ADVERTISEMENT

ಷೇರುಪೇಟೆ: ಸೂಚ್ಯಂಕ, ನಿಫ್ಟಿ ಗರಿಷ್ಠ ವಹಿವಾಟು

ಅಧಿವೇಶನದಲ್ಲಿ ಆರ್ಥಿಕ ಸುಧಾರಣಾ ಕ್ರಮಗಳ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2014, 19:30 IST
Last Updated 24 ನವೆಂಬರ್ 2014, 19:30 IST

ಮುಂಬೈ (ಪಿಟಿಐ): ಕಳೆದ ಕೆಲವು ದಿನಗಳಿಂದ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸುತ್ತಿರುವ ದೇಶದ ಷೇರುಪೇಟೆಗಳು ಸೋಮವಾರವೂ ಹೊಸ ಮಟ್ಟ ತಲುಪಿವೆ.

ವಾರದ ಪೇಟೆಯ ವಹಿವಾಟಿನ ಆರಂಭದ ದಿನವೇ ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ (ಬಿಎಸ್‌ಇ)  ಸಂವೇದಿ ಸೂಚ್ಯಂಕ  28,499 ಅಂಶಗಳ ಮತ್ತು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರದ (ಎನ್ಎಸ್‌ಇ) ಸೂಚ್ಯಂಕ ‘ನಿಫ್ಟಿ’ 8,500 ಅಂಶಗಳ ಹೊಸ ಮಟ್ಟ ತಲುಪಿದವು.

ಸಂಸತ್‌ ಚಳಿಗಾಲದ ಅಧಿವೇಶನ ಸೋಮವಾರದಿಂದ ಆರಂಭವಾಗಿದ್ದು,  ಅಧಿವೇಶನದಲ್ಲಿ ಆರ್ಥಿಕ ಸುಧಾರಣೆಗೆ ಹಲವು ಕ್ರಮಗಳನ್ನು ಪ್ರಕಟಿಸುವ ನಿರೀಕ್ಷೆ ಮೇರೆಗೆ ಪೇಟೆಗಳಿಗೆ ಹೆಚ್ಚಿನ ಬಂಡವಾಳ  ಹರಿದುಬಂದಿತು. ಇದರಿಂದ ಪೇಟೆ ದಾಖಲೆ ಮಟ್ಟದಲ್ಲಿ ವಹಿವಾಟು ನಡೆಸು­ವಂತಾಯಿತು.

ಬಿಎಸ್‌ಇನ 30 ಷೇರುಗಳು 28,413 ಅಂಶಗಳಲ್ಲಿ ವಹಿವಾಟು ಆರಂಭಿಸಿದವು. ಮಧ್ಯಾಹ್ನ 28,541­ರಷ್ಟು ಗರಿಷ್ಠ ಅಂಶಗಳನ್ನು ತಲುಪಿದವು. ಅಂತಿಮವಾಗಿ 165 ಅಂಶಗಳಷ್ಟು ಏರಿಕೆ ಕಂಡ ಸೂಚ್ಯಂಕ ಗರಿಷ್ಠ 28,449 ಅಂಶಗಳಲ್ಲಿ ವಹಿವಾಟು ಮುಕ್ತಾಯ­ಗೊಳಿಸಿತು. 28,394 ದಿನದ ವಹಿವಾಟಿನ ಕನಿಷ್ಠ ಅಂಶವಾಗಿದೆ.

ಚೀನಾದಲ್ಲಿ ಬಡ್ಡಿದರ ಕಡಿತದ ನಿರ್ಧಾರ ಮತ್ತು ಆರ್ಥಿಕ ಉತ್ತೇಜನ ಯೋಜನೆಗಳನ್ನು ಮುಂದುವರಿ­ಸುವ ಯೂರೋಪಿನ ಕೇಂದ್ರ ಬ್ಯಾಂಕಿನ ನಿರ್ಧಾರವೂ ಕೂಡಾ ವಹಿವಾಟು ಏರಿಕೆಗೆ ಕಾರಣವಾಯಿತು ಎಂದು ದಳ್ಳಾಳಿಗಳು ಅಭಿಪ್ರಾಯಪಟ್ಟರು.

ಎನ್‌ಎಸ್‌ಇ ‘ನಿಫ್ಟಿ’ಯ 50 ಷೇರುಗಳು ಕೂಡಾ ದಾಖಲೆ ಮಟ್ಟ ತಲುಪಿದವು. ನಿಫ್ಟಿ 52 ಅಂಶಗಳಷ್ಟು ಏರಿಕೆ ಕಂಡು, 8,534 ಅಂಶಗಳಿಗೆ ದಾಖಲೆ ಏರಿಕೆ ಕಂಡು, 8,530ರಲ್ಲಿ ದಿನದ ವಹಿವಾಟು ಅಂತ್ಯಗೊಳಿಸಿತು. ಶುಕ್ರವಾರದ ವಹಿವಾಟಿನಲ್ಲಿ ನಿಫ್ಟಿ 8,489ರಷ್ಟಿತ್ತು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.