ADVERTISEMENT

ರೈತರಿಗೆ ಗುತ್ತಿಗೆ ಆಧಾರ ಜಮೀನು ಕೊಡಿ

ಮುಖ್ಯಮಂತ್ರಿಗೆ ಮಲೆನಾಡು, ಕರಾವಳಿ ಜನಪ್ರತಿನಿಧಿಗಳ ಮನವಿ

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2014, 19:30 IST
Last Updated 26 ನವೆಂಬರ್ 2014, 19:30 IST

ಬೆಂಗಳೂರು: ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ರೈತರು ಕೃಷಿ ಕೆಲಸಕ್ಕೆ 10 ಎಕರೆಗಿಂತ ಹೆಚ್ಚಿನ ಕಂದಾಯ ಜಮೀನನ್ನು ಬಳಸುತ್ತಿದ್ದರೆ, ಅದನ್ನು ಅವರಿಗೆ ಗುತ್ತಿಗೆ (ಲೀಸ್‌) ಆಧಾರದಲ್ಲಿ ಕೊಡಬೇಕು ಎಂದು ಮಲೆನಾಡು ಮತ್ತು ಕರಾವಳಿ ಭಾಗದ ಜನಪ್ರತಿನಿಧಿಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬುಧವಾರ ಮನವಿ ಸಲ್ಲಿಸಿದರು.

ಕಂದಾಯ ಜಮೀನನ್ನು ರೈತರು ಕೃಷಿ ಚಟುವಟಿಕೆಗೆ ಬಳಸುತ್ತಿದ್ದರೆ, ಅಲ್ಲಿ ಒಂದು ಮಟ್ಟಿನ ಹಸಿರು ಹೊದಿಕೆ ಇರು ತ್ತದೆ. ಕೃಷಿ ಚಟುವಟಿಕೆ ನಡೆಸುವುದನ್ನು, ಸರ್ಕಾರಿ ಜಮೀನು ಕಬಳಿಸಿ ಅಲ್ಲಿ ರಿಯಲ್‌ ಎಸ್ಟೇಟ್‌ ದಂಧೆ ನಡೆಸುವುದರ ಜೊತೆ ಸಮೀಕರಿಸಬಾರದು ಎಂದು ಮುಖ್ಯಮಂತ್ರಿಯವರನ್ನು ಕೋರಿದರು ಎಂದು ಮೂಲಗಳು ತಿಳಿಸಿವೆ.

ಶಾಸಕರಾದ ಅಪ್ಪಚ್ಚು ರಂಜನ್‌, ಸಿ.ಟಿ.ರವಿ, ಬಿ.ಎ.ಮೊಯಿದೀನ್‌ ಬಾವಾ, ಎಚ್‌.ಎಸ್‌.ಪ್ರಕಾಶ್‌, ಕಾಂಗ್ರೆಸ್‌ ಮುಖಂಡರಾದ ಜಯ ಪ್ರಕಾಶ ಹೆಗ್ಡೆ, ಬಿ.ಎಲ್‌.ಶಂಕರ್‌ ಮತ್ತಿತರರು ನಿಯೋಗದಲ್ಲಿದ್ದರು.

‘10 ಎಕರೆವರೆಗೆ ಕಂದಾಯ ಜಮೀನು ಒತ್ತುವರಿ ಮಾಡಿ ಕೃಷಿ ಚಟುವಟಿಕೆ ನಡೆಸುತ್ತಿರುವ ರೈತರನ್ನು ಅಲ್ಲಿಂದ ಎತ್ತಂಗಡಿ ಮಾಡಲು ಅವಕಾಶ ಇಲ್ಲ. ನಾವು ಮುಂದಿಟ್ಟ ಪ್ರಸ್ತಾವ ಕುರಿತು ಮುಖ್ಯಮಂತ್ರಿಯವರು ಧನಾ ತ್ಮಕ ಸ್ಪಂದನೆ ನೀಡಿದ್ದಾರೆ. ಕಂದಾಯ, ಅರಣ್ಯ ಸಚಿವರ ಜೊತೆ ಈ ಕುರಿತು ಮಾತನಾಡುವುದಾಗಿ ತಿಳಿಸಿದ್ದಾರೆ. ಗುತ್ತಿಗೆ ಆಧಾರದಲ್ಲಿ ನೀಡುವ ಜಮೀನಿಗೆ ಸರ್ಕಾರ ಶುಲ್ಕ ನಿಗದಿ ಮಾಡಲಿ ಎಂಬ ಸಲಹೆ ನೀಡಿದ್ದೇವೆ’ ಎಂದು ಮುಖಂಡ ರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.