ADVERTISEMENT

ಸಕಾಲಕ್ಕೆ ಖರೀದಿಯಾಗದ ತೊಗರಿ; ರೈತರಿಗೆ ಕಿರಿಕಿರಿ

ಡಿ.ಬಿ, ನಾಗರಾಜ
Published 27 ಮಾರ್ಚ್ 2017, 19:59 IST
Last Updated 27 ಮಾರ್ಚ್ 2017, 19:59 IST
ಸಕಾಲಕ್ಕೆ ಖರೀದಿಯಾಗದ ತೊಗರಿ; ರೈತರಿಗೆ ಕಿರಿಕಿರಿ
ಸಕಾಲಕ್ಕೆ ಖರೀದಿಯಾಗದ ತೊಗರಿ; ರೈತರಿಗೆ ಕಿರಿಕಿರಿ   

ವಿಜಯಪುರ: ‘ಮನಿ ಬಿಟ್ಟು ಆರ್‌ ದಿನ ಆತ್ರೀ. ನಮ್ಮ ಪಾಳಿ ಗುರುವಾರನ ಇತ್ರೀ. ಆದ್ರೂ ಇಲ್ಲೀಮಟಾ ನಮ್ಮ ತೊಗರಿ ಖರೀದಿ ಮಾಡಿಲ್ಲ. ರಸ್ತೆ ಮ್ಯಾಲ ಲಾರಿ ನಿಲ್ಲಸ್ಕೊಂಡು ಕಾಯಾಕತ್ತೇವಿ. ಇವತ್ತರ ಖರೀದಿ ಆದ್ರ ಕಿರಿಕಿರಿ ತಪ್ಪತೈತ್ರಿ...’

ಇದು ವಿಜಯಪುರದ ಎಪಿಎಂಸಿ ಆವರಣದಲ್ಲಿನ ತೊಗರಿ ಖರೀದಿ ಕೇಂದ್ರದ ಮುಂದೆ ತಮ್ಮ ಪಾಳಿಗಾಗಿ ಕಾದು ಕುಂತಿರುವ ರೈತ ಸಮುದಾಯದ ಅಳಲು.
ಸಿಂದಗಿ ತಾಲ್ಲೂಕು ಬನ್ನಟ್ಟಿ ಪಿ.ಟಿ, ಜಲಪುರ, ವಿಜಯಪುರ ತಾಲ್ಲೂಕು ಕಗ್ಗೋಡ ಸೇರಿದಂತೆ ಹಲವು ಗ್ರಾಮಗಳಿಂದ ಬಂದಿರುವ ರೈತರು ಸೋಮವಾರ ‘ಪ್ರಜಾವಾಣಿ’ ಬಳಿ ತಮ್ಮ ಗೋಳು ತೋಡಿಕೊಂಡರು.

‘ಜಿಲ್ಲಾದಾಗ ಎಲ್ಲಾ ಕಡೆ ಖರೀದಿ ಕೇಂದ್ರ ಸುರು ಮಾಡ್ಯಾರ. ಆದ್ರ ಅಲ್ಲೆಲ್ಲೂ ಪಾಳಿ ವ್ಯವಸ್ಥೆಯಿಲ್ರೀ. ತಾಳಿಕೋಟೆ ಕೇಂದ್ರದಾಗ ಹೆಸರು ನೋಂದಣಿ ಮಾಡಿ ತಿಂಗಳಾತು. ನಮ್ಮ ಪಾಳಿ ನಂಬರ್ 124 ಇದ್ದರೂ ಇವತ್ತಿಗೂ ಬಂದಿಲ್ಲ. ಒಳಗ ಹೋಗಿ ರೊಕ್ಕ ಕೊಟ್ಟವರ ಮಾಲು ಖರೀದಿ ಆಗತೈತಿ. ಈ ಕತಿ ಇಲ್ಲೀದಷ್ಟ ಅಲ್ಲ; ನಮ್ಮ ಸುತ್ತಲಿನ ದೇವರ ಹಿಪ್ಪರಗಿ, ಕಲಕೇರಿ, ಸಿಂದಗಿಲೂ ಇದ ಹಣೆಬರಹ. ಅಲ್ಲಿನ ಅವ್ಯವಸ್ಥಾಕ್ಕ ರೋಸಿ ಹೋಗಿ, ಐದಾರು ಮಂದಿ ಲಾರಿ ಬಾಡಿಗೆ ಹಿಡಿದು ಇಲ್ಲಿಗೆ ಬಂದೀವಿ. ಆದ್ರ ಇಲ್ಲೂ ಖರೀದಿ ಆಗವಲ್ದು’ ಎಂದು ಸಿಂದಗಿ ತಾಲ್ಲೂಕು ಬನ್ನಟ್ಟಿ ಪಿ.ಟಿ. ಗ್ರಾಮದ ರಾಮನಗೌಡ ನಾನಾಗೌಡ ಬಿರಾದಾರ ಅವರು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಈ ಬಗ್ಗೆ ಅವರು ಅಧಿಕಾರಿಗಳನ್ನು ಪ್ರಶ್ನಿಸಿದರೆ, ‘ರೈಲಿನಲ್ಲಿ ಪಡಿತರ ಬಂದಿದ್ದು, ಅದನ್ನು ಇಳಿಸಲು ಹಮಾಲರು ಹೋಗಿದ್ದಾರೆ’ ಎಂಬ ಉತ್ತರ ಸಿಕ್ಕಿದೆ. ಅಂದಿನಿಂದಲೂ ಅವರು ಇಲ್ಲಿಯೇ ಕಾದು ಕುಳಿತಿದ್ದಾರೆ. ದಿನಕ್ಕೆ ₹ 2 ಸಾವಿರದಂತೆ ಲಾರಿ ಬಾಡಿಗೆ ನೀಡಬೇಕಿದ್ದು, ಈಗಾಗಲೇ ಅದರ ಖರ್ಚೇ ₹ 10 ಸಾವಿರ ದಾಟಿದೆ. ಊರಿಂದ ನಿತ್ಯ ವಿಜಯಪುರಕ್ಕೆ ಬರುವ ಬಸ್ಸಿನಲ್ಲಿ ಬುತ್ತಿ ತರಿಸಿಕೊಂಡು ಊಟ ಮಾಡುತ್ತಿದ್ದಾರೆ.

‘ಮಾರಿ ತೊಳ್ಕೊಳ್ಳಾಕೂ ಇಲ್ಲಿ ನೀರಿಲ್ಲ. ಚಹಾ ಕುಡಿಯೋ ನೆಪ ಮಾಡಿ ಹೋಟೆಲ್‌ಗೆ ಹೋಗಿ ಮುಖಾ ತೊಳಕೊಂಡ ಬರ್ತೇವಿ. ಇನ್ನ ಜಳಕದ ಮಾತು ದೂರನ ಉಳೀತು. ಬಿಸಿಲ ಝಳ ತಡಿಯಾಕ ಆಗಂಗಿಲ್ಲ. ಕುಂದ್ರಾಕ ನೆಳ್ಳ  ಇಲ್ಲ. ಕುಡಿಯಾಕ್‌ ನೀರು ಬೇಕಂದ್ರೂ ರೊಕ್ಕಾ ಕೊಟ್ಟ ತರಬೇಕು. ಒಂದೊಂದ್‌ ಸಲಕ್ಕ ಒಬ್ಬೊಬ್ರ ಪಾಳಿ ಹಾಕ್ಕೊಂಡು ಹೋಟೆಲ್‌ನಾಗ ₹ 30 ಕೊಟ್ಟು ಯಾಡ್‌ ಲೀಟರ್‌ ನೀರು ತರ್ತೇವಿ. ಬರೇ ಇಂಥಾ ಖರ್ಚ ಇಲ್ಲೀಮಟಾ ನಾಕೈದು ಸಾವಿರ ಆಗೇತಿ’ ಎಂದು ಮಲ್ಲಿಕಾರ್ಜುನಗೌಡ ಸಂಗಪ್ಪಗೌಡ ಬಿರಾದಾರ ಅಸಮಾಧಾನ ತೋಡಿಕೊಂಡರು.

ರಸ್ತೆಯಲ್ಲೇ ಕಾಲ ಕಳೆಯಬೇಕಿರುವುದರಿಂದ ಸೊಳ್ಳೆಗಳ ಕಾಟವೂ ಇವರನ್ನು ಕಂಗೆಡಿಸಿದೆ. ಬೀದಿ ದೀಪದ ವ್ಯವಸ್ಥೆ ಇಲ್ಲದೇ ಕತ್ತಲಲ್ಲಿ ಹುಳ–ಹುಪ್ಪಡಿಗಳ ಭಯದಲ್ಲಿ ನಿದ್ದೆಗೆಡಬೇಕಾದ ಸ್ಥಿತಿಯಿದೆ.

‘ಇದ... 17ಕ್ಕೆ ತೊಗರಿ ಖರೀದಿ ಮಾಡ್ಬೇಕಾಗಿತ್ತು. ‘ಹಮಾಲರು ಇಲ್ಲ, ನಾಳೆ ಬರ್ರಿ’ ಅಂತ ಸಬೂಬು ಹೇಳಿ ಇಲ್ಲಿವರೆಗೂ ದೂಡ್ಕೊಂಡು ಬಂದಾರ. ಇವತ್ತ ನಾಕೈದು ಮಂದಿ ಹಮಾಲರು ಅದಾರ. ಯಾವಾಗ ಖರೀದಿಸ್ತಾರೋ ಗೊತ್ತಾಗವಲ್ದು’ ಎಂದು ವಿಜಯಪುರ ತಾಲ್ಲೂಕು ಕಗ್ಗೋಡ ಗ್ರಾಮದ ರೈತ ಗೌಡಪ್ಪಗೌಡ ಸಂಗನಗೌಡ ಪಾಟೀಲ ಅವರು ಸೋಮವಾರ ಆತಂಕ ವ್ಯಕ್ತಪಡಿಸಿದರು.

ಊರಾಗ ನೀರಿದೊಂದು ದೊಡ್ಡ ಸಮಸ್ಯೆ. ನಾ ಇಲ್ಲಿಗೆ ಬಂದಿರೋದ್ರರಿಂದ ಜಾನುವಾರುಗಳ ಮೇವು–ನೀರು ನಿಗಾ ನೋಡೋರು ಯಾರೂ ಇಲ್ರೀ.
ವೀರಭದ್ರ ಕುಂಬಾರ,
ಜಲಪುರ ಗ್ರಾಮದ ತೊಗರಿ ಬೆಳೆಗಾರ

ರೈತರು ಖರೀದಿ ಕೇಂದ್ರದ ಬಳಿಯೇ ಇರುವ ಅಗತ್ಯವಿಲ್ಲ.  2–3 ದಿನ ಬಿಟ್ಟು ಬಂದರೆ ತೊಗರಿ ಖರೀದಿಸುತ್ತೇವೆ. ಈ ಕುರಿತು ಜಾಗೃತಿ ಮೂಡಿಸಿದರೂ ರೈತರು ಸ್ಪಂದಿಸುತ್ತಿಲ್ಲ.
ಕೆ.ಬಿ.ಶಿವಕುಮಾರ್‌,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.