ADVERTISEMENT

ಬ್ಯಾಂಕ್‌ಗಳಿಂದ ಬಡ್ಡಿ ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2015, 19:30 IST
Last Updated 3 ಅಕ್ಟೋಬರ್ 2015, 19:30 IST

ನವದೆಹಲಿ (ಪಿಟಿಐ): ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೆ. 29ರಂದು ಶೇ 0.50ರಷ್ಟು ಬಡ್ಡಿ ಇಳಿಕೆ ಮಾಡಿದ ನಂತರ ಸರ್ಕಾರಿ ಮತ್ತು ಖಾಸಗಿ ವಲಯದ ಬ್ಯಾಂಕ್‌ಗಳು ಒಂದೊಂದಾಗಿಯೇ ಬಡ್ಡಿದರ ತಗ್ಗಿಸಲಾರಂಭಿಸಿವೆ.

ಸರ್ಕಾರಿ ಸ್ವಾಮ್ಯದ ಸಿಂಡಿಕೆಟ್‌ ಬ್ಯಾಂಕ್‌ ಮೂಲ ಬಡ್ಡಿಯಲ್ಲಿ ಶೇ 0.30 ರಷ್ಟು ತಗ್ಗಿಸಿದೆ ಇದರಿಂದ ಸಾಲದ ಮೇಲಿನ ಮೂಲಬಡ್ಡಿ ಶೇ 10ರಿಂದ ಶೇ 9.70ಕ್ಕೆ ಇಳಿದಿದೆ.

ಯುನೈಟೆಡ್‌ ಬ್ಯಾಂಕ್‌ ಆಫ್ ಇಂಡಿಯಾ ಅ.12ರಿಂದ ಅನ್ವಯಿಸುವಂತೆ ಸಾಲದ ಮೇಲಿನ ಬಡ್ಡಿಯನ್ನು ಶೇ 0.25ರಷ್ಟು ಇಳಿಸಲಿದೆ. ಇದರಿಂದ ಮೂಲಬಡ್ಡಿದರ ಶೇ 9.90 ರಿಂದ ಶೇ 9.65ರಷ್ಟಾಗಲಿದೆ.

ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ   ಅ.8ರಿಂದಲೇ ಜಾರಿಯಾಗುವಂತೆ ಶೇ 0.25ರಷ್ಟು ಬಡ್ಡಿ ತಗ್ಗಿಸಲಿದ್ದು, ಮೂಲಬಡ್ಡಿ ಶೇ 9.70ಕ್ಕೆ ಇಳಿಯಲಿದೆ.

ಠೇವಣಿ ಬಡ್ಡಿ: ಅಂತೆಯೇ ಸೆಂಟ್ರಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಅ.5ರಿಂದ ಅನ್ವಯಿಸುವಂತೆ 46 ರಿಂದ 269 ದಿನಗಳ ಠೇವಣಿಗಳ ಮೇಲಿನ ಬಡ್ಡಿ ಶೇ 0.50ರಷ್ಟು ಇಳಿಸಲಿದ್ದು. 269 ದಿನದಿಂದ ಮೂರು ವರ್ಷಗಳ ಅವಧಿಯ ಠೇವಣಿಗಳ ಬಡ್ಡಿ ಶೇ 0.25 ರಷ್ಟು ತಗ್ಗಲಿದೆ.

ಓರಿಯಂಟಲ್‌ ಬ್ಯಾಂಕ್‌ ಆಫ್‌ ಕಾಮರ್ಸ್‌ ಸಹ ಅ.5ರಿಂದ ಜಾರಿಯಾಗುವಂತೆ ಕೆಲವು ಅವಧಿ ಠೇವಣಿ ಬಡ್ಡಿದರ ಶೇ 0.25ರಷ್ಟು ಕಡಿಮೆ ಮಾಡಿದೆ. ಯೂನಿಯನ್‌ ಬ್ಯಾಂಕ್‌ ಆಫ್‌ ಇಂಡಿಯಾ ಶೇ 0.35ರಷ್ಟು ಸಾಲದ ಬಡ್ಡಿ ತಗ್ಗಿಸಿದ್ದು, ಮೂಲಬಡ್ಡಿ ಶೇ 9.65 ಕ್ಕಿಳಿಯಲಿದೆ. ಅ.5ರಿಂದ ಪರಿಷ್ಕೃತ ದರ ಅನ್ವಯಿಸಲಿದೆ ಎಂದು ಬ್ಯಾಂಕ್‌ ಪ್ರಕಟಣೆ ತಿಳಿಸಿದೆ.

ಇಂಡಿಯನ್‌ ಬ್ಯಾಂಕ್‌ ಕೂಡಾ ಅ.7ರಿಂದ ಅನ್ವಯಿಸುವಂತೆ ಶೇ 0.30 ರಷ್ಟು ಬಡ್ಡಿ ಇಳಿಸಲಿದೆ. ಇದರಿಂದ ಸಾಲದ ಬಡ್ಡಿದರ ಶೇ 9.65ಕ್ಕೆ ಇಳಿಕೆಯಾಗಲಿದೆ.

ವಿಜಯ ಬ್ಯಾಂಕ್‌ ಅ.8ರಿಂದ ಅನ್ವಯಿಸುವಂತೆ ಮೂಲಬಡ್ಡಿ ಶೇ 0.20ರಷ್ಟು ತಗ್ಗಿಸಿದ್ದು, ಸಾಲದ ಮೇಲಿನ ಬಡ್ಡಿದರವು ಶೇ 9.85 ರಿಂದ ಶೇ 9.65ಕ್ಕೆ ಇಳಿಯಲಿದೆ.

ಖಾಸಗಿ ವಲಯದ ಕರೂರ್‌ ವೈಶ್ಯ ಬ್ಯಾಂಕ್‌ ಮೂಲ ಬಡ್ಡಿದರವನ್ನು ಶೇ 0.35 ತಗ್ಗಿಸಿದ್ದು, ಸಾಲದ ಮೇಲಿನ ಬಡ್ಡಿದರ ಶೇ 10.40ಕ್ಕೆ ಇಳಿದಿದೆ.

ಈಗಾಗಲೇ ಸರ್ಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್‌ ಬ್ಯಾಂಕ್‌ (ಎಸ್‌ಬಿಐ)  ಸಿಂಡಿಕೇಟ್‌ ಮತ್ತು ಐಸಿಐಸಿಐ ಬ್ಯಾಂಕ್‌  ಸಾಲದ ಬಡ್ಡಿ ಇಳಿಕೆ ಮಾಡಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.