ADVERTISEMENT

ರಾಜ್ಯದಲ್ಲಿ ಹೂಡಿಕೆಗೆ ಅನುಕೂಲ ಇಲ್ಲ

ಜರ್ಮನ್‌ ಕಾನ್ಸಲ್‌ ಜಾರ್ನ್‌ ರೋಡೆ ಜನರಲ್‌ ಆರೋಪ

ಉಮೇಶ್‌ ಎಂ.ಅವ್ವಣ್ಣವರ
Published 18 ಜುಲೈ 2015, 19:30 IST
Last Updated 18 ಜುಲೈ 2015, 19:30 IST

ಬೆಂಗಳೂರು: ಬಂಡವಾಳ ಹೂಡಿಕೆಗೆ ಮಂಜೂರಾತಿ ನೀಡುವಲ್ಲಿನ ವಿಳಂಬದಿಂದ ಬೇಸತ್ತು ರಾಜ್ಯದಿಂದ ಹೊರಗೆ ಹೋಗುವ ಬಗ್ಗೆ ಚಿಂತನೆ ನಡೆಸುತ್ತಿರುವುದಾಗಿ ಆಟೊಮೊಬೈಲ್‌ ಕ್ಷೇತ್ರದ ದೈತ್ಯ ಕಂಪೆನಿ ‘ಬಾಷ್‌’ ಹೇಳಿಕೆ ನೀಡಿದ ಬೆನ್ನಲ್ಲೇ, ಜರ್ಮನಿಯ ಕಾನ್ಸಲ್‌ ಜನರಲ್‌ ಜಾರ್ನ್ ರೋಡೆ ಕೂಡಾ ಇದೇ ವಿಷಯದಲ್ಲಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆ (ಎಫ್‌ಕೆಸಿಸಿಐ) ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮ ದಲ್ಲಿ ಭಾಗವಹಿಸಿದ್ದ ಅವರು ‘ಪ್ರಜಾವಾಣಿ’  ಜೊತೆ ಮಾತನಾಡಿ, ಉದ್ಯಮ ಸ್ಥಾಪನೆಗೆ ಅನುಮತಿ ನೀಡಲು ರಾಜ್ಯ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿರುವುದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

‘ಕರ್ನಾಟಕದಲ್ಲಿ ಎಲ್ಲವೂ ಸರಿಯಾಗಿಲ್ಲ. ಸುಧಾರಣೆಗೆ ಸಾಕಷ್ಟು ಅವಕಾಶಗಳಿವೆ’ ಎಂದು ಅವರು ಪ್ರತಿಪಾದಿಸಿದರು. ನವೆಂಬರ್‌ 23 ಹಾಗೂ 24ರಂದು ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನ ಆಯೋಜಿಸಲು ಸಿದ್ಧತೆ ನಡೆಸಿರುವ ರಾಜ್ಯ ಸರ್ಕಾರವನ್ನು ಮಾತಿನಲ್ಲೇ ಚುಚ್ಚಿದ ರೋಡೆ, ‘ಬಣ್ಣ ಬಣ್ಣದ ಕರಪತ್ರಗಳನ್ನು ಮುದ್ರಿಸಿ ಹಂಚುವುದಕ್ಕಿಂತ ಈಗಾಗಲೇ ನೆಲೆಯೂರಿರುವ ಕಂಪೆನಿಗಳ ಬಾಯಲ್ಲಿ, ಇದು ಬಂಡವಾಳ ಹೂಡಿಕೆಗೆ ಯೋಗ್ಯ ರಾಜ್ಯ ಎಂದು ಹೇಳಿಸುವುದು ಹೆಚ್ಚು ಸೂಕ್ತ’ ಎಂದರು.

‘ನಮ್ಮ ಕಂಪೆನಿ ಕರ್ನಾಟಕದಿಂದ ಹೊರಗೆ ಹೋಗುವ  ಬಗ್ಗೆ ಚಿಂತನೆ ನಡೆಸಿದೆ’ ಎಂದು ಜರ್ಮನ್‌ ಮೂಲದ ಬಾಷ್‌ನ ಭಾರತೀಯ ವ್ಯವಹಾರ ಮುಖ್ಯಸ್ಥ ಸ್ಟೀಫನ್‌ ಬರ್ನ್ಸ್  ಹೇಳಿದ  ಒಂದು ತಿಂಗಳ ಬಳಿಕ  ಕಾನ್ಸಲ್‌ ಜನರಲ್‌ ಹೇಳಿಕೆ ಹೊರಬಿದ್ದಿದೆ.

ಬೆಂಗಳೂರು  ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ವಾರ್ಷಿಕ ಸಭೆಯಲ್ಲಿ ಸರ್ಕಾರದ ಧೋರಣೆ ಬಗ್ಗೆ  ಅಸಮಾ ಧಾನ ವ್ಯಕ್ತಪಡಿಸಿದ್ದ ಬರ್ನ್ಸ್, ‘ಬಾಷ್ ಕಂಪೆನಿ 60 ವರ್ಷಗಳಿಂದ ರಾಜ್ಯದಲ್ಲಿ ನೆಲೆಯೂರಿದೆ. ಆದರೂ ಅನೇಕ ಸಮಸ್ಯೆಗಳನ್ನು ಎದುರಿಸುತ್ತಿದೆ’ ಎಂದು ಹೇಳಿದ್ದರು.

ಅದಕ್ಕಿಂತಲೂ ಹಿಂದಿನಿಂದ ಜರ್ಮನಿಯು ಕರ್ನಾಟಕದ ಜತೆ ಹೊಂದಿರುವ ಸಂಬಂಧವನ್ನು ನೆನಪಿಸಿದ ರೋಡೆ,‘ಕೈಗಾರಿಕೆಗಳ ಕುರಿತು ಸರ್ಕಾರ  ಧೋರಣೆ ಸರಿಯಾಗಿಲ್ಲ’ ಎಂದು ಪ್ರತಿಪಾದಿಸಿದರು.

ಜರ್ಮನಿ ನಂಟು: ‘ಎರಡನೇ ವಿಶ್ವಯುದ್ಧದ ಕಾಲದಿಂದಲೂ ಜರ್ಮನಿ ಕರ್ನಾಟಕದ ಜತೆ ಸಂಬಂಧ ಹೊಂದಿದೆ. ನಿರ್ಮಾಣ ಕ್ಷೇತ್ರದಲ್ಲಿ ಬಂಡವಾಳ ಹೂಡುವ ವಿಚಾರದಲ್ಲಿ ಪುಣೆ ಬೆಂಗಳೂ ರಿಗಿಂತಲೂ ಹೆಚ್ಚು ಯೋಗ್ಯವಾದುದು ಎಂಬುದು ನನ್ನ ಬಲವಾದ ನಿಲುವು. 10 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಪುಣೆಗಿಂತಲೂ ಹೆಚ್ಚು ಜರ್ಮನಿ ಕಂಪೆನಿಗಳಿದ್ದವು. ಇಲ್ಲಿ ಜರ್ಮನಿ ಕಂಪೆನಿ ಗಳ ಸಂಖ್ಯೆ ಈಗಲೂ ಹೆಚ್ಚುತ್ತಿವೆ.  ಆದರೆ, ಈಗ ಬೆಂಗಳೂರಿ ನಲ್ಲಿ ಕೇವಲ 180 ಜರ್ಮನಿ ಕಂಪೆನಿ ಗಳಿದ್ದರೆ, ಪುಣೆಯಲ್ಲಿ 300 ಕಂಪೆನಿ ಗಳಿವೆ’ ಎಂದರು.

ಜರ್ಮನಿ ಕಂಪೆನಿಗಳು ಪುಣೆಯತ್ತ ಆಕರ್ಷಿತವಾಗಿರುವುದು ಏಕೆ ಎಂಬ ಪ್ರಶ್ನೆಗೆ ನಾಜೂಕಿನ ಉತ್ತರ ನೀಡಿದ ಅವರು, ‘ಕರ್ನಾಟಕದ ಬಗ್ಗೆ ಸ್ವಲ್ಪಮಟ್ಟಿನ ಸಂತೃಪ್ತಿ ಇದೆ. ಮಹಾರಾಷ್ಟ್ರ  ಮತ್ತಿತರ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ದಲ್ಲಿ ಮಂಜೂರಾತಿ ಪಡೆಯುವುದಕ್ಕೇ ಹೆಚ್ಚು ಸಮಯ  ಬೇಕಾಗುತ್ತದೆ.  ಎಲ್ಲಿ ಮಾನದಂಡಗಳು ಅತ್ಯುತ್ತಮವಾಗಿವೆ ಎಂಬುದನ್ನು ನೋಡಿಕೊಂಡು ಹೂಡಿ ಕೆಗೆ ಸಂಬಂಧಿಸಿದ ನಿರ್ಧಾರ ತಳೆಯ ಲಾಗುತ್ತದೆ. ಈ ವಿಚಾರದಲ್ಲಿ ಬೆಂಗಳೂ ರಿಗೆ ಹೋಲಿಸಿದರೆ, ಪುಣೆ ಹೆಚ್ಚು ಕ್ರಿಯಾಶೀಲವಾಗಿದೆ’  ಎಂದರು.

*
ಹೂಡಿಕೆ ಸ್ನೇಹಿ ವಾತಾವರಣ ಕಲ್ಪಿಸುವುದರಲ್ಲಿ ಗುಜರಾತ್‌ ಮೊದಲ ಸ್ಥಾನದಲ್ಲಿದ್ದರೆ, ನಾವು ಎರಡನೇ ಸ್ಥಾನದಲ್ಲಿದ್ದೇವೆ.‌
-ರತ್ನಪ್ರಭಾ,
ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ

*
ಟೊಯೊಟಾ, ವೋಲ್ವೊ, ಬಾಷ್‌ ಕಂಪೆನಿ­ಗಳ  ಯಶೋಗಾಥೆ ಹೇಳಿಕೊಳ್ಳುವುದೇ  ಹೂಡಿಕೆ­ದಾರರ ಸಮ್ಮೇಳನಕ್ಕೆ ಉತ್ತಮ ಜಾಹೀರಾತು 
-ಜಾರ್ನ್ ರೋಡೆ,

ಜರ್ಮನಿ ಕಾನ್ಸಲ್‌ ಜನರಲ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.