ADVERTISEMENT

ಬರದ ನಡುವೆ ಕಂಬಳಿ ಹುಳುಗಳ ಕಾಟ

​ಪ್ರಜಾವಾಣಿ ವಾರ್ತೆ
Published 28 ಜುಲೈ 2014, 19:46 IST
Last Updated 28 ಜುಲೈ 2014, 19:46 IST
ಗುಡಿಬಂಡೆ ತಾಲ್ಲೂಕಿನ ಗೋಪುರದಹಳ್ಳಿ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಗೆ ಕಂಬಳಿ ಹುಳು ಬಾಧೆ
ಗುಡಿಬಂಡೆ ತಾಲ್ಲೂಕಿನ ಗೋಪುರದಹಳ್ಳಿ ಜಮೀನಿನಲ್ಲಿ ಬೆಳೆದ ಶೇಂಗಾ ಬೆಳೆಗೆ ಕಂಬಳಿ ಹುಳು ಬಾಧೆ   

ಗುಡಿಬಂಡೆ: ನಾಲ್ಕು ವರ್ಷದಿಂದ ಬರ ಅನುಭವಿ­ಸುತ್ತಿರುವ ತಾಲ್ಲೂಕಿನ ರೈತರಿಗೆ ಈಗ ಇನ್ನೊಂದು ಕಾಟ ಶುರುವಾಗಿದೆ. ತಾಲ್ಲೂಕಿನ ಗೋಪುರದಹಳ್ಳಿ, ಕುರುಬರಹೊಸಹಳ್ಳಿ, ವರ್ಲಕೊಂಡ ಮೊದಲಾದ ಗ್ರಾಮಗಳಲ್ಲಿ ಬೆಳೆಯಲಾದ ವಿವಿಧ ಬೆಳೆಗೆ ಕಂಬಳಿ ಹುಳು ಕಾಟ ಶುರುವಾಗಿದೆ. ಹೊಲದಲ್ಲಿ ಬೆಳೆಗಿಂತ ಇವುಗಳ ಸಂಖ್ಯೆಯೇ ಜಾಸ್ತಿಯಾಗಿದೆ. ‘ಹಸಿರಾಗಿದ್ದ ಹೊಲವೀಗ ಕಿತ್ತಲೆ ಬಣ್ಣ’ಕ್ಕೆ ತಿರುಗಿದಂತಾಗಿದೆ.

ಮುಂಗಾರು ಹಂಗಾಮಿನಲ್ಲಿ ಬೆಳೆಯುವ ರಾಗಿ, ಜೋಳ, ನೆಲಗಡಲೆ, ತೊಗರಿಗೆ ಗೊಣ್ಣೆ ಹುಳುವಿನಿಂದಾಗಿ ಬೆಳೆ ಸುಟ್ಟಂತಾಗುತ್ತಿದೆ.
ವರ್ಲಕೊಂಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಗೋಪುರದಹಳ್ಳಿ, ಕುರುಬರಹೊಸಹಳ್ಳಿ ಗ್ರಾಮಗಳ ಜಮೀನಿನಲ್ಲಿ ಬಿತ್ತನೆಮಾಡಿದ ಬೆಳೆ ಈಗ ಕೈತಪ್ಪುವ ಹಂತಕ್ಕೆ ತಲುಪಿದೆ ಎನ್ನುತ್ತಾರೆ ರೈತರು. ಕಂಬಳಿ ಹುಳುವಿನಿಂದ ಇಡೀ ಜಮೀನು ಬೆಳೆಯಿಲ್ಲದೆ ಖಾಲಿಯಾಗಿ ಕಾಣುತ್ತಿದೆ. ರಾಗಿ ಬೆಳೆ ಶೇ 50ರಷ್ಟು ಸುಟ್ಟಿದೆ. ಏನು ಮಾಡಬೇಕು ಎಂದು ತಿಳಿಯುತ್ತಿಲ್ಲ ಎಂದು ಗೋಪುರದಹಳ್ಳಿ ರೈತ ಕೊಂಡಪ್ಪ ಹೇಳಿದರು.

ಕೃಷಿ ತಜ್ಞರು ಮುಂಜಾಗ್ರತೆ ಕ್ರಮವಾಗಿ ರೈತರಲ್ಲಿ ಜಾಗೃತಿ ಮೂಡಿಸಬೇಕು. ಬೆಳೆಗಳು ರೋಗಕ್ಕೆ ತುತ್ತಾದ ಮೇಲೆ ಪರಿಹಾರ ಹೇಳುವುದಕ್ಕಿಂತ ರೋಗ ಬಾರದಂತೆ ಎಚ್ಚರವಹಿಸಬೇಕು ಎನ್ನುತ್ತಾರೆ ಗ್ರಾಮ ಪಂಚಾಯತಿ ಸದಸ್ಯ ಎಲ್.ಎ.ಬಾಬು.
ಮುಂಗಾರಿಗೂ ಮುನ್ನ ಬದುಗಳ ಮೇಲೆ ಬೆಂಕಿ ಹಚ್ಚಿದಾಗ ಶಾಖಕ್ಕೆ ಕೋಶಗಳು ಸಾಯುತ್ತವೆ. ಇಲ್ಲ ಹುಳುಗಳನ್ನು ಆರಿಸಿ ಸುಟ್ಟುಹಾಕಬೇಕು. ಹುಳನ್ನು ಸಂಗ್ರಹಿಸಿ ಭೂಚೇತನ ಅನುವುಗಾರರಿಗೆ ನೀಡಿದರೆ ಪ್ರತಿ ಕೆ.ಜಿ.ಗೆ ರೂ.100 ನೀಡಲಾಗುವುದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್.ಎನ್.ಮಂಜುನಾಥ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.