ADVERTISEMENT

ಸಂಪತ್ತಿನ ದಾನ ವಾಗ್ದಾನಕ್ಕೆ ನಂದನ್‌, ರೋಹಿಣಿ ಸೇರ್ಪಡೆ

​ಪ್ರಜಾವಾಣಿ ವಾರ್ತೆ
Published 20 ನವೆಂಬರ್ 2017, 19:30 IST
Last Updated 20 ನವೆಂಬರ್ 2017, 19:30 IST
ನಿಲೇಕಣಿ
ನಿಲೇಕಣಿ   

ಬೆಂಗಳೂರು: ವಿಶ್ವದ ಆಗರ್ಭ ಸಿರಿವಂತರು ಆರಂಭಿಸಿರುವ  ‘ದಾನ ನೀಡುವ ವಾಗ್ದಾನ’ ಜಾಲಕ್ಕೆ ಸೇರ್ಪಡೆಯಾಗಲು ಇನ್ಫೊಸಿಸ್ ಸಹಸ್ಥಾಪಕ ನಂದನ್‌ ನಿಲೇಕಣಿ ಮತ್ತು ಅವರ ಪತ್ನಿ ರೋಹಿಣಿ ನಿಲೇಕಣಿ ಅವರು ಮುಂದಾಗಿದ್ದಾರೆ.

ತಮ್ಮ ಸಂಪತ್ತಿನ ಅರ್ಧ ಭಾಗವನ್ನು ದಾನ ಧರ್ಮ ಉದ್ದೇಶಕ್ಕೆ ನೀಡಲು ಬದ್ಧತೆ ತೋರುವ ಸಿರಿವಂತರು ಈ ಜಾಲಕ್ಕೆ ಸೇರ್ಪಡೆಯಾಗಬಹುದು. ಈ ಸದುದ್ದೇಶಕ್ಕೆ ಕೈಜೋಡಿಸಲು ಒಲವು ವ್ಯಕ್ತಪಡಿಸಿದ ಪತ್ರಕ್ಕೆ ಸಹಿ ಹಾಕಿದ ನಂದನ್‌ ದಂಪತಿ ಪತ್ರವನ್ನು ’ದಿ ಗಿವಿಂಗ್‌ ಪ್ಲೆಡ್ಜ್‌’ ('The Giving Pledge) ಅಂತರ್ಜಾಲ ತಾಣದಲ್ಲಿ ಪ್ರಕಟಿಸಲಾಗಿದೆ.

‘ಭಗವದ್ಗೀತೆಯಿಂದ ಸ್ಫೂರ್ತಿ ಪಡೆದಿರುವ ಈ ನೈತಿಕ ಹಂಬಲವನ್ನು ಕಾರ್ಯರೂಪಕ್ಕೆ ತರಲು ಅವಕಾಶ ಒದಗಿಸಿರುವುದಕ್ಕೆ  ಬಿಲ್‌ ಗೇಟ್ಸ್‌ ಮತ್ತು ಅವರ ಪತ್ನಿ ಮಿಲಿಂದಾ ಗೇಟ್ಸ್‌  ಅವರಿಗೆ ನಾವು ಕೃತಜ್ಞರಾಗಿದ್ದೇವೆ. ಕರ್ಮಣ್ಯೆ ವಾಧಿಕಾರಸ್ತೆ ಮಾ ಫಲೇಶು ಕದಾಚನ... ಎಂಬಂತೆ ನಾವು ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ನಮ್ಮ ಕರ್ತವ್ಯ ನಿಭಾಯಿಸುತ್ತಿದ್ದೇವೆ ಎನ್ನುವ ಕಾರಣಕ್ಕೆ ನಾವು ಈ ವಾಗ್ದಾನ ಮಾಡುತ್ತಿದ್ದೇವೆ’ ಎಂದು ನಂದನ್‌ ದಂಪತಿ ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ. ‘ನಂದನ್‌ ಅವರು ತಮ್ಮ ಉದ್ಯಮಶೀಲತಾ ಉತ್ಸಾಹವನ್ನು ದಾನಧರ್ಮದ ಬಗ್ಗೆಯೂ ತೋರಿಸಿರುವುದು ನನ್ನನ್ನು ಚಕಿತನನ್ನಾಗಿ ಮಾಡಿದೆ’ ಎಂದು ಬಿಲ್‌ ಗೇಟ್ಸ್‌ ಅವರು ಟ್ವೀಟ್‌ ಮಾಡಿ ಈ ದಂಪತಿ ನಿಲುವನ್ನು ಶ್ಲಾಘಿಸಿದ್ದಾರೆ.

ADVERTISEMENT

‘ಅರ್ಧದಷ್ಟು ಸಂಪತ್ತು ದಾನ ಮಾಡುವ ವಾಗ್ದಾನಕ್ಕೆ ಕೈಜೋಡಿಸಿರುವ ಈ ಮಹತ್ಕಾರ್ಯಕ್ಕೆ ನಂದನ್‌ ದಂಪತಿಯನ್ನು ನಾನು ಹುತ್ಪೂರ್ವಕ
ವಾಗಿ ಸ್ವಾಗತಿಸುತ್ತೇನೆ’ ಎಂದು ಹೇಳಿದ್ದಾರೆ.

ಹೊಸ ಪರಂಪರೆಗೆ ಗೇಟ್ಸ್ ದಂಪತಿ ಚಾಲನೆ
‘ದಾನ ವಾಗ್ದಾನ’ ಅಭಿಯಾನಕ್ಕೆ ಬಿಲ್‌ ಗೇಟ್ಸ್‌ ದಂಪತಿ ಮತ್ತು ವಾರೆನ್‌ ಬಫೆಟ್‌ ಅವರು 2010ರಲ್ಲಿ ಚಾಲನೆ ನೀಡಿದ್ದರು. ಆಗರ್ಭ ಶ್ರೀಮಂತರು ಒಟ್ಟಾಗಿ ಉದಾರ ದಾನ ನೀಡುವ ಹೊಸ ಪರಂಪರೆಗೆ ನಾಂದಿ ಹಾಡಿದ್ದರು.

ತಾವು ಗಳಿಸಿದ ಸಂಪತ್ತಿನ ಅರ್ಧಕ್ಕೂ ಹೆಚ್ಚು ಪಾಲನ್ನು ತಮ್ಮ ಜೀವಿತಾವಧಿಯಲ್ಲಿ ಅಥವಾ ಉಯಿಲಿನಲ್ಲಿ ದತ್ತಿ ಉದ್ದೇಶಕ್ಕೆ ಮೀಸಲು ಇಡುವವರು ಈ ವಾಗ್ದಾನ ಮಾಡಬೇಕಾಗುತ್ತದೆ. ನಂದನ್‌ ದಂಪತಿ, ಹೀಗೆ ವಾಗ್ದಾನ ನೀಡಿದ ಭಾರತದ ನಾಲ್ಕನೆಯ ವರಾಗಿದ್ದಾರೆ.

ವಿಪ್ರೊ ಅಧ್ಯಕ್ಷ ಅಜೀಂ ಪ್ರೇಮ್‌ಜೀ, ಬಯೊಕಾನ್‌ ಅಧ್ಯಕ್ಷೆ ಕಿರಣ್‌ ಮಜುಂದಾರ್ ಷಾ ಮತ್ತು ಶೋಭಾ ಡೆವಲಪರ್ಸ್‌ನ ವಿಶ್ರಾಂತ ಅಧ್ಯಕ್ಷ ಪಿ. ಎನ್‌.ಸಿ. ಮೆನನ್‌ ಅವರು ಈಗಾಗಲೇ ಈ ವಾಗ್ದಾನಕ್ಕೆ ಸಹಿ ಹಾಕಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.