ADVERTISEMENT

ಮೊದಲ ದಿನ 1ಕೋಟಿ ಬ್ಯಾಂಕ್‌ ಖಾತೆ?

28ಕ್ಕೆ ಜನ್‌ ಧನ್‌ ಯೋಜನೆ ಜಾರಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2014, 19:30 IST
Last Updated 26 ಆಗಸ್ಟ್ 2014, 19:30 IST

ನವದೆಹಲಿ (ಪಿಟಿಐ): ದೇಶದ ಪ್ರತಿಯೊಬ್ಬ ನಾಗರಿಕನಿಗೂ ಬ್ಯಾಂಕ್‌ ಖಾತೆ ಒದಗಿಸುವ ಬಹು ಉದ್ದೇಶಿತ ‘ಪ್ರಧಾನ ಮಂತ್ರಿ ಜನ್‌ ಧನ್‌ ಯೋಜನೆ’ಯನ್ನು (ಪಿಎಂಜೆಡಿವೈ) ಪ್ರಧಾನಿ ನರೇಂದ್ರ ಮೋದಿ ಅವರು ಗುರುವಾರ ಉದ್ಘಾಟಿಸಲಿದ್ದು, ಮೊದಲ ದಿನವೇ ಒಂದು ಕೋಟಿ ಬ್ಯಾಂಕ್‌ ಖಾತೆಗಳನ್ನು ತೆರೆಯುವ ಸಾಧ್ಯತೆ ಇದೆ.

ಯೋಜನೆ ಉದ್ಘಾಟನೆ ಸಲುವಾಗಿ ದೇಶದ ವಿವಿಧೆಡೆ 76 ಕಾರ್ಯಕ್ರಮಗಳನ್ನು ಆಯೋಜಿಸ­ಲಾಗಿದೆ. ಅಲ್ಲಿ ಹೊಸ ಖಾತೆ ಪಡೆದವರಿಗೆ ₨1ಲಕ್ಷ ಜೀವವಿಮೆ ಪ್ರಯೋಜನದ ‘RuPay’ ಡೆಬಿಟ್‌ ಕಾರ್ಡ್‌ ನೀಡುವ ವ್ಯವಸ್ಥೆಯನ್ನೂ ಮಾಡಲಾಗಿದೆ.

ಪ್ರಧಾನಿ ಮೋದಿ ಈಗಾಗಲೇ 7.25 ಲಕ್ಷ ಇ–ಮೇಲ್‌ಗಳನ್ನು ಬ್ಯಾಂಕ್‌ ಅಧಿಕಾರಿಗಳಿಗೆ ಕಳುಹಿಸಿದ್ದು, ಜನ್‌ ಧನ್‌ ಯೋಜನೆ ಜಾರಿ ಕುರಿತು ತಿಳಿಸಿದ್ದಾರೆ.

ಯೋಜನೆ ಜಾರಿ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಸ್ವಾಮ್ಯದ ಬ್ಯಾಂಕುಗಳು ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಒಟ್ಟು 60 ಸಾವಿರ ಶಿಬಿರಗಳನ್ನು ಏರ್ಪಡಿಸಿವೆ ಎಂದು ಸರ್ಕಾರ ತಿಳಿಸಿದೆ.

ಕೇಂದ್ರ ಸರ್ಕಾರದ ಉದ್ದೇಶಿತ ಯೋಜನೆಗೆ ಎಲ್ಲಾ ಬ್ಯಾಂಕುಗಳು ಸಿದ್ದತೆಯಲ್ಲಿ ತೊಡಗಿವೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ಜಿ.ಎಸ್‌.ಸಂಧು ಸುದ್ದಿಗಾರರಿಗೆ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.