ADVERTISEMENT

ಪ್ರಶ್ನೋತ್ತರ

ಯು.ಪಿ.ಪುರಾಣಿಕ್
Published 24 ಅಕ್ಟೋಬರ್ 2017, 19:30 IST
Last Updated 24 ಅಕ್ಟೋಬರ್ 2017, 19:30 IST
ಪ್ರಶ್ನೋತ್ತರ
ಪ್ರಶ್ನೋತ್ತರ   

ಕೆ. ಸುರೇಶ್‌, ಬೆಂಗಳೂರು
ನಾನು ನಿವೃತ್ತ ಸರ್ಕಾರಿ ನೌಕರ. ವಾರ್ಷಿಕ ಪಿಂಚಣಿ ₹ 3.20 ಲಕ್ಷ. ನಾನು 1998 ರಲ್ಲಿ ಗೃಹಸಾಲ ಪಡೆದು, ಮನೆ ಕಟ್ಟಿಸಿ, ಸಾಲ ಸಂಪೂರ್ಣ ತೀರಿಸಿದ್ದೇನೆ. 2015 ರಲ್ಲಿ ಪುನಃ ₹ 45 ಲಕ್ಷ ಸಾಲಪಡೆದು ಮೇಲೊಂದು ಮನೆ ಕಟ್ಟಿಸಿ ಬಾಡಿಗೆಗೆ ಕೊಟ್ಟಿದ್ದೇನೆ. ವಾರ್ಷಿಕ ಬಾಡಿಗೆ ₹ 2.40 ಲಕ್ಷ ಮನೆ ಕಂದಾಯ ₹ 21,000. ಹೆಂಡತಿ ಹೆಸರಿನಲ್ಲಿ ವಾರ್ಷಿಕ ವಿಮೆ ₹ 9,000 ಕಟ್ಟುತ್ತೇನೆ. ಈ ಎಲ್ಲಾ ವಿಚಾರ ಪರಿಗಣಿಸಿ ಆದಾಯ ತೆರಿಗೆ ವಿಚಾರದಲ್ಲಿ ಮಾರ್ಗದರ್ಶನ ಮಾಡಿ.

ಉತ್ತರ: ನೀವು ಬಾಡಿಗೆಗೆಂದು ಕಟ್ಟಿಸಿರುವ ಮನೆಯ ಸಾಲದ ಕಂತಿಗೆ ಬಡ್ಡಿಯಿಂದ ತೆರಿಗೆ ವಿನಾಯತಿ ಪಡೆಯುವಂತಿಲ್ಲ. ಕಂದಾಯವನ್ನು ಬಾಡಿಗೆ ಆದಾಯದಿಂದ ಕಳೆದು ತೆರಿಗೆ ಸಲ್ಲಿಸಲು ಬರುವುದಿಲ್ಲ. ಆದರೆ ಸೆಕ್ಷನ್‌ 24(ಎ) ಆಧಾರದ ಮೇಲೆ ವಾರ್ಷಿಕ ಬಾಡಿಗೆಯ ಶೇ 30 ಕಳೆದು, ಉಳಿದ ಹಣಕ್ಕೆ ಮಾತ್ರ ತೆರಿಗೆ ಸಲ್ಲಿಸಬಹುದು. ಇದರಿಂದಾಗಿ ನಿಮ್ಮ ಬಾಡಿಗೆ ವಾರ್ಷಿಕ ಆದಾಯ ₹ 1.68 ಲಕ್ಷವಾಗುತ್ತದೆ. ನಿಮ್ಮ ಪಿಂಚಣಿ, ಮನೆ ಬಾಡಿಗೆ, ಸೇರಿಸಿ ₹ 3 ಲಕ್ಷ ದಾಟಿದ ಈ ಮೊತ್ತದಲ್ಲಿ ಎಲ್‌.ಐ.ಸಿ. ಪ್ರೀಮಿಯಮ್‌ ₹ 9000 ಕಳೆದು, ಬರುವ ಮೊತ್ತಕ್ಕೆ ಶೇ 10 ಆದಾಯ ತೆರಿಗೆ ಕೊಡಬೇಕಾಗುತ್ತದೆ. ರಿಟರ್ನ್‌ ತುಂಬಬೇಕಾಗುತ್ತದೆ. ಆದಾಯ ತೆರಿಗೆ ಲೆಕ್ಕ ಹಾಕಿ ಬರುವ ಮೊತ್ತಕ್ಕೆ ಶೇ 3 ಎಜುಕೇಶನ್‌ ಸೆಸ್‌ ಕೂಡಾ ಕೊಡಬೇಕಾಗುತ್ತದೆ.

ಹೆಸರು ಬೇಡ– ತುಮಕೂರು
ನನ್ನ ವಯಸ್ಸು 71. ನಿವೃತ್ತ ಸರ್ಕಾರಿ ಉದ್ಯೋಗಿ. ವಾರ್ಷಿಕ ಪಿಂಚಣಿ ₹ 2,10,176. ಈ ಆರ್ಥಿಕ ವರ್ಷದಲ್ಲಿ ಗೃಹ ನಿರ್ಮಾಣ ಸಹಕಾರಿ ಸಂಘದಿಂದ ಪಡೆದ ನಿವೇಶನ ಮಾರಾಟ ಮಾಡಿ ಬಂದಿರುವ ₹ 10 ಲಕ್ಷ, ನನ್ನ ಸಹೋದರಿಗೆ ₹ 5 ಲಕ್ಷ, ಉಳಿದ ₹ 5 ಲಕ್ಷ ನನ್ನ ಕುಟುಂಬದ ಸದಸ್ಯರ ಹೆಸರಿನಲ್ಲಿ ಸಹಕಾರಿ ಬ್ಯಾಂಕಿನಲ್ಲಿ ಠೇವಣಿ ಮಾಡಿದ್ದೇವೆ. ಈ ಪ್ರಕ್ರಿಯೆಯಿಂದಾಗಿ ನಾನು ತೆರಿಗೆಗೆ ಒಳಪಡಬಹುದೇ?

ADVERTISEMENT

ಉತ್ತರ: ಸ್ಥಿರ ಆಸ್ತಿ ಮಾರಾಟ ಮಾಡಿ ಬಂದ ಲಾಭ ಆದಾಯ ತೆರಿಗೆ ವ್ಯಾಪ್ತಿಗೆ ಬರುವುದಿಲ್ಲ. ಆಸ್ತಿ ಕೊಂಡ ಬೆಲೆ ಹಾಗೂ ಮಾರಾಟ ಮಾಡಿದ ಬೆಲೆ ಇವೆರಡರ ವ್ಯತ್ಯಾಸಕ್ಕೆ (ಲಾಭಕ್ಕೆ) ಬಂಡವಾಳ ವೃದ್ಧಿ ತೆರಿಗೆ ಶೇ 20 ಬರುತ್ತದೆ. ಲಾಭದಲ್ಲಿ, ಕೊಂಡ ವರ್ಷ ಹಾಗೂ ಮಾರಾಟ ಮಾಡಿದ ವರ್ಷ ಇವುಗಳ ಅಂತರದಲ್ಲಿ Cost of Inflation Index ಲೆಕ್ಕ ಹಾಕಿ ಲಾಭದಲ್ಲಿ ಕಳೆದು ತೆರಿಗೆ ಸಲ್ಲಿಸಬಹುದು.   ಬಂದ ಲಾಭ ಮಾರಾಟ ಮಾಡಿದ 6 ತಿಂಗಳೊಳಗೆ National Highway Authority of India ಅಥವಾ Rural Electrification  Corporation ಇವುಗಳಲ್ಲಿ 3 ವರ್ಷಗಳ ಅವಧಿಗೆ ಠೇವಣಿಯಾಗಿರಿಸಿ, ಸಂಪೂರ್ಣ ತೆರಿಗೆ ವಿನಾಯತಿ ಪಡೆಯಬಹುದು.

ಹೆಸರು ಬೇಡ, ಚಿಕ್ಕಮಗಳೂರು
ನಾನು ಚಿಕ್ಕಮಗಳೂರಿನ ಒಬ್ಬ ರೈತ. ವಯಸ್ಸು 65. ನನಗೆ 13 ಎಕರೆ ಕಾಫಿ, 3–1/2 ಎಕರೆ ಬತ್ತದ ಗದ್ದೆ ಇದೆ. ನಾನು ಪ್ರತೀ ವರ್ಷ ಬರುವ ಉತ್ಪನ್ನದಲ್ಲಿ ₹ 1 ರಿಂದ ₹ 1.5 ಲಕ್ಷ ಉಳಿಕೆ ಮಾಡಿ ₹ 50 ಲಕ್ಷಗಳ ತನಕ ಬ್ಯಾಂಕಿನಲ್ಲಿ ಇರಿಸಿರುವೆ. ನನಗೆ ಸೌಖ್ಯವಿಲ್ಲದ ಕಾರಣ ತೋಟವನ್ನು ಮಗನ ಹೆಸರಿಗೆ ಮಾಡಿದ್ದೇನೆ. ನನ್ನ ಇಬ್ಬರು ಮಕ್ಕಳು ಓದುತ್ತಿದ್ದಾರೆ. ಬ್ಯಾಂಕಿನಲ್ಲಿರುವ ಠೇವಣಿಗೆ ತೆರಿಗೆ ಕೊಡಬೇಕಾ?

ಉತ್ತರ: ಠೇವಣಿಗಳ ಮೇಲಿನ ಶೇ 7ರಷ್ಟು ಬಡ್ಡಿ ದರದಲ್ಲಿ ₹ 50 ಲಕ್ಷ ಠೇವಣಿಗೆ ₹ 3.50 ಲಕ್ಷ ವಾರ್ಷಿಕ ಬಡ್ಡಿ ಬರಬಹುದು. ನೀವು ಹಿರಿಯ ನಾಗರಿಕರಾದ್ದರಿಂದ ₹ 3 ಲಕ್ಷ ಬಡ್ಡಿ ಬರುವ ತನಕ ನಿಮಗೆ ತೆರಿಗೆ ಬರುವುದಿಲ್ಲ. ನಿಮ್ಮ ಜಮೀನು ಪಿತ್ರಾರ್ಜಿತವಾದಲ್ಲಿ ಇಲ್ಲಿ ಬರುವ ವಾರ್ಷಿಕ ವರಮಾನದಿಂದ ನೀವು ಕೂಡಿಟ್ಟ ₹ 50 ಲಕ್ಷ ವಿಂಗಡಿಸಿ ನೀವು, ನಿಮ್ಮ ಹೆಂಡತಿ ಹಾಗೂ ಮಕ್ಕಳ ಹೆಸರಿನಲ್ಲಿ ಠೇವಣಿ ಮಾಡಬಹುದು. ಹೀಗೆ ಮಾಡಿದಲ್ಲಿ ತೆರಿಗೆ ಬರುವುದಿಲ್ಲ. ಇದು ಬೇಡವಾದರೆ, ₹ 3 ಲಕ್ಷಕ್ಕೂ ಹೆಚ್ಚಿಗೆ ಪಡೆಯುವ ಬಡ್ಡಿಯನ್ನು, ಬ್ಯಾಂಕಿನಲ್ಲಿ ತೆರಿಗೆಗೋಸ್ಕರ ನಿಗದಿಪಡಿಸಿದ 5 ವರ್ಷಗಳ ಠೇವಣಿ ಮಾಡಿರಿ. ಈ ಮಾರ್ಗದಲ್ಲಿಯೂ ಸಂಪೂರ್ಣ ತೆರಿಗೆ ವಿನಾಯ್ತಿ ಪಡೆಯಬಹುದು.

ಚಿನ್ನಪ್ಪ, ಹಾಸನ
ನನ್ನ ಮಗ ಮಧುಕರ್‌ ಬಿಇ ಮಾಡಿ ಎಂಎಸ್‌ ಓದಲು ಜರ್ಮನಿಗೆ 28–1–2017 ರಂದು ಹೋಗಿದ್ದಾನೆ. ನಾನು ನಿವೃತ್ತ ಸರ್ಕಾರಿ ನೌಕರ. ನನ್ನ ವಾರ್ಷಿಕ ಆದಾಯ ₹ 1.56 ಲಕ್ಷ. ಮಗ ಹಾಲಿ ₹ 9 ಲಕ್ಷ ಸಾಲ ಪಡೆದಿರುತ್ತಾನೆ. ಸಾಲ ಮಾಡುವಾಗ ನನ್ನ ಮನೆ ಅಡಮಾನ ಮಾಡಿದ್ದೇನೆ. ನನ್ನ ಆದಾಯದ ದೃಢೀಕರಣ ಪತ್ರ ಕೊಟ್ಟು, ಬಡ್ಡಿ ಮನ್ನಾ ಮಾಡಿಸಬಹುದೇ ತಿಳಿಸಿರಿ. ಸಾಲದ ಬಡ್ಡಿ ದರ ಶೇ 12 ಬಡ್ಡಿ ಮನ್ನಾ ಮಾಡಲು ಮನವಿ ಮಾಡಬಹುದೇ?

ಉತ್ತರ: ತಾ. 1–4–2009 ರಿಂದ ಬಡ್ಡಿ ಅನುದಾನಿತ ಶಿಕ್ಷಣ ಸಾಲ ಜಾರಿಗೆ ಬಂದಿದ್ದು, ₹ 4.50 ಲಕ್ಷದೊಳಗೆ ವಾರ್ಷಿಕ ಆದಾಯ ವಿರುವವರು, ಮಕ್ಕಳ ವೃತ್ತಿ ಪರ ಶಿಕ್ಷಣಕ್ಕೆ ಬ್ಯಾಂಕ್‌ ಸಾಲ ಪಡೆದರೆ, ಅನುದಾನಿತ ಬಡ್ಡಿ ಸೌಲತ್ತು ಪಡೆಯಬಹುದು. ಆದರೆ ಈ ಶಿಕ್ಷಣ ಭಾರತದಲ್ಲಿ ಓದುವ ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿದ್ದು, ನಿಮ್ಮ ಮಗ ಜರ್ಮನಿಯಲ್ಲಿ ಎಂಎಸ್‌ ಓದಲು ಪಡೆದ ಸಾಲಕ್ಕೆ ಅನ್ವಯವಾಗುವುದಿಲ್ಲ.

ಹೆಸರು–ಊರು ಬೇಡ
ನಾನು ಸರ್ಕಾರಿ ನೌಕರ. ವಯಸ್ಸು 40. SBI Life Smart Bachat ನಲ್ಲಿ ವರ್ಷಕ್ಕೆ ₹ 24,800 ರಂತೆ, 10 ವರ್ಷಗಳ ಪಾಲಿಸಿ ಮಾಡಿಸಿದ್ದೇನೆ. 10 ವರ್ಷಗಳಲ್ಲಿ ₹ 3 ರಿಂದ ₹ 3.35 ಲಕ್ಷ ಸಿಗುತ್ತದೆ ಎಂಬುದಾಗಿ ತಿಳಿಸಿದ್ದಾರೆ. ನನ್ನ ಪ್ರಶ್ನೆ: ಇದು ಸುರಕ್ಷಿತ ಹೂಡಿಕೆಯೇ, ಕಟ್ಟಿದ ಹಣ ನನ್ನ ಕೈ ಸೇರಬಹುದೇ ಎನ್ನುವ ಅನುಮಾನ ಕಾಡುತ್ತಿದೆ.

ಉತ್ತರ: ಎಸ್‌.ಬಿ.ಐ. ಅವರ ಒಂದು ಮ್ಯೂಚುವಲ್‌ ಫಂಡ್‌ ಹೂಡಿಕೆ ಇದಾಗಿದೆ. ಸಾಮಾನ್ಯವಾಗಿ ಎಸ್‌.ಬಿ.ಐ. ಯೋಜನೆಗಳು ಚೆನ್ನಾಗಿದ್ದು, ಉತ್ತಮ ವರಮಾನ ಗ್ರಾಹಕರಿಗೆ ನೀಡುತ್ತಿರುವುದು ಸತ್ಯದ ಸಂಗತಿ. ಈ ಹೂಡಿಕೆಯ ಒಂದು ಅಂಶ ನಿಮ್ಮ ಜೀವವಿಮಗೆ ತೆಗೆದಿಟ್ಟಿರಬಹುದು. ಉಳಿದ ಹಣ ಉತ್ತಮ ಕಂಪೆನಿಯ ಷೇರುಗಳಲ್ಲಿ ಹೂಡುತ್ತಾರೆ. ಒಟ್ಟಿನಲ್ಲಿ ಇಲ್ಲಿ ಮೋಸ ಎನ್ನುವ ಮಾತಿಲ್ಲ. ಮ್ಯೂಚುವಲ್‌ ಫಂಡ್‌ ಹೂಡಿಕೆ, ಷೇರು ಮಾರುಕಟ್ಟೆ ಆಧಾರಿತವಾಗಿರುವುದರಿಂದ, ನಿರ್ದಿಷ್ಟ ಆದಾಯ ಒಂದೇ ಬರುತ್ತದೆ ಎನ್ನುವುದನ್ನು ಯಾರಿಂದಲೂ ಹೇಳಲು ಬರುವುದಿಲ್ಲ. ಸ್ವಲ್ಪ ಕಡಿಮೆ ಅಥವಾ ಹೆಚ್ಚಿನ ಆದಾಯ ಬಂದರೂ ಆಶ್ಚರ್ಯವಿಲ್ಲ. ನೀವು ಇನ್ನೊಮ್ಮೆ ಪಾಲಿಸಿ ಡಾಕ್ಯುಮೆಂಟ್‌ ಅಥವಾ ಆಫರ್‌ ಡಾಕ್ಯುಮೆಂಟ್‌ನ್ನು ನಿಮ್ಮ ಸಮೀಪದ ಆರ್ಥಿಕ ತಜ್ಞರಿಗೆ ತೋರಿಸಿ ಇನ್ನೂ ಹೆಚ್ಚಿನ ಮಾಹಿತಿ ಪಡೆಯಿರಿ.

ಚಂದ್ರಶೇಖರ್, ಧಾರವಾಡ
ನಾನು ಕೆನರಾ ಬ್ಯಾಂಕ್‌ನಿಂದ ಗೃಹಸಾಲ ಪಡೆದಿದ್ದೇನೆ. ಇದರಿಂದ ಸಾಲದ ಕಂತು ಬಡ್ಡಿಗೆ ಆದಾಯ ತೆರಿಗೆ ವಿನಾಯ್ತಿ ಪಡೆಯುತ್ತಿದ್ದೇನೆ. ನಾನು ಇನ್ನು ನಾಲ್ಕು ವರ್ಷಗಳಲ್ಲಿ ನಿವೃತ್ತನಾಗುತ್ತೇನೆ. ನಿವೃತ್ತಿ ನಂತರವೂ ಮುಂದೆ ನಾನು ಗೃಹಸಾಲ ಕಂತಿನಿಂದ ಆದಾಯ ತೆರಿಗೆ ವಿನಾಯ್ತಿ ಪಡೆಯಬಹುದೇ ತಿಳಿಸಿರಿ. ಒಂದು ವೇಳೆ ನಾನು ಈ ಗೃಹ ಸಾಲ ತೀರಿಸಿ ಇನ್ನೊಂದು ಗೃಹಸಾಲ ಪಡೆದಲ್ಲಿ, ಅಲ್ಲಿ ಕೂಡಾ ತೆರಿಗೆ ವಿನಾಯ್ತಿ ದೊರೆಯುವುದೇ, ದಯಮಾಡಿ ನನ್ನ ಸಂಶಯ ನಿವಾರಣೆ ಮಾಡಿರಿ.

ಉತ್ತರ: ಗೃಹ ಸಾಲದ ಕಂತು ಸೆಕ್ಷನ್ 80ಸಿ ಹಾಗೂ ಬಡ್ಡಿ ಸೆಕ್ಷನ್ 24 ಬಿ. ಆಧಾರದ ಮೇಲೆ, ವಿನಾಯ್ತಿ ಪಡೆಯುವಾಗ, ವ್ಯಕ್ತಿಯ ವಯಸ್ಸು ಅಥವಾ ಉದ್ಯೋಗ–ನಿವೃತ್ತಿ ಎನ್ನುವ ವಿಚಾರ ಬರುವುದಿಲ್ಲ. ನೀವು ನಿವೃತ್ತರಾದ ನಂತರವೂ ಆ ಸಮಯದಲ್ಲಿ ಇದೇ ತೆರಿಗೆ ವಿನಾಯ್ತಿ ನೀತಿ ಮುಂದುವರೆದಲ್ಲಿ, ಹಿಂದಿನಂತೆ ವಿನಾಯ್ತಿ ಪಡೆಯಬಹುದು. ಗೃಹಸಾಲದ ಮೇಲಿನ ಕಂತು ಬಡ್ಡಿ ವ್ಯಕ್ತಿಯ ಸ್ವಂತ ಉಳಿತಾಯಕ್ಕೆ ಮಾಡಿಕೊಂಡ ಮನೆಗೆ ಮಾತ್ರ ಸೀಮಿತವಾಗಿದೆ. ಓರ್ವ ವ್ಯಕ್ತಿ ಒಂದಕ್ಕಿಂತ ಹೆಚ್ಚಿನ ಗೃಹಸಾಲ ಪಡೆದಲ್ಲಿ ಅಂತಹ ಸಾಲವನ್ನು ವಾಣಿಜ್ಯ ಉದ್ದೇಶ (Commerecial Perpose)  ಎಂದು ಪರಿಗಣಿಸಲಾಗುತ್ತಿದೆ. ನೀವು ಈಗಾಗಲೇ ಗೃಹಸಾಲದಿಂದ ಕಟ್ಟಿಸಿದ ಮನೆಯಲ್ಲಿ ವಾಸವಾಗಿದ್ದು ಇನ್ನೊಂದು ಗೃಹಸಾಲ ಪಡೆದು ಮನೆ ಕಟ್ಟಿಸುವಲ್ಲಿ ವಿನಾಯ್ತಿ ದೊರೆಯಲಾರದು.

ನಾಗೇಶ್, ಗೋಕರ್ಣ
ನಾನು ಮೆಕ್ಯಾನಿಕಲ್ ಎಂಜಿನಿಯರ್. ಬೆಂಗಳೂರಿನಲ್ಲಿ ಕೆಲಸ ಮಾಡುತ್ತೇನೆ. ನನಗೆ 5 ವರ್ಷದ ಹೆಣ್ಣು ಮಗು ಇದೆ. ಕಳೆದ 5 ವರ್ಷಗಳ ಹಿಂದೆ ನಿಮ್ಮ ಅಂಕಣದಿಂದ ಪ್ರಭಾವಿತನಾಗಿ ₹ 20,000 ಆರ್.ಡಿ. ಮಾಡಿದೆ, ಇನ್ನು 3–4 ತಿಂಗಳಲ್ಲಿ ಆರ್.ಡಿ. ಅವಧಿ ಮುಗಿದು ₹ 15 ಲಕ್ಷ ಬರುತ್ತಿದೆ. ನಮಗೆ ಊರಿನಲ್ಲಿ ಸ್ವಂತ ಮನೆ ಇದೆ. ನನಗೆ ತಿಂಗಳಿಗೆ ₹ 1 ಲಕ್ಷ ಸಂಬಳ ಬರುತ್ತದೆ. ಆರ್.ಡಿ. ಯಿಂದ ಬರುವ ಮೊತ್ತ, ಹೆಣ್ಣು ಮಗುವಿನ ಭವಿಷ್ಯ, ತೆರಿಗೆ ಉಳಿಸಲು ಅವಕಾಶ ಇವೆಲ್ಲವನ್ನೂ ಸವಿಸ್ತಾರವಾಗಿ ತಿಳಿಸಬೇಕಾಗಿ ವಿನಂತಿಸುತ್ತೇನೆ.?

ಉತ್ತರ: ಆರ್.ಡಿ. ದೀರ್ಘಾವಧಿಯಾದಲ್ಲಿ, ಠೇವಣಿ ಮೇಲಿನ ಬಡ್ಡಿ ಆ ಅವಧಿಯಲ್ಲಿ ಕಡಿಮೆ ಆದರೂ, ಠೇವಣಿದಾರ ಆರ್.ಡಿ. ಪ್ರಾರಂಭಿಸುವಾಗ ಪಡೆಯುವ ಹೆಚ್ಚಿನ ಬಡ್ಡಿಯನ್ನೇ ಅವಧಿ ಮುಗಿಯುವ ತನಕ ಪಡೆಯುತ್ತಾನೆ. ನೀವು ನನ್ನ ಅಂಕಣ ಓದಿ  ₹ 20,000 ಆರ್.ಡಿ. ಮಾಡಿರುವುದಕ್ಕೆ ಅಭಿನಂದನೆಗಳು. ಈಗ ಠೇವಣಿ ಮೇಲಿನ ಬಡ್ಡಿದರ ಬಹಳ ಕಡಿಮೆಯಾಗಿದ್ದು ನೀವು 5 ವರ್ಷಗಳ ಬದಲಾಗಿ 10 ವರ್ಷ ಮಾಡಿದ್ದಿದ್ದರೆ, ಇನ್ನೂ 5 ವರ್ಷಗಳ ಕಾಲ ಹೆಚ್ಚಿನ ಬಡ್ಡಿ ದರ ಪಡೆಯಬಹುದಾಗಿತ್ತು.

ಏನೇ ಇರಲಿ ಆರ್.ಡಿ. ಒಂದು ಉತ್ತಮ ಹೂಡಿಕೆ, ಈಗಿರುವ ಆರ್.ಡಿ. ಮುಗಿಯುತ್ತಲೇ  ₹ 20,000 ಅಥವಾ ಹೆಚ್ಚಿನ ಮೊತ್ತಕ್ಕೆ 10 ವರ್ಷಗಳ ಆರ್.ಡಿ. ಮಾಡಿರಿ. ಸೆಕ್ಷನ್ 80ಸಿ ಆಧಾರದ ಮೇಲೆ ಗರಿಷ್ಠ ₹  1,50 ಲಕ್ಷ ಉಳಿಸಬಹುದಾದ್ದರಿಂದ, ಜೀವವಿಮೆ, ಪಿ.ಪಿ.ಎಫ್. ಅಥವಾ 5 ವರ್ಷಗಳ ಬ್ಯಾಂಕ್ ಠೇವಣಿಯಲ್ಲಿ ವಾರ್ಷಿಕ ಗರಿಷ್ಠ ₹ 1.50 ಲಕ್ಷ ಉಳಿತಾಯ ಮಾಡಿ. ಇದೇ ವೇಳೆ ಸೆಕ್ಷನ್ 80ಸಿಸಿಡಿ (1ಬಿ) ಆಧಾರದ ಮೇಲೆ, ನ್ಯಾಷನಲ್ ಪೆನ್ಷನ್ ಸ್ಕೀಮ್ ಆಧಾರದ ಮೇಲೆ ವಾರ್ಷಿಕ ಗರಿಷ್ಠ ₹ 50,000 ಉಳಿಸಿರಿ.

ಹೀಗೆ ಮಾಡಿದಲ್ಲಿ ನೀವು ನಿಮ್ಮ ಒಟ್ಟು ಆದಾಯದಿಂದ ₹ 2 ಲಕ್ಷಗಳ ತನಕ, ಕಡಿತ ಮಾಡಿ ಉಳಿದ ಹಣಕ್ಕೆ ಮಾತ್ರ ತೆರಿಗೆ ಸಲ್ಲಿಸಬಹುದು. ನಿಮ್ಮ ಹೆಣ್ಣು ಮಗುವಿನ ಸಲುವಾಗಿ ಸುಕನ್ಯಾ ಸಮೃದ್ಧಿ ಯೋಜನೆಯಡಿಯಲ್ಲಿ ಕನಿಷ್ಠ  ₹ 5,000 ವಾರ್ಷಿಕವಾಗಿ ಹಣ ಹೂಡಿರಿ. ನೀವು ಸದ್ಯದಲ್ಲೇ ಆರ್.ಡಿ.ಯಿಂದ  ₹ 15 ಲಕ್ಷ ಪಡೆಯುವುದರಿಂದ ಸ್ವಲ್ಪ ಬ್ಯಾಂಕ್ ಸಾಲ ಮಾಡಿಯಾದರೂ 30X40 ನಿವೇಶನ ಕೊಳ್ಳಿರಿ, ಈ ಕಾರ್ಯ ಕೈಗೂಡುವ ತನಕ ₹ 15 ಲಕ್ಷ ಒಂದು ವರ್ಷದ ಒಮ್ಮೆಲೇ ಬಡ್ಡಿ ಬರುವ ಠೇವಣಿಯಲ್ಲಿ ಇರಿಸಿರಿ. ನಿಮಗೆ ಉಜ್ವಲ ಭವಿಷ್ಯ ಹಾರೈಸುತ್ತೇನೆ.

ಆರ್. ರಾಧಾ, ಚಿತ್ರದುರ್ಗ
ನಾನು ಪದವಿ ಕಾಲೇಜಿನ ಉಪನ್ಯಾಸಕಿ. 2002ರಲ್ಲಿ 30X40 ಅಳತೆಯ ಆರ್.ಸಿ.ಸಿ. ಮನೆ ಕಟ್ಟಿಸಿದ್ದೆ. ಇದೀಗ ನಾವು ಅದೇ ಮನೆಯನ್ನು ನವೀಕರಣಗೊಳಿಸಿ, ಸಂಪುರ್ಣವಾಗಿ ಬೀಳಿಸಿ ಕಟ್ಟಿಸಿದ್ದು, ಎಸ್.ಬಿ.ಐ. ನಿಂದ ಮನೆ ಕಟ್ಟಲು ಸಾಲ ಪಡೆದಿದ್ದೇವೆ. ಈ ಹಿಂದೆ ಇದೇ ಜಾಗದಲ್ಲಿ ಮನೆಕಟ್ಟಿ ಗೃಹಸಾಲ ಪಡೆದು, ತೆರಿಗೆ ವಿನಾಯಿತಿ ಪಡೆದು ಸಾಲ ತೀರಿಸಿದ್ದೆವು. ನನ್ನ ಪ್ರಶ್ನೆ ಈಗ ಪಡೆದಿರುವ ಗೃಹಸಾಲಕ್ಕೆ ನಾನು ತೆರಿಗೆ ವಿನಾಯ್ತಿ ಪಡೆಯಬಹುದೇ?

ಉತ್ತರ: ನೀವು ಈಗಿರುವ ಮನೆ ಕೆಡವಿ, ಹೊಸದಾಗಿ ಅದೇ ಜಾಗದಲ್ಲಿ ಮನೆ ನಿರ್ಮಿಸುವಾಗ, ಈ ಹಿಂದೆ ಪಡೆದ ಗೃಹಸಾಲ ತೀರಿಸುವಲ್ಲಿ ಹಾಗೂ ಹೊಸ ಕಟ್ಟಡಕ್ಕೆ ಪಡೆದ ಸಾಲದ ಕಂತು ಬಡ್ಡಿಗೆ ತೆರಿಗೆ ವಿನಾಯ್ತಿ ಪಡೆಯಬಹುದು. ಮುಖ್ಯವಾಗಿ ಯಾವುದೇ ವ್ಯಕ್ತಿ, ತಾವು ಉಳಿಯಲು ನಿರ್ಮಿಸುವ ಮನೆಯಾದಲ್ಲಿ, ನಿಮ್ಮ ಪ್ರಶ್ನೆಯಲ್ಲಿ ತಿಳಿಸಿದ ವಿವರಣೆ ಪ್ರಕಾರ ತೆರಿಗೆ ವಿನಾಯ್ತಿ ಪಡೆಯಬಹುದು. ವಾಣಿಜ್ಯ ಉದ್ದೇಶವಾದಲ್ಲಿ ಮಾತ್ರ ತೆರಿಗೆ ವಿನಾಯಿತಿ ಪಡೆಯುವಂತಿಲ್ಲ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.