ADVERTISEMENT

ಬ್ಯಾಂಕ್‌ ಸಾಲದ ಬಡ್ಡಿ ಇಳಿಕೆ ಸಾಧ್ಯ

ಪಿಟಿಐ
Published 21 ಏಪ್ರಿಲ್ 2017, 19:30 IST
Last Updated 21 ಏಪ್ರಿಲ್ 2017, 19:30 IST

ಮುಂಬೈ : ‘ಸಾಲದ ಬಡ್ಡಿದರ ಕಡಿತ ಮಾಡಲು ಬ್ಯಾಂಕ್‌ಗಳಿಗೆ ಸಾಕಷ್ಟು ಅವಕಾಶವಿದೆ’ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಗವರ್ನರ್‌ ಉರ್ಜಿತ್‌ ಪಟೇಲ್‌ ಅವರು ಹಣಕಾಸು ನೀತಿ ಸಮಿತಿ (ಎಂಪಿಸಿ) ಹೇಳಿದ್ದಾರೆ.

ಮುಂದಿನ ದಿನಗಳಲ್ಲಿ ಹಣದುಬ್ಬರ ಏರಿಕೆ ಕಾಣುವ ಸಾಧ್ಯತೆಯೂ ಇದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ಏಪ್ರಿಲ್‌ 6 ರಂದು ನಡೆದ ಹಣಕಾಸು ನೀತಿ ಪರಾಮರ್ಶೆಯಲ್ಲಿ ಪಟೇಲ್‌ ನೇತೃತ್ವದ ಸಮಿತಿಯು ಬಡ್ಡಿದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಂಡಿತ್ತು.
ಸಾಲದ ಬಡ್ಡಿದರ ಕಡಿತ ಮಾಡಲು ಬ್ಯಾಂಕ್‌ಗಳಿಗೆ ಅವಕಾಶವಿದೆ. ಆರ್ಥಿಕ ವ್ಯವಸ್ಥೆಯಲ್ಲಿ ಇರುವ ಇತರೆ ಯೋಜನೆಗಳ ಬಡ್ಡಿದಕ್ಕೆ ಹೋಲಿಸಿದರೆ ಸಣ್ಣ ಉಳಿತಾಯಗಳ ಬಡ್ಡಿದರ ತೀರಾ ಕಡಿಮೆ ಆಗಬಾರದು. ಆಗ ಮಾತ್ರವೇ ಬಡ್ಡಿದರ ಇಳಿಕೆ ಪ್ರಯೋಜನ ಸಾಕಾರವಾಗುತ್ತದೆ ಎಂದಿದ್ದಾರೆ.
2015ರ ಜನವರಿಯಿಂದ ಆರ್‌ಬಿಐ ರೆಪೊದರದಲ್ಲಿ ಶೇ 1.75 ರಷ್ಟು ಇಳಿಕೆ ಮಾಡಿದೆ. ಆದರೆ ಬ್ಯಾಂಕ್‌ಗಳು ನೀಡುವ ಸಾಲದ ಸರಾಸರಿ ಬಡ್ಡಿದರ ಶೇ 0.85 ರಷ್ಟು ಮಾತ್ರವೇ ಕಡಿಮೆ ಆಗಿದೆ.

ADVERTISEMENT

ಸಾಲದ ಬಡ್ಡಿದರ ಕಡಿಮೆ ಇದ್ದರೆ ಆರ್ಥಿಕ ಚಟುವಟಿಕೆಗಳಿಗೆ ಉತ್ತೇಜನ ಸಿಗುತ್ತದೆ. ಆದರೆ ಕಡಿಮೆ ಬಡ್ಡಿದರವು ಹಣದುಬ್ಬರವನ್ನೂ ಹೆಚ್ಚಿಸುವ ಸಾಧ್ಯತೆಯೂ ಇದೆ ಎಂದು ಸಮಿತಿ ತಿಳಿಸಿದೆ.

ಹೀಗಾಗಿ ಆರ್ಥಿಕ ಪ್ರಗತಿಗೆ ಅಡ್ಡಿಯಾಗದಂತೆ ಹಣದುಬ್ಬರವನ್ನು ನಿಯಂತ್ರಿಸುವ ಉದ್ದೇಶವನ್ನು ಆರ್‌ಬಿಐ ಹೊಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.