ADVERTISEMENT

ಬಜೆಟ್​ ಮುದ್ರಣ ಪ್ರಕ್ರಿಯೆಗೆ ಚಾಲನೆ

ಪಿಟಿಐ
Published 19 ಜನವರಿ 2017, 19:30 IST
Last Updated 19 ಜನವರಿ 2017, 19:30 IST
ಸಚಿವ ಜೇಟ್ಲಿ ಸಿಹಿ ವಿತರಿಸಿ ಬಜೆಟ್‌ ಮುದ್ರಣಕ್ಕೆ ಚಾಲನೆ ನೀಡಿದರು –ಪಿಟಿಐ ಚಿತ್ರ
ಸಚಿವ ಜೇಟ್ಲಿ ಸಿಹಿ ವಿತರಿಸಿ ಬಜೆಟ್‌ ಮುದ್ರಣಕ್ಕೆ ಚಾಲನೆ ನೀಡಿದರು –ಪಿಟಿಐ ಚಿತ್ರ   

ನವದೆಹಲಿ : ಸಾಂಪ್ರದಾಯಿಕವಾಗಿ  ಸಿಹಿ (ಹಲ್ವಾ) ತಯಾರಿಸಿ  ಹಣಕಾಸು ಸಚಿವಾಲಯದ ಸಿಬ್ಬಂದಿಗೆ ಹಂಚುವುದರೊಂದಿಗೆ 2017–18ನೇ ಸಾಲಿನ ಬಜೆಟ್‌ ದಾಖಲೆಗಳ ಮುದ್ರಣ ಕಾರ್ಯಕ್ಕೆ  ಗುರುವಾರ ವಿಧ್ಯುಕ್ತವಾಗಿ ಚಾಲನೆ ನೀಡಲಾಯಿತು. ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ಅವರು ಹಲ್ವಾ ವಿತರಣೆ ಮೂಲಕ  ಈ ಪ್ರಕ್ರಿಯೆಗೆ ಚಾಲನೆ ನೀಡಿದರು.

ದೊಡ್ಡ ಕಡಾಯಿಯಲ್ಲಿ ತಯಾರಿಸಿದ ಹಲ್ವಾವನ್ನು ಸಚಿವ ಜೇಟ್ಲಿ ಅವರು ಬಜೆಟ್‌ ಸಿದ್ಧಪಡಿಸುವ ಕಾರ್ಯದಲ್ಲಿ ಪಾಲ್ಗೊಳ್ಳುವ ಹಣಕಾಸು  ಸಚಿವಾಲಯದ ಸಿಬ್ಬಂದಿಗೆಲ್ಲ ಹಂಚಿದರು. 

ಹಣಕಾಸು ಖಾತೆ  ಕಾರ್ಯದರ್ಶಿ ಅಶೋಕ್‌ ಲಾವಾಸಾ, ರೆವಿನ್ಯೂ ಕಾರ್ಯದರ್ಶಿ  ಹಸ್ಮುಖ್  ಆಧಿಯಾ, ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ಶಕ್ತಿಕಾಂತ್‌ ದಾಸ್‌, ಮುಖ್ಯ ಆರ್ಥಿಕ ಸಲಹೆಗಾರ ಅರವಿಂದ್‌ ಸುಬ್ರಮಣಿಯನ್‌ ಸೇರಿದಂತೆ ಹಣಕಾಸು ಸಚಿವಾಲಯದ  ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗವಹಿಸಿದ್ದರು.

ಬ್ರಿಟಿಷ್‌ ಕಾಲದಿಂದಲೂ ನಡೆದುಕೊಂಡು ಬಂದಿದ್ದ ಫೆಬ್ರುವರಿ ಕೊನೆಯ ದಿನ ಬಜೆಟ್‌ ಮಂಡನೆಯ ಸಂಪ್ರದಾಯಕ್ಕೆ ಈ ಬಾರಿ ತಿಲಾಂಜಲಿ ನೀಡಲಾಗುತ್ತಿದೆ.  ಈ ಬಾರಿ ಫೆ.1ರಂದು ಬಜೆಟ್‌ ಮಂಡಿಸಲಾಗುತ್ತಿದ್ದು, ಎನ್‌ಡಿಎ ಸರ್ಕಾರದ ಮೂರನೇ ಬಜೆಟ್‌ ಇದಾಗಿದೆ.

‘ಹಲ್ವಾ’ಕ್ಕೂ   ಬಜೆಟ್‌ಗೂ  ಬಿಡದ ನಂಟು..!
ಬಜೆಟ್‌ ಮಂಡನೆಗೂ  ಕೆಲವು ದಿನಗಳ ಮೊದಲು ಹಲ್ವಾ ಸಮಾರಂಭದೊಂದಿಗೆ ಬಜೆಟ್‌ ಪ್ರತಿಗಳ ಮುದ್ರಣ ಕಾರ್ಯ ಆರಂಭವಾಗುತ್ತದೆ. ಮೊದಲಿನಿಂದಲೂ ಈ ಸಂಪ್ರದಾಯ ನಡೆದುಕೊಂಡು ಬಂದಿದೆ.

ಬಜೆಟ್ ಸಿದ್ಧಪಡಿಸುವುದು ಅತ್ಯಂತ ರಹಸ್ಯ ಕಾರ್ಯ. ಇದರಲ್ಲಿಯ ಅಂಶಗಳು  ಎಲ್ಲಿಯೂ ಸೋರಿಕೆ ಆಗದಿರಲಿ ಎಂದು  ಭಾರಿ ಮುನ್ನೆಚ್ಚರಿಕೆ ವಹಿಸಲಾಗುತ್ತದೆ. ತೀವ್ರ ನಿಗಾದಲ್ಲಿ ಈ ಕಾರ್ಯ ನಡೆಯುತ್ತದೆ.
 
ಸಿಬ್ಬಂದಿಗೆ ದಿಗ್ಬಂಧನ:
'ಹಲ್ವಾ' ಸಮಾರಂಭದ ಬಳಿಕ ಬಜೆಟ್‌ ಪ್ರತಿಗಳ ಮುದ್ರಣ ಮುಗಿದು ಸಂಸತ್ತಿನಲ್ಲಿ  ಮಂಡನೆಯಾಗುವವರೆಗೆ ಈ ಕೆಲಸದಲ್ಲಿ ತೊಡಗಿದ ಯಾವೊಬ್ಬ ಅಧಿಕಾರಿ, ಸಿಬ್ಬಂದಿ ಹೊರ ಹೋಗುವಂತಿಲ್ಲ. ಮನೆಗಳಿಗೂ ತೆರಳುವುದು, ಕುಟುಂಬ ಸದಸ್ಯರು, ಸ್ನೇಹಿತರನ್ನು ಭೇಟಿಯಾಗುವುದು ನಿಷಿದ್ಧ.

ಬಜೆಟ್‌ ಗೌಪ್ಯತೆ ಕಾಯ್ದುಕೊಳ್ಳುವ ಉದ್ದೇಶದಿಂದ ಬಜೆಟ್‌ ಮಂಡನೆಯಾಗುವವರೆಗೂ ಸುಮಾರು 100ಕ್ಕೂ ಹೆಚ್ಚು ಅಧಿಕಾರಿಗಳು ಮತ್ತು ಸಿಬ್ಬಂದಿ ಮುದ್ರಣಾಲಯವಿರುವ  ನಾರ್ಥ್‌ ಬ್ಲಾಕ್‌ನಲ್ಲಿಯೇ ಉಳಿದಿರುತ್ತಾರೆ.   ಉನ್ನತ ಅಧಿಕಾರಿಗಳು ಮಾತ್ರ ಮನೆಗೆ ಹೋಗಬಹುದಾಗಿದೆ.

ಕುಟುಂಬದ ಸದಸ್ಯರು, ಬಂಧುಗಳು ಸ್ನೇಹಿತರು, ಆಪ್ತರು ಸೇರಿದಂತೆ ಯಾರೊಂದಿಗೂ  ದೂರವಾಣಿಯಲ್ಲಿಯೂ ಮಾತನಾಡುವಂತಿಲ್ಲ. ಇ–ಮೇಲ್ ಮೂಲಕ  ಕೂಡ ಸಂಪರ್ಕಿಸುವಂತಿಲ್ಲ. ಇಂಥ ಬಿಗಿಯಾದ ದಿಗ್ಬಂಧನದಲ್ಲಿ ಹಣಕಾಸು ಸಚಿವರ ಬಜೆಟ್‌ ಭಾಷಣ  ಪ್ರತಿ ಮುದ್ರಣವಾಗುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT