ADVERTISEMENT

ಷೇರು ಹೂಡಿಕೆದಾರರಿಗೆ ₹3 ಲಕ್ಷ ಕೋಟಿ ನಷ್ಟ

​ಪ್ರಜಾವಾಣಿ ವಾರ್ತೆ
Published 6 ಅಕ್ಟೋಬರ್ 2015, 19:47 IST
Last Updated 6 ಅಕ್ಟೋಬರ್ 2015, 19:47 IST

ಯಾವುದೇ ದೇಶದ ಹಣಕಾಸು ಮಾರುಕಟ್ಟೆಯಾಗಿರಲಿ, ಅದರಲ್ಲಿ ಷೇರುಪೇಟೆಯಷ್ಟು ಚಂಚಲವಾಗಿರುವುದು ಮತ್ತೊಂದಿಲ್ಲ ಎಂದೇ ಹೇಳಬಹುದು. ಷೇರುಪೇಟೆಯ ಸಂವೇದಿ ಸೂಚ್ಯಂಕಗಳಂತೂ ಅದರ ಹೆಸರಿನಷ್ಟೇ ಸೂಕ್ಷ್ಮ ಸಂವೇದಿಯವ. ಒಂದು ಸಣ್ಣ ವದಂತಿಗೇ ಆದರೂ ಅದು ಮೇಲೆ–ಕೆಳಗೆ ಆಡಿಬಿಡುತ್ತದೆ.

ಪ್ರಸಕ್ತ ಹಣಕಾಸು ವರ್ಷದಲ್ಲಿ ಭಾರತದ ಷೇರುಪೇಟೆ ಮೇಲೇರಿದ್ದಕ್ಕಿಂತ ಕೆಳಕ್ಕೆ ಜಾರಿದ್ದೇ ಹೆಚ್ಚು. ಅದರಲ್ಲೂ ಅಮೆರಿಕ ಫೆಡರಲ್‌ ಬ್ಯಾಂಕ್‌ ಬಡ್ಡಿದರ ಏರಿಸಲಿದೆ ಎಂಬ ಮಾತುಗಳು ಕೇಳಿಬಂದಾಗ ಮುಂಬೈ ಷೇರುಪೇಟೆಯಲ್ಲಿ ಭಾರಿ ಕಂಪನವಾಗಿತ್ತು. ಮುಂಬೈ ಷೇರು ವಿನಿಮಯ ಕೇಂದ್ರದ ಸಂವೇದಿ ಸೂಚ್ಯಂಕ 1,636 ಅಂಶಗಳಷ್ಟು ಹಾನಿ ಅನುಭವಿಸಿತ್ತು.

ಕಳೆದ ತಿಂಗಳ ಚೀನಾ ತನ್ನ ಕರೆನ್ಸಿ ಯುವಾನ್‌ ಮೌಲ್ಯವನ್ನು ತಗ್ಗಿಸಿದಾಗಲೂ ಭಾರತದ ಷೇರುಪೇಟೆ ಮೇಲೆಯೂ ಅದರ ಪರಿಣಾಮವಾಗಿತ್ತು. ಸೂಚ್ಯಂಕಗಳು ಕೆಳಕ್ಕಿಳಿದಿದ್ದವು.

ಷೇರುಪೇಟೆ ಏರಿಕೆ–ಇಳಿಕೆ ಎಂಬ ಹಾವು ಏಣಿ ಆಟದಲ್ಲಿ ಮೊದಲಿಗೆ ನೇರವಾಗಿ ಪೆಟ್ಟು ತಿನ್ನುವವರು ಷೇರುಗಳ ಮೇಲೆ ಹಣ ತೊಡಗಿಸಿದವರು.

ಷೇರುಪೇಟೆಯಲ್ಲಿ ಹಣ ತೊಡಗಿಸುವವರಲ್ಲಿ ಹಲವು ಬಗೆ. ಚಿಲ್ಲರೆ ವಹಿವಾಟುದಾರರು, ದೇಶ–ವಿದೇಶದ ಸಾಂಸ್ಥಿಕ ಹೂಡಿಕೆದಾರರು, ಕಂಪೆನಿಗಳು, ಮ್ಯೂಚುವಲ್‌ ಫಂಡ್‌ ಸಂಸ್ಥೆಗಳು, ಬ್ಯಾಂಕ್‌ಗಳು, ಪಿಂಚಣಿ ನಿಧಿ ಸಂಸ್ಥೆಗಳೂ ಷೇರುಪೇಟೆಯಲ್ಲಿ ಹಣ ಹೂಡಿಕೆ ಮಾಡಿ ಲಾಭ ನಿರೀಕ್ಷಿಸುತ್ತವೆ.

ಹಾಗೆಂದು ಸದಾಕಾಲವೂ ಲಾಭವೇ ಬರುತ್ತದೆ ಎಂದು ಹೇಳಲಾಗದು. ಅದೆಷ್ಟೇ ಜಾಣತನದಿಂದ, ಆಳವಾದ ಅಧ್ಯಯನ ನಡೆಸಿ, ಸಾಕಷ್ಟು ಲೆಕ್ಕಾಚಾರ ಹಾಕಿ, ತಜ್ಞರ ಸಲಹೆಗಳನ್ನು ಪಡೆದು ಷೇರುಪೇಟೆಯಲ್ಲಿ ಹೂಡಿಕೆ ಮಾಡಿದ್ದರೂ ನಷ್ಟ ಅಗುವ ಸಂಭವವಿರುತ್ತದೆ.

ಏಕೆಂದರೆ, ಷೇರುಪೇಟೆಯ ನಡೆ ಈ ದಿನ, ಈ ಗಳಿಗೆಯಲ್ಲಿ ಹೀಗೇ ಇರುತ್ತದೆ ಎಂದು ಮುಂಚಿತವಾಗಿಯೇ ಅಂದಾಜು ಮಾಡುವುದು ಅಷ್ಟು ಸುಲಭವಲ್ಲ. ಷೇರುಪೇಟೆಯ ಮೇಲೆ ಪ್ರತಿ ದಿನ, ಪ್ರತಿ ಕ್ಷಣ ಒಂದಲ್ಲಾ ಒಂದು ಮಹತ್ವದ ಸಂಗತಿ ನಕಾರಾತ್ಮಕ ಇಲ್ಲವೇ ಸಕಾರಾತ್ಮಕ ಪರಿಣಾಮವನ್ನು ಬೀರುತ್ತಲೇ ಇರುತ್ತವೆ.

ಬಹಳಷ್ಟು ಸಂದರ್ಭಗಳಲ್ಲಿ ವದಂತಿಗಳದ್ದೇ ಕಾರುಬಾರು ಇರುತ್ತದೆ. ಅದು ಒಂದು ಕಂಪೆನಿಗೆ ಸಂಬಂಧಿಸಿದ್ದಾಗಿರಬಹುದು, ವಾಣಿಜ್ಯ –ಉದ್ಯಮದ ಒಂದು ವಲಯಕ್ಕೆ ಸೇರಿದ್ದಾಗಿರಬಹುದು, ಇಲ್ಲವೇ ದೇಶದ ಅರ್ಥ ವ್ಯವಸ್ಥೆಗೋ, ರಕ್ಷಣಾ ವ್ಯವಸ್ಥೆಗೋ ಬಂಧಿಸಿದ್ದಾಗಿರಬಹುದು, ಅಥವಾ ಜಾಗತಿಕ ಮಟ್ಟದ ಬೆಳವಣಿಗೆಗಳಾಗಿರಬಹುದು.... ಒಟ್ಟಿನಲ್ಲಿ ಕೆಲವು ಸಂಗತಿಗಳು ಆಯಾ ದಿನದಲ್ಲಿ ಷೇರುಪೇಟೆಯ ಮೇಲೆ ಪ್ರಭಾವ ಬೀರುತ್ತಲೇ ಇರುತ್ತವೆ. ಸೂಚ್ಯಂಕಗಳು ಮೇಲೇರಲೋ, ಕೆಳಕ್ಕೆ ಜಾರಲೋ ಕಾರಣವಾಗುತ್ತಿರುತ್ತವೆ.

ಮುಂಬೈ ಷೇರು ವಿನಿಮಯ ಕೇಂದ್ರದಲ್ಲಿ ವಹಿವಾಟು ನಡೆಸುವ ಕಂಪೆನಿಗಳ ಷೇರುಗಳನ್ನು ಕಂಪೆನಿಗಳ ಸಾಮರ್ಥ್ಯ, ಷೇರುಗಳ ಮುಖಬೆಲೆ, ಸೂಚ್ಯಂಕಗಳ ಮೇಲೆ ಅವು ಬೀರುವ ಪ್ರಭಾವ, ವಹಿವಾಟಿನ ನಿರಂತರತೆ ಮೊದಲಾದ ಅಂಶಗಳನ್ನು ಆಧರಿಸಿ ವಿವಿಧ ಗುಂಪುಗಳಾಗಿ ವಿಂಗಡಿಸಲಾಗಿರುತ್ತದೆ.

ಬಿಎಸ್‌ಇಯಲ್ಲಿ ಎ, ಬಿ, ಡಿ, ಡಿಟಿ, ಇ, ಪಿ, ಎಸ್‌/ಎಸ್‌ಟಿ, ಎಂ/ಎಂಟಿ, ಟಿ, ಜೆಡ್‌, ಜೆಡ್‌ಪಿ, ಎಫ್‌, ಜಿ ಎಂದು ವರ್ಗೀಕರಿಸಲಾಗಿದೆ. ಇದರಲ್ಲಿ ಎ ಗುಂಪಿನಲ್ಲಿ ಷೇರುಗಳ ಸಂಖ್ಯೆ, ವಹಿವಾಟು ಮೊತ್ತ ಎಲ್ಲವೂ ಜೋರಾಗಿಯೇ ಇರುತ್ತದೆ.
2015ರ ಏಪ್ರಿಲ್‌ 1ರಿಂದ ಅಕ್ಟೋಬರ್‌ 1ರವರೆಗಿನ ಅವಧಿಯಲ್ಲಿ, ಅಂದರೆ ಆರು ತಿಂಗಳಲ್ಲಿ ಬಿಎಸ್‌ಇಯಲ್ಲಿ ಒಟ್ಟು 125 ದಿನಗಳ ಕಾಲ ವಹಿವಾಟು ನಡೆದಿದೆ.

ಒಟ್ಟಾರೆಯಾಗಿ 13 ಗುಂಪುಗಳಲ್ಲಿನ ಷೇರುಗಳಿಂದ ₹3,86,897.77 ಕೋಟಿಗಳಷ್ಟು ವಹಿವಾಟು ನಡೆದಿದೆ.

ಎ ಗುಂಪಿನಲ್ಲಿಯೇ ₹2,82,697.83 ಕೋಟಿಗಳಷ್ಟು ಮೊತ್ತದ ವಹಿವಾಟು ನಡೆದಿದೆ.
ಬಿ ಗುಂಪಿನಲ್ಲಿ ₹96,918.34 ಕೋಟಿಗಳ ವಹಿವಾಟಾಗಿದೆ.

ಹೂಡಿಕೆದಾರರಿಗೆ ನಷ್ಟ
ಕಳೆದ ಆರು ತಿಂಗಳುಗಳಲ್ಲಿ ಮುಂಬೈ ಷೇರುಪೇಟೆಯಲ್ಲಿ ನಡೆದ ವಹಿವಾಟಿನಲ್ಲಿ ಹೂಡಿಕೆದಾರರಿಗೆ ಲಾಭಕ್ಕಿಂತ ನಷ್ಟವೇ ಅಧಿಕವಾಗಿದೆ.
ಹೂಡಿಕೆದಾರರು ಈವರೆಗೆ  ₹3 ಲಕ್ಷ ಕೋಟಿಗಳಷ್ಟು ಸಂಪತ್ತು ಕಳೆದುಕೊಂಡಿದ್ದಾರೆ.

ಅಷ್ಟೇ ಅಲ್ಲದೇ, ಷೇರುಪೇಟೆಯಲ್ಲಿನ ಸಾವಿರಾರು ಕಂಪೆನಿಗಳ ಒಟ್ಟು ಷೇರುಗಳ ಬಂಡವಾಳ ಮೌಲ್ಯವೂ ₹95.40 ಲಕ್ಷ ಕೋಟಿಗಳಿಗೆ ಇಳಿಕೆಯಾಗಿದೆ.

ಸಂಪತ್ತು ಲೆಕ್ಕ ಹೇಗೆ?
ಮುಂಬೈ ಷೇರುಪೇಟೆಯಲ್ಲಿ ನೋಂದಾಯಿತ ಷೇರುಗಳ ಒಟ್ಟು ಬಂಡವಾಳ ಮೌಲ್ಯದ ಆಧಾರದ ಮೇಲೆ  ಹೂಡಿಕೆದಾರರ ಸಂಪತ್ತು ಲೆಕ್ಕ ಹಾಕಲಾಗುತ್ತದೆ.

2014ರಲ್ಲಿ ಷೇರುಪೇಟೆ ಹೂಡಿಕೆ ದಾರರು ₹28 ಲಕ್ಷ ಕೋಟಿಗಳಷ್ಟು ಲಾಭ ಗಳಿಸುವ ಮೂಲಕ ಒಟ್ಟು ಬಂಡವಾಳ ಮೌಲ್ಯವನ್ನು ₹98.36 ಲಕ್ಷ ಕೋಟಿಗಳಿಗೆ ಹೆಚ್ಚಿಸಿಕೊಂಡಿದ್ದರು. ನಂತರ ಅದು ₹100 ಲಕ್ಷ ಕೋಟಿಯನ್ನೂ ಮೀರಿತ್ತು.

ಪ್ರಮುಖ ಕಂಪೆನಿಗಳು ನಿರೀಕ್ಷಿತ ಮಟ್ಟದಲ್ಲಿ ತ್ರೈಮಾಸಿಕ ಫಲಿತಾಂಶ ಪ್ರದರ್ಶಿಸದೇ ಇರುವುದು ಹಾಗೂ ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ ಕಳೆದ ಕೆಲವು ತಿಂಗಳು ಗಳಿಂದ ಷೇರುಪೇಟೆ ಹೆಚ್ಚು ಚಂಚಲ ವಾಗಿದೆ. ಇದರಿಂದ ಹೂಡಿಕೆದಾರರ ಸಂಪತ್ತು ಕರಗಲಾರಂಭಿಸಿದೆ ಎಂದು ಪರಿಣತರು ಹೇಳಿದ್ದಾರೆ.

ಚೀನಾದಲ್ಲಿನ ಮಂದಗತಿ ಆರ್ಥಿಕ ಪ್ರಗತಿ ಮತ್ತು ಕರೆನ್ಸಿ ‘ಯುವಾನ್‌’ನ ಅಪಮೌಲ್ಯ ಭಾರತದ ಷೇರುಪೇಟೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರಿದೆ.

ಆಗಸ್ಟ್‌ನಲ್ಲಿ ವಿದೇಶಿ ಹೂಡಿಕೆ ದಾರರು ಷೇರುಪೇಟೆಯಿಂದ ₹17,428 ಕೋಟಿ ಬಂಡವಾಳ ವನ್ನು ಹಿಂದಕ್ಕೆ ಪಡೆದಿದ್ದಾರೆ. ಇದು 1997ರ ನಂತರದ ಗರಿಷ್ಠ ಪ್ರಮಾಣದ ವಿದೇಶಿ ಹೂಡಿಕೆ ಹೊರಹರಿವಾಗಿದೆ.

ಸೆಪ್ಟೆಂಬರ್‌ನಲ್ಲಿ ಈವರೆಗೆ ಒಟ್ಟು ₹5 ಸಾವಿರ ಕೋಟಿ ಬಂಡವಾಳ ಹಿಂದಕ್ಕೆ ಪಡೆದಿದ್ದಾರೆ. 2014ರಲ್ಲಿ ಬಿಎಸ್‌ಇ ಸೂಚ್ಯಂಕ 6,329 ಅಂಶ ಏರಿಕೆ ಕಂಡಿತ್ತು. ಇದು 2009ರ ನಂತರದ (7,819)  ಅತಿ ಗರಿಷ್ಠ ಏರಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.