ADVERTISEMENT

ವ್ಯಾಪಾರ ಪರವಾನಗಿ ರದ್ದತಿ ಸಿ.ಎಂ.ಗೆ ಎಫ್‌ಕೆಸಿಸಿಐ ಮನವಿ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 19:30 IST
Last Updated 18 ಫೆಬ್ರುವರಿ 2017, 19:30 IST
ಎಫ್‌ಕೆಸಿಸಿಐ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ ಮತ್ತು ಕೆ. ರವಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು
ಎಫ್‌ಕೆಸಿಸಿಐ ಉಪಾಧ್ಯಕ್ಷರಾದ ಸುಧಾಕರ ಶೆಟ್ಟಿ ಮತ್ತು ಕೆ. ರವಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿತು   

ಬೆಂಗಳೂರು: ಎಲ್ಲ ವ್ಯಾಪಾರ, ಉದ್ದಿಮೆ ಮತ್ತು ಸೇವಾ ಕ್ಷೇತ್ರಗಳಿಗೆ ಪರವಾನಗಿ  (ಟ್ರೇಡ್ ಲೈಸೆನ್ಸ್) ರದ್ದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಬಜೆಟ್‌ನಲ್ಲಿ ಈಡೇರಿಸುವಂತೆ ಕರ್ನಾಟಕ ವಾಣಿಜ್ಯೋದ್ಯಮ ಮಹಾಸಂಘ (ಎಫ್‌ಕೆಸಿಸಿಐ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದೆ.

ವಿವಿಧ ಕೈಗಾರಿಕಾ ಸಂಸ್ಥೆಗಳ ಪ್ರತಿನಿಧಿಗಳ ಜೊತೆ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ 2017-18ನೇ ಸಾಲಿನ ಬಜೆಟ್ ಕುರಿತು ಸಿದ್ದರಾಮಯ್ಯ ಅವರು ಪೂರ್ವಭಾವಿ ಸಭೆ ನಡೆಸಿದರು. ಎಫ್‌ಕೆಸಿಸಿಐ ಉಪಾಧ್ಯಕ್ಷರಾದ ಕೆ. ರವಿ, ಸುಧಾಕರ ಶೆಟ್ಟಿ ನೇತೃತ್ವದ ನಿಯೋಗ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಿತು.

ಸಣ್ಣ, ಅತಿ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೆಗಳಿಗೆ ಕೈಗಾರಿಕಾ ನಿವೇಶನವನ್ನು 2 ಎಕರೆವರೆಗೆ ಗುತ್ತಿಗೆ ಮತ್ತು ಮಾರಾಟ ಆಧಾರದ ಮೇಲೆ ನೀಡಬೇಕು. ಆಸ್ತಿಗಳ ಮಾರ್ಗಸೂಚಿ ಮೌಲ್ಯ ಶೇ10 ರಿಂದ ಶೇ 30ಕ್ಕೆ ಹೆಚ್ಚಿಸುವುದನ್ನು ಕೈಬಿಡಬೇಕು. ಡಿಜಿಟಲ್ ವ್ಯವಹಾರದ ಉತ್ತೇಜನಕ್ಕೆ ಇ- ವಾಲೆಟ್‌ ಪ್ರಚಾರ ವ್ಯಾಪಕವಾಗಿ ಕೈಗೊಳ್ಳಬೇಕು ಎಂದೂ ಮನವಿ ಮಾಡಲಾಗಿದೆ.

ADVERTISEMENT

ಬೆಂಗಳೂರು ಮಹಾನಗರವನ್ನು ಮೆಗಾಸಿಟಿಯಾಗಿ ಅಭಿವೃದ್ಧಿಪಡಿಸುವುದು ಹಾಗೂ  ಬ್ರ್ಯಾಂಡ್ ಬೆಂಗಳೂರು ಎಂದು ಜಾಗತಿಕವಾಗಿ ಪರಿಚಯಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಬೇಕು. ಯಲಹಂಕ ಮತ್ತು ಬಿಡದಿಯಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಗ್ಯಾಸ್ ಆಧಾರಿತ  ವಿದ್ಯುತ್‌ ಉತ್ಪಾದನಾ ಯೋಜನೆಯ ಒಪ್ಪಂದವನ್ನು ಶೀಘ್ರ ಜಾರಿಗೆ ತರಬೇಕು ಎಂಬ ಬೇಡಿಕೆಯನ್ನೂ ಮುಂದಿಟ್ಟಿದೆ.₹ 10 ಲಕ್ಷಕ್ಕಿಂತ ಹೆಚ್ಚು ಮೊತ್ತದ ಸಾಲಕ್ಕೆ ಹಣಕಾಸು ಸಂಸ್ಥೆಗಳಲ್ಲಿ ಆಸ್ತಿ ಅಡ ಇಡಲು ಭರಿಸಬೇಕಾದ ಸಾಲದ ಮೊತ್ತದ ಶೇ 2ರಷ್ಟು ಕರ ರದ್ದು ಮಾಡಬೇಕು ಎಂದೂ ಮನವಿ ಮಾಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.