ADVERTISEMENT

ವಾರದ ವಿನೂತನ ಆ್ಯಪ್‌ಗಳು

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2017, 19:30 IST
Last Updated 21 ಫೆಬ್ರುವರಿ 2017, 19:30 IST
ವಾರದ ವಿನೂತನ ಆ್ಯಪ್‌ಗಳು
ವಾರದ ವಿನೂತನ ಆ್ಯಪ್‌ಗಳು   
ಕ್ಷೌರಿಕರಿಗಾಗಿ ‘ಬಾರ್ಬರ್ ಆ್ಯಪ್…
ಭಾರತ ಸರ್ಕಾರದ ಕಿರು, ಸಣ್ಣ ಮತ್ತು ಮಧ್ಯಮ ಕೈಗಾರಿಕೆ ಸಚಿವಾಲಯ (ಎಂಎಸ್ಎಂಇ) ಕ್ಷೌರಿಕರಿಗಾಗಿ ನೂತನ ಮೊಬೈಲ್ ಆ್ಯಪ್ ಅಭಿವೃದ್ಧಿಪಡಿಸಿದೆ.  ಎಂಎಸ್ಎಂಇ ಸಚಿವಾಲಯದ ಕಾರ್ಯದರ್ಶಿ ಕೆ.ಕೆ ಜಲನ್  ಈ ವಿಷಯ ತಿಳಿಸಿದ್ದಾರೆ. ಡಿಜಿಟಲ್ ಇಂಡಿಯಾದ ಯೋಜನೆ ಅಡಿಯಲ್ಲಿ ಕ್ಷೌರಿಕರ ಆ್ಯಪ್ ಅನ್ನು ಸಚಿವಾಲಯ ವಿನ್ಯಾಸ ಮಾಡಿದ್ದು ಸಣ್ಣ ಸಣ್ಣ ಸಲೂನ್ ಅಂಗಡಿಗಳನ್ನು ನಡೆಸುತ್ತಿರುವ ಕ್ಷೌರಿಕರಿಗೆ ಈ ಆ್ಯಪ್ ಅನುಕೂಲವಾಗಲಿದೆ.
 
ಆಂಡ್ರಾಯ್ಡ್‌ ಮತ್ತು ವಿಂಡೋಸ್ ಮಾದರಿಯಲ್ಲಿ ಈ ಆ್ಯಪ್ ಉಚಿತವಾಗಿ ಲಭ್ಯವಿದೆ. ಕ್ಷೌರಿಕರು ತಮ್ಮ ಮೊಬೈಲ್ ಅಥವಾ ಸ್ಮಾರ್ಟ್‌ ಫೋನ್‌ ನಲ್ಲಿ  ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬೇಕು. ತದನಂತರ ಗ್ರಾಹಕರ ನಡುವೆ ವ್ಯವಹಾರ ನಡೆಸಬೇಕು. ಉದಾಹರಣೆಗೆ ಗ್ರಾಹಕರೊಬ್ಬರು ಕ್ಷೌರದ ಅಂಗಡಿಯಲ್ಲಿ ಕ್ಷೌರ ಅಥವಾ ಶೇವಿಂಗ್ ಮಾಡಿಸಿಕೊಳ್ಳುತ್ತಾರೆ. ಇದನ್ನು ದಿನಾಂಕ ಸಹಿತವಾಗಿ ಕ್ಷೌರದ ಆ್ಯಪ್‌ನಲ್ಲಿ ನಮೂದಿಸಬೇಕು.  
 
ದಿನ ಅಥವಾ ವಾರಕ್ಕೊಮ್ಮೆ ಶೇವಿಂಗ್ ಮಾಡಿಸಿಕೊಳ್ಳಲು ಮತ್ತು ತಿಂಗಳಿಗೊಮ್ಮೆ ಕಟಿಂಗ್ ಮಾಡಿಸಿಕೊಳ್ಳುವಂತೆ ಈ ಆ್ಯಪ್ ಮೂಲಕ ಗ್ರಾಹಕರನ್ನು ನೆನಪಿಸಬಹುದು. ಈ ಆ್ಯಪ್‌ನಲ್ಲಿ ಕ್ಷೌರಿಕರು ತಮ್ಮ ವಹಿವಾಟಿನ ಅಕೌಂಟ್ ಅನ್ನು ದಾಖಲಿಸುವ ವ್ಯವಸ್ಥೆ ಕಲ್ಪಿಸಲಾಗಿದೆ.
 
ಸಣ್ಣ ಸಣ್ಣ ಕ್ಷೌರದ ಅಂಗಡಿಯವರು ಮಾತ್ರ ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಳ್ಳಬಹುದು. ದೊಡ್ಡ ದೊಡ್ಡ ಸಲೂನ್ ಅಂಗಡಿಯವರು ಹಣ ಪಾವತಿಸಿ ಈ ಸೌಲಭ್ಯ ಪಡೆಯಬಹುದಾಗಿದೆ. ಇನ್ನು ಕೆಲವೇ ದಿನಗಳಲ್ಲಿ  ಈ ಆ್ಯಪ್ ಮಾರುಕಟ್ಟೆ ಪ್ರವೇಶಿಸಲಿದೆ.
ಗೂಗಲ್ ಪ್ಲೇಸ್ಟೋರ್: barber app (ಡೆಮೊ ಮಾತ್ರ)
 
ಫೇಸ್‌ಬುಕ್‌ ವಿಡಿಯೊ ಟೂಲ್…
ಸಾಮಾಜಿಕ ಜಾಲತಾಣಗಳಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಫೇಸ್‌ಬುಕ್‌, ಟಿವಿ ವಾಹಿನಿಗಳ ವಿಡಿಯೊಗಳನ್ನು ಫೇಸ್‌ಬುಕ್‌ ಮೊಬೈಲ್ ಆ್ಯಪ್‌ನಲ್ಲಿ ನೋಡುವ ಸೌಕರ್ಯ ಕಲ್ಪಿಸಲಾಗಿದೆ.
 
ಗೂಗಲ್ ಒಡೆತನದ ವಿಡಿಯೊ ತಾಣ ಯೂಟೂಬ್‌ಗೆ ಸ್ಪರ್ಧೆ ನೀಡುವ ಸಲುವಾಗಿ ಫೇಸ್‌ಬುಕ್‌  ಈ ಸೌಲಭ್ಯ ಆರಂಭಿಸಿದೆ. ಫೇಸ್‌ಬುಕ್‌ ಬಳಕೆದಾರರು ತಮ್ಮ ಖಾತೆಯ ಪುಟ ಅಥವಾ ಗೋಡೆಯ ಮೇಲೆ ಇನ್ನು ಮುಂದೆ ತಮ್ಮ ನೆಚ್ಚಿನ ಟಿವಿ ವಾಹಿನಿಗಳ ಕಾರ್ಯಕ್ರಮಗಳನ್ನು ವೀಕ್ಷಿಸಬಹುದಾಗಿದೆ. 
 
ಅದಕ್ಕಾಗಿ ಯೂಟೂಬ್‌ ತಾಣಕ್ಕೆ  ಹೋಗುವ ಅಗತ್ಯವಿರುವುದಿಲ್ಲ. ಇದಕ್ಕಾಗಿ ಜಾಗತಿಕವಾಗಿ ಆಯ್ದ ಟಿವಿ ಚಾನೆಲ್‌ಗಳ ಜತೆ ಒಪ್ಪಂದ ಮಾಡಿಕೊಳ್ಳಲಾಗುವುದು ಎಂದು ಕಂಪೆನಿ ತಿಳಿಸಿದೆ.  ಬಳಕೆದಾರರು ಆಯ್ದ ಕಾರ್ಯಕ್ರಮದ ವಿಡಿಯೊವನ್ನು ಮಾತ್ರ ವೀಕ್ಷಿಸಲು ಅವಕಾಶ ಇರಲಿದೆ.
 
ಈ ಸೌಲಭ್ಯವನ್ನು ಮೊಬೈಲ್,  ಹಾಗೂ ಡೆಸ್ಕ್‌ಟಾಪ್‌ ಬಳಕೆದಾರರು ಪಡೆಯಬಹುದು. ಉತ್ತಮ ಗುಣಮಟ್ಟದ ಆಡಿಯೊ ಪರಿಚಯಿಸಲಾಗಿದೆ. ಹಾಗೇ ನಮ್ಮ ಪುಟದಲ್ಲಿರುವ ವಿಡಿಯೊವನ್ನು ಆಫ್‌ ಲೈನ್ ಮೋಡ್ ಇದ್ದಾಗಲೂ ವೀಕ್ಷಿಸಬಹುದು. ಈ ವೈಶಿಷ್ಟ್ಯ ಕೆಲವೇ ದಿನಗಳಲ್ಲಿ ಗ್ರಾಹಕರಿಗೆ ಲಭ್ಯವಾಗಲಿದ್ದು ಇದು ಉಚಿತ ಕೊಡುಗೆ ಎಂದು ಫೇಸ್‌ಬುಕ್‌ ಹೇಳಿದೆ.
 
ಫಿಷ್‌ ಫೈಂಡರ್ ಆ್ಯಪ್…
ಕೊಚ್ಚಿ ಮೂಲದ ಕೇಂದ್ರಿಯ ನೌಕಾ ಮೀನುಗಾರಿಕೆ ಸಂಶೋಧನಾ ಸಂಸ್ಥೆ (ಸಿಎಂಎಫ್ಆರ್ಐ) ಮೀನುಗಾರಿಕೆಯಲ್ಲಿ ತೊಡಗಿರುವವರಿಗಾಗಿ ನೂತನ ಫಿಷ್‌ ಫೈಂಡರ್ ಆ್ಯಪ್ ಅಭಿವೃದ್ಧಿಪಡಿಸಿದೆ.  
 
ಮೀನುಗಾರಿಕೆ ವಿಜ್ಞಾನ ವಿದ್ಯಾರ್ಥಿಗಳು, ಮೀನುಗಾರಿಕೆಯಲ್ಲಿ ತೊಡಗಿರುವವರು ಇದರ ಪ್ರಯೋಜನ ಪಡೆಯಬಹುದು. ಆ್ಯಪ್ ಮೂಲಕ ಮೀನುಗಳನ್ನು ಸುಲಭವಾಗಿ ಗುರುತಿಸಬಹುದು ಎಂದು ವಿನ್ಯಾಸಕರು ಹೇಳುತ್ತಾರೆ. ಮೊಬೈಲ್ ಫೋನ್‌ಗಳಿಗೆ ಈ ಆ್ಯಪ್ ಡೌನ್‌ಲೋಡ್‌ ಮಾಡಿಕೊಂಡು ಇಂಟರ್‌ನೆಟ್‌ ಸಂಪರ್ಕ ಇಲ್ಲದೆಯೇ ಬಳಸಬಹುದು.
 
ಇದರಲ್ಲಿ 369 ಮೀನಿನ ತಳಿಗಳ ಚಿತ್ರಗಳು ಮತ್ತು ವಿಡಿಯೊ ಅಪ್‌ಲೋಡ್‌ ಮಾಡಲಾಗಿದೆ. ಜತೆಯಲ್ಲಿ  66 ಮೀನುಗಳ ಗುಣ ಲಕ್ಷಣಗಳ ಬಗ್ಗೆ ಮಾಹಿತಿ ನೀಡಲಾಗಿದೆ. ಸಮುದ್ರದಲ್ಲಿ ಮೀನು ಹಿಡಿಯುವ ಮೀನುಗಾರರು, ತಾವು ಹಿಡಿದಿರುವ ಮೀನು ಯಾವುದು? ಅದು ಯಾವ ತಳಿಯದ್ದು,? ಅದು ಯಾವ ಪ್ರಭೇದಕ್ಕೆ ಸೇರಿದೆ? ಎಂಬುದನ್ನು ಸುಲಭವಾಗಿ ಪತ್ತೆ ಹಚ್ಚಬಹುದು. 
ಗೂಗಲ್ ಪ್ಲೇಸ್ಟೋರ್: Fish finder version 1
 
ನ್ಯೂನತೆ ಮಕ್ಕಳಿಗಾಗಿ ವಾಕ್ಯಾ ಆ್ಯಪ್…
ನೊಯಿಡಾ ಮೂಲದ ಪಾಂಟಿ ಚಡ್ಡಾ ಫೌಂಡೇಷನ್   ಬುದ್ಧಿಮಾಂದ್ಯರು, ಮಾತುಬಾರದ, ಸೆಲೆಬ್ರಲ್‌ಪಾಲ್ಸಿ ಮತ್ತು ಆರ್ಟಿಸಂ ನ್ಯೂನತೆಗೆ ತುತ್ತಾಗಿರುವ ಮಕ್ಕಳಿಗಾಗಿ ಕಲಿಕಾ ಆ್ಯಪ್ ಅನ್ನು ಅಭಿವೃದ್ಧಿಪಡಿಸಿದೆ. ಇದಕ್ಕೆ ‘ವಾಕ್ಯಾ’ ಎಂದು ಹೆಸರಿಡಲಾಗಿದೆ.  ನ್ಯೂನತೆ ಹೊಂದಿರುವ ಮಕ್ಕಳ ಕಲಿಕೆಗಾಗಿಯೇ ವಿಶೇಷವಾಗಿ ವಿನ್ಯಾಸ ಮಾಡಲಾಗಿದೆ.
 
ಸಾಮಾನ್ಯವಾಗಿ ನ್ಯೂನತೆ ಹೊಂದಿರುವ ಮಕ್ಕಳು ಚಿತ್ರಗಳನ್ನು ಸುಲಭವಾಗಿ ಗುರುತಿಸುತ್ತಾರೆ. ಚಿತ್ರಗಳು ಮತ್ತು ವಿಡಿಯೊಗಳ ಮೂಲಕ ಮಕ್ಕಳ ಕಲಿಕಾ ಗುಣಮಟ್ಟ  ಹೆಚ್ಚಿಸುವ ಸಲುವಾಗಿ ಈ ಆ್ಯಪ್ ಅಭಿವೃದ್ಧಿಪಡಿಸಲಾಗಿದೆ ಎಂದು ಸಂಸ್ಥೆಯ ಮುಖ್ಯಸ್ಥರಾದ ವಂದನಾ ಶರ್ಮಾ ಹೇಳುತ್ತಾರೆ. 
 
ಪ್ರಾಥಮಿಕ ಹಂತದ ಶಿಕ್ಷಣವನ್ನು ಈ ಆ್ಯಪ್ ಮೂಲಕ ಹೇಳಿಕೊಡಬಹುದು.   ಉಚಿತವಾಗಿ ಲಭ್ಯವಿರುವ ಆ್ಯಪ್ ಅನ್ನು ನ್ಯೂನತೆ ಮಕ್ಕಳ ಪೋಷಕರು ಹಾಗೂ ಶಾಲಾ ಶಿಕ್ಷಕರು ಡೌನ್‌ಲೋಡ್ ಮಾಡಿಕೊಂಡು ಕಲಿಸಬಹುದು. 
ಗೂಗಲ್ ಪ್ಲೇಸ್ಟೋರ್: vaakya app

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.