ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 5 ಸೆಪ್ಟೆಂಬರ್ 2017, 19:30 IST
Last Updated 5 ಸೆಪ್ಟೆಂಬರ್ 2017, 19:30 IST
ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್‌-ಹಣಕಾಸು ತಜ್ಞ uppuranik@gmail.com
ಯು.ಪಿ.ಪುರಾಣಿಕ್‌, ಬ್ಯಾಂಕಿಂಗ್‌-ಹಣಕಾಸು ತಜ್ಞ uppuranik@gmail.com   

ಚನ್ನಬಸಪ್ಪ, ಬೆಳಗಾವಿ

ನನಗೆ ₹ 1,82,826 ಪಿಂಚಣಿ ಹಿಂಬಾಕಿ ಬಂದಿದೆ. ಪಿಂಚಣಿ ಹಿಂಬಾಕಿಗೆ ಆದಾಯ ತೆರಿಗೆ ವಿನಾಯ್ತಿ ಪಡೆಯಲು ಸೌಲತ್ತುಗಳಿದ್ದರೆ ತಿಳಿಸಿರಿ ಹಾಗೂ ಸೆಕ್ಷನ್‌ ಕೂಡಾ ತಿಳಿಸಿರಿ?

ಉತ್ತರ: ಪಿಂಚಣಿ ಅಥವಾ ಸಂಬಳ ಪರಿಷ್ಕರಣೆಯಾಗಿ ಹಿಂಬಾಕಿ ಬಂದಲ್ಲಿ (Salary Pension Revision Arrears) ಸೆಕ್ಷನ್‌ 89(1) ಆಧಾರದ ಮೇಲೆ, ಹಾಗೆ ಬಂದಿರುವ ಹಿಂಬಾಕಿ ಹಿಂದಿನ ವರ್ಷದ ಆದಾಯಕ್ಕೆ ಸೇರಿಸಿ, ರಿಟರ್ನ್‌ ತುಂಬಿದಲ್ಲಿ, ಸ್ವಲ್ಪಮಟ್ಟಿನ ಅಥವಾ ಸಂಪೂರ್ಣ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದು. ಪಿಂಚಣಿದಾರರು ಅಥವಾ ಸಂಬಳ ಪಡೆಯುವವರು, ಕಡಿಮೆ ಆದಾಯ ಉಳ್ಳವರಾದಲ್ಲಿ ಈ ಸೌಲತ್ತು ಪಡೆದಲ್ಲಿ ಲಾಭವಾಗುತ್ತದೆ. ನೀವು ನಿಮಗೆ ಬಂದಿರುವ ಹಿಂಬಾಕಿ ವಿವರ ತಿಳಿಸಿ, ಮನೆಗೆ ಸಮೀಪದ ಚಾರ್ಟ್‌ರ್ಡ ಅಕೌಂಟೆಂಟ್‌ ಬಳಿ ಹೋಗಿ, ರಿಟರ್ನ್‌ ತುಂಬಿರಿ.

ADVERTISEMENT

**

ಎನ್.ಎಸ್‌. ಸುಬ್ಬಣ್ಣ, ಊರು, ಹೆಸರು ಬೇಡ

ಬ್ಯಾಂಕುಗಳಲ್ಲಿ ಉಳಿತಾಯ ಖಾತೆಯಲ್ಲಿ ಹೆಚ್ಚಿನ ಮೊತ್ತ ಇರಿಸಿ SWEEP A/C ಆಗಿ ಪರಿವರ್ತಿಸಲು ಸೌಲಭ್ಯವಿದೆ ಎಂದು ಕೇಳಿದ್ದೇನೆ. ಸ್ವೀಪ್‌ ಅಕೌಂಟ್‌ ಎಂದರೇನು, ಇದು ಹೇಗೆ ಉಪಯುಕ್ತವಾಗುತ್ತದೆ ತಿಳಿಸಿ?

ಉತ್ತರ: ಏನಾದರೂ ಅನಿರೀಕ್ಷಿತ ಖರ್ಚು ಬರಬಹುದೆಂದು ತಿಳಿದು ಬಹಳಷ್ಟು ಗ್ರಾಹಕರು ಉಳಿತಾಯ ಖಾತೆಯಲ್ಲಿ ಅಧಿಕ ಮೊತ್ತ ಜಮಾ ಇಡುತ್ತಾರೆ. ಒಮ್ಮೊಮ್ಮೆ ವರ್ಷಗಟ್ಟಲೆ ಈ ದೊಡ್ಡ ಮೊತ್ತ ಅಲ್ಲಿಯೇ ಉಳಿದು, ಗ್ರಾಹಕರು ಬರೀ ಶೇ 4ರಷ್ಟು ಬಡ್ಡಿ ದರದಂತೆ ವರಮಾನ ಪಡೆಯುವ ಸಾಧ್ಯತೆ ಇರುತ್ತದೆ. ಇದನ್ನು ಮನಗಂಡ ಕೆಲವು ಪ್ರಗತಿಪರ ದೊಡ್ಡ ಬ್ಯಾಂಕುಗಳು, ಉಳಿತಾಯ ಖಾತೆಯನ್ನು SWEEP A/C ಎಂಬುದಾಗಿ ಪರಿವರ್ತಿಸಿ, ₹ 10,000ರಿಂದ 25,000 ಉಳಿಸಿಕೊಂಡು, ಉಳಿದ ಮೊತ್ತವನ್ನು ಅವಧಿ ಠೇವಣಿಗೆ ವರ್ಗಾಯಿಸುತ್ತಾರೆ. ಹೀಗೆ ವರ್ಗಾಯಿಸುವಾಗ ಅಂತಹ ಮೊತ್ತವನ್ನು ₹ 1000ದ ಯುನಿಟ್ಟುಗಳನ್ನಾಗಿ ಪರಿಗಣಿಸಿ, ಗ್ರಾಹಕರು ಅಪೇಕ್ಷಿಸಿದಲ್ಲಿ, ಉಳಿತಾಯ ಖಾತೆಯಲ್ಲಿ ಅಗತ್ಯವಿರುವಾಗ ಹಣ ಪಡೆಯುವಂತೆ, ಈ ಖಾತೆಯಿಂದಲೂ ಪಡೆಯಬಹುದಾಗಿದೆ. ಅಲ್ಪ ಸ್ವಲ್ಪ ವ್ಯತ್ಯಾಸಗಳಿಂದ ಬೇರೆ ಬೇರೆ ಬ್ಯಾಂಕುಗಳಲ್ಲಿ ಇಂತಹ ಯೋಜನೆ ಇರುತ್ತದೆ.

**

ರಮೇಶ, ತುಮಕೂರು

ನನ್ನ ವಯಸ್ಸು 58. ಬಾಡಿಗೆ ಮನೆಯಲ್ಲಿ ವಾಸ, ಅಡುಗೆಯವರ ಜೊತೆಯಲ್ಲಿ ಹೋಗಿ ಅಡುಗೆ ಮಾಡುವ ಕೆಲಸ ಸುಮಾರು ₹ 10,000 ತಿಂಗಳ ವರಮಾನ. ಇಬ್ಬರು ಮಕ್ಕಳು. 24 ವರ್ಷದ ಮಗಳು. ಬೆಂಗಳೂರಿನಲ್ಲಿ ಕೆಲಸ ಮಾಡುತ್ತಾಳೆ. ಅವಳ ಸಂಬಳ ₹ 22,000. ನನ್ನ ಮಗ 2ನೇ ಪಿಯುಸಿ ಓದುತ್ತಿದ್ದಾನೆ. ನನ್ನ ಹೆಂಡತಿಗೆ ತಂದೆಯ ಆಸ್ತಿ ಬಂದಿದೆ. ಅದರಿಂದ ಒಂದು ಮನೆ ತೆಗೆದುಕೊಳ್ಳಬೇಕೆಂದಿದ್ದೇನೆ. ನಂತರ ಸ್ವಲ್ಪ ಹಣ ಉಳಿದರೆ ಮಕ್ಕಳ ಹೆಸರಿನಲ್ಲಿ ಠೇವಣಿ ಇರಿಸಬಹುದೇ ತಿಳಿಸಿರಿ. ನಾನು ಮಗಳ ಮದುವೆ ಮಾಡಬೇಕಾಗಿದೆ. ಭೂಮಿ ಬೆಲೆ ಮುಂದೆ ಕಡಿಮೆ ಆಗಬಹುದೇ ಅಥವಾ ಈಗಲೇ ಕೊಳ್ಳುವುದು ಉತ್ತಮವೇ ತಿಳಿಸಿರಿ.  ಉಳಿತಾಯ, ತೆರಿಗೆ, ಮಕ್ಕಳ ಭವಿಷ್ಯದ ವಿಚಾರದಲ್ಲಿ ತಿಳಿಸಿರಿ.

ಉತ್ತರ: ನಿಮ್ಮ ಹೆಂಡತಿಗೆ ಅವರ ತಂದೆಯಿಂದ ಬಂದ ಆಸ್ತಿ ಮಾರಾಟ ಮಾಡಿ ಬರುವ ಹಣದಿಂದ ತಕ್ಷಣ ಮನೆಯನ್ನು ಕೊಳ್ಳಿರಿ. ಇದರಿಂದ ನಿಮಗೆ ಸ್ವಂತ ಮನೆ ಆದ ಹಾಗಾಗುತ್ತದೆ, ಜೊತೆಗೆ ತೆರಿಗೆ ಭಯವೂ ಇರುವುದಿಲ್ಲ. ಈ ವ್ಯವಹಾರದಲ್ಲಿ ಸ್ವಲ್ಪ ಹಣ ಉಳಿದರೆ, ಅದನ್ನು ನಿಮ್ಮ ಹೆಂಡತಿ ಅಥವಾ ಮಕ್ಕಳ ಹೆಸರಿನಲ್ಲಿ ಇರಿಸಿರಿ ಹಾಗೂ ಮಗಳ ಮದುವೆಗೆ ತೆಗೆದಿಡಿ. ಇದೇ ವೇಳೆ ಉಳಿಯುವ ಹಣದಿಂದ ಸ್ವಲ್ಪ ಬಂಗಾರ ಕೊಂಡುಕೊಳ್ಳಿ. ನಿಮ್ಮ ಮಗಳಿಗೆ ಆದಷ್ಟು ಬೇಗ ಮದುವೆ ಮಾಡಿ ಜವಾಬ್ದಾರಿ ಕಳೆದುಕೊಳ್ಳಿ. ಮದುವೆಗೆ ಹೆಚ್ಚಿನ ಖರ್ಚು ಎಂದಿಗೂ ಮಾಡಬೇಡಿ. ಮಗ ಪಿಯುಸಿ ಮುಗಿದು ವೃತ್ತಿಪರ ಶಿಕ್ಷಣ ಪಡೆಯುವಲ್ಲಿ, ಮಾದರಿ ಶಿಕ್ಷಣ ಯೋಜನೆಯಲ್ಲಿ, ಬಡ್ಡಿ ಅನುದಾನಿತ ಸಾಲ ಪಡೆಯಬಹುದು. ಸ್ಥಿರ ಆಸ್ತಿ ಬೆಲೆ ಕಡಿಮೆ ಆಗುವ ಸಾಧ್ಯತೆಯೇ ಇಲ್ಲ. ಆದಷ್ಟು ಬೇಗ ಮನೆ ಕೊಂಡುಕೊಳ್ಳಿ.

**

ಬಿ.ಆರ್‌. ರಾಜ್‌, ವಿಜಯನಗರ

ನನ್ನ ಮಗ ಅಮೆರಿಕದಲ್ಲಿ ಕೆಲಸ ಮಾಡುತ್ತಾನೆ. ಅವನು ಭಾರತದಲ್ಲಿದ್ದಾಗ ಒಂದು ಮನೆ ತೆಗೆದುಕೊಂಡಿದ್ದ. ಅದರ ಬಾಡಿಗೆ ಜಂಟಿ ಖಾತೆ ತೆರೆದು ಬ್ಯಾಂಕಿನಲ್ಲಿ ಜಮಾ ಮಾಡುತ್ತಿದ್ದೇನೆ. ಮನೆ ಬಾಡಿಗೆ ₹ 23,000 ಬರುತ್ತದೆ. ಅವನ ಹತ್ತಿರ ಪ್ಯಾನ್‌ಕಾರ್ಡು ಇರುವುದಿಲ್ಲ. ನಾವು ಅವನ ಹೆಸರಿನಲ್ಲಿ ತೆರಿಗೆ ಸಲ್ಲಿಸಬೇಕೇ ಹಾಗೂ ರಿಟರ್ನ್‌ ತುಂಬಬೇಕೇ ?

ಉತ್ತರ: ನಿಮ್ಮ ಮಗ ಅಮೆರಿಕದಲ್ಲಿದ್ದರೂ, ಅವರು ಅಲ್ಲಿಯ ಪ್ರಜೆಯಾಗಿರಲಿಕ್ಕಿಲ್ಲ. ಅವರು ಅನಿವಾಸಿ ಭಾರತೀಯರು. ಇವರು ಭಾರತದಲ್ಲಿ ನಿಮ್ಮ ವಿಳಾಸದ ಪುರಾವೆಯಿಂದ ಪ್ಯಾನ್‌ಕಾರ್ಡು ಪಡೆಯಬಹುದು. ಅವರು ಪಡೆಯುವ ಮನೆ ಬಾಡಿಗೆ ತಿಂಗಳಿಗೆ ₹ 23000 ಆದಲ್ಲಿ ವಾರ್ಷಿಕ ₹ 2.76 ಲಕ್ಷ ಆಗುತ್ತದೆ. ಈ ಬಾಡಿಗೆಯಲ್ಲಿ ಆದಾಯ ತೆರಿಗೆ ಸೆಕ್ಷನ್‌ 24(ಎ) ಆಧಾರದ ಮೇಲೆ ಶೇ 30 ವಿನಾಯ್ತಿ ಇದೆ. ಒಟ್ಟಿನಲ್ಲಿ ವಿನಾಯ್ತಿ ನಂತರ ಅವರ ಮನೆ ಬಾಡಿಗೆ ವಾರ್ಷಿಕ ಆದಾಯ ₹ 1,93,200 ಮಾತ್ರ. (₹ 2,76,000–82,800=1,93,200) ನಿಮ್ಮ ಮಗನಿಗೆ ಭಾರತದಲ್ಲಿ ಬೇರಾವ ಆದಾಯ ಇರದಿರುವಲ್ಲಿ, ಅವರಿಗೆ ಈಗ ಬರುವ ಮನೆ ಬಾಡಿಗೆಯಿಂದ ತೆರಿಗೆ ಬರುವುದಿಲ್ಲ. ಆದರೆ ವಿನಾಯ್ತಿ ಪಡೆಯುವ ಮುನ್ನ ಅವರ ಬಾಡಿಗೆ ಆದಾಯ ₹ 2.50 ಲಕ್ಷ ದಾಟುವುದರಿಂದ ರಿಟರ್ನ್‌ ಸಲ್ಲಿಸಬೇಕು.

**

ಹೆಸರು, ಊರು–ಬೇಡ

ನಾನು ಸರ್ಕಾರಿ ನಿವೃತ್ತ ಅಧಿಕಾರಿ. ನನ್ನ ಮಾಸಿಕ ಪಿಂಚಣಿ ₹ 10,500. ನನಗೆ 30X40 ಅಳತೆಯ ನಿವೇಶನ ಶಿವಮೊಗ್ಗದಲ್ಲಿದೆ. ಸದ್ಯಕ್ಕೆ ₹ 5 ಲಕ್ಷ ಕೊಟ್ಟು ಭೋಗ್ಯಕ್ಕೆ ಒಂದು ಮನೆ ತೆಗೆದುಕೊಂಡಿದ್ದೇನೆ. ನನಗೆ ಪಿಂಚಣಿ ಆಧಾರದ ಮೇಲೆ, ಮನೆ ಕಟ್ಟಲು ಗೃಹ ಸಾಲ ಯಾವ ಬ್ಯಾಂಕಿನಲ್ಲಿ ಕಡಿಮೆ ಬಡ್ಡಿಗೆ ಸಿಗಬಹುದು. ನನ್ನ ಮಗ ಎಂ.ಕಾಂ., ಮಾಡಿ ಖಾಸಗಿ ಕಂಪೆನಿಯಲ್ಲಿ ₹ 10,000 ಸಂಬಳ ಪಡೆಯುತ್ತಾನೆ. ಇನ್ನೊಬ್ಬನು ಶ್ರೀರಾಮ ಪೈನಾನ್ಸ್‌ನಲ್ಲಿ ಕೆಲಸ ಮಾಡುತ್ತಾನೆ. ನಿಮ್ಮ ಉತ್ತರಕ್ಕಾಗಿ ಕಾಯುತ್ತಿದ್ದೇನೆ.

ಉತ್ತರ: ಗೃಹ ಸಾಲ ಅಥವಾ ಯಾವುದೇ ಸಾಲ ನೀಡುವ ಮುನ್ನ, ಬ್ಯಾಂಕ್‌ನವರು ವ್ಯಕ್ತಿಯ ಸಾಲ ಮರುಪಾವತಿಸುವ ಸಾಮರ್ಥ್ಯವನ್ನು ಮುಖ್ಯವಾಗಿ  ನೋಡುತ್ತಾರೆ. ನಿಮಗೆ ವಯಸ್ಸು 60 ದಾಟಿದ್ದು, ದೀರ್ಘಾವಧಿ ಗೃಹಸಾಲ ಪಡೆಯಲು ಅರ್ಹತೆ ಇರುವುದಿಲ್ಲ. ಜೊತೆಗೆ ನಿಮಗೆ ಬರುವ ಪಿಂಚಣಿ ಕೂಡಾ ಕಡಿಮೆ ಇದ್ದು, ಈ ಹಣ ನಿಮ್ಮ ಖರ್ಚಿಗೆ ಬೇಕಾಗುತ್ತದೆ. ನಿಮ್ಮ ನಿವೇಶನದ ಮೇಲೆ, ನಿಮ್ಮ ಮಕ್ಕಳ ಜಂಟಿ ಸಹಯೋಗದಲ್ಲಿ  ಸಾಲ ಪಡೆಯುವ ಅವಕಾಶವಿದ್ದರೂ, ಸಾಲ ಮರುಪಾವತಿಸಲು ವರಮಾನ ಸಾಕಾಗಲಾರದು. ಸದ್ಯದ ಪರಿಸ್ಥಿತಿಯಲ್ಲಿ ಮನೆ ಕಟ್ಟಲು ಸಾಧ್ಯವಾಗದಿರಬಹುದು, ಆದರೆ ಮುಂದೆ ನಿಮ್ಮ ಮಕ್ಕಳು ಕಟ್ಟಿಸಬಹುದು. ನಿವೇಶನ ಎಂದಿಗೂ ಮಾರಾಟ ಮಾಡಬೇಡಿ.

ಮಾರುತಿ, ಬಾಗಲಕೋಟೆ

ನಾನು ಪೋಲಿಸ್‌ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ. ನನ್ನೊಡನೆ ನನ್ನ ತಾಯಿ, ಹೆಂಡತಿ ಹಾಗೂ 3 ವರ್ಷದ ಮಗ ಇದ್ದಾರೆ. ಸರ್ಕಾರಿ ವಸತಿ ಗೃಹದಲ್ಲಿ ವಾಸವಾಗಿದ್ದೇನೆ. ನಾನು ನನ್ನ ತಂದೆಯಿಂದ ಬಂದ ಹಣ ಹಾಗೂ ನನ್ನ ದುಡಿಮೆಯಿಂದ ಬಾಗಲಕೋಟೆಯಲ್ಲಿ  26X30 ಅಳತೆಯ ನಿವೇಶನ ಖರೀದಿಸಿದ್ದೇನೆ. ನನ್ನ ಒಟ್ಟು ತಿಂಗಳ ವೇತನ ₹ 20,000, ಎಲ್ಲಾ ಕಡಿತದ ನಂತರ ₹ 9,000 ಕೈ ಸೇರುತ್ತದೆ. ನಾನು ತಿಂಗಳಿಗೆ ₹ 2,000 ಉಳಿಸಬಹುದು. ನಮ್ಮ ವೇತನ ಸದ್ಯದಲ್ಲಿ ಹೆಚ್ಚಾಗುವ ಅವಕಾಶವಿದೆ. ನನ್ನ ಚೀಟಿ ಹಣ ಅವಧಿ ಮುಗಿದು  ₹ 1 ಲಕ್ಷ ಬರಲಿದೆ. ಕೈಯಲ್ಲಿ ₹ 50,000 ನಗದು ಇದೆ. ವೇತನ ಪಡೆಯುವ ಎಸ್‌ಬಿಐನಲ್ಲಿ ₹ 7 ರಿಂದ ₹ 8 ಲಕ್ಷದಷ್ಟು ಗೃಹ ಸಾಲ ಕೊಡುವುದಾಗಿ ಹೇಳಿದ್ದಾರೆ. ನನ್ನ ತಾಯಿಯ ಬಳಿ 80 ಗ್ರಾಂ. ಹೆಂಡತಿ ಬಳಿ 60 ಗ್ರಾಂ. ಬಂಗಾರ ಇದೆ. ಇವುಗಳ ಅರ್ಧದಷ್ಟು ಮಾರಾಟ ಮಾಡಿ, ಮನೆ ಕಟ್ಟಿಸಬೇಕೆಂದಿದ್ದೇನೆ. ನಿಮ್ಮ ಅಮೂಲ್ಯ ಸಲಹೆಗೆ ಕಾಯುತ್ತಿದ್ದೇನೆ.

ಉತ್ತರ: ನೀವು ₹ 7–8 ಲಕ್ಷ ಗೃಹಸಾಲ ಪಡೆದರೆ, ಪ್ರತೀ ಲಕ್ಷಕ್ಕೆ ಕನಿಷ್ಠ ₹ 1000 ಮಾಸಿಕ ಸಮಾನ ಕಂತು (ಇಎಂಐ) ಗೃಹ ಸಾಲಕ್ಕೆ ಕೊಡಬೇಕಾಗುತ್ತದೆ. ನಿಮ್ಮೊಡನಿರುವ ₹ 50,000, ಚೀಟಿ ವ್ಯವಹಾರದಿಂದ ಬರುವ ₹ 1 ಲಕ್ಷ ಹಾಗೂ ಚಿನ್ನ ಮಾರಾಟದಿಂದ ಬರುವ ಹಣ ಎಲ್ಲವೂ ಸೇರಿ, ಬ್ಯಾಂಕ್‌ ಸಾಲಪಡೆದು ಮನೆ ನಿರ್ಮಿಸಬಹುದು. ಯಾವುದೇ ಕಾರಣಕ್ಕೆ ಸಂಪೂರ್ಣ ಬಂಗಾರ ಮಾರಾಟ ಮಾಡಬೇಡಿ. ಚೀಟಿ ವ್ಯವಹಾರ ನಿಲ್ಲಿಸಿ, ಅಲ್ಲಿ ಉಳಿಸುವ ಹಣ ಸಾಲದ ಕಂತಿಗೆ ಮುಡುಪಾಗಿಡಿ. ಇಷ್ಟರಲ್ಲಿ ನಿಮ್ಮ ಸಂಬಳ ಪರಿಷ್ಕರಣೆಯಾಗಬಹುದು. ಎಲ್ಲಕ್ಕೂ ಮುಖ್ಯವಾಗಿ ಹಣ ದುಬ್ಬರದಿಂದಾಗಿ, ಮುಂದೆ ಮನೆ ಕಟ್ಟುವುದು ದುಬಾರಿಯಾಗುತ್ತದೆ. ಗೃಹ ಸಾಲದ ಬಡ್ಡಿದರ ಪ್ಲೋಟಿಂಗ್‌ ರೇಟ್‌ ಪಡೆಯಿರಿ.

**

ಜ್ಯೋತಿ, ಜಮಖಂಡಿ

ನನ್ನ ಪತಿ ಸೇನೆಯ ಸೇವೆಯಲ್ಲಿದ್ದಾರೆ. ಸಂಬಳ ₹ 42,000 ಎಲ್ಲಾ ಕಡಿತದ ನಂತರ ₹ 20,000 ಉಳಿಯುತ್ತದೆ. ನಮಗೆ 4 ವರ್ಷದ ಮಗ ಇದ್ದಾನೆ. ನಾನು ಬಿ.ಎ.,ಬಿ.ಎಡ್‌. ಪದವೀಧರೆ, ಕೆಲಸ ಹುಡುಕುತ್ತಿದ್ದೇನೆ. ನಾವು ಧಾರವಾಡದಲ್ಲಿ ಮನೆ ತೆಗೆದುಕೊಳ್ಳಲು ಅಥವಾ ನಿವೇಶನ ಕೊಳ್ಳಲು, ಉಳಿತಾಯದ ವಿಚಾರ ಹಾಗೂ ಮಗನ  ಭವಿಷ್ಯದ ಬಗ್ಗೆ ತಿಳಿಸಿ.

ಉತ್ತರ: ನೀವು ಬಯಸಿದಂತೆ, ನಿವೇಶನ ಅಥವಾ ಮನೆ ಧಾರವಾಡದಲ್ಲಿ ಆದಷ್ಟು ಬೇಗ ಕೊಂಡುಕೊಳ್ಳುವುದೇ ಲೇಸು. ಹೀಗೆ ಕೊಳ್ಳಲು ನೀವು ಸಂಬಳ ಪಡೆಯುವ ಬ್ಯಾಂಕಿನಲ್ಲಿ ಸಾಲ ಪಡೆಯಬೇಕಾದೀತು. ನಿಮ್ಮ ಗಂಡನ ಸಂಬಳದ ಆಧಾರದ ಮೇಲೆ, ಗರಿಷ್ಠ ₹ 20 ಲಕ್ಷ ಗೃಹ ಸಾಲ ದೊರೆಯಬಹುದು. ಮಾಸಿಕ ಸಮಾನ ಕಂತು ಪ್ರತೀ ಲಕ್ಷಕ್ಕೆ ₹ 1,000 ಬರಬಹುದು. ₹ 20 ಲಕ್ಷದಿಂದ ಕಟ್ಟಿದ ಮನೆ ಅಥವಾ ನಿವೇಶನ ಕೊಂಡು ಮನೆ ಕಟ್ಟಲು ಸಾಧ್ಯವೇ ಎನ್ನುವುದನ್ನು, ಸಾಲ ಪಡೆಯುವ ಮುನ್ನ ನೀವು ನಿಮ್ಮ ಪತಿ ಒಟ್ಟು ಕುಳಿತು ವಿಮರ್ಶಿಸಿರಿ. ನಿಮ್ಮ ಮಗನ ಮುಂದಿನ ಭವಿಷ್ಯಕ್ಕಾಗಿ ₹ 5,000 ತಿಂಗಳಿಗೆ ಆರ್‌.ಡಿ. 10 ವರ್ಷಗಳ ಅವಧಿಗೆ ಮಾಡಿರಿ ಅಥವಾ ವಾರ್ಷಿಕವಾಗಿ ₹ 30,000 ತುಂಬುವ ಚಿಲ್ಡ್ರನ್‌್ ಮನಿಬ್ಯಾಂಕ್‌ ಪಾಲಿಸಿ ಎಲ್‌ಐಸಿಯಲ್ಲಿ ಮಾಡಿರಿ. ಸದ್ಯದ ಪರಿಸ್ಥಿತಿಯಲ್ಲಿ ಮನೆ ಕಟ್ಟಲು ಸಾಧ್ಯವಾಗದಲ್ಲಿ, ನಿವೇಶನವನ್ನಾದರೂ ಕೊಂಡುಕೊಳ್ಳಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

**

ಹೆಸರು–ಊರು–ಬೇಡ

ರಾಜ್ಯ ಸರ್ಕಾರಿ ಸ್ವೌಮ್ಯದ ಕಾರ್ಖಾನೆಯ ನಿವೃತ್ತ ನೌಕರ. ಬಾಡಿಗೆ ಮನೆಯಲ್ಲಿದ್ದೇನೆ. ನನ್ನ ಮಗ ಮನೆಬಾಡಿಗೆ ಭರಿಸಲು ₹ 6.50 ಲಕ್ಷ ನೀಡಿದ್ದಾನೆ. ನಾನು ಈ ಹಣ ಬ್ಯಾಂಕಿನಲ್ಲಿ ಅವಧಿ ಠೇವಣಿ ಇರಿಸಿ ತಿಂಗಳಿಗೆ ₹ 5,500 ಬಡ್ಡಿ ಪಡೆದು ಮನೆ ಬಾಡಿಗೆ ಕಟ್ಟುತ್ತಿದ್ದೇನೆ. ನಾನು ಪಡೆಯುವ ಬ್ಯಾಂಕ್‌ ಬಡ್ಡಿ ವರಮಾನಕ್ಕೆ ಆದಾಯ ತೆರಿಗೆ ಇದೆಯೇ. ನನ್ನ ಆದಾಯ ಲೆಕ್ಕ ಮಾಡುವಾಗ ಈಗ ಕೊಡುವ ಮನೆ ಬಾಡಿಗೆ ಬಾಬ್ತು ₹66,000 (5500X12) ಆದಾಯದಿಂದ ಕಳೆದು ಲೆಕ್ಕ ತೋರಿಸಬಹುದೇ. ನನ್ನ ಬಳಿ ಮನೆ ಬಾಡಿಗೆ ಕರಾರು ಪತ್ರವಿದೆ. ತೆರಿಗೆ ವಿನಾಯ್ತಿ ಪಡೆಯಲು ಮಾರ್ಗದರ್ಶನ ಮಾಡಿ.

ಉತ್ತರ: ಯಾವುದೇ ವ್ಯಕ್ತಿ, ಮನೆ ಬಾಡಿಗೆ, ಔಷಧೋಪಚಾರ, ಉಡುಗೆ ತೊಡಿಗೆ, ಮನೆ ಖರ್ಚು, ಇಂತಹ ವೈಯಕ್ತಿಕ ಖರ್ಚು ನಿಭಾಯಿಸುವಲ್ಲಿ ಇಂತಹ ಖರ್ಚು ಆತನ ಒಟ್ಟು ಆದಾಯದಿಂದ ಕಳೆದು ತೆರಿಗೆ ಸಲ್ಲಿಸುವ ಸೌಲತ್ತು ಆದಾಯ ತೆರಿಗೆ ಕಾನೂನಿನಲ್ಲಿ ಇರುವುದಿಲ್ಲ. ಇವೆಲ್ಲವನ್ನೂ ಪರಿಗಣಿಸಿ, ₹ 2.50 ಲಕ್ಷ, ₹ 3 ಲಕ್ಷ ಹಾಗೂ ₹ 5 ಲಕ್ಷದ ಮಿತಿ ತನಕ ವಯಸ್ಸಿಗೆ ಅನುಗುಣವಾಗಿ, ತೆರಿಗೆಯಲ್ಲಿ ವಿನಾಯ್ತಿ ಕೊಡಲಾಗಿದೆ. ನೀವು ನಿಮ್ಮ ಮಗನಿಂದ ಪಡೆದ ₹ 6.50 ಲಕ್ಷ ಬ್ಯಾಂಕಿನಲ್ಲಿ ಇರಿಸಿ ಬರುವ ವಾರ್ಷಿಕ ಬಡ್ಡಿ ನಿಮ್ಮ ಇತರೆ ವಾರ್ಷಿಕ ಒಟ್ಟು ಆದಾಯಕ್ಕೆ ಸೇರಿಸಿ, ನಿಮ್ಮ ವಯಸ್ಸಿನ ಮಿತಿಯಲ್ಲಿ ನಿಗದಿಪಡಿಸಿದ ಮೊತ್ತ ಮಾಡಿದಲ್ಲಿ ಆ ಹಣಕ್ಕೆ ತೆರಿಗೆ ಸಲ್ಲಿಸಬೇಕು ಹಾಗೂ ರಿಟರ್ನ್‌ ತುಂಬಬೇಕು. ಇದೇ ವೇಳೆ ತೆರಿಗೆ ವಿನಾಯ್ತಿ ಪಡೆಯಲು ಸೆಕ್ಷನ್‌ 80ಸಿ ಆಧಾರದ ಮೇಲೆ, ಮಿತಿ ದಾಟಿದ ಮೊತ್ತವನ್ನು, 5 ವರ್ಷಗಳ ಬ್ಯಾಂಕ್‌ ಠೇವಣಿ ಮಾಡುವ ಅವಕಾಶವಿದೆ. ಹೀಗೆ ಠೇವಣಿ ಇರಿಸುವಾಗ ಇರುವ ಗರಿಷ್ಠ ಮಿತಿ ₹ 1.50 ಲಕ್ಷ ಒಮ್ಮೆ ಇರಿಸಿದ ಠೇವಣಿ ಅದೇ ವರ್ಷಕ್ಕೆ ಮಾತ್ರ ಸೀಮಿತವಾಗಿದ್ದು, ತೆರಿಗೆ ಉಳಿಸಲು ಪ್ರತೀ ವರ್ಷ ಪ್ರತ್ಯೇಕವಾಗಿ ಠೇವಣಿ ಇರಿಸತಕ್ಕದ್ದು. ನಿಮ್ಮ ಆದಾಯ ಪರಿಗಣಿಸುವಾಗ ನಿಮಗೆ ತೆರಿಗೆ ಬರುವ ಸಾಧ್ಯತೆ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.