ADVERTISEMENT

ಬೇಡಿಕೆ ಕಳೆದುಕೊಂಡ ಕೆಂಪಡಿಕೆ

ಸಂಧ್ಯಾ ಹೆಗಡೆ
Published 24 ಮೇ 2016, 19:30 IST
Last Updated 24 ಮೇ 2016, 19:30 IST
ಶಿರಸಿ ಟಿಎಸ್‌ಎಸ್‌ ಹೊರ ಆವರಣದಲ್ಲಿ ರೈತರು ಮಾರಾಟಕ್ಕೆ ಇಟ್ಟಿರುವ ಅಡಿಕೆ
ಶಿರಸಿ ಟಿಎಸ್‌ಎಸ್‌ ಹೊರ ಆವರಣದಲ್ಲಿ ರೈತರು ಮಾರಾಟಕ್ಕೆ ಇಟ್ಟಿರುವ ಅಡಿಕೆ   

ಶಿರಸಿ: ವರ್ಷದ ಹಿಂದೆ ಕ್ವಿಂಟಲ್‌ ಒಂದಕ್ಕೆ ಲಕ್ಷ ರೂಪಾಯಿ ಸನಿಹ ಬೆಲೆ ಕಂಡಿದ್ದ ಕೆಂಪಡಿಕೆಯನ್ನು ಈಗ ಕೇಳುವವರಿಲ್ಲದಂತಾಗಿದೆ. ಇದರಿಂದ, ಸಹಕಾರಿ ಸಂಸ್ಥೆಗಳ ಗೋದಾಮಿನಲ್ಲಿ ರೈತರಿಂದ ಖರೀದಿಸಿರುವ ಮಹಸೂಲು ದೊಡ್ಡ ಪ್ರಮಾಣದಲ್ಲಿ ಶೇಖರಣೆಯಾಗಿದೆ.

ಹಂಗಾಮಿನ ಆರಂಭದ ಜನವರಿಯಲ್ಲಿ ಕ್ವಿಂಟಲ್‌ ಒಂದಕ್ಕೆ ಸರಾಸರಿ ₹ 30 ಸಾವಿರ  ಇದ್ದ ಕೆಂಪಡಿಕೆ, ಈಗ ಕನಿಷ್ಠ ₹ 22,500ರಿಂದ ಗರಿಷ್ಠ ₹ 24,500ಕ್ಕೆ ಮಾರಾಟವಾಗುತ್ತಿದೆ. ಅಧಿಕ ಉತ್ಪಾದನೆ, ಗುಜರಾತ್‌ನಲ್ಲಿ ವ್ಯಾಟ್ ಹೆಚ್ಚಳ, ಖರೀದಿಗೆ ಹೊರ ರಾಜ್ಯಗಳ ನಿರಾಸಕ್ತಿ, ಬರ ಪರಿಸ್ಥಿತಿಯಿಂದಾಗಿ ಉತ್ತರ ಕರ್ನಾಟಕ ಹಾಗೂ ರಾಜಸ್ತಾನದಲ್ಲಿ ತಗ್ಗಿದ ಬೇಡಿಕೆ ಇವೆಲ್ಲ ಕೆಂಪಡಿಕೆ ನಿರ್ಲಕ್ಷ್ಯಕ್ಕೊಳಗಾಗಲು ಕಾರಣ ಎನ್ನುತ್ತಾರೆ ಮಾರುಕಟ್ಟೆ ತಜ್ಞರು.

‘ಅಡಿಕೆ ಪ್ರಮುಖ ಬೆಳೆಯಾಗಿರುವ ಶಿರಸಿ, ಸಿದ್ದಾಪುರ, ಯಲ್ಲಾಪುರ ಭಾಗದಲ್ಲಿ ಅಂದಾಜು 1.5 ಲಕ್ಷ ಕ್ವಿಂಟಲ್‌ ಕೆಂಪಡಿಕೆ ಸಿಗುತ್ತದೆ. ಇದರಲ್ಲಿ ತೋಟಗಾರ್‌ ಸೇಲ್ಸ್‌ ಸೊಸೈಟಿ (ಟಿಎಸ್‌ಎಸ್‌) ಸುಮಾರು 25 ಸಾವಿರ ಕ್ವಿಂಟಲ್ ಖರೀದಿಸುತ್ತದೆ. ಇದರಲ್ಲಿ 12ಸಾವಿರ ಕ್ವಿಂಟಲ್‌ ಸಿಹಿ ಅಡಿಕೆ ಪುಡಿ ತಯಾರಿಕೆಗೆ ಬಳಸಿಕೊಂಡು, ಉಳಿದಿರುವುದನ್ನು  ಹೊರರಾಜ್ಯಗಳಿಗೆ ಮಾರಾಟ ಮಾಡುತ್ತದೆ. ಈ ವರ್ಷ ಕೇವಲ 1500ಕ್ವಿಂಟಲ್ ಮಾತ್ರ ಖರ್ಚಾಗಿದ್ದು, ಇನ್ನುಳಿದ ಮಾಲು ಸಂಸ್ಥೆಯ ಗೋದಾಮಿನಲ್ಲಿದೆ’ ಎನ್ನುತ್ತಾರೆ ಟಿಎಸ್‌ಎಸ್‌ ಅಧ್ಯಕ್ಷ ಶಾಂತಾರಾಮ ಹೆಗಡೆ.

‘ಕೆಂಪಡಿಕೆ ಆವಕ ಹೆಚ್ಚಿರುವ ಜನವರಿಯಿಂದ ಮಾರ್ಚ್‌ವರೆಗೆ ಹಿಂದಿನ ವರ್ಷ ಸುಮಾರು 27ಸಾವಿರ ಕ್ವಿಂಟಲ್ ಉತ್ಪನ್ನ ಮಾರುಕಟ್ಟೆಗೆ ಬಂದಿತ್ತು. ಈ ವರ್ಷ ಶೇ 30ರಷ್ಟು ಹೆಚ್ಚು ಮಹಸೂಲು ಮಾರಾಟಕ್ಕೆ ಬಂದಿದೆ. ಅಡಿಕೆ ಬೆಳೆಯುವ ಶಿವಮೊಗ್ಗ, ಚನ್ನಗಿರಿ, ಮಂಗಳೂರಿನಲ್ಲಿ ಹಿಂದಿನ ವರ್ಷದ ಸಂಗ್ರಹ ಈಗ ಖಾಲಿಯಾಗುತ್ತಿದೆ. ಹೊಸ ಉತ್ಪನ್ನ ಗೋದಾಮಿನಲ್ಲಿ ದಾಸ್ತಾನುಗೊಂಡಿದೆ. ಮುಂದಿನ ಸಾಲಿನ ಬೆಳೆ ಬರುವ ವೇಳೆಗೆ ಈ ಸಂಗ್ರಹ ಖಾಲಿಯಾದರೆ ಮಾತ್ರ ಒಳ್ಳೆಯ ದರ ಸಿಗಲು ಸಾಧ್ಯವಾಗುತ್ತದೆ’ ಎನ್ನುತ್ತಾರೆ ಟಿಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ ರವೀಶ ಹೆಗಡೆ.

‘ಉತ್ತರ ಕನ್ನಡದಲ್ಲಿ ಉತ್ತಮ ಬೆಳೆ ಇದ್ದಾಗ ಇನ್ನುಳಿದ ಅಡಿಕೆ ಬೆಳೆಯುವ ಪ್ರದೇಶಗಳಲ್ಲಿ ಬೆಳೆ ಕಡಿಮೆ ಇರುತ್ತಿತ್ತು. ಈ ಬಾರಿ ಎಲ್ಲೆಡೆ ಬಂಪರ್ ಬೆಳೆ ಬಂದ ಪರಿಣಾಮ ಕೆಂಪಡಿಕೆಗೆ ಬೇಡಿಕೆ ತಗ್ಗಿದೆ. ಉತ್ತರ ಕರ್ನಾಟಕ ಭಾಗದಲ್ಲಿ ಕೆಂಪಡಿಕೆ ಪಾನ್‌ ಮಸಾಲಾಕ್ಕೆ ಬಳಕೆಯಾಗುತ್ತಿತ್ತು. ಈ ಬಾರಿ ಬರದ ಪರಿಣಾಮ ಖರೀದಿದಾರರು ಕಡಿಮೆಯಾಗಿದ್ದಾರೆ’ ಎಂದು ಅವರು ಅಭಿಪ್ರಾಯಪಟ್ಟರು.

ಮಾಲು ಖಾಲಿ ಮಾಡುವವನೇ ಜಾಣ : ‘ಚಾಲಿ ಅಡಿಕೆ ಉತ್ಪಾದನೆ ಸಹ ಅಧಿಕವಾಗಿದೆ. ಅದರಲ್ಲಿ ರೈತರು ಶೇ 25ರಷ್ಟು ಕೆಂಪಡಿಕೆಗೆ ಬಳಸಿ ಉಳಿದಿರುವುದನ್ನು ಚಾಲಿ ತಯಾರಿಸಿದ್ದಾರೆ. ಬೆಳೆ ಸಾಲ ತುಂಬುವ ಅವಧಿ ಇದಾಗಿದ್ದರಿಂದ ಮಾರುಕಟ್ಟೆಯಲ್ಲಿ ಆವಕ ಹೆಚ್ಚಾಗಿದೆ. ಹೊಸ ಚಾಲಿ ದರ ಕ್ವಿಂಟಲ್‌ಗೆ ಕನಿಷ್ಠ ₹18ಸಾವಿರದಿಂದ ಗರಿಷ್ಠ ₹20,700, ಹಳೆ ಚಾಲಿ ಕನಿಷ್ಠ ₹24,200 ರಿಂದ ₹ 25,600 ದರ ನಡೆಯುತ್ತಿದೆ. ಈಗಿರುವ ದರದಲ್ಲಿ ಉತ್ಪನ್ನ ಮಾರಾಟ ಮಾಡಲು ಬೆಳೆಗಾರರು ಮುಂದಾಗಬೇಕು. ಮುಂದಿನ ಬೆಳೆ ಮಾರುಕಟ್ಟೆ ಪ್ರವೇಶಿಸುವ ಮುನ್ನ ಪ್ರಸಕ್ತ ಸಾಲಿನ ಅಡಿಕೆ ಸಂಪೂರ್ಣ ಖಾಲಿಯಾಗಬೇಕು’ ಎಂದು ಅವರು ಹೇಳಿದರು.

* ಅಡಿಕೆ ಬೆಳೆಗಾರರು ಹಂತ ಹಂತವಾಗಿ ಉತ್ಪನ್ನಗಳನ್ನು ಮಾರಾಟ ಮಾಡಿದರೆ ಸರಾಸರಿ ಬೆಲೆ ಸಿಗುತ್ತದೆ. ಇದರಿಂದ ನಷ್ಟ ಅನುಭವಿಸುವ ಸಂದರ್ಭ ಇರುವುದಿಲ್ಲ.
-ರವೀಶ ಹೆಗಡೆ
ಟಿಎಸ್‌ಎಸ್‌ ಪ್ರಧಾನ ವ್ಯವಸ್ಥಾಪಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.