ADVERTISEMENT

ಬರಲಿವೆ ಮತ್ತಷ್ಟು ಹೊಸ ವಾಹನ

​ಪ್ರಜಾವಾಣಿ ವಾರ್ತೆ
Published 30 ಸೆಪ್ಟೆಂಬರ್ 2014, 19:30 IST
Last Updated 30 ಸೆಪ್ಟೆಂಬರ್ 2014, 19:30 IST
ಸುಜುಕಿ ಕಂಪೆನಿಯ ಎಲ್‌ಸಿವಿ ಕ್ಯಾರ್ರಿ
ಸುಜುಕಿ ಕಂಪೆನಿಯ ಎಲ್‌ಸಿವಿ ಕ್ಯಾರ್ರಿ   

ಹಬ್ಬಗಳ ಸಂದರ್ಭದಲ್ಲಿ ಭಾರತೀಯರಿಗೆ ಹೊಸತು ಏನನ್ನಾದರೂ ಖರೀದಿಸುವ ರೂಢಿ ಇರುತ್ತದೆ. ಈ ಅಂಶವನ್ನೇ ಆಧರಿಸಿ ದೇಶದ ವಾಹನ ತಯಾರಿಕೆ ಉದ್ಯಮ ಹೊಸ ಹೊಸ ವಾಹನಗಳನ್ನು ನವರಾತ್ರಿ, ವಿಜಯ ದಶಮಿ, ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ಮಾರುಕಟ್ಟೆಗೆ ಬಿಡುಗಡೆ ಮಾಡಲು ಸಜ್ಜಾಗುತ್ತಿವೆ.

ಭಾರತದ ರಸ್ತೆಗಳಿಗೆ ಸದ್ಯದಲ್ಲೇ ಇನ್ನಷ್ಟು ಹೊಸ ವಾಹನಗಳು ಇಳಿಯಲಿವೆ. ಮಹಾ ನಗರಗಳಲ್ಲಿ ವಾಹನ ದಟ್ಟಣೆಗೆ ಮತ್ತಷ್ಟು ವಾಹನಗಳ ಸೇರ್ಪಡೆ ಆಗಲಿದೆ.

ದೇಶದ ಕಾರು ತಯಾರಿಕೆ ವಿಭಾಗದಲ್ಲಿ ಅತಿದೊಡ್ಡ ಕಂಪೆನಿ ಎನಿಸಿಕೊಂಡಿರುವ ಮಾರುತಿ ಸುಜುಕಿ ಇಂಡಿಯ (ಎಂಎಸ್‌ಐ), ಇದೇ ಮೊದಲ ಬಾರಿಗೆ ಚಿಕ್ಕ ಗಾತ್ರದ ವಾಣಿಜ್ಯ ಬಳಕೆ ವಾಹನಗಳ (ಲೈಟ್‌ ಕಮರ್ಷಿಯಲ್‌ ವೆಹಿಕಲ್‌: ಎಲ್‌ಸಿವಿ) ತಯಾರಿಸಲು ಮುಂದಾಗಿದೆ.

ಇನ್ನೊಂದೆಡೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಹೆಚ್ಚು ಶಕ್ತಿಶಾಲಿಯಾದ ಪೆಟ್ರೋಲ್‌ ವಾಹನಗಳನ್ನು 2015ರಲ್ಲಿ ದೇಶದ ರಸ್ತೆಗಿಳಿಸಲು ಸಜ್ಜಾಗುತ್ತಿದೆ. ಈ ಮಧ್ಯೆ, ಹೀರೊ ಮೋಟೊ ಕಾರ್ಪ್‌, 2015ರ ಆರಂಭದಲ್ಲಿ ಎರಡು ಹೊಸ ಸ್ಕೂಟರ್‌ ಮತ್ತು ಒಂದು ಮೋಟಾರ್‌ ಬೈಕನ್ನು ಮಾರುಕಟ್ಟೆಗೆ ಪರಿಚಯಿಸುವುದಾಗಿ ಹೇಳಿಕೊಂಡಿದೆ.

ಸದ್ಯದಲ್ಲೇ ಎಲ್‌ಸಿವಿ ಯೋಜನೆಯನ್ನು ಸೀಮಿತ ಪ್ರಮಾಣದಲ್ಲಿ ಜಾರಿಗೆ ತರಲಾಗುವುದು. ನಂತರ ಮಾರುಕಟ್ಟೆ ಪ್ರತಿಕ್ರಿಯೆ, ಮಾರಾಟ ವಹಿವಾಟಿನ ವೇಗಕ್ಕೆ ತಕ್ಕಂತೆ ಸಾಮರ್ಥ್ಯ ವಿಸ್ತರಿಸಿಕೊಳ್ಳಲಾಗು ವುದು. ಈ ಎಲ್‌ಸಿವಿ ಮಾರುತಿಯ ಹೊಸ ವಿಭಾಗವಾಗಿದೆ. ಆದರೆ, ಮಾರಾಟಕ್ಕೆ ಬೇರೆಯದೇ ವಿಭಾಗ ಮತ್ತು ಷೋರೂಂಗಳನ್ನು ಆರಂಭಿಸಲಾಗುವುದು ಎನ್ನುತ್ತಾರೆ ಮಾರುತಿ ಸುಜುಕಿ ಇಂಡಿಯಾ ಅಧ್ಯಕ್ಷ ಆರ್‌.ಸಿ.ಭಾರ್ಗವ.

ಮಾರುತಿಯ ಎಲ್‌ಸಿವಿ ಬಹುತೇಕ ಟಾಟಾ ಏಸ್, ಮಹೀಂದ್ರಾದ ಜಿಯೊ, ಅಶೋಲ್‌ ಲೇಲ್ಯಾಂಡ್‌ನ ದೋಸ್ತ್‌ ಶ್ರೇಣಿಯಲ್ಲಿರಲಿದೆ.
ಮಹೀಂದ್ರಾ ಕಣ್ಣು ಈಗ ಕಾಂಪ್ಯಾಕ್ಟ್‌ ಸ್ಪೋರ್ಟ್ಸ್‌ ಯುಟಿಲಿಟಿ ವೆಹಿಕಲ್ (ಎಸ್‌ಯುವಿ) ವಿಭಾಗದತ್ತ ನೆಟ್ಟಿದೆ.

‘ನಾವೀಗ 1.2 ಲೀಟರ್ ಸಾಮರ್ಥ್ಯದ ಪೆಟ್ರೋಲ್‌ ಎಂಜಿನ್‌ ಅಭಿವೃದ್ಧಿಪಡಿಸುತ್ತಿದ್ದೇವೆ. ಇದನ್ನು ಚಿಕ್ಕ ಗಾತ್ರದ ಎಸ್‌ಯುವಿಗೆ ಅಳವಡಿಸಲಾಗುವುದು. ಈ ಹೊಸ ವಾಹನ ಮುಂದಿನ ವರ್ಷ ಮಾರುಕಟ್ಟೆ ಪ್ರವೇಶಿಸಲಿದೆ. ಜತೆಗೆ, ಕೊರಿಯಾದ ಮಿತ್ರಸಂಸ್ಥೆ ಸ್ಯಾಂಗ್ಯಾಂಗ್‌ ನಿಂದ 1.6 ಲೀಟರ್‌ ಪೆಟ್ರೋಲ್‌ ಎಂಜಿನ್‌ ತರಿಸಿಕೊ ಳ್ಳುತ್ತಿದ್ದೇವೆ. ಜತೆಗೆ ಮುಂಬರುವ ದಿನಗಳಲ್ಲಿ 1 ಲೀಟರ್‌ ಪೆಟ್ರೋಲ್‌ ಎಂಜಿನ್‌ ನಾವೇ ತಯಾರಿಸಲಿ ದ್ದೇವೆ. ಆ ಮೂಲಕ ಕಾಂಪ್ಯಾಕ್ಟ್ ಎಸ್‌ಯುವಿ ವಿಭಾಗ ದಲ್ಲಿ ನಮ್ಮ ಮಾರುಕಟ್ಟೆ ಪಾಲನ್ನು ದೊಡ್ಡ ಮಟ್ಟದಲ್ಲಿ ಹೆಚ್ಚಿಸಿಕೊಳ್ಳಲಿದ್ದೇವೆ’ ಎನ್ನುತ್ತಾರೆ ಮಹೀಂದ್ರಾ ಆ್ಯಂಡ್‌ ಮಹೀಂದ್ರಾದ ಕಾರ್ಯನಿರ್ವಾಹಕ ನಿರ್ದೇಶಕ ಪವನ್‌ ಗೋಯೆಂಕಾ.

ಡೀಸೆಲ್‌ ಬೆಲೆ ಏರಿಕೆ, ಅದೇ ವೇಳೆ ಪೆಟ್ರೋಲ್‌ ದರ ಇಳಿಕೆ ಆಗುತ್ತಿದೆ. ಈ ಬೆಳವಣಿಗೆ ಎರಡೂ ಇಂಧನಗಳ ಬೆಲೆಯ ಅಂತರವನ್ನೂ ತಗ್ಗಿಸಿದೆ. ಇದೇ ಕಾರಣದಿಂದ ಮಹೀಂದ್ರಾ ಪೆಟ್ರೊಲ್‌ ಎಂಜಿನ್‌ಗಳತ್ತ ಗಮನ ಕೇಂದ್ರೀಕರಿಸುತ್ತಿದೆ ಎಂದೇ ವಿಶ್ಲೇಷಿಸಲಾಗಿದೆ.
ಒಂದು ಶಕ್ತಿಶಾಲಿ ಮೋಟಾರ್ ಬೈಕ್‌, ಎರಡು ಹೊಸ ಸ್ಕೂಟರ್‌ಗಳು ಮಾರುಕಟ್ಟೆ ಪ್ರವೇಶಿಸಲು ಸಜ್ಜಾಗಿವೆ. ನಾಲ್ಕೈದು ತಿಂಗಳಲ್ಲಿ ರಸ್ತೆಗಿಳಿಯಲಿವೆ ಎನ್ನುವುದು ಹೀರೊ ಮೋಟೊ ಕಾರ್ಪ್‌ ಕಂಪೆನಿ ಉಪಾ ಧ್ಯಕ್ಷ ಪವನ್‌ ಮುಂಜಾಲ್‌ ಅವರ ವಿವರಣೆ.

ಭಾರತೀಯರಿಗೆ ಹಬ್ಬಗಳ ಕಾಲದಲ್ಲಿ ಹೊಸತನ್ನು ಖರೀದಿಸುವ ಉತ್ಸಾಹ ಇರುತ್ತದೆ. ಈಗ ಚಾಲ್ತಿಯಲ್ಲಿ ರುವ ದ್ವಿಚಕ್ರ ವಾಹನಗಳಲ್ಲಿಯೇ 12 ಮಾದರಿಗಳನ್ನು ಮತ್ತಷ್ಟು ಉನ್ನತೀಕರಿಸಲಾಗಿದೆ. ಈ ಸುಧಾರಿತ ಆವೃತ್ತಿ ಗಳನ್ನು ಮುಂಬರುವ ಸರಣಿ ಹಬ್ಬಗಳ  ಸಂದರ್ಭದಲ್ಲಿ ಬಿಡುಗಡೆ ಮಾಡಲಾಗುವುದು ಎಂದು ವಿವರಿಸುತ್ತಾ  ಮಾರುಕಟ್ಟೆ ಪ್ರಗತಿ ಬಗ್ಗೆ ಭಾರಿ ವಿಶ್ವಾಸವನ್ನೂ ವ್ಯಕ್ತಪಡಿಸುತ್ತಾರೆ.

ಇದೇ ತಿಂಗಳಲ್ಲಿ ಫಿಯೆಟ್‌ ಕಂಪೆನಿ ಪುಂಟೊ ಅವೆಂಚ್ಯುರಾ ಕಾರನ್ನು ಮಾರುಕಟ್ಟೆ ಬಿಡುಗಡೆ ಮಾಡಲಿದೆ. ಅವೆಂಚ್ಯುರಾ ಎಂದರೆ ಇಟಲಿ ಭಾಷೆಯಲ್ಲಿ ಅಡ್ವೆಂಚರ್‌ (ಸಾಹಸ) ಎಂದರ್ಥ. ಈಗಾಗಲೇ ಈ ಕಾರು 2014ರ ಆಟೊ ಎಕ್ಸ್‌ಪೊದಲ್ಲಿ ಪ್ರದರ್ಶನಗೊಂಡಿದೆ. ಮಧ್ಯಮ ಗಾತ್ರದಲ್ಲಿರುವ ಈ ಹ್ಯಾಚ್‌ಬ್ಯಾಕ್‌ ಕಾರಿನ ಎಕ್ಸ್‌ಷೋರೂಂ ಬೆಲೆ ರೂ8ರಿಂದ 8.50 ಲಕ್ಷದ ಆಜೂಬಾಜಿನಲ್ಲಿರಬಹುದು ಎಂದು ಅಂದಾಜು ಮಾಡಲಾಗಿದೆ.

ಫೋರ್ಡ್‌ ಕಂಪೆನಿಯಿಂದ ಫಿಗೊ ಕಾನ್ಸೆಪ್ಟ್‌ ಸೆಡಾನ್‌ ಮಾದರಿ ಕಾರನ್ನು ನಿರೀಕ್ಷಿಸಲಾಗುತ್ತಿದೆ. ಇದೂ ಸಹ ಈಗಾಗಲೇ ದೆಹಲಿಯಲ್ಲಿ ನಡೆದ ಆಟೊ ಎಕ್ಸ್‌ಪೊ 2014ರಲ್ಲಿ ಪ್ರದರ್ಶನಗೊಂಡಿದ್ದು, ಸಾಕಷ್ಟು ಕುತೂಹಲ ಮೂಡಿಸಿದೆ. ನವೆಂಬರ್‌ನಲ್ಲಿ ಮಾರುಕಟ್ಟೆಗೆ ಅಧಿಕೃತವಾಗಿ ಬಿಡುಗಡೆಯಾಗುವ ನಿರೀಕ್ಷೆ ಇದ್ದು, ಎಕ್ಸ್‌ಷೋರೂಂ ಬೆಲೆ ರೂ5.50 ಲಕ್ಷದಿಂದ ರೂ7.50 ಲಕ್ಷದವರೆಗೂ ಇರುವ ಸಂಭವವಿದೆ.

ಕಳೆದ ತಿಂಗಳಷ್ಟೇ ಜೆಸ್ಟ್‌ ಕಾರು ಬಿಡುಗಡೆ ಮಾಡಿ ತುಸು ಹುರುಪಿನಲ್ಲಿರುವ ಟಾಟಾ ಮೋಟಾರ್ಸ್‌ ಕಂಪೆನಿಯೂ ನವೆಂಬರ್‌ನಲ್ಲಿ ಟಾಟಾ ಬೋಲ್ಟ್‌ ಕಾರನ್ನು ರಸ್ತೆಗಿಳಿಸಲು ಸಜ್ಜಾಗಿದೆ. ಎಕ್ಸ್‌1 ಪ್ಲಾಟ್‌ಫಾರಂ ಆಧರಿಸಿದ ಈ ಕಾರಿನ ಎಕ್ಸ್‌ಷೋರೂಂ ಬೆಲೆ ರೂ4.20 ಲಕ್ಷದಿಂದ ರೂ6.60 ಲಕ್ಷದವರೆಗೂ ಇರಬಹುದು ಎಂದು ಮಾರುಕಟ್ಟೆ ಪರಿಣತರು ಅಂದಾಜು ಮಾಡಿದ್ದಾರೆ.

ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ವಿದ್ಯುತ್‌ ಚಾಲಿತ ಸ್ಯಾಂಗ್ಯಾಂಗ್‌ ಕೊರಾಂಡೊ ‘ಎಸ್‌ಯುವಿ’ ಮಾದರಿ ಬಿಡುಗಡೆಗೆ ಕ್ಷಣಗಣನೆ ಆರಂಭಿಸಿದೆ. ಇದರ ಬೆಲೆ ರೂ15 ಲಕ್ಷದ ಆಜೂಬಾಜಿನಲ್ಲಿರಬಹುದು ಎಂದು ಅಂದಾಜು ಮಾಡಲಾಗಿದೆ.

ಹುಂಡೈ ಸಹ ಸ್ಪೋರ್ಟ್‌ ಯುಟಿಲಿಟಿ ವೆಹಿಕಲ್‌ ವಿಭಾಗಕ್ಕೆ ಮತ್ತೊಂದು ಹೊಸ ಸೇರ್ಪಡೆ ಮಾಡಲು ಸಿದ್ಧವಾಗಿದೆ. ಹುಂಡೈ ನ್ಯೂ ಟಕ್ಸನ್‌ ಐಶಾರಾಮಿ ಮಾದರಿ ಕಾರು ಇದೇ ತಿಂಗಳಲ್ಲಿ ಮಾರುಕಟ್ಟೆ ಪ್ರವೇಶಿಸಬಹುದು. ಎಕ್ಸ್‌ಷೋರೂಂ ಬೆಲೆ ರೂ18 ಲಕ್ಷದಿಂದ 20 ಲಕ್ಷದಷ್ಟಿರಬಹುದು ಎಂದು ನಿರೀಕ್ಷಿಸಲಾಗಿದೆ.

ಈಗಷ್ಟೇ ಸಿಯಾಜ್‌ ಕಾರನ್ನು  ಮಾರುಕಟ್ಟೆಗೆ ಪರಿಚಯಿಸಿರುವ ಮಾರುತಿ ಸುಜುಕಿ ಇಂಡಿಯಾ ಲಿ., ಇದೇ ತಿಂಗಳಲ್ಲಿ ಸ್ವಿಫ್ಟ್‌, ಸ್ವಿಫ್ಟ್ ಡಿಜೈರ್‌ ಕಾರುಗಳಲ್ಲಿ ಇನ್ನಷ್ಟು ಸುಧಾರಣೆ ತಂದು ಹೊಸ ಮಾದರಿ ಬಿಡುಗಡೆ ಮಾಡುವ ನಿರೀಕ್ಷೆ ಇದೆ. ಇನ್ನೊಂದೆಡೆ ಟಾಟಾ ಮೋಟಾರ್ಸ್‌ ಸಹ ಟಾಟಾ ಸಫಾರಿ ಸ್ಟಾರ್ಮ್‌ ನ್ಯೂ ಕಾರನ್ನು ರಸ್ತೆಗಿಳಿಸಲು ಸಜ್ಜಾಗುತ್ತಿದೆ. ಬೆಲೆ ರೂ9.90 ಲಕ್ಷದಿಂದ ರೂ13.70 ಲಕ್ಷದವರೆಗೂ ಇರಬಹುದೆಂಬ ಅಂದಾಜಿದೆ.

ಹೋಂಡಾ ಸಹ ತನ್ನ ಪುಟ್ಟ ಕಾರು ಬ್ರಿಯೊದಲ್ಲಿ ಮತ್ತಷ್ಟು ಬದಲಾವಣೆ ಮಾಡಿ ಹೋಂಡಾ ಬ್ರಿಯೊ ನ್ಯೂ ಮಾದರಿ ಬಿಡುಗಡೆ ಮಾಡಲಿದೆ. ಬಹುತೇಕ ಡಿಸೆಂಬರ್‌ನಲ್ಲಿ ಷೋರೂಂಗಳಿಗೆ ಬರಲಿರುವ ಈ ಪುಟ್ಟ ಕಾರಿನ ಬೆಲೆ ರೂ4 ಲಕ್ಷದಿಂದ ರೂ6 ಲಕ್ಷದವರೆಗೂ ಇರಲಿದೆ ಎಂದು ವಾಹನ ಉದ್ಯಮ ಕ್ಷೇತ್ರದ ಪರಿಣತರು ಅಂದಾಜು ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT