ADVERTISEMENT

ಷೇರುಪೇಟೆಯಲ್ಲೂ ಉತ್ಸಾಹ

ಪಿಟಿಐ
Published 17 ನವೆಂಬರ್ 2017, 19:36 IST
Last Updated 17 ನವೆಂಬರ್ 2017, 19:36 IST
ಷೇರುಪೇಟೆಯಲ್ಲೂ ಉತ್ಸಾಹ
ಷೇರುಪೇಟೆಯಲ್ಲೂ ಉತ್ಸಾಹ   

ಮುಂಬೈ: ಭಾರತದ ಸಾಲ ಮರುಪಾವತಿ ಸಾಮರ್ಥ್ಯ ಸುಧಾರಿಸಿದೆ ಎಂದು ಮೂಡೀಸ್‌ ಸಂಸ್ಥೆಯ ವರದಿಯು ಷೇರುಪೇಟೆಯಲ್ಲಿ ಸಕಾರಾತ್ಮಕ ವಹಿವಾಟು ನಡೆಯುವಂತೆ ಮಾಡಿತು.

ಹೂಡಿಕೆದಾರರಲ್ಲಿ ಹೊಸ ಉತ್ಸಾಹ ಮೂಡಿಸಿದೆ. ಇದರಿಂದ ಸೂಚ್ಯಂಕಗಳು ಏರಿಕೆ ಕಂಡಿವೆ ಎಂದು ತಜ್ಞರು ಹೇಳಿದ್ದಾರೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ವಹಿವಾಟಿನ ಆರಂಭದಲ್ಲಿಯೇ 414 ಅಂಶಗಳಷ್ಟು ಜಿಗಿತ ಕಂಡಿತ್ತು. ಆ ಬಳಿಕ ಹೂಡಿಕೆದಾರರು ಲಾಭ ಗಳಿಕೆ ಉದ್ದೇಶದ ವಹಿವಾಟು ನಡೆಸಿದ್ದರಿಂದ ಸೂಚ್ಯಂಕದ ಏರಿಕೆಗೆ ಕಡಿವಾಣ ಬಿತ್ತು. ವಹಿವಾಟಿನ ಅಂತ್ಯದ ವೇಳೆಗೆ ಒಟ್ಟಾರೆ 235 ಅಂಶಗಳ ಏರಿಕೆ ಕಂಡು, 33, 342 ಅಂಶಗಳಿಗೆ ತಲುಪಿತ್ತು.

ADVERTISEMENT

ಗುರುವಾರದ ವಹಿವಾಟಿನಲ್ಲಿ ಸಂವೇದಿ ಸೂಚ್ಯಂಕ 346 ಅಂಶ ಏರಿಕೆ ಕಂಡಿತ್ತು.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ ದಿನದ ವಹಿವಾಟಿನಲ್ಲಿ 10,300ರ ಗಡಿ ತಲುಪಿತ್ತು. ದಿನದ ಅಂತ್ಯದಲ್ಲಿ ಒಟ್ಟು 68 ಅಂಶ ಏರಿಕೆಯೊಂದಿಗೆ 10,283 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

‘ದೇಶದ ಅಭಿವೃದ್ಧಿ ದೃಷ್ಟಿಯಿಂದ ಇದೊಂದು ಸಕಾರಾತ್ಮಕ ಬೆಳವಣಿಗೆ. ರೇಟಿಂಗ್‌ ಮೇಲ್ದರ್ಜೆಗೆ ಏರಿಕೆ ಆಗಿರುವುದರಿಂದ ಷೇರುಪೇಟೆಯಲ್ಲಿ ವಿದೇಶಿ ಹೂಡಿಕೆ ಪ್ರಮಾಣ ಹೆಚ್ಚಾಗಲಿದೆ’ ಎಂದು ಬಿಎನ್‌ಪಿ ಪರಿಬಾಸ್‌ ಮ್ಯೂಚುವಲ್ ಫಂಡ್‌ನ ವ್ಯವಸ್ಥಾಪಕ ಕಾರ್ತಿಕ್‌ರಾಜ್‌ ಲಕ್ಷ್ಮಣನ್‌ ಹೇಳಿದ್ದಾರೆ.

ಬ್ಯಾಂಕ್‌ ಷೇರುಗಳು ಏರಿಕೆ: ಸೂಚ್ಯಂಕ ಏರಿಕೆ ಕಂಡಿರುವುದರಿಂದ ಬ್ಯಾಂಕಿಂಗ್‌ ವಲಯದ ಷೇರುಗಳು ಶೇ 2 ರಷ್ಟು ಏರಿಕೆ ಕಂಡಿವೆ. ಮುಖ್ಯವಾಗಿ ಐಸಿಐಸಿಐ ಬ್ಯಾಂಕ್‌ ಶೇ 1.86 ರಷ್ಟು ಗರಿಷ್ಠ ಏರಿಕೆ ಕಂಡಿದೆ. ಇಂಡಸ್‌ಇಂಡ್ ಬ್ಯಾಂಕ್‌ (ಶೇ 1.70), ಯೆಸ್‌ ಬ್ಯಾಂಕ್ (ಶೇ 1.62), ಎಸ್‌ಬಿಐ (ಶೇ 1.18) ಮತ್ತು ಎಚ್‌ಡಿಎಫ್‌ಸಿ ಬ್ಯಾಂಕ್‌ (ಶೇ 1) ಷೇರುಗಳು ಏರಿಕೆ ಕಂಡಿವೆ.

**

ಸಂಪ‍ತ್ತು ವೃದ್ಧಿ

ಸಂವೇದಿ ಸೂಚ್ಯಂಕ ಏರಿಕೆ ಕಂಡಿರುವುದರಿಂದ ಹೂಡಿಕೆದಾರರ ಸಂಪತ್ತು ₹1.71 ಲಕ್ಷ ಕೋಟಿಗಳಷ್ಟು ಹೆಚ್ಚಾಗಿದೆ. ಇದರಿಂದ ಮಾರುಕಟ್ಟೆ ಬಂಡವಾಳ ಮೌಲ್ಯ ₹145 ಲಕ್ಷ ಕೋಟಿಗಳಿಗೆ ಏರಿಕೆ ಕಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.