ADVERTISEMENT

ಮ್ಯೂಚುವಲ್ ಫಂಡ್‌: ಸಣ್ಣ ಪಟ್ಟಣಗಳ ಕೊಡುಗೆ ಹೆಚ್ಚಳ

ಪಿಟಿಐ
Published 25 ಏಪ್ರಿಲ್ 2018, 19:30 IST
Last Updated 25 ಏಪ್ರಿಲ್ 2018, 19:30 IST

ನವದೆಹಲಿ: ಸಣ್ಣ ನಗರಗಳ ಸಾಮಾನ್ಯ ಹೂಡಿಕೆದಾರರು 2017–18ರಲ್ಲಿ ಮ್ಯೂಚುವಲ್‌ ಫಂಡ್ಸ್‌ಗಳಲ್ಲಿ ತೊಡಗಿಸಿರುವ ಮೊತ್ತವು ₹ 4.27 ಲಕ್ಷ ಕೋಟಿಗಳಷ್ಟಾಗಿದೆ.

ಹಿಂದಿನ ಹಣಕಾಸು ವರ್ಷದ ₹ 3.9 ಲಕ್ಷ ಕೋಟಿಗೆ ಹೋಲಿಸಿದರೆ ಶೇ 38ರಷ್ಟು ಏರಿಕೆ ದಾಖಲಾಗಿದೆ. ಸಾಮಾನ್ಯ ಹೂಡಿಕೆದಾರರ ಪಾಲ್ಗೊಳ್ಳುವಿಕೆ ಮತ್ತು ಹೂಡಿಕೆದಾರರಲ್ಲಿ ಅರಿವು ಮೂಡಿಸಲು ಮ್ಯೂಚುವಲ್‌ ಫಂಡ್‌ ಉದ್ದಿಮೆ ಹಮ್ಮಿಕೊಂಡಿರುವ ವ್ಯಾಪಕ ಪ್ರಚಾರ ಕಾರ್ಯಕ್ರಮಗಳ ಫಲವಾಗಿ ಈ ಹೆಚ್ಚಳ ಕಂಡು ಬಂದಿದೆ.

ಜನರು ಸಾಂಪ್ರದಾಯಿಕ ಹೂಡಿಕೆ ಸಂಪತ್ತುಗಳಾದ ರಿಯಲ್‌ ಎಸ್ಟೇಟ್‌ ಮತ್ತು ಚಿನ್ನದ ಬದಲಿಗೆ ಹಣಕಾಸು ಸಂಪತ್ತಿನ ಯೋಜನೆಗಳಲ್ಲಿ ಹಣ ತೊಡಗಿಸಲು ಹೆಚ್ಚು ಒಲವು ತೋರುತ್ತಿದ್ದಾರೆ. ಮ್ಯೂಚುವಲ್‌ ಫಂಡ್‌ಗಳು ನಿರ್ವಹಿಸುವ ಸಂಪತ್ತಿನ ಮೌಲ್ಯದಲ್ಲಿ ಸಣ್ಣ ನಗರಗಳ ಪಾಲು ಹಿಂದಿನ ವರ್ಷದ ₹ 3.09ಲಕ್ಷ ಕೋಟಿಯಿಂದ ₹ 1.2 ಲಕ್ಷ ಕೋಟಿಗಳಷ್ಟು (ಶೇ 38ರಷ್ಟು) ಹೆಚ್ಚಳವಾಗಿದೆ ಎಂದು ಮ್ಯೂಚುವಲ್‌ ಫಂಡ್ಸ್‌ಗಳ ಸಂಘ ತಿಳಿಸಿದೆ.

ADVERTISEMENT

ಎಂಎಫ್‌ ಉದ್ದಿಮೆಯಲ್ಲಿ ನಗರಗಳನ್ನು ಮುಂಚೂಣಿ 15 (ಟಿ–15) ಮತ್ತು ಸಣ್ಣ ನಗರಗಳು (ಬಿ15) ಎಂದು ವಿಂಗಡಿಸಲಾಗಿದೆ. ಟಿ–15 ಗುಂಪಿನಲ್ಲಿ ದೆಹಲಿ, ಮುಂಬೈ, ಬೆಂಗಳೂರು, ನಗರಗಳಿವೆ. ಸಾಮಾನ್ಯ ಹೂಡಿಕೆದಾರರಲ್ಲಿ ಶೇ 10ರಷ್ಟು ಜನರು ಮತ್ತು ಶ್ರೀಮಂತರಲ್ಲಿ ಶೇ 18ರಷ್ಟು ಜನರು ನೇರವಾಗಿ ಹೂಡಿಕೆ ಮಾಡುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.