ADVERTISEMENT

ರಿಟರ್ನ್ಸ್‌ಗೆ ಉಪಯುಕ್ತ ಮೊಬೈಲ್ ಆ್ಯಪ್‌ಗಳು

ಜೆ.ಸಿ.ಜಾಧವ
Published 18 ಜುಲೈ 2017, 19:30 IST
Last Updated 18 ಜುಲೈ 2017, 19:30 IST
ರಿಟರ್ನ್ಸ್‌ಗೆ ಉಪಯುಕ್ತ ಮೊಬೈಲ್ ಆ್ಯಪ್‌ಗಳು
ರಿಟರ್ನ್ಸ್‌ಗೆ ಉಪಯುಕ್ತ ಮೊಬೈಲ್ ಆ್ಯಪ್‌ಗಳು   

ದೇಶದ ಅರ್ಥ ವ್ಯವಸ್ಥೆಯಲ್ಲಿ ತೆರಿಗೆ ಸಂಗ್ರಹಕ್ಕೆ ತುಂಬ ಮಹತ್ವ ಇದೆ.  ಸರ್ಕಾರದ ಪ್ರಮುಖ ವರಮಾನ ಮೂಲಗಳಲ್ಲಿ ಇದು ಕೂಡ ಒಂದಾಗಿದೆ. ಮೂಲ ಹಾಗೂ ದೇಶದ ಅಭಿವೃದ್ಧಿಗೆ ತೆರಿಗೆ ಸಂಗ್ರಹವು ಅನಿವಾರ್ಯ.

ಆದಾಯ ತೆರಿಗೆ ವ್ಯಾಪ್ತಿಗೆ ಒಳಪಡುವವರೆಲ್ಲರೂ, ಹಣಕಾಸು ವರ್ಷ 2016-17ರಲ್ಲಿ ಸರ್ಕಾರಕ್ಕೆ ಪಾವತಿಸಿದ ಆದಾಯ ತೆರಿಗೆಯ ವಿವರಗಳನ್ನು ಸಲ್ಲಿಸಲು ಜುಲೈ31 ಕೊನೆಯ ದಿನವಾಗಿದೆ. ಈ ತೆರಿಗೆ ಲೆಕ್ಕಪತ್ರ ವಿವರಗಳನ್ನು (ರಿಟರ್ನ್ಸ್‌)  ಈಗ   ಸ್ಮಾರ್ಟ್‌ಫೋನ್‌ಗಳ ಮೂಲಕವೂ ಸಲ್ಲಿಸಬಹುದಾಗಿದೆ.

ಇಂದು ಬಹಳಷ್ಟು ಕೆಲಸ ಮತ್ತು ಉದ್ದೇಶಗಳಿಗೆ ಮೊಬೈಲ್‌ ಕಿರುತಂತ್ರಾಂಶಗಳನ್ನು (ಆ್ಯಪ್‌) ಬಳಸಲಾಗುತ್ತಿದೆ. ಹಾಗೆಯೇ ಆದಾಯ ತೆರಿಗೆಯ ರಿಟರ್ನ್ (ಐ.ಟಿ. ಫೈಲ್) ಸಲ್ಲಿಸಲೂ ಆ್ಯಪ್‌ಗಳು ನೆರವಾಗುತ್ತಿವೆ.

ADVERTISEMENT

ರಿಟರ್ನ್ಸ್‌ ಸಲ್ಲಿಸಲು ಆದಾಯ ತೆರಿಗೆ ಇಲಾಖೆಯ ಅಂತರ್ಜಾಲ ತಾಣವಲ್ಲದೇ  ಇತರ ಜಾಲ ತಾಣಗಳು ಹಾಗೂ ಮೊಬೈಲ್ ಆ್ಯಪ್‌ಗಳಿವೆ.  ಸರಳ ಹಾಗೂ ಸುಲಭವಾಗಿ ರಿಟರ್ನ್ಸ್‌ ಸಲ್ಲಿಸಲು ನೆರವಾಗುವ ಆ್ಯಪ್‌ಗಳ ವಿವರ ಇಲ್ಲಿದೆ.

ಕ್ಲಿಯರ್‌ ಟ್ಯಾಕ್ಸ್ ಆ್ಯಪ್‌

ವೈಯಕ್ತಿಕ ತೆರಿಗೆ ವಿವರ ಸಲ್ಲಿಸಲು ಈ ಆ್ಯಪ್‌ (Clear-Tax app) ಉಪಯೋಗವಾಗಲಿದೆ.  ಪ್ರಾಥಮಿಕ ಮಾಹಿತಿ  ನೀಡಿದ ಕೂಡಲೇ,  ಸೂಕ್ತವಾದ ಅರ್ಜಿ ನಮೂನೆ ಆಯ್ಕೆ ಮಾಡಿಕೊಡುತ್ತದೆ. ಆದಾಯ ತೆರಿಗೆಯ ಫಾರ್ಮ್ 16 ಹಾಗೂ ಆದಾಯ ತೆರಿಗೆ ಇಲಾಖೆಗೆ ಜಮೆಯಾದ ತೆರಿಗೆಯ ವಿವರ ಇರುವ ಫಾರ್ಮ್26AS ಸಹಿತ ನೀಡುತ್ತದೆ.

ಈ ಆ್ಯಪ್‌ನ ಇನ್ನೊಂದು ವಿಶೇಷವೆಂದರೆ ತಮ್ಮ ಮೊಬೈಲ್‌ನಲ್ಲಿ ಇಂಟರ್ನೆಟ್ ಕನೆಕ್ಷನ್ ಇಲ್ಲದ ಸಮಯದಲ್ಲೂ ಇದನ್ನು . ಆಫ್-ಲೈನ್ ನಲ್ಲಿ ತಮ್ಮ ವೈಯಕ್ತಿಕ ವಿವರಗಳನ್ನು ಸಲ್ಲಿಸಿ, ಇಂಟರ್ನೆಟ್ ಕನೆಕ್ಟ ಆದ ಕೂಡಲೇ ತಾವು ನೀಡಿದ ಮಾಹಿತಿಯನ್ನು ಸೇರಿಸಿ ಆದಾಯ ತೆರಿಗೆ ಇಲಾಖೆಯ ಸರ್ವರಗೆ ವರ್ಗಾಯಿಸುತ್ತದೆ.

ಹಲೋ ಟ್ಯಾಕ್ಸ್

ಸರಳ ಮತ್ತು ಬೇಗನೆ ಐ.ಟಿ.ಫೈಲ್ ಮಾಡಲು ಈ  ಆ್ಯಪ್‌ (Hello Tax app) ನೆರವಾಗಲಿದೆ. ತಮ್ಮ ಫಾರ್ಮ್16 ಅಪ್‌ಲೋಡ್‌ ಮಾಡಿದ ಕೂಡಲೇ, ಅದಕ್ಕೆ ಬೇಕಾಗುವ ಎಲ್ಲಾ ಸಹಾಯ ತಮಗೆ ಸಿಗಲಿದೆ. ಈ ಸಾಧನವನ್ನು ದೆಹಲಿಯ  ಸಾಫ್ಟ್‌ವೇರ್‌ ಕಂಪನಿ (iTech flock) ವಿನ್ಯಾಸಗೊಳಿಸಿದೆ. ಹಾಗೆಯೇ ಈ ಸಾಧನವು ತಮಗೆ ತಕ್ಷಣ ಐ.ಟಿ.ಫೈಲ್ ಬಗ್ಗೆ, ಐ.ಟಿ.ರಿಫಂಡ್ ಸ್ಥಿತಿ, ವಹಿವಾಟು ಮಾಹಿತಿ, ತೆರಿಗೆ ಲೆಕ್ಕ ಹಾಕುವ ವಿಧಾನ, ಪ್ಯಾನ್‌ ಕಾರ್ಡ್ ವಿವರ ಹಾಗೂ ತಾವು ಸಲ್ಲಿಸಿದ ದಾಖಲೆಗಳ ಸಂಗ್ರಹ ಮಾಡಲು ಸಹಕಾರಿಯಾಗಲಿದೆ.

ಐಟಿಆರ್‌ ಆ್ಯಪ್‌

ಈ ಆ್ಯಪ್‌ (ITR app), ವ್ಯಕ್ತಿಗಳು ಮತ್ತು ವರ್ತಕರಿಗೆ  ನೆರವಾಗಲಿದೆ. ಅಲ್ಲದೇ ಬೇರೆ ರೀತಿಯ ತೆರಿಗೆಯ ಬಗ್ಗೆ ಮಾಹಿತಿ ನೀಡುತ್ತದೆ. ಐ.ಟಿ.ಫೈಲ್ ಮಾಡಲು, ತೆರಿಗೆ ಲೆಕ್ಕದ ಬಗ್ಗೆ, ಮನೆ ಬಾಡಿಗೆ ಭತ್ಯೆ ವಿನಾಯಿತಿ ಲೆಕ್ಕ ಹೀಗೆ ಇನ್ನೂ ಹೆಚ್ಚಿನ ಮಾಹಿತಿ ನೀಡಲಿದೆ.

ಮೈಐ.ಟಿ.ರಿಟರ್ನ್

ಈ ಆ್ಯಪ್‌ ಕೂಡ, (myITreturn app) ಬೇರೆ ಆ್ಯಪ್‌ಗಳು ನೀಡುವ ಸೌಲಭ್ಯಗಳ ಜೊತೆಗೆ ತಮ್ಮ ವ್ಯಾಪ್ತಿಯ ತೆರಿಗೆ ಕಚೇರಿಯ ಮಾಹಿತಿಯನ್ನೂ ನೀಡುತ್ತದೆ.  ತೆರಿಗೆದಾರರಿಗೆ ತಮ್ಮ ಐ.ಟಿ.ರಿಟರ್ನ್ಸ್ ಬಗ್ಗೆ ಸಮಗ್ರ  ಮಾಹಿತಿ ನೀಡುತ್ತದೆ.

ಕ್ರೇಜಿ ರಿಟರ್ನ್‌ 

ಅಹ್ಮದಾಬಾದ್‌ನ   ಲಿಟ್ಲ್ ಪ್ಲೇ ಸ್ಟುಡಿಯೋ   ಸಾಫ್ಟವೇರ್ ಕಂಪನಿಯು ಈ  ಆ್ಯಪ್‌ (Crazyreturn app) ಅಭಿವೃದ್ಧಿಗೊಳಿಸಿದೆ.  ಬಳಕೆದಾರರು ತಮ್ಮ ಆದಾಯ ಹಾಗೂ ಕಡಿತಗಳ ಮಾಹಿತಿಯನ್ನು ನೀಡಿದರೆ, ತಾವು ಎಷ್ಟು ತೆರಿಗೆ ಪಾವತಿ ಮಾಡಬೇಕಾಗಿತ್ತು ಎನ್ನುವ ಮಾಹಿತಿ ನೀಡುತ್ತದೆ. ಬಳಕೆದಾರರು ನೀಡಿದ ಮಾಹಿತಿಯನ್ನು ಆಧರಿಸಿ, ಪರಿಣತ ಸಲಹೆಗಾರರು ದಾಖಲೆಗಳನ್ನು ಪರಿಶೀಲಿಸಿ ಐ.ಟಿ.ಫೈಲ್ ಮಾಡಲಾಗುತ್ತದೆ.

ಹೀಗೆ ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸಿ ತಾವು ಇರುವ ಸ್ಥಳದಿಂದಲೇ ಐ.ಟಿ.ಫೈಲ್ ಮಾಡಿ ನಿಶ್ಚಿಂತರಾಗಿರಬಹುದು. ಈ ರೀತಿ ಐ.ಟಿ.ಫೈಲ್ ಮಾಡಲು ತಮಗೆ ಆದಾಯ ತೆರಿಗೆಯ ಪ್ರಾಥಮಿಕ ಮಾಹಿತಿ ಇರುವುದು ಅವಶ್ಯ. ತಮಗೆ ಕಷ್ಟವೆನಿಸಿದರೆ ಅಥವಾ ಅಪೂರ್ಣ ಮಾಹಿತಿ ಎನಿಸಿದರೆ ತಮಗೆ ಪರಿಚಯವಿರುವ ತೆರಿಗೆ ಸಲಹೆಗಾರರನ್ನು ಸಂಪರ್ಕಿಸಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.