ADVERTISEMENT

ಭತ್ತ, ಬೇಳೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ

ಪಿಟಿಐ
Published 20 ಜೂನ್ 2017, 19:30 IST
Last Updated 20 ಜೂನ್ 2017, 19:30 IST
ಭತ್ತ, ಬೇಳೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ
ಭತ್ತ, ಬೇಳೆ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ   

ನವದೆಹಲಿ: ಮುಂಗಾರು ಹಂಗಾಮಿನ ಕೃಷಿ ಉತ್ಪನ್ನಗಳ ಕನಿಷ್ಠ ಬೆಂಬಲ ಬೆಲೆಯನ್ನು ( ಎಂಎಸ್‌ಪಿ) ಕೇಂದ್ರ ಸರ್ಕಾರ ಹೆಚ್ಚಿಸಿದೆ.

ಭತ್ತದ ‘ಎಂಎಸ್‌ಪಿ’ಯನ್ನು ಪ್ರತಿ ಕ್ವಿಂಟಲ್‌ಗೆ ₹ 80ರಂತೆ ಮತ್ತು ಬೇಳೆಕಾಳುಗಳ ಪ್ರತಿ ಕ್ವಿಂಟಲ್‌ ಬೆಲೆಯನ್ನು  ₹ 400ರಂತೆ ಹೆಚ್ಚಿಸಲಾಗಿದೆ. ಬಿತ್ತನೆ ಪ್ರಮಾಣ ಹೆಚ್ಚಿಸಲು ಕೃಷಿಕರಿಗೆ ಉತ್ತೇಜನ ನೀಡಲು ಕೇಂದ್ರ ಸಚಿವ ಸಂಪುಟವು ಈ ನಿರ್ಧಾರ ಕೈಗೊಂಡಿದೆ.

ಮುಂಗಾರು ಹಂಗಾಮಿನ 14 ಬೆಳೆಗಳ ಕನಿಷ್ಠ ಬೆಂಬಲ ಬೆಲೆಯನ್ನು ಈ ತಿಂಗಳ 7ರಂದೇ ಸಂಪುಟವು ಅನುಮೋದಿಸಿತ್ತು. ಮಹಾರಾಷ್ಟ್ರ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಕೃಷಿ ಸಾಲ ಮನ್ನಾಗೆ ಆಗ್ರಹಿಸಿ ನಡೆದಿದ್ದ ರೈತರ ಪ್ರತಿಭಟನೆ ಕಾರಣಕ್ಕೆ ಈ ನಿರ್ಧಾರವನ್ನು ಪ್ರಕಟಿಸಿರಲಿಲ್ಲ.

ADVERTISEMENT

2017–18ನೆ ಬೆಳೆ ವರ್ಷಕ್ಕೆ  (ಜುಲೈ – ಜೂನ್‌)  ಈ ‘ಎಂಎಸ್‌ಪಿ’ ಅನ್ವಯವಾಗಲಿದೆ. ಯಾವ ಬೆಳೆ ಬೆಳೆಯಬೇಕೆಂದು ರೈತರು ನಿರ್ಧರಿಸಲು ‘ಎಂಎಸ್‌ಪಿ’   ನೆರವಾಗಲಿದೆ.

ಕೇಂದ್ರ ಸರ್ಕಾರವು ‘ಎಂಎಸ್‌ಪಿ’ ಮಟ್ಟದಲ್ಲಿ ಅಕ್ಕಿ ಮತ್ತು ಗೋಧಿ ಖರೀದಿಸಲಿದೆ.  ಇತರ ಬೆಳೆಗಳ ವಿಷಯದಲ್ಲಿ,  ಬೆಂಬಲ ಬೆಲೆಗಿಂತ ದರ ಕಡಿಮೆಯಾದ ಸಂದರ್ಭದಲ್ಲಿ ಸರ್ಕಾರವು ಮಾರುಕಟ್ಟೆ  ಪ್ರವೇಶಿಸಿ ಖರೀದಿಸಲಿದೆ.

ಕಳೆದ ವರ್ಷ ಸರ್ಕಾರವು ಬೆಳೆಗಾರರು ಮತ್ತು ಮಾರುಕಟ್ಟೆಯಿಂದ  20 ಲಕ್ಷ ಟನ್‌ಗಳಷ್ಟು ಬೇಳೆಕಾಳು ಖರೀದಿಸಿ ಕಾಪು ದಾಸ್ತಾನು ಮಾಡಿತ್ತು.

ತೊಗರಿ, ಹೆಸರು, ಉದ್ದು, ಸೇಂಗಾ ಮತ್ತು ಸೋಯಾಬೀನ್‌ಗೆ ಸಂಬಂಧಿಸಿದಂತೆ ಕೃಷಿ ವೆಚ್ಚ ಮತ್ತು ಬೆಲೆ ಆಯೋಗ (ಸಿಎಸಿಪಿ) ಶಿಫಾರಸು ಮಾಡಿದ ಬೆಲೆಗಿಂತ   ಸರ್ಕಾರವು ಪ್ರತಿ ಕ್ವಿಂಟಲ್‌ಗೆ ₹ 200 ರಂತೆ ಹೆಚ್ಚು ‘ಎಂಎಸ್‌ಪಿ’ ನಿಗದಿಪಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.