ADVERTISEMENT

ಬರ: ವಸೂಲಾಗದ ಕೃಷಿ ಸಾಲ ಹೆಚ್ಚಳ

ರಾಜೇಶ್ ರೈ ಚಟ್ಲ
Published 19 ಏಪ್ರಿಲ್ 2017, 19:30 IST
Last Updated 19 ಏಪ್ರಿಲ್ 2017, 19:30 IST
ಬರ: ವಸೂಲಾಗದ ಕೃಷಿ ಸಾಲ ಹೆಚ್ಚಳ
ಬರ: ವಸೂಲಾಗದ ಕೃಷಿ ಸಾಲ ಹೆಚ್ಚಳ   

ಬೆಂಗಳೂರು: ರಾಜ್ಯ ಎದುರಿಸುತ್ತಿರುವ ಸತತ ಬರಗಾಲದಿಂದಾಗಿ ರಾಷ್ಟ್ರೀಕೃತ ಬ್ಯಾಂಕ್‌ಗಳು ಕೃಷಿ ವಲಯಕ್ಕೆ ನೀಡಿದ ಸಾಲದಲ್ಲಿ ವಸೂಲಿಯಾಗದ ಪ್ರಮಾಣ (ಎನ್‌ಪಿಎ) ಇನ್ನೂ ಶೇ 5ರಷ್ಟು ಹೆಚ್ಚಳವಾಗಿದೆ.

‘ವಸೂಲಿಗೆ ಬಾಕಿ ಇರುವ ಒಟ್ಟು ಕೃಷಿ ಸಾಲದಲ್ಲಿ ಕಳೆದ ಡಿಸೆಂಬರ್‌ ಅಂತ್ಯಕ್ಕೆ ಎನ್‌ಪಿಎ ಮೊತ್ತ ಮಾತ್ರ ₹ 5,575 ಕೋಟಿಗೆ ತಲುಪಿದೆ. ಮಾರ್ಚ್‌ ಅಂತ್ಯದವರೆಗಿನ ಅಂಕಿಅಂಶ ಇನ್ನೂ ಬರಬೇಕಿದೆ’ ಎಂದು  ರಾಜ್ಯಮಟ್ಟದ ಬ್ಯಾಂಕರ್ಸ್   ಸಮಿತಿ ಮುಖ್ಯ ಪ್ರಬಂಧಕ ಜಿ. ಕುಮಾರಗೌಡ ‘ಪ್ರಜಾವಾಣಿ’ಗೆ ತಿಳಿಸಿದರು.

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹ 1 ಲಕ್ಷದವರೆಗೆ ಬೆಳೆ ಸಾಲ ಪಡೆದ ಅನೇಕ ರೈತರು ಸರ್ಕಾರ ಸಾಲ ಮನ್ನಾ ಮಾಡಬಹುದೆಂಬ ನಿರೀಕ್ಷೆಯಿಂದ ಮರು ಪಾವತಿಸಿಲ್ಲ. ಎನ್‌ಪಿಎ ಹೆಚ್ಚುವುದರಿಂದ ಬ್ಯಾಂಕ್‌ಗಳ ಆದಾಯಕ್ಕೆ ಹೊಡೆತ ಬೀಳುತ್ತದೆ’ ಎಂದೂ ಅವರು ತಿಳಿಸಿದರು.
‘ಮರು ಪಾವತಿಯ ಅವಧಿ ಪೂರ್ಣಗೊಂಡು ಎರಡು ವರ್ಷ ಸುಸ್ತಿಯಾದರೆ  ಆ ಸಾಲವನ್ನು ಎನ್‌ಪಿಎ ಎಂದು ಪರಿಗಣಿಸಲಾಗುತ್ತದೆ. ಆದರೆ, ಕೃಷಿಯೇತರ ಉದ್ದೇಶಗಳಿಗೆ ಪಡೆದ ಸಾಲ, ವಸೂಲಾತಿ ಅವಧಿ ಮೀರಿದ 91 ದಿನಕ್ಕೆ ಎನ್‌ಪಿಎ ಆಗುತ್ತದೆ’ ಎಂದರು. ‘ಬರ ಪರಿಸ್ಥಿತಿಯಲ್ಲಿ ಸಾಲ ಮರುಪಾವತಿಗೆ ಒತ್ತಡ ಹೇರದಂತೆ ರಿಸರ್ವ್‌ ಬ್ಯಾಂಕ್‌  ಮಾರ್ಗಸೂಚಿ ಇದೆ’ ಎಂದೂ ಅವರು ಹೇಳಿದರು.

ADVERTISEMENT

‘ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ₹3 ಲಕ್ಷವರೆಗಿನ ಬೆಳೆ ಸಾಲಕ್ಕೆ ಶೇ 9ರಷ್ಟು ಬಡ್ಡಿ ದರ ವಿಧಿಸಲಾಗುತ್ತದೆ. ಆದರೆ, ರೈತರಿಗೆ ಸಾಲ ನೀಡುವ ಸಂದರ್ಭದಲ್ಲೇ ಬಡ್ಡಿ ದರದಲ್ಲಿ ಶೇ 2 ವಿನಾಯಿತಿ ನೀಡಲಾಗುತ್ತದೆ. ನಿಗದಿತ ಅವಧಿಯಲ್ಲಿ ಮರು ಪಾವತಿಸಿದರೆ ಬಡ್ಡಿಯಲ್ಲಿ ಹೆಚ್ಚುವರಿಯಾಗಿ ಶೇ 3ರಷ್ಟು ವಿನಾಯ್ತಿ ನೀಡಲಾಗುತ್ತದೆ’ ಎಂದರು.

‘₹1 ಲಕ್ಷದವರೆಗೆ ಸಾಲ ಪಡೆದ ಸಣ್ಣ ರೈತರಿಗೆ ರಾಜ್ಯ ಸರ್ಕಾರದಿಂದ ಶೇ 1ರಷ್ಟು ವಿನಾಯಿತಿ ಸಿಗುತ್ತದೆ. ಹೀಗಾಗಿ ₹ 1 ಲಕ್ಷ ಸಾಲ ಪಡೆದವರು ನಿಗದಿತ ಅವಧಿಯಲ್ಲಿ ಮರುಪಾವತಿಸಿದರೆ ಒಟ್ಟು ಶೇ 6 ಬಡ್ಡಿ ವಿನಾಯಿತಿ ಸಿಗುವುದರಿಂದ ಶೇ 3ರಷ್ಟು ಬಡ್ಡಿ ಪಾವತಿಸಿದರೆ ಸಾಕು’ ಎಂದೂ ಅವರು ಹೇಳಿದರು.

ಅಂಕಿ-ಅಂಶ

₹89,571 ಕೋಟಿ-  ವಸೂಲಾತಿಗೆ ಬಾಕಿ ಇರುವ ಒಟ್ಟು ಕೃಷಿ ಸಾಲ

₹57ಸಾವಿರ ಕೋಟಿ -2015–16ರಲ್ಲಿ ವಿತರಿಸಿದ ಸಾಲ

₹14,942 ಕೋಟಿ-ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಕೃಷಿ ಸಾಲ ಸುಸ್ತಿ

85 ಲಕ್ಷ-  2015–16ರಲ್ಲಿ ಸಾಲ ಪಡೆದ ರೈತರು

₹5,575 ಕೋಟಿ -ವಸೂಲಾಗದ ಕೃಷಿ ಸಾಲ (ಎನ್‌ಪಿಎ)

₹86 ಸಾವಿರ ಕೋಟಿ -2017–18ರ ಸಾಲಿನ ಬೆಳೆ ಸಾಲ ಗುರಿ

ಬೆಳಗಾವಿಗೆ ಮೊದಲ ಸ್ಥಾನ
ಪ್ರಸಕ್ತ ವರ್ಷ ಮುಂಗಾರು ಮತ್ತು ಹಿಂಗಾರು ಮಳೆಯೂ ಕೈಕೊಟ್ಟಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ರೈತರು ಪ್ರಧಾನಮಂತ್ರಿ ಫಸಲ್‌ ಬಿಮಾ ಯೋಜನೆ  ಕಡೆಗೆ ವಾಲಿದ್ದಾರೆ. 11.75 ಲಕ್ಷ ರೈತರು ಈ ವಿಮೆ ಯೋಜನೆಯಲ್ಲಿ ಹೆಸರು ನೋಂದಾಯಿಸಿಕೊಂಡಿದ್ದು, ಈ ಪಟ್ಟಿಯಲ್ಲಿ ಬೆಳಗಾವಿ ಜಿಲ್ಲೆ ಮೊದಲ ಸ್ಥಾನದಲ್ಲಿದೆ’ ಎಂದೂ ಕುಮಾರಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.