ADVERTISEMENT

ಬೇಳೆಕಾಳು ರಫ್ತು ನಿರ್ಬಂಧ ತೆರವು

ಪಿಟಿಐ
Published 16 ನವೆಂಬರ್ 2017, 19:27 IST
Last Updated 16 ನವೆಂಬರ್ 2017, 19:27 IST
ರವಿ ಶಂಕರ ಪ್ರಸಾದ್‌
ರವಿ ಶಂಕರ ಪ್ರಸಾದ್‌   

ನವದೆಹಲಿ: ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧವನ್ನು ಕೇಂದ್ರ ಸರ್ಕಾರವು ತೆರವುಗೊಳಿಸಿದೆ.

ರೈತರು ತಾವು ಬೆಳೆದ ಫಸಲಿಗೆ ಉತ್ತಮ ಬೆಲೆ ಪಡೆಯಬೇಕು ಎನ್ನುವ ಉದ್ದೇಶಕ್ಕೆ ಈ ನಿರ್ಬಂಧ ರದ್ದುಪಡಿಸಲಾಗಿದೆ.

‘ಎಲ್ಲ ಬಗೆಯ ಬೇಳೆಕಾಳುಗಳ ರಫ್ತಿಗೆ ಮುಕ್ತ ಅವಕಾಶ ಮಾಡಿಕೊಡುವುದರಿಂದ ರೈತರು ತನ್ನ ಫಸಲಿಗೆ ನ್ಯಾಯಯುತ ಬೆಲೆ ಪಡೆಯಲು ಮತ್ತು ಬೇಳೆಕಾಳು ಬೆಳೆಯುವ ಪ್ರದೇಶ ವಿಸ್ತರಿಸಲು ಉತ್ತೇಜನ ದೊರೆಯಲಿದೆ’ ಎಂದು ಐ.ಟಿ ಮತ್ತು ಕಾನೂನು ಸಚಿವ ರವಿ ಶಂಕರ್ ಪ್ರಸಾದ್‌ ಅವರು ಗುರುವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ‘ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ’ ಎಂದರು.

ADVERTISEMENT

‘ತಮ್ಮ ಉತ್ಪನ್ನಗಳನ್ನು ಮಾರಾಟ ಮಾಡಲು ರೈತರಿಗೆ ವ್ಯಾಪಕ ಅವಕಾಶಗಳನ್ನು ಒದಗಿಸಿಕೊಡಲು ಎಲ್ಲ ಬಗೆಯ ಬೇಳೆಕಾಳುಗಳ ಮೇಲಿನ ರಫ್ತು ನಿರ್ಬಂಧ ರದ್ದುಪಡಿಸಲಾಗಿದೆ. ಬೇಳೆಕಾಳುಗಳ ಆಮದು ಮತ್ತು ರಫ್ತು ಕುರಿತು ಕಾಲ ಕಾಲಕ್ಕೆ ಸೂಕ್ತ ನಿರ್ಧಾರಕ್ಕೆ ಬರಲು ಆಹಾರ ಮತ್ತು ಸಾರ್ವಜನಿಕ ವಿತರಣಾ ಕಾರ್ಯದರ್ಶಿ ನೇತೃತ್ವದಲ್ಲಿನ ಸಮಿತಿಗೆ ಅಧಿಕಾರ ನೀಡಲು ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿತಿಯು ತೀರ್ಮಾನಿಸಿದೆ.

‘ದೇಶಿ ಉತ್ಪಾದನೆ, ಬೇಡಿಕೆ, ಸ್ಥಳೀಯ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿನ ಬೆಲೆ ಮಟ್ಟ, ಜಾಗತಿಕ ವ್ಯಾಪಾರ ಪ್ರಮಾಣ ಪರಿಗಣಿಸಿ ನಿರ್ಬಂಧ ವಿಧಿಸುವ, ಆಮದು ಸುಂಕದಲ್ಲಿ ಬದಲಾವಣೆ ತರುವ ಅಧಿಕಾರವನ್ನು ಈ ಸಮಿತಿಗೆ ನೀಡಲಾಗಿದೆ.ರಫ್ತು ನಿರ್ಬಂಧ ರದ್ದಾಗಿರುವುದರಿಂದ ವಿದೇಶಿ ಮಾರುಕಟ್ಟೆಗೆ ಸರಕು ಪೂರೈಸಲು ರಫ್ತುದಾರರಿಗೆ ಸುಲಭವಾಗಲಿದೆ’ ಎಂದು ಅವರು ಹೇಳಿದರು.

**

ರಫ್ತಿನಿಂದಾಗಿ ಬೇಳೆಕಾಳುಗಳ ಹೆಚ್ಚುವರಿ ಉತ್ಪಾದನೆಗೆ ವಿಶ್ವದಾದ್ಯಂತ ಪರ್ಯಾಯ ಮಾರುಕಟ್ಟೆ ದೊರೆಯಲಿದೆ.

–ರವಿ ಶಂಕರ್ ಪ್ರಸಾದ್‌, ಐ.ಟಿ ಮತ್ತು ಕಾನೂನು ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.