ADVERTISEMENT

ಸಾಮಾನ್ಯ ವಿಮೆ ಸಂಸ್ಥೆಗಳ ಷೇರು ವಹಿವಾಟಿಗೆ ಸಮ್ಮತಿ

ಕೇಂದ್ರ ಸಚಿವ ಸಂಪುಟದ ಮಹತ್ವದ ನಿರ್ಧಾರ

ಪಿಟಿಐ
Published 18 ಜನವರಿ 2017, 19:30 IST
Last Updated 18 ಜನವರಿ 2017, 19:30 IST
ಸಾಮಾನ್ಯ ವಿಮೆ ಸಂಸ್ಥೆಗಳ ಷೇರು ವಹಿವಾಟಿಗೆ ಸಮ್ಮತಿ
ಸಾಮಾನ್ಯ ವಿಮೆ ಸಂಸ್ಥೆಗಳ ಷೇರು ವಹಿವಾಟಿಗೆ ಸಮ್ಮತಿ   

ನವದೆಹಲಿ : ಸರ್ಕಾರಿ ಸ್ವಾಮ್ಯದ ಐದು ಸಾಮಾನ್ಯ ವಿಮೆ ಸಂಸ್ಥೆಗಳು ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಕೇಂದ್ರ ಸಚಿವ ಸಂಪುಟವು ಸಮ್ಮತಿ ನೀಡಿದೆ. ‘ಹೊಸದಾಗಿ ಷೇರು ನೀಡಿಕೆ ಅಥವಾ ಷೇರುಗಳ ಮಾರಾಟ ಕೊಡುಗೆ ಮೂಲಕ  ಷೇರುಪೇಟೆಯಲ್ಲಿ ವಹಿವಾಟು ನಡೆಸಲು  ಅನುಮೋದನೆ ನೀಡಲಾಗಿದೆ’ ಎಂದು ಕೇಂದ್ರ ಹಣಕಾಸು ಸಚಿವ ಅರುಣ್‌ ಜೇಟ್ಲಿ  ತಿಳಿಸಿದ್ದಾರೆ.

ನ್ಯೂ ಇಂಡಿಯಾ ಅಶುರನ್ಸ್‌, ನ್ಯಾಷನಲ್‌  ಇನ್ಶುರನ್ಸ್‌, ಓರಿಯಂಟಲ್‌ ಇನ್ಶುರನ್ಸ್‌, ಯುನೈಟೆಡ್‌ ಇಂಡಿಯಾ ಇನ್ಶುರನ್ಸ್‌ ಮತ್ತು ಮರು ವಿಮೆ ಸಂಸ್ಥೆ ಜನರಲ್‌ ಇನ್ಶುರನ್ಸ್‌ ಕಾರ್ಪ್‌ಗೆ (ಜಿಐಸಿ)  ಅನುಮತಿ ದೊರೆತಿದೆ.‘ಷೇರುಪೇಟೆ ಪ್ರವೇಶಿಸಲು ಸಾಮಾನ್ಯ ವಿಮೆ ಸಂಸ್ಥೆಗಳಿಗೆ ಅವಕಾಶ ಮಾಡಿಕೊಡಲಾಗುವುದು’ ಎಂದು  ಜೇಟ್ಲಿ ಅವರು 2016–17ನೆ ಸಾಲಿನ ಬಜೆಟ್‌ನಲ್ಲಿ ಪ್ರಕಟಿಸಿದ್ದರು.

‘ಸರ್ಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿ ಸಾರ್ವಜನಿಕರ ಪಾಲುದಾರಿಕೆಯಿಂದ ಗರಿಷ್ಠ ಮಟ್ಟದ ಪಾರದರ್ಶಕತೆ ಮತ್ತು ವಿಶ್ವಾಸಾರ್ಹತೆ ಕಂಡು ಬರಲಿದೆ. ಈ ಉದ್ದೇಶ ಈಡೇರಿಸಲು ಷೇರುಪೇಟೆಯಲ್ಲಿ ವಹಿವಾಟು ನಡೆಸಲು ಅನುಮತಿ ನೀಡುವ ಪ್ರಸ್ತಾವ ಇದೆ’ ಎಂದು ಹೇಳಿದ್ದರು. ವಿದೇಶಿ ವಿಮೆ ಸಂಸ್ಥೆಗಳು, ದೇಶಿ ವಿಮೆ ರಂಗದಲ್ಲಿ ಪಾಲುದಾರಿಕೆಯಡಿ ಶೇ 49ರಷ್ಟು ಬಂಡವಾಳ ತೊಡಗಿಸಲು ಸರ್ಕಾರ ಈಗಾಗಲೇ ಸಮ್ಮತಿ ನೀಡಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿನ ಆರ್ಥಿಕ ವ್ಯವಹಾರಗಳ ಸಚಿವ ಸಂಪುಟ ಸಮಿತಿಯು ಈ ನಿರ್ಧಾರ ಕೈಗೊಂಡಿದೆ. ಸರ್ಕಾರದ ಈ ನಿರ್ಧಾರದಿಂದಾಗಿ ವಿಮೆ ಸಂಸ್ಥೆಗಳು ಬಂಡವಾಳ ಮಾರುಕಟ್ಟೆಯಿಂದ ಹಣ ಸಂಗ್ರಹಿಸಲು  ಮತ್ತು ಕಾರ್ಪೊರೇಟ್ ಆಡಳಿತ ಸುಧಾರಿಸಲು ಸಾಧ್ಯವಾಗಲಿದೆ.

ಉದ್ಯಮದ ಸ್ವಾಗತ: ಸರ್ಕಾರದ ನಿರ್ಧಾರವನ್ನು ಸಾಮಾನ್ಯ ವಿಮೆ ವಲಯವು ಸ್ವಾಗತಿಸಿದೆ. ‘ಇದರಿಂದ ಸಂಸ್ಥೆಯ ಬ್ರ್ಯಾಂಡ್‌ ವರ್ಚಸ್ಸು ಹೆಚ್ಚಳಗೊಂಡು ವಹಿವಾಟಿನಲ್ಲಿ ಇನ್ನಷ್ಟು ಪಾರದರ್ಶಕತೆ ಅಳವಡಿಸಿಕೊಳ್ಳಲು ನೆರವಾಗಲಿದೆ’ ಎಂದು ನ್ಯೂ ಇಂಡಿಯಾ ಅಶುರನ್ಸ್‌ನ ಅಧ್ಯಕ್ಷ ಜಿ. ಶ್ರೀನಿವಾಸನ್‌ ಪ್ರತಿಕ್ರಿಯಿಸಿದ್ದಾರೆ.

‘ಷೇರುಪೇಟೆಯಲ್ಲಿ ವಹಿವಾಟು ನಡೆಸುವುದಕ್ಕೆ ನಾವು ತಕ್ಷಣಕ್ಕೆ ಚಾಲನೆ  ನೀಡಲಿದ್ದೇವೆ. ಈ ಪ್ರಕ್ರಿಯೆ ಪೂರ್ಣಗೊಳ್ಳಲು 6 ರಿಂದ 8 ತಿಂಗಳುಗಳು ಬೇಕಾಗಬಹುದು’ ಎಂದು ಹೇಳಿದ್ದಾರೆ.

ಬಂಡವಾಳ ಪೇಟೆ ಪ್ರವೇಶಿಸುವ ಸಾಮಾನ್ಯ ವಿಮೆ ಸಂಸ್ಥೆಗಳು, ಷೇರುಪೇಟೆ, ಷೇರುಪೇಟೆ ನಿಯಂತ್ರಣ ಮಂಡಳಿಯ (ಸೆಬಿ) ನಿಯಮಗಳಿಗೆ ಬದ್ಧವಾಗಿರಬೇಕಾಗುತ್ತದೆ. ಖಾಸಗಿ ವಿಮೆ ಸಂಸ್ಥೆಗಳೂ ಷೇರುಪೇಟೆ ಪ್ರವೇಶಿಸಲು ಈ ನಿರ್ಧಾರ ಹಾದಿ ಮಾಡಿಕೊಡಲಿದೆ.

***
ಈ ಸಾಮಾನ್ಯ ವಿಮೆ ಸಂಸ್ಥೆಗಳಲ್ಲಿನ ಸರ್ಕಾರದ ಪಾಲು ಬಂಡವಾಳವು ಕ್ರಮೇಣ ಶೇ 100 ರಿಂದ ಶೇ 75ಕ್ಕೆ ಇಳಿಕೆಯಾಗಲಿದೆ
-ಅರುಣ್‌ ಜೇಟ್ಲಿ, ಕೇಂದ್ರ ಹಣಕಾಸು ಸಚಿವ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.