ADVERTISEMENT

ಬ್ಯಾಂಕ್ ವಿಲೀನ 2018ರಲ್ಲಿ ಪೂರ್ಣ

ಪಿಟಿಐ
Published 17 ಫೆಬ್ರುವರಿ 2017, 19:30 IST
Last Updated 17 ಫೆಬ್ರುವರಿ 2017, 19:30 IST
ಅರುಂಧತಿ ಭಟ್ಟಾಚಾರ್ಯ
ಅರುಂಧತಿ ಭಟ್ಟಾಚಾರ್ಯ   
ಮುಂಬೈ (ಪಿಟಿಐ): ‘ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಲ್ಲಿ (ಎಸ್‌ಬಿಐ) ಐದು ಸಹವರ್ತಿ ಬ್ಯಾಂಕ್‌ಗಳ ವಿಲೀನವು ಮುಂದಿನ ಹಣಕಾಸು ವರ್ಷದಲ್ಲಿ (2018) ಪೂರ್ಣಗೊಳ್ಳಲಿದೆ’ ಎಂದು  ಬ್ಯಾಂಕ್‌ನ ಅಧ್ಯಕ್ಷೆ ಅರುಂಧತಿ ಭಟ್ಟಾಚಾರ್ಯ ಅವರು ಹೇಳಿದ್ದಾರೆ.
 
ಬ್ಯಾಂಕ್ ಸಿಬ್ಬಂದಿಯ ವೇತನಕ್ಕೆ ಸಂಬಂಧಿಸಿದ ವಿವಾದ ವಿಲೀನ ಪ್ರಕ್ರಿಯೆ ವಿಳಂಬಕ್ಕೆ ಕಾರಣವಾಗಲಿದೆ ಎನ್ನುವ ವರದಿಗಳನ್ನು ಅವರು ತಳ್ಳಿ ಹಾಕಿದ್ದಾರೆ. 
 
‘ವಿಲೀನವು ಯಾವ ದಿನದಿಂದ ಜಾರಿಗೆ ಬರಲಿದೆ ಎನ್ನುವುದರ ಕುರಿತು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಲಿದೆ. ಬ್ಯಾಂಕ್‌ಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸುತ್ತಿರುವುದು ಮತ್ತು ವಿಲೀನ ಪ್ರಕ್ರಿಯೆ ಅತಿದೊಡ್ಡ ಕಸರತ್ತು ಆಗಿರುವುದರಿಂದ ಪ್ರಸಕ್ತ ಹಣಕಾಸು ವರ್ಷದ ಅಂತ್ಯದ ಹೊತ್ತಿನಲ್ಲಿ ವಿಲೀನ ಪ್ರಕ್ರಿಯೆ ನಡೆಸುವುದು ಅಷ್ಟು ಸೂಕ್ತವಲ್ಲ.
 
‘ಸದ್ಯಕ್ಕೆ ವೇತನ ಸಂಬಂಧಿ ವಿವಾದ ಎದುರಾಗಿಲ್ಲ.ಸಿಬ್ಬಂದಿ ಈಗ ಪಡೆಯುತ್ತಿರುವ ವೇತನ ಕಾಯ್ದುಕೊಳ್ಳುವ ಬಗ್ಗೆ ಹಣಕಾಸು ಇಲಾಖೆ ಭರವಸೆ ನೀಡಿದೆ.
 
‘ಎಸ್‌ಬಿಐ ಸಿಬ್ಬಂದಿ ಪಡೆಯುತ್ತಿರುವ ವೇತನವನ್ನು ಸಹವರ್ತಿ ಬ್ಯಾಂಕ್‌ಗಳ ಸಿಬ್ಬಂದಿಗೂ ನೀಡಲಾಗುವುದು.  ಅದನ್ನು ಸ್ವೀಕರಿಸುವ ಅಥವಾ ಈಗಾಗಲೇ ಪಡೆಯುತ್ತಿರುವ ವೇತನವನ್ನೇ ಮುಂದುವರೆಸುವ ಆಯ್ಕೆ ಸ್ವಾತಂತ್ರ್ಯವೂ ಅವರಿಗೆ ಇರಲಿದೆ. ವಿಲೀನದ ನಂತರ ಎಸ್‌ಬಿಐ, ಜಾಗತಿಕ ಮಟ್ಟದ 50 ದೊಡ್ಡ ಬ್ಯಾಂಕ್‌ಗಳ ಸಾಲಿಗೆ ಸೇರ್ಪಡೆಯಾಗಲಿದೆ’ ಎಂದೂ ಅವರು ತಿಳಿಸಿದ್ದಾರೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.