ADVERTISEMENT

ಬೋರ್ಡ್‌ರೂಂ ಕಲಹ ಇಲ್ಲ ಇನ್ಫೊಸಿಸ್‌ ಅಧ್ಯಕ್ಷರ ಸ್ಪಷ್ಟನೆ

​ಪ್ರಜಾವಾಣಿ ವಾರ್ತೆ
Published 24 ಜೂನ್ 2017, 19:30 IST
Last Updated 24 ಜೂನ್ 2017, 19:30 IST
ಇನ್ಫೊಸಿಸ್‌ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿ ಅಧ್ಯಕ್ಷ ಆರ್‌. ಶೇಷಸಾಯಿ ಮತ್ತು ಸಿಇಒ ವಿಶಾಲ್‌ ಸಿಕ್ಕಾ   ಪ್ರಜಾವಾಣಿ ಚಿತ್ರ
ಇನ್ಫೊಸಿಸ್‌ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಕಂಪೆನಿ ಅಧ್ಯಕ್ಷ ಆರ್‌. ಶೇಷಸಾಯಿ ಮತ್ತು ಸಿಇಒ ವಿಶಾಲ್‌ ಸಿಕ್ಕಾ ಪ್ರಜಾವಾಣಿ ಚಿತ್ರ   

ಬೆಂಗಳೂರು: ಇನ್ಫೊಸಿಸ್‌ನಲ್ಲಿ ಬೋರ್ಡ್‌ರೂಂ ಕಲಹ ಇಲ್ಲ ಎಂದು ಕಂಪೆನಿ ಅಧ್ಯಕ್ಷ ಆರ್‌. ಶೇಷಸಾಯಿ ಸ್ಪಷ್ಟಪಡಿಸಿದರು.
ಸ್ಥಾಪಕರು ಮತ್ತು ನಿರ್ದೇಶಕ ಮಂಡಳಿ ನಡುವಣ ಕಲಹ ಇದೆ ಎನ್ನುವ ವರದಿಯನ್ನು ತಳ್ಳಿಹಾಕಿದ ಅವರು, ‘ಸ್ಥಾಪಕರ ಸಲಹೆಗಳನ್ನು ಕಂಪೆನಿ ಗಂಭೀರವಾಗಿ ಪರಿಗಣಿಸುತ್ತಿದೆ.  ಎನ್‌.ಆರ್‌.ನಾರಾಯಣ ಮೂರ್ತಿ ಸೇರಿದಂತೆ ಎಲ್ಲಾ ಸಹ ಸ್ಥಾಪಕರೊಂದಿಗೆ ಉತ್ತಮ ಸಂಬಂಧವಿದೆ’  ಎಂದರು.
ಶನಿವಾರ ಇಲ್ಲಿ ನಡೆದ 36ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ   ಮಾತನಾಡಿದ ಅವರು, ‘ಪ್ರಮುಖ ಹೂಡಿಕೆದಾರರು, ಅದರಲ್ಲೂ ಮುಖ್ಯವಾಗಿ ಸ್ಥಾಪಕರೊಂದಿಗೆ ಆಡಳಿತ ಮಂಡಳಿ ನಿರಂತರವಾಗಿ ಸಂರ್ಪಕದಲ್ಲಿರಲಿದೆ’ ಎಂದು ಹೇಳಿದರು.

ಹಿನ್ನೆಲೆ: ಕಳೆದ ಕೆಲವು ತಿಂಗಳಿನಿಂದ ಕಂಪೆನಿಯಲ್ಲಿ ಬೋರ್ಡ್‌ರೂಂ ಕಲಹ ತೀವ್ರಗೊಂಡಿತ್ತು. ನಿರ್ದೇಶಕ  ಮಂಡಳಿಯ ಕಾರ್ಯವೈಖರಿ ಬಗ್ಗೆ ಸಂಸ್ಥೆಯ ಪ್ರವರ್ತಕರು ಬಹಿರಂಗವಾಗಿಯೇ ತಮ್ಮ  ಅತೃಪ್ತಿ ಹೊರ ಹಾಕಿದ್ದರು. ಪಾರದರ್ಶಕ ಕಾರ್ಪೊರೇಟ್‌ ಆಡಳಿತಕ್ಕೆ ಹೆಸರಾಗಿದ್ದ ಸಂಸ್ಥೆಯಲ್ಲಿ ಕೈಗೊಂಡ ಕೆಲವು ನಿರ್ಧಾರಗಳು ಸಮಂಜಸವಾಗಿಲ್ಲ. ಷೇರುದಾರರ ಹಿತಾಸಕ್ತಿಗೆ ಮಾರಕವಾಗಿವೆ. ಸ್ವಾಧೀನ ಪ್ರಕ್ರಿಯೆ ಮತ್ತು ಉನ್ನತ ಅಧಿಕಾರಿಗಳ ವೇತನ ನಿಗದಿಯಲ್ಲಿ ಮಾನದಂಡಗಳನ್ನು ಗಾಳಿಗೆ ತೂರಲಾಗಿದೆ. ಕೆಲವರ ಬಾಯಿ ಮುಚ್ಚಿಸಲು ಹಣ ಪಾವತಿಸಲಾಗಿದೆ. ಷೇರುದಾರರಿಗೆ ಸೇರಿದ ಹಣವನ್ನು ಬೇಕಾಬಿಟ್ಟಿಯಾಗಿ ವೆಚ್ಚ ಮಾಡಲಾಗುತ್ತಿದೆ ಎಂದು ಸಂಸ್ಥೆಯ ಸಹ ಸ್ಥಾಪಕರು ತಮ್ಮ ಕಳವಳ ವ್ಯಕ್ತಪಡಿಸಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿತ್ತು.

ಕೊನೆಯ ಸಭೆ: ‘ಇದು ನನ್ನ ಕೊನೆಯ ವಾರ್ಷಿಕ ಸಾಧಾರಣ ಸಭೆ (ಎಜಿಎಂ). ಮುಂದಿನ ವರ್ಷ ನಾನು ನಿವೃತ್ತಿಯಾಗಲಿದ್ದೇನೆ. ಹೀಗಾಗಿ ಯಾವುದೇ ರೀತಿಯ ಸಮಸ್ಯೆಗಳಿಲ್ಲದೆ ನನ್ನ ನಂತರದವರಿಗೆ ಅಧಿಕಾರ ವರ್ಗಾಯಿಸಲು ಬಯಸುತ್ತೇನೆ’ ಎಂದು ಶೇಷಸಾಯಿ ತಿಳಿಸಿದರು.
‘2018ರ ಮೇ ತಿಂಗಳಿನಲ್ಲಿ ನಿವೃತ್ತಿಯಾಗಲಿದ್ದೇನೆ. ಆ ಅವಧಿಯೊಳಗೆ ಕಂಪೆನಿಯ ಆಡಳಿತ ವ್ಯವಸ್ಥೆಯಲ್ಲಿ  ಇನ್ನಷ್ಟು ಸುಧಾರಿಸುವುದು ಮತ್ತು  ಷೇರುದಾರರ ಘನತೆ ಹೆಚ್ಚಿಸುವ ಕೆಲಸದಲ್ಲಿ ತೊಡಗಿಕೊಳ್ಳಲು ಬಯಸುತ್ತೇನೆ’ ಎಂದರು.

ADVERTISEMENT

ಕಂಪೆನಿಯು ಪರಿವರ್ತನೆ ಹೊಂದುವ ಅವಧಿಯಲ್ಲಿ ಸೇವೆ ಸಲ್ಲಿಸಲು ಅವಕಾಶ ಕಲ್ಪಿಸಿದ್ದಕ್ಕಾಗಿ ಸ್ಥಾಪಕರು, ಸಹೋದ್ಯೋಗಿಗಳು, ಆಡಳಿತ ಮಂಡಳಿ ಸದಸ್ಯರು ಮತ್ತು ಷೇರುದಾರರಿಗೆ ಕೃತಜ್ಞತೆ ಸಲ್ಲಿಸಿದರು. ಸವಾಲಿನ ಸಂದರ್ಭದಲ್ಲಿ ನನ್ನ ನಾಯಕತ್ವದ ಬಗ್ಗೆ ವಿಶ್ವಾಸ ಇಟ್ಟುಕೊಂಡಿರುವ ಎಲ್ಲರಿಗೂ ನಾನು ಅಭಾರಿಯಾಗಿದ್ದೇನೆ ಎಂದರು.

ಷೇರುದಾರರಿಗೆ ₹13 ಸಾವಿರ ಕೋಟಿ: ಕಂಪೆನಿ ಬಳಿಯಲ್ಲಿ ಇರುವ ₹13 ಸಾವಿರ ಕೋಟಿ ಹೆಚ್ಚುವರಿ ನಗದನ್ನು ಷೇರುದಾರರಿಗೆ ಮರಳಿಸುವುದು ಹೇಗೆ ಎನ್ನುವ ಬಗ್ಗೆ ಶೀಘ್ರವೇ ಅಂತಿಮ ನಿರ್ಧಾರಕ್ಕೆ ಬರಲಾಗುವುದು ಎಂದು ಕಂಪೆನಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.