ADVERTISEMENT

ಬ್ಯಾಂಕ್‌ ವಿಲೀನಕ್ಕೆ ಸಂಪುಟ ಅಸ್ತು

ಪಿಟಿಐ
Published 15 ಫೆಬ್ರುವರಿ 2017, 19:30 IST
Last Updated 15 ಫೆಬ್ರುವರಿ 2017, 19:30 IST
ಬ್ಯಾಂಕ್‌ ವಿಲೀನಕ್ಕೆ ಸಂಪುಟ ಅಸ್ತು
ಬ್ಯಾಂಕ್‌ ವಿಲೀನಕ್ಕೆ ಸಂಪುಟ ಅಸ್ತು   

ನವದೆಹಲಿ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ  (ಎಸ್‌ಬಿಐ)  ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನಕ್ಕೆ ಕೇಂದ್ರ ಸಚಿವ ಸಂಪುಟವು ಬುಧವಾರ ತನ್ನ ಹಸಿರು ನಿಶಾನೆ ತೋರಿಸಿದೆ.

‘ಸಂಪುಟವು ಈ ಮೊದಲೇ  ಎಸ್‌ಬಿಐನಲ್ಲಿ ಈ ಬ್ಯಾಂಕ್‌ಗಳ  ವಿಲೀನ ಪ್ರಸ್ತಾವಕ್ಕೆ   ತನ್ನ ತಾತ್ವಿಕ ಒಪ್ಪಿಗೆ ನೀಡಿತ್ತು. ಈ ಪ್ರಸ್ತಾವಕ್ಕೆ   ಬ್ಯಾಂಕ್‌ಗಳ ನಿರ್ದೇಶಕ ಮಂಡಳಿಗಳು ತಮ್ಮ  ಅಂಗೀಕಾರ ನೀಡಿ  ಕೇಂದ್ರ ಸರ್ಕಾರಕ್ಕೆ  ಶಿಫಾರಸು ಮಾಡಿದ್ದವು. ಈ ಶಿಫಾರಸುಗಳನ್ನು ಪರಿಗಣಿಸಿದ ಸಂಪುಟವು ಈಗ ವಿಲೀನಕ್ಕೆ ಅಂತಿಮ ಒಪ್ಪಿಗೆ ನೀಡಿದೆ. ವಿಲೀನ ಪ್ರಕ್ರಿಯೆ ಸುಸೂತ್ರವಾಗಿ ನಡೆಯಲಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ ತಿಳಿಸಿದ್ದಾರೆ.

ವಿಲೀನ ಪ್ರಕ್ರಿಯೆ ಯಾವ ದಿನದಿಂದ ಜಾರಿಗೆ ಬರಲಿದೆ ಎನ್ನುವುದರ ಬಗ್ಗೆ ಜೇಟ್ಲಿ ಅವರು ಹೆಚ್ಚಿನ ವಿವರ ನೀಡಲಿಲ್ಲ.

ದೇಶದ ಅತಿ ದೊಡ್ಡ ಬ್ಯಾಂಕ್‌ ಆಗಿರುವ ಎಸ್‌ಬಿಐಗೆ –  ಸ್ಟೇಟ್‌ ಬ್ಯಾಂಕ್‌ ಆಫ್‌ ಬಿಕಾನೇರ್ ಆ್ಯಂಡ್‌ ಜೈಪುರ, ಸ್ಟೇಟ್‌ ಬ್ಯಾಂಕ್‌ ಆಫ್‌ ಟ್ರವಾಂಕೂರ್‌, ಸ್ಟೇಟ್‌ ಬ್ಯಾಂಕ್‌ ಆಫ್‌ ಪಟಿಯಾಲಾ, ಸ್ಟೇಟ್‌ ಬ್ಯಾಂಕ್‌ ಆಫ್‌ ಮೈಸೂರು ಮತ್ತು ಸ್ಟೇಟ್‌ ಬ್ಯಾಂಕ್‌ ಆಫ್‌ ಹೈದರಾಬಾದ್‌ –ಸಹವರ್ತಿ ಬ್ಯಾಂಕ್‌ಗಳಿವೆ.

‘ವಿಲೀನದಿಂದಾಗಿ ಎಸ್‌ಬಿಐ, ದೇಶದ ಅತಿದೊಡ್ಡ  ಮತ್ತು ಜಾಗತಿಕ ಮಟ್ಟದ ಬ್ಯಾಂಕ್‌ ಆಗಲಿದೆ.  ಇದರಿಂದ ಬ್ಯಾಂಕಿಂಗ್‌ ವಹಿವಾಟಿನಲ್ಲಿ  ದಕ್ಷತೆ ಹೆಚ್ಚಲಿದೆ. ಬ್ಯಾಂಕ್‌ಗಳ ಕಾರ್ಯನಿರ್ವಹಣಾ ವೆಚ್ಚ ಮತ್ತು ಠೇವಣಿಗಳ ಮೇಲಿನ ವೆಚ್ಚ  ಕಡಿತವಾಗಲಿದೆ’ ಎಂದು ಜೇಟ್ಲಿ ಹೇಳಿದ್ದಾರೆ.

ಸದ್ಯಕ್ಕೆ 36 ದೇಶಗಳಲ್ಲಿನ 191 ಶಾಖೆಗಳೂ ಸೇರಿದಂತೆ  ಒಟ್ಟು 16,500 ಶಾಖೆಗಳನ್ನು ಎಸ್‌ಬಿಐ ಹೊಂದಿದೆ. ಎಸ್‌ಬಿಐನಲ್ಲಿ ವಿಲೀನಗೊಳ್ಳುವ ಪ್ರಸ್ತಾಪವಿದ್ದ ಭಾರತೀಯ ಮಹಿಳಾ ಬ್ಯಾಂಕ್‌ ಬಗ್ಗೆ ಸಂಪುಟವು  ಅಂತಿಮ ನಿರ್ಧಾರಕ್ಕೆ ಬಂದಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.