ADVERTISEMENT

ಸಂವೇದಿ ಸೂಚ್ಯಂಕ ಇಳಿಕೆ

​ಪ್ರಜಾವಾಣಿ ವಾರ್ತೆ
Published 21 ಜನವರಿ 2017, 19:30 IST
Last Updated 21 ಜನವರಿ 2017, 19:30 IST
ಸಂವೇದಿ ಸೂಚ್ಯಂಕ ಇಳಿಕೆ
ಸಂವೇದಿ ಸೂಚ್ಯಂಕ ಇಳಿಕೆ   

ಮುಂಬೈ (ಪಿಟಿಐ): ಜಾಗತಿಕ ವಿದ್ಯಮಾನಗಳ ಪ್ರಭಾವಕ್ಕೆ ಒಳಗಾಗಿ, ದೇಶದ ಷೇರುಪೇಟೆಗಳು ಮೂರು ವಾರಗಳ ಬಳಿಕ ಮತ್ತೆ ಕುಸಿತದ ಹಾದಿ ಹಿಡಿದಿವೆ.
ಜನವರಿ 20ಕ್ಕೆ ಅಂತ್ಯಗೊಂಡ ವಾರದಲ್ಲಿ ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 204 ಅಂಶ ಇಳಿಕೆಯಾಗಿ, 27,034 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 51 ಅಂಶ ಇಳಿಕೆಯಾಗಿ 8,349 ಅಂಶಗಳಲ್ಲಿ ವಾರದ ವಹಿವಾಟು ಅಂತ್ಯಕಂಡಿದೆ.
ಕಳೆದ ಮೂರು ವಾರಗಳಲ್ಲಿ ಬಿಎಸ್‌ಇ 1,197 ಅಂಶ ಮತ್ತು ಎನ್‌ಎಸ್‌ಇ ನಿಫ್ಟಿ 415 ಅಂಶ ಏರಿಕೆ ಕಂಡುಕೊಂಡಿದ್ದವು.

ಟ್ರಂಪ್‌ ಪ್ರಭಾವ: ಡೊನಾಲ್ಡ್‌ ಟ್ರಂಪ್‌ ಅವರ ಆರ್ಥಿಕ ನೀತಿಗಳ ಬಗ್ಗೆ ಹೂಡಿಕೆದಾರರು ಆತಂಕ ವ್ಯಕ್ತಪಡಿಸಿದ್ದಾರೆ. ಟ್ರಂಪ್‌ ಅವರು ಅಮೆರಿಕದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಲಿದ್ದಾರೆ. ಈಗಾಗಲೇ ಅಲ್ಲಿನ ಫೆಡರಲ್‌ ಬ್ಯಾಂಕ್‌ ಬಡ್ಡಿದರಗಳಲ್ಲಿ ಏರಿಕೆ ಮಾಡಿದೆ. ಮುಂದಿನ ದಿನಗಳಲ್ಲಿ ಬಡ್ಡಿದರ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ ಮಾಡಲಾಗಿದೆ. ಹೀಗಾದಲ್ಲಿ, ಅಮೆರಿಕದಲ್ಲಿ ಸುಲಭಕ್ಕೆ ಸಾಲ ಲಭ್ಯವಾಗುವುದಿಲ್ಲ. ಇದರಿಂದ ಅಲ್ಲಿನ ಹೂಡಿಕೆದಾರರು ಬೇರೆ ದೇಶಗಳಲ್ಲಿ ಬಂಡವಾಳ ತೊಡಗಿಸಲು ಕಷ್ಟವಾಗಲಿದೆ. ಇದು ಷೇರುಪೇಟೆ ಚಟುವಟಿಕೆಯನ್ನು ತಗ್ಗಿಸಿದೆ ಎಂದು ತಜ್ಞರು ವಿಶ್ಲೇಷಣೆ ಮಾಡಿದ್ದಾರೆ.

ADVERTISEMENT

ಜಿಎಸ್‌ಟಿ: ಕೇಂದ್ರ ಸರ್ಕಾರ ಜುಲೈ 1 ರಿಂದಲೇ ಜಿಎಸ್‌ಟಿ ಜಾರಿಗೆ ತರಲು ಮುಂದಾಗಿದೆ. ಇದರ ಜತೆಗೆ ಕಂಪೆನಿಗಳ ಮೂರನೇ ತ್ರೈಮಾಸಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಯಂತೆ ಇಲ್ಲದೇ ಇರುವುದು ಹಾಗೂ ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್‌) ಭಾರತದ ಆರ್ಥಿಕ ಪ್ರಗತಿಯ ಮುನ್ನೋಟ ತಗ್ಗಿಸಿರುವುದು ಸೂಚ್ಯಂಕಗಳ ಇಳಿಕೆಗೆ ಕಾರಣವಾಗಿವೆ.

ಖರೀದಿಗೆ ಒತ್ತು: ಈ ವಾರ ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ಖರೀದಿಗೆ ಹೆಚ್ಚಿನ ಒತ್ತು ನೀಡಿದ್ದಾರೆ. ಸರಕು ಮತ್ತು ಸೇವಾ ತೆರಿಗೆಯಲ್ಲಿ ಮೂರು ಹಂತದ ತೆರಿಗೆ ವಿಧಿಸುವುದನ್ನು ಸರ್ಕಾರ ಕೈಬಿಟ್ಟಿದೆ. ಇದರಿಂದ ಹೂಡಿಕೆದಾರರಲ್ಲಿದ್ದ ಆತಂಕ ತುಸು ದೂರಾಗಿದ್ದು, ಷೇರುಗಳ ಖರೀದಿಗೆ ಹೆಚ್ಚು ಆಸಕ್ತಿ ತೋರಿದ್ದಾರೆ.

ವಿದೇಶಿ ಮತ್ತು ದೇಶಿ ಸಾಂಸ್ಥಿಕ ಹೂಡಿಕೆದಾರರು ಒಟ್ಟಾರೆ ₹630 ಕೋಟಿ ಮೌಲ್ಯದ ಷೇರುಗಳನ್ನು ಖರೀದಿ ಮಾಡಿದ್ದಾರೆ ಎಂದು ‘ಸೆಬಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.