದೆ ತಿಳಿಯಲಿಲ್ಲ. ಬಹಳಷ್ಟು ಹಣ ಸಂದಾಯವಾಗುತ್ತದೆ. 5 ವರ್ಷಕ್ಕೆ ಎಷ್ಟು ಕಟ್ಟಬೇಕು. Master Policy ಆಗಿರುವುದರಿಂದ ಬ್ಯಾಂಕಿನವರೇ ಪ್ರೀಮಿಯಂ ಹಣ ಕಟ್ಟುತ್ತಾರೆ ಹಾಗೂ ನಮ್ಮ ಖಾತೆಗೆ ಖರ್ಚು ಹಾಕುತ್ತಾರೆ. ದಯಮಾಡಿ ತಿಳಿಸಿ.

ಉತ್ತರ: ಗೃಹ ಸಾಲ ಪಡೆಯುವಾಗ, ಕೆಲವೊಂದು ಬ್ಯಾಂಕುಗಳು ಸಾಲದ ಮೊತ್ತಕ್ಕನುಗುಣವಾಗಿ ಟರ್ಮ್‌ ಇನ್ಶುರೆನ್‌್ಸ ಮಾಡಿಸುತ್ತಾರೆ. ಇಲ್ಲಿ ಕಟ್ಟಿದ ಹಣ ವಾಪಸು  ಬರುವುದಿಲ್ಲವಾದರೂ, ಸಾಲಗಾರ ಅಕಾಲ ಮರಣಕ್ಕೀಡಾದಾಗ, ಈ ವಿಮೆಯಿಂದ ಗೃಹ ಸಾಲ ತಾನಾಗಿ ಕೊನೆಗೊಳ್ಳುತ್ತದ. ಇದರಿಂದ ವಾರಸುದಾರರಿಗೆ ಸಾಲ ತೀರಿಸುವ ಬವಣೆ ಇರುವುದಿಲ್ಲ.

ಎಸ್‌ಬಿಎಂ ನವರು ಟರ್ಮ್‌ ಇನ್ಶುರನ್ಸ್‌ ಮಾಡಿಸಿರಬೇಕೆಂದು ತಿಳಿಯುತ್ತೇನೆ. ಇಲ್ಲಿ ಪ್ರೀಮಿಯಂ ಹಣ ತುಂಬಾ ಕಡಿಮೆ ಇರುತ್ತದೆ. ₹ 15 ಲಕ್ಷ ಟರ್ಮ್‌ ಇನ್ಶುರೆನ್ಸ್‌ಗೆ ವಾರ್ಷಿಕವಾಗಿ ಗರಿಷ್ಠ ₹ 3000 ಪ್ರೀಮಿಯಂ ಹಣ ಕಟ್ಟಬೇಕಾದೀತು. ₹ 1 ಕೋಟಿ (High Cover) ಟರ್ಮ್‌ ಇನ್ಶುರೆನ್ಸ್‌ 25–35 ವರ್ಷದ ವ್ಯಕ್ತಿಗೆ ವಾರ್ಷಿಕವಾಗಿ ₹ 8683 ಮಾತ್ರ, Master Policy ವಿಚಾರದಲ್ಲಿ ಬ್ಯಾಂಕಿನಲ್ಲಿ ವಿಚಾರಿಸಿ.

***

ರಮೇಶ. ಬಿ., ಮುಧೋಳ
* ನಾನು ಸರ್ಕಾರಿ ಪ್ರೌಢಶಾಲಾ ಶಿಕ್ಷಕ. ನನ್ನ ಸಂಬಳ ₹ 29,799 ಕಡಿತ ₹ 6,443. ಎಲ್ಲಾ ಖರ್ಚು ಕಳೆದು ತಿಂಗಳಿಗೆ ₹ 10–12 ಸಾವಿರ ಉಳಿತಾಯವಾಗುತ್ತದೆ. ನನಗೆ 14 ವರ್ಷದ, 8 ವರ್ಷದ ಇಬ್ಬರು ಹೆಣ್ಣು ಮಕ್ಕಳು ಮತ್ತು 10 ವರ್ಷದ ಒಬ್ಬ ಗಂಡು ಮಗ ಇದ್ದಾರೆ. ಸಂಬಳದಲ್ಲಿ ಎಲ್‌ಐಸಿ ₹ 1213, ಜಿಪಿಎಫ್‌ ₹ 4,000 ಕೆಜಿಐಡಿ ₹ 1000 ಕಡಿತವಾಗುತ್ತದೆ. ಇವುಗಳನ್ನು ಹೆಚ್ಚಿಸಬೇಕೇ ತಿಳಿಸಿರಿ. ಮಕ್ಕಳ ಭವಿಷ್ಯಕ್ಕೆ ಉಳಿತಾಯದ ಯೋಜನೆ ತಿಳಿಸಿರಿ.

ಉತ್ತರ: ಸಂಬಳದಲ್ಲಿ ಕಡಿತವಾಗುವ ವಿಚಾರ ಹಾಗೆಯೇ ಮುಂದುವರಿಸಿರಿ. ಅವುಗಳನ್ನು ಸದ್ಯಕ್ಕೆ ಹೆಚ್ಚಿಸುವ ಅವಶ್ಯವಿಲ್ಲ. ನಿಮ್ಮ 8 ವರ್ಷದ ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿ ಖಾತೆ ತೆರೆಯಿರಿ ಹಾಗೂ ತಿಂಗಳಿಗೆ ₹ 2,000 ತುಂಬುತ್ತಾ ಬನ್ನಿ. ಮಗನ ಸಲುವಾಗಿ ಎಲ್‌.ಐ.ಸಿ.ಯವರ ಹೊಸ ಚಿಲ್ಡ್ರನ್ಸ್‌ ಮನಿ ಬ್ಯಾಕ್‌ ಪ್ಲ್ಯಾನ್‌ನಲ್ಲಿ ತಿಂಗಳಿಗೆ ₹ 2,000 ತುಂಬಿರಿ. ಈ ಪ್ರೀಮಿಯಂ ಹಣ ಸಂಬಳದಲ್ಲಿ ಕಡಿತವಾಗುವಂತೆ ನೋಡಿಕೊಳ್ಳಿ. 14 ವರ್ಷದ ಮಗಳ ಸಲುವಾಗಿ 8 ವರ್ಷಗಳ ಅವಧಿಯ ಪ್ರತೀ ತಿಂಗಳೂ ₹ 2,000 ತುಂಬುವ ಆರ್‌.ಡಿ. ಮಾಡಿರಿ. ನಿಮ್ಮ ಉಳಿತಾಯ ಖಾತೆಯಿಂದ, ಆರ್‌.ಡಿ. ಹಣ ಹಾಗೂ ಸುಕನ್ಯಾ ಸಮೃದ್ಧಿ ಖಾತೆಗೆ ತುಂಬುವ ಹಣ, ವರ್ಗಾಯಿಸಲು ಸ್ಟ್ಯಾಂಡಿಂಗ್‌ ಇನ್ಸ್‌ಟ್ರಕ್ಷನ್‌ ಕೊಡಿರಿ. ಹೆಣ್ಣು ಮಕ್ಕಳ ಹಾಗೂ ಗಂಡು ಮಗುವಿನ ಸಲುವಾಗಿ ವಾರ್ಷಿಕವಾಗಿ ಕನಿಷ್ಠ 15 ಗ್ರಾಮ್‌ (ತಲಾ 5 ಗ್ರಾಮ್‌ನಂತೆ) ಬಂಗಾರದ ನಾಣ್ಯ ಕೊಂಡು ಲಾಕರಿನಲ್ಲಿ ಇರಿಸಿರಿ. ಈ ಆರ್ಥಿಕ ಪ್ಲ್ಯಾನ್‌ ಮಧ್ಯದಲ್ಲಿ ಎಂದಿಗೂ ನಿಲ್ಲಿಸಬೇಡಿರಿ.

***

ಸುಜಾತಾ, ಬೆಂಗಳೂರು
* ನಾನು 20 ವರ್ಷಗಳ ಹಿಂದೆ 100 ಗ್ರಾಮ್‌ ಬಂಗಾರದ ಬಿಸ್ಕತ್‌ ಖರೀದಿಸಿದ್ದೇನೆ. ಈ ಬಂಗಾರ ಮಾರಾಟ ಮಾಡಿ ಬರುವ ಹಣ ಬ್ಯಾಂಕ್‌ ಠೇವಣಿಯಾಗಿರಿಸಿ, ಬರುವ ಬಡ್ಡಿಯಲ್ಲಿ ಜೀವಿಸಬೇಕೆಂದಿದ್ದೇನೆ. ಉತ್ತಮ ಬೆಲೆ ಸಿಗಬಹುದೇ, ಖರೀದಿಸುವ ಸಂಸ್ಥೆ ಅಥವಾ ವರ್ತಕರ ವಿವರ ತಿಳಿಸಿ.

ಉತ್ತರ: ಬಂಗಾರ ಖರೀದಿಸುವುದು ಸುಲಭ. ಆದರೆ ಮಾರಾಟ ಮಾಡುವುದು ಸುಲಭ ಕೆಲಸವಲ್ಲ. ನಗರದ ಪ್ರಮುಖ ಚಿನ್ನಾಭರಣ  ಮಾರಾಟ ಮಳಿಗೆಗಳಲ್ಲಿ ದೂರವಾಣಿ ಮೂಲಕ ಅಥವಾ ಖುದ್ದಾಗಿ ವಿಚಾರಿಸಿ.

ಇವರುಗಳನ್ನು ಭೇಟಿಯಾಗುವಾಗ, ನಿಮಗೆ ಅತೀ ಸಮೀಪದ ಸರಿಯಾದ ವ್ಯಕ್ತಿಯನ್ನು ಕರೆದುಕೊಂಡು ಹೋಗಿ. ಬಂಗಾರ ಮಾರಾಟ ಮಾಡಿ ಬರುವ ಹಣ ಬ್ಯಾಂಕ್‌ ಹೊರತುಪಡಿಸಿ, ಹೆಚ್ಚಿನ ವರಮಾನದ ಆಸೆಯಿಂದ ಅಭದ್ರವಾದ ಹೂಡಿಕೆಯಲ್ಲಿ ಎಂದಿಗೂ ಇರಿಸಬೇಡಿ.

ವಿ.ಸೂ.: ಇದು ಒಂದು ಸಲಹೆ ಮಾತ್ರ.

***

ಹೆಸರು, ಊರು ಬೇಡ
* ನಾನು ನಿವೃತ್ತ ನೌಕರ. ನಿವೃತ್ತಿಯಿಂದ ₹ 35 ಲಕ್ಷ ಹಣ ಬಂದಿದೆ. ₹ 28 ಸಾವಿರ ತಿಂಗಳ ಬಡ್ಡಿ  ಬರುವಂತೆ ಸರ್ಕಾರಿ ಬ್ಯಾಂಕಿನಲ್ಲಿ ಎಫ್‌ಡಿ ಮಾಡಿದ್ದೇನೆ. ನನ್ನ ಪಿಂಚಣಿ ₹ 23,000. ನಮಗೆ ಊರಿನ ಮನೆಯಿಂದ ₹ 6,500 ಮನೆ ಬಾಡಿಗೆ ಬರುತ್ತದೆ. ನಾವು ಬೆಂಗಳೂರಿನಲ್ಲಿ ₹ 10,000 ಮನೆ ಬಾಡಿಗೆಯಲ್ಲಿ ವಾಸಿಸುತ್ತಿದ್ದೇವೆ. ಮಗ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಾನೆ. ತಿಂಗಳ ಸಂಬಳ ₹ 20,000. ಅವನು ₹ 12,000 ಆರ್.ಡಿ. ಮಾಡಿದ್ದಾನೆ. ಮಗಳು ಬಿ.ಇ. ಓದುತ್ತಿದ್ದಾಳೆ. ನಾನು ಬೆಂಗಳೂರಿನಲ್ಲಿ ಮನೆ ಅಥವಾ ನಿವೇಶನ ಕೊಂಡುಕೊಳ್ಳಬೇಕು. ಇದಕ್ಕೆ ನಿಮ್ಮ ಅಮೂಲ್ಯ ಸಲಹೆ ಬೇಕಾಗಿದೆ. ನನ್ನ ಹೆಂಡತಿ 1995 ರಿಂದ ಟೇಲರಿಂಗ್ ಕೆಲಸ ಮಾಡಿ, ಇದುವರೆಗೆ ಗಳಿಸಿ ಉಳಿಸಿದ ₹ 8 ಲಕ್ಷ ಎಫ್.ಡಿ. ಮಾಡಿದ್ದಾಳೆ. ಪ್ಯಾನ್ ಕಾರ್ಡ್ ಇದೆ, 15ಜಿ ಫಾರಂ ಕೊಡುತ್ತಾಳೆ. ಇವಳು ರಿಟರ್ನ್ ಫೈಲ್ ಮಾಡಬೇಕೇ ತಿಳಿಸಿರಿ.

ಉತ್ತರ: ನೀವು ನಿವೃತ್ತರಾದ್ದರಿಂದ ನಿಮ್ಮ ವಯಸ್ಸಿಗೆ ಬ್ಯಾಂಕ್ ಸಾಲ ದೊರೆಯುವುದಿಲ್ಲ. ಆದರೆ ಮಗನ ಹೆಸರಿನಲ್ಲಿ ಬ್ಯಾಂಕ್ ಸಾಲ ಮಾಡಿ ಹಾಗೂ ನಿಮ್ಮೊಡನಿರುವ ಸ್ವಲ್ಪ ಹಣ ಹಾಕಿ ನಿವೇಶನ ಕೊಳ್ಳಬಹುದು.

ನಿಮಗೆ ಪಿಂಚಣಿ ಬರುವುದರಿಂದ ಈ ಮೊತ್ತ ಜೀವನ ನಿರ್ವಹಣೆಗೆ ಸರಿ ಹೋಗುತ್ತದೆ.   ಹೀಗೆ ಮಾಡಿದ್ದಲ್ಲಿ, ಮಗನ ಆರ್.ಡಿ. ನಿಲ್ಲಿಸಬೇಕಾದೀತು. ಸ್ಥಿರ ಆಸ್ತಿಗಿಂತ ಆರ್.ಡಿ. ಎಂದಿಗೂ ಮಿಗಿಲಾದುದಲ್ಲ. ನಿಮ್ಮ ಹೆಂಡತಿಯ ವಾರ್ಷಿಕ ಆದಾಯ ಅಂದರೆ ಠೇವಣಿ ಮೇಲಿನ ಬಡ್ಡಿ, ಟೇಲರಿಂಗ್ ವರಮಾನ, ₹ 2.50 ಲಕ್ಷದೊಳಗಿರುವಲ್ಲಿ (ಹಿರಿಯ ನಾಗರಿಕರಾಗಿದ್ದರೆ ₹ 3 ಲಕ್ಷ) ರಿಟರ್ನ್ ತುಂಬುವ ಅವಶ್ಯವಿಲ್ಲ.

***

ಗುರುರಾಜರಾವ್, ಬೆಂಗಳೂರು
* ನನ್ನ ವಯಸ್ಸು 85. ಪಿಂಚಣಿದಾರ. ತಿಂಗಳ ಪೆನ್ಷನ್ ₹ 42,883, ₹ 5 ಲಕ್ಷ ಆದಾಯಕ್ಕೂ ಮಿಕ್ಕಿದ ₹ 13,996 ಗಳಿಗೆ ಶೇ 20 ಆದಾಯ ತೆರಿಗೆ ಕಟ್ಟಬೇಕಾಗಿದೆ. ಇದನ್ನು ಉಳಿಸಲು ಮಾರ್ಗದರ್ಶನ ಮಾಡಿ.

ಉತ್ತರ: ನೀವು ತಿಳಿಸಿದಂತೆ, ನಿಮಗೆ 80 ವರ್ಷ ದಾಟಿರುವುದರಿಂದ ₹ 5 ಲಕ್ಷಗಳ ತನಕ ತೆರಿಗೆ ವಿನಾಯಿತಿ ಇದ್ದು, ಪಿಂಚಣಿ ಹೆಚ್ಚಳದಿಂದ ₹ 5 ಲಕ್ಷ ದಾಟಿದ ಮೊತ್ತಕ್ಕೆ ಶೇ 20 ತೆರಿಗೆ ಕೊಡಬೇಕಾಗುತ್ತದೆ. ಇದೇ ವೇಳೆ, ನೀವು ₹ 15000 ಬ್ಯಾಂಕ್ ಠೇವಣಿ 5 ವರ್ಷಗಳ ಅವಧಿಗೆ ಮಾಡಿದರೆ, ತೆರಿಗೆಯಿಂದ ಮುಕ್ತರಾಗುತ್ತೀರಿ. ಮುಂದೆ ಕೂಡಾ ₹ 5 ಲಕ್ಷ ಪಿಂಚಣಿ ಮೊತ್ತ ದಾಟಿದಲ್ಲಿ ಆ ಮೊತ್ತಕ್ಕನುಣವಾಗಿ 5 ವರ್ಷಗಳ ಬ್ಯಾಂಕ್ ಠೇವಣಿ ಮುಂದಿನ ವರ್ಷಕ್ಕೆ ತೆರಿಗೆ ಉಳಿಸಲು ಬರುವುದಿಲ್ಲ. ಪ್ರತೀ ವರ್ಷವೂ ಠೇವಣಿ ಇರಿಸಬೇಕಾಗುತ್ತದೆ.

***

ಎಚ್.ವಿ. ಗಂಗಾಧರ್, ಬೆಳಗಾವಿ
* ನಾನು ₹ 20,000 ಆರ್.ಡಿ., 10 ವರ್ಷಗಳ ಅವಧಿಗೆ ಬ್ಯಾಂಕಿನಲ್ಲಿ ಮಾಡಿರುತ್ತೇನೆ. ಈ ಮೊತ್ತದಿಂದ ನಾನು ಸಾಲ ಪಡೆಯಬಹುದೇ ತಿಳಿಸಿರಿ.

ಉತ್ತರ: ಯಾವುದೇ ಠೇವಣಿದಾರ ಬ್ಯಾಂಕುಗಳಲ್ಲಿ ತನ್ನ ಹಣವನ್ನು ಅವಧಿ ಠೇವಣಿ ಇರಿಸಿದಾಗ, ಆತನ ಅಗತ್ಯತೆಗನುಗುಣವಾಗಿ, ಅವಧಿಗೆ ಮುನ್ನ ಸಾಲ ಪಡೆಯಬಹುದು.

ಅವಧಿ ಠೇವಣಿ ಇರಿಸಿದಾಗ ಸಾಲ ಪಡೆಯುವ ಸಮಯದಲ್ಲಿ ಆತನ ಹೆಸರಿನಲ್ಲಿ ಜಮಾ ಆಗಿರುವ ಹಣ ಹಾಗೂ ಬಡ್ಡಿ ಲೆಕ್ಕ ಹಾಕಿ ಹಾಗೆ ಬರುವ ಮೊತ್ತದ ಶೇ 90 ರಷ್ಟು ಸಾಲ ಪಡೆಯಬಹುದು.

ಹೀಗೆ ಸಾಲ ಪಡೆದಾಗ, ಠೇವಣಿಗೆ ವಿಧಿಸಿರುವ ಬಡ್ಡಿಗಿಂತ ಶೇ 1 ರಿಂದ 2 ರಷ್ಟು ಸಾಲ ಪಡೆದ ಮೊತ್ತಕ್ಕೆ ವಿಧಿಸಲಾಗುತ್ತದೆ. ಇಂತಹ ಸಾಲಗಾರನ ಅನುಕೂಲಕ್ಕನುಗುಣವಾಗಿ ಮರುಪಾವತಿಸಬಹುದು ಅಥವಾ ಅವಧಿ ಮುಗಿಯುವಾಗ ಸಾಲ ಹಾಗೂ ಬಡ್ಡಿ ಕಳೆದು ಉಳಿದ ಮೊತ್ತ ಸ್ವೀಕರಿಸಬಹುದು.
ಇದೇ ವೇಳೆ ಅವಧಿಗೆ ಮುನ್ನ ಸಂಪೂರ್ಣ ಠೇವಣಿಯನ್ನೂ ವಾಪಸು ಪಡೆಯುವ ಹಕ್ಕು ಕೂಡಾ ಠೇವಣಿದಾರರಿಗೆ ಇರುತ್ತದೆ.

***

ರಾಧಾಕೃಷ್ಣ, ಬೆಂಗಳೂರು
* ನಾನು ಡಿಎಚ್‌ಎಲ್‌ಎಫ್‌ನಿಂದ ₹ 20 ಲಕ್ಷ ಗೃಹಸಾಲ ಪಡೆದಿದ್ದೇನೆ. ಬಡ್ಡಿ ದರ ಶೇ  10.25. ಈಗ ಎಲ್ಲಾ ಬ್ಯಾಂಕುಗಳು ಬಹಳ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುತ್ತಿವೆ. ನಾನು  ಬ್ಯಾಂಕಿನಲ್ಲಿ ಕೇಳಿದಾಗ ಹಳೇ ಸಾಲಕ್ಕೆ ಈ ಕಾನೂನು ಅನ್ವಯವಾಗುವುದಿಲ್ಲ ಎನ್ನುತ್ತಾರೆ. ನಾನು ಸಾಲವನ್ನು ಬೇರೆ ಬ್ಯಾಂಕಿಗೆ ವರ್ಗಾಯಿಸಬಹುದೇ? ಯಾವ ಬ್ಯಾಂಕ್ ಸೂಕ್ತ ದಯಮಾಡಿ ತಿಳಿಸಿರಿ.

ಉತ್ತರ: ಗೃಹಸಾಲದಲ್ಲಿ, ಬದಲಾಗುವ ಬಡ್ಡಿದರ (Floating) ಹಾಗೂ ಸ್ಥಿರ (Fixed Rate) ಎನ್ನುವ ಎರಡು ವಿಧಾನಗಳಿವೆ. ನೀವು ಸ್ಥಿರ ಬಡ್ಡಿ ಆರಿಸಿಕೊಂಡಿರುವಲ್ಲಿ ₹ 10.25 ಹಾಗೆಯೇ ಮುಂದುವರಿಯುತ್ತದೆ. ನೀವು ಇಚ್ಛಿಸುವಲ್ಲಿ, ಗೃಹಸಾಲವನ್ನು ನಿಮಗೆ ತಿಳಿದಿರುವ ಬೇರೆ ಬ್ಯಾಂಕಿಗೆ ವರ್ಗಾಯಿಸಬಹುದು.
ಇದುವರೆಗಿನ ಮರುಪಾವತಿ (E.M.I) ಸರಿ ಇದ್ದಲ್ಲಿ ಸಾಮಾನ್ಯವಾಗಿ ಯಾವುದೇ ಬ್ಯಾಂಕು ನಿಮಗೆ ಈ ಸೌಲಭ್ಯ ಒದಗಿಸುತ್ತದೆ.

ಬಹಳಷ್ಟು ಬ್ಯಾಂಕುಗಳು, ಮುಖ್ಯವಾಗಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಈ ವಿಚಾರದಲ್ಲಿ ಆಗಾಗ ಜಾಹೀರಾತು ಕೊಡುತ್ತಿರುವುದನ್ನು ತಾವು ಗಮನಿಸಿರಬಹುದು.

ಮಾಧವನ್ ಕಮಿಟಿ ಸಲಹೆಯಂತೆ ಗೃಹಸಾಲ ಅವಧಿಗೆ ಮುನ್ನ  ಮರುಪಾವತಿಸುವಾಗಲೂ ಹಾಗೂ ಬೇರೆ ಬ್ಯಾಂಕಿಗೆ ವರ್ಗಾಯಿಸುವಾಗಲೂ ಮೊದಲು ಸಾಲ ವಿತರಿಸಿದ ಬ್ಯಾಂಕ್ ಯಾವುದೇ ದಂಡ ವಿಧಿಸುವಂತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.