ADVERTISEMENT

ಷೇರುಪೇಟೆಯಲ್ಲಿ ಎರಡನೇ ದಿನವೂ ಖರೀದಿಯ ಭರಾಟೆ

ಪಿಟಿಐ
Published 16 ಮೇ 2017, 19:40 IST
Last Updated 16 ಮೇ 2017, 19:40 IST
ಷೇರುಪೇಟೆಯಲ್ಲಿ ಎರಡನೇ ದಿನವೂ ಖರೀದಿಯ ಭರಾಟೆ
ಷೇರುಪೇಟೆಯಲ್ಲಿ ಎರಡನೇ ದಿನವೂ ಖರೀದಿಯ ಭರಾಟೆ   

ಮುಂಬೈ: ಮುಂಬೈ ಷೇರುಪೇಟೆಯ ಸಂವೇದಿ ಸೂಚ್ಯಂಕವು ಸತತ ಎರಡನೆ ವಹಿವಾಟಿನ ದಿನವೂ ಹೊಸ ದಾಖಲೆ ಬರೆದಿದೆ.

ಉದ್ದಿಮೆ ಸಂಸ್ಥೆಗಳ ನಾಲ್ಕನೆ ತ್ರೈಮಾಸಿಕದ ಉತ್ತಮ ಹಣಕಾಸು ಸಾಧನೆ ಮತ್ತು ಮುಂಗಾರು ಮಳೆ ಮುಂಚಿತವಾಗಿಯೇ ಪ್ರವೇಶಿಸುತ್ತಿರುವ ಸಕಾರಾತ್ಮಕ ಬೆಳವಣಿಗೆಗಳಿಂದ ಹೂಡಿಕೆದಾರರಲ್ಲಿ ಉತ್ಸಾಹ ಗರಿಗೆದರಿದೆ.

ಹೀಗಾಗಿ ಮುಂಬೈ ಷೇರುಪೇಟೆ (ಬಿಎಸ್‌ಇ) ಮತ್ತು ರಾಷ್ಟ್ರೀಯ ಷೇರುಪೇಟೆಯಲ್ಲಿ (ನಿಫ್ಟಿ) ಮಂಗಳವಾರವೂ ಖರೀದಿ ವಹಿವಾಟು ಜೋರಾಗಿಯೇ ನಡೆಯಿತು.

ಖರೀದಿ ಭರಾಟೆಯ ಫಲವಾಗಿ ಬಿಎಸ್‌ಇ ಸಂವೇದಿ ಸೂಚ್ಯಂಕವು ಇದೇ ಮೊದಲ ಬಾರಿಗೆ 30,582 ಮತ್ತು ‘ನಿಫ್ಟಿ’ 9,500 ಅಂಶಗಳ ಗಡಿ ದಾಟಿದವು.

‘ಅಷ್ಟೇನೂ ಗಮನಾರ್ಹ ಹಣಕಾಸು ಸಾಧನೆ ಪ್ರದರ್ಶಿಸದ ದೂರಸಂಪರ್ಕ, ಐಟಿ ಮತ್ತು ಔಷಧಿ ತಯಾರಿಕಾ ಸಂಸ್ಥೆಗಳ ಷೇರುಗಳು ಕೂಡ ಉತ್ತಮ ಬೆಲೆ ದಾಖಲಿಸಿರುವುದು ಮಾತ್ರ ಕೆಲಮಟ್ಟಿಗೆ ಕಳವಳಕ್ಕೆ ಎಡೆಮಾಡಿಕೊಟ್ಟಿದೆ’ ಎಂದು ಜಿಯೊಜಿತ್‌ ಫೈನಾನ್ಶಿಯಲ್‌ ಸರ್ವಿಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್‌ ನಾಯರ್‌ ಪ್ರತಿಕ್ರಿಯಿಸಿದ್ದಾರೆ.

ದೇಶಿ ಆರ್ಥಿಕತೆಯು ಉತ್ಪಾದನಾ ಬೆಳಗಣಿಗೆ ಹಂತ ಪ್ರವೇಶಿಸಿದೆ ಎಂದು ಮೋರ್ಗನ್‌ ಸ್ಟ್ಯಾನ್ಲೆ ಸಂಸ್ಥೆ ಅಭಿಪ್ರಾಯಪಟ್ಟಿರುವುದು ಮತ್ತು ಆರ್ಥಿಕ ವೃದ್ಧಿ ದರ (ಜಿಡಿಪಿ) ಡಿಸೆಂಬರ್‌ ಹೊತ್ತಿಗೆ ಶೇ 7.9ರಷ್ಟಾಗಲಿದೆ ಎನ್ನುವ ಅಂದಾಜು ಪೇಟೆಯಲ್ಲಿ ಖರೀದಿ ಉತ್ಸಾಹಕ್ಕೆ ಎಡೆಮಾಡಿಕೊಟ್ಟಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.