ADVERTISEMENT

ಬ್ಯಾಂಕ್‌ಗಳ ಬಲವರ್ಧನೆಗೆ ಕ್ರಮ

ರಿಸರ್ವ್‌ ಬ್ಯಾಂಕ್‌ ಗವರ್ನರ್ ಉರ್ಜಿತ್ ಪಟೇಲ್‌ ಭರವಸೆ

ಪಿಟಿಐ
Published 19 ಆಗಸ್ಟ್ 2017, 19:30 IST
Last Updated 19 ಆಗಸ್ಟ್ 2017, 19:30 IST
ಉರ್ಜಿತ್ ಪಟೇಲ್‌
ಉರ್ಜಿತ್ ಪಟೇಲ್‌   

ಮುಂಬೈ: ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ (ಪಿಎಸ್‌ಬಿ) ಆರ್ಥಿಕ ಬಲವರ್ಧನೆಗೆ ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಜತೆಗೂಡಿ ಶೀಘ್ರವೇ ಹೊಸ ಪ್ಯಾಕೇಜ್ ಘೋಷಿಸಲಿವೆ ಎಂದು ಆರ್‌ಬಿಐ ಗವರ್ನರ್ ಉರ್ಜಿತ್‌ ಪಟೇಲ್ ಅವರು ತಿಳಿಸಿದರು.

ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಆರ್ಥಿಕ ಸ್ಥಿತಿ ದುರ್ಬಲವಾಗಿದೆ. ಹೀಗಾಗಿ ಮರು ಬಂಡವಾಳ ಒದಗಿಸುವ ತುರ್ತು ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭವಿಷ್ಯದಲ್ಲಿ ಎದುರಾಗಬಹುದಾದ ಆರ್ಥಿಕ ನಷ್ಟ ಭರಿಸಲು ತೆಗೆದಿರಿಸಬೇಕಾದ ಹಣದ ಪ್ರಮಾಣ ಹೆಚ್ಚುತ್ತಿದೆ. ಇದರಿಂದ ಬಹಳಷ್ಟು ಬ್ಯಾಂಕ್‌ಗಳಿಗೆ ಬಂಡವಾಳ ಕೊರತೆ ಎದುರಾಗುತ್ತಿದೆ. ಈ ಕಾರಣದಿಂದ ಗರಿಷ್ಠ ಪ್ರಮಾಣದಲ್ಲಿ ಮರು ಬಂಡವಾಳ ಒದಗಿಸುವ ಅನಿವಾರ್ಯತೆ ಎದುರಾಗಿದೆ ಎಂದು ವಿವರಿಸಿದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಆರ್ಥಿಕ ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.

ಬ್ಯಾಂಕ್‌ಗಳಿಗೆ ಬಂಡವಾಳ ಒದಗಿಸುವ ಬಗ್ಗೆ ಸರ್ಕಾರ ಮತ್ತು ಆರ್‌ಬಿಐ ಮಧ್ಯೆ ಮಾತುಕತೆ ನಡೆಯುತ್ತಿದೆ. ಬ್ಯಾಂಕ್‌ಗಳಿಗೆ ಎಷ್ಟು ಬಂಡವಾಳ ಅಗತ್ಯ ಇರುವ ಬಂಡವಾಳವನ್ನು ಹಂತ ಹಂತವಾಗಿ ವಿತರಿಸಲು ಅನುಕೂಲ ಆಗುವಂತೆ ಕ್ರಮಗಳನ್ನು ಕೈಗೊಳ್ಳಲಾಗುವುದು. ಮಾರುಕಟ್ಟೆಯಿಂದ ಬಂಡವಾಳ ಸಂಗ್ರಹಿಸುವುದು, ಬ್ಯಾಂಕ್‌ಗಳಲ್ಲಿ ಸರ್ಕಾರ ಹೊಂದಿರುವ ಷೇರುಪಾಲು ತಗ್ಗಿಸುವುದು, ಸರ್ಕಾರದಿಂದ ಹೆಚ್ಚುವರಿ ಬಂಡವಾಳ ನೆರವು, ವಿಲೀನ ಹೀಗೆ ಎಲ್ಲಾ ರೀತಿಯಲ್ಲಿಯೂ ಚರ್ಚೆ ನಡೆಯುತ್ತಿದೆ ಎಂದು ಅವರು ತಿಳಿಸಿದರು.

ಬ್ಯಾಂಕ್‌ ಬಂಡವಾಳವನ್ನುಸರಿಯಾದ ರೀತಿಯಲ್ಲಿ ಮರು ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಸುಸ್ತಿ ಸಾಲ ತಗ್ಗಿಸಲು ಬ್ಯಾಂಕ್‌ಗಳು ಮುಂದಾಗಬೇಕು ಎಂದು ಅವರು ಸಲಹೆ ನೀಡಿದ್ದಾರೆ.

ವಸೂಲಿಯಾಗದ ಸಾಲದ ಪ್ರಮಾಣ (ಎನ್‌ಪಿಎ) ₹8 ಲಕ್ಷ ಕೋಟಿಗಳಷ್ಟಿದೆ. ಇದರಲ್ಲಿ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳ ಪಾಲು ಶೇ 75 ರಷ್ಟಿದೆ.
*
ಕಂಪೆನಿ ರಕ್ಷಣೆಗೆ ದಿವಾಳಿ ಸಂಹಿತೆ
ನಷ್ಟದಲ್ಲಿರುವ ಕಂಪೆನಿಗಳ ವಹಿವಾಟು ಕೊನೆಗೊಳಿ ಸಬೇಕು ಎನ್ನುವುದು ಹಣಕಾಸು ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆಯ ಉದ್ದೇಶ ಅಲ್ಲ. ಕಂಪೆನಿಗಳು ಪುನಶ್ಚೇತನಕ್ಕೆ ಕ್ರಮ ಕೈಗೊಂಡು ಸಾಲ ಮರುಪಾವತಿ ಮಾಡುವುದನ್ನು ಇದು ಸರಳಗೊಳಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದರು.

ಈ ಹಿಂದೆ ಇದ್ದ ವ್ಯವಸ್ಥೆಯಲ್ಲಿ ಸಾಲ ನೀಡಿದವರು ಸಾಲ ಪ‍ಡೆದವರ ಬೆನ್ನು ಹತ್ತಬೇಕಾಗುತ್ತಿತ್ತು. ಅಷ್ಟಾದರೂ ಸಾಲ ವಸೂಲಿ ಆಗುತ್ತಿರಲಿಲ್ಲ. ಆದರೆ ಹೊಸ ವ್ಯವಸ್ಥೆಯಲ್ಲಿ ಸಾಲ ಮರುಪಾವತಿಸದೇ ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಕಂಪೆನಿ ಉಳಿಯಬೇಕು ಎಂದಾದರೆ ಸಾಲ ಹಿಂದಿರುಗಿಸಲೇ ಬೇಕು ಎಂದು ವಿವರಿಸಿದರು.

ಭಾರತೀಯ ಕೈಗಾರಿಕಾ ಒಕ್ಕೂಟ (ಸಿಐಐ) ಆಯೋಜಿಸಿದ್ದ ಆರ್ಥಿಕ ಪರಿಸ್ಥಿತಿ ಮತ್ತು ದಿವಾಳಿ ಸಂಹಿತೆ ಕುರಿತ ಸಮಾವೇಶದಲ್ಲಿ ಅವರು ಮಾತನಾಡಿದರು.

ADVERTISEMENT

ಸಾಲ ವಸೂಲಿಗಾಗಿ ಆಸ್ತಿ ಮಾರಾಟ ಮಾಡಿ ಕಂಪೆನಿಯನ್ನು ಸಂಪೂರ್ಣವಾಗಿ ದಿವಾಳಿ‌ ಮಾಡುವುದು ಸಂಹಿತೆಯ ಉದ್ದೇಶ ಅಲ್ಲ. ಕಂಪೆನಿಯ ವಹಿವಾಟು ಮುಂದುವರಿಸಿಕೊಂಡು ಹೋಗಲು ಹೊಸ ಪಾಲುದಾರರು ಅಥವಾ ಹೊಸ ಉದ್ಯಮಿಗಳ ನರವು ಪಡೆದುಕೊಳ್ಳಲು ಅವಕಾಶ ನೀಡಲಾಗಿದೆ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.