ADVERTISEMENT

ಸಗಟು ಹಣದುಬ್ಬರ 30 ತಿಂಗಳ ಗರಿಷ್ಠ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 19:30 IST
Last Updated 16 ಫೆಬ್ರುವರಿ 2017, 19:30 IST
ಸಗಟು ಹಣದುಬ್ಬರ 30 ತಿಂಗಳ ಗರಿಷ್ಠ
ಸಗಟು ಹಣದುಬ್ಬರ 30 ತಿಂಗಳ ಗರಿಷ್ಠ   

ನವದೆಹಲಿ: ತರಕಾರಿಗಳ ಬೆಲೆ ಋಣಾತ್ಮಕ ಮಟ್ಟದಲ್ಲಿದೆ. ಆದರೆ, ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿರುವುದರಿಂದ ಸಗಟು ಹಣದುಬ್ಬರವು ಜನವರಿಯಲ್ಲಿ 30 ತಿಂಗಳ ಗರಿಷ್ಠ ಮಟ್ಟವಾದ ಶೇ 5.25ಕ್ಕೆ ಏರಿಕೆಯಾಗಿದೆ.

ಸಗಟು ದರ ಸೂಚ್ಯಂಕ (ಡಬ್ಲ್ಯುಪಿಐ) ಆಧರಿಸಿದ ಹಣದುಬ್ಬರವು 2016ರ ಜನವರಿಯಲ್ಲಿ ಶೇ 3.39ರಷ್ಟಿತ್ತು ಎಂದು ಕೇಂದ್ರ ವಾಣಿಜ್ಯ ಸಚಿವಾಲಯ ಮಾಹಿತಿ ನೀಡಿದೆ. ಡಿಸೆಂಬರ್‌ನಲ್ಲಿ ಒಪೆಕ್‌ ಮತ್ತು ಒಪೆಕ್‌ ಸದಸ್ಯರಲ್ಲದ ರಾಷ್ಟ್ರಗಳು 8ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ಕಚ್ಚಾ ತೈಲ ಉತ್ಪಾದನೆ ತಗ್ಗಿಸುವ ನಿರ್ಧಾರ ಕೈಗೊಂಡಿದ್ದವು.

ಇದರ ಪರಿಣಾಮವಾಗಿ ಡೀಸೆಲ್‌ ಮತ್ತು ಪೆಟ್ರೋಲ್‌ ದರಗಳು ಕ್ರಮವಾಗಿ ಶೇ 31.10 ಮತ್ತು ಶೇ 15.66 ರಷ್ಟು ಏರಿಕೆ ಕಂಡಿವೆ. ಹೀಗಾಗಿ ಸಗಟು ಹಣದುಬ್ಬರ ಭಾರಿ ಪ್ರಮಾಣದಲ್ಲಿ ಏರಿಕೆಯಾಗಿದೆ. ಆಹಾರ ಹಣದುಬ್ಬರ ಸತತ ಎರಡನೇ ತಿಂಗಳಿನಲ್ಲಿಯೂ ಋಣಾತ್ಮಕ ಮಟ್ಟದಲ್ಲಿದೆ.
ಡಿಸೆಂಬರ್‌ನಲ್ಲಿ ಶೇ (–) 0.70 ರಷ್ಟಿತ್ತು. ಜನವರಿಯಲ್ಲಿ ಶೇ (–) 0.56 ರಷ್ಟಾಗಿದೆ.

**

ಕುಸಿದ ಚಿಲ್ಲರೆ ಹಣದುಬ್ಬರ
ನವದೆಹಲಿ :
ನೋಟು ರದ್ದತಿಯ ಪರಿಣಾಮದಿಂದ ಹೊರಬರಲಾಗದ ಚಿಲ್ಲರೆ ಹಣದುಬ್ಬರವು ಜನವರಿ ತಿಂಗಳಲ್ಲಿ  ಶೇ 3.17ಕ್ಕೆ ಕುಸಿದಿದೆ.

ADVERTISEMENT

ತರಕಾರಿ ಮತ್ತು ಬೇಳೆಕಾಳು ಸೇರಿದಂತೆ ಆಹಾರ ಪದಾರ್ಥಗಳ ಬೆಲೆಗಳು ಅಗ್ಗವಾದ ಕಾರಣ ಜನವರಿಯಲ್ಲಿ ಚಿಲ್ಲರೆ ಹಣದುಬ್ಬರ ಇಳಿಕೆ ದಾಖಲಿಸಿದೆ.
ಗ್ರಾಹಕರ ಬೆಲೆ ಸೂಚ್ಯಂಕ (ಸಿಪಿಐ) ಆಧಾರಿತ ಚಿಲ್ಲರೆ ಹಣದುಬ್ಬರವು ಡಿಸೆಂಬರ್‌ನಲ್ಲಿ ಶೇ 3.41 ಮತ್ತು ಜನವರಿಯಲ್ಲಿ  ಶೇ 5.69ರಷ್ಟಿತ್ತು.

ಅಂಕಿ–ಸಂಖ್ಯೆ ಮತ್ತು ಯೋಜನಾ ಅನುಷ್ಠಾನ ಸಚಿವಾಲಯ ಸೋಮವಾರ ಬಿಡುಗಡೆ ಮಾಡಿದ ವರದಿಯ ಅನ್ವಯ ತರಕಾರಿ ಮತ್ತು  ಬೇಳೆಕಾಳು  ಹಣದುಬ್ಬರ ನಕಾರಾತ್ಮಕ ವಲಯದಲ್ಲಿ ಮುಂದುವರೆದಿದೆ. ಹಣ್ಣು, ಮಾಂಸ, ಮೀನು, ಇಂಧನದ ಹಣದುಬ್ಬರ ಧನಾತ್ಮಕ ವಲಯದಲ್ಲಿತ್ತು.

ಬಡ್ಡಿ ದರ ಕಡಿತಕ್ಕೆ ಒತ್ತಾಯ
ಸಗಟು ಹಣದುಬ್ಬರವು ಅತ್ಯಂತ ತ್ವರಿತವಾಗಿ ಹೆಚ್ಚಳಗೊಂಡಿರುವುದರಿಂದ  ತಯಾರಿಕೆ ಮತ್ತು ಮೂಲಸೌಕರ್ಯ ವಲಯಗಳಿಗೆ ಸಾಲ ನೀಡಿಕೆ ಪ್ರಮಾಣ ಹೆಚ್ಚಳಗೊಳ್ಳಲು ಬಡ್ಡಿ ದರಗಳನ್ನು ಇನ್ನಷ್ಟು ಕಡಿತ ಮಾಡುವಂತೆ  ಸಂಘಟನೆಗಳು ಒತ್ತಾಯಿಸಿವೆ.

ದೇಶದ ಕೈಗಾರಿಕಾ ಆರ್ಥಿಕತೆ ಈಗಲೂ ದುರ್ಬಲವಾಗಿದ್ದು, ಸಾಲ ನೀಡಿಕೆ ಪ್ರಮಾಣದಲ್ಲಿ ಸುಧಾರಣೆ ತರುವ ಅಗತ್ಯ ಎದುರಾಗಿದೆ. ಈ ಕಾರಣಕ್ಕೆ  ಬ್ಯಾಂಕ್‌ಗಳು ತಮ್ಮ ಬಡ್ಡಿ ದರಗಳನ್ನು ತಗ್ಗಿಸಬೇಕಾಗಿದೆ ಎಂದು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟ (ಫಿಕ್ಕಿ) ಮತ್ತು ಭಾರತೀಯ ವಾಣಿಜ್ಯೋದ್ಯಮ ಮಹಾಸಂಘ (ಅಸೋಚಾಂ) ಒತ್ತಾಯಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.