ADVERTISEMENT

ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಷೇರುಪೇಟೆ

ಶೇ 28 ರಷ್ಟು ಗಳಿಕೆಯೊಂದಿಗೆ 2017ರ ವಹಿವಾಟು ಅಂತ್ಯ

ಪಿಟಿಐ
Published 29 ಡಿಸೆಂಬರ್ 2017, 19:46 IST
Last Updated 29 ಡಿಸೆಂಬರ್ 2017, 19:46 IST
ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಷೇರುಪೇಟೆ
ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಷೇರುಪೇಟೆ   

ಮುಂಬೈ: ದೇಶದ ಷೇರುಪೇಟೆಗಳ ಪಾಲಿಗೆ 2017 ಹಲವು ರೀತಿಯಿಂದ ಅವಿಸ್ಮರಣೀಯವಾಗಿದೆ. ಸೂಚ್ಯಂಕಗಳು ಹಲವು ಬಾರಿ ಸಾರ್ವಕಾಲಿಕ ದಾಖಲೆ ಮಟ್ಟವನ್ನು ತಲುಪಿವೆ. ಹೂಡಿಕೆದಾರರ ಸಂಪತ್ತು ಮೌಲ್ಯ ವೃದ್ಧಿಯಾಗಿದೆ.

ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) ದಿನದ ವಹಿವಾಟಿನಲ್ಲಿ 209 ಅಂಶ ಏರಿಕೆ ದಾಖಲಿಸಿ ಸಾರ್ವಕಾಲಿಕ ಗರಿಷ್ಠ ಮಟ್ಟವಾದ 34,056 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿತು. ಡಿಸೆಂಬರ್ 26 ರಂದು 34,011ಕ್ಕೆ ಏರಿಕೆ ಕಂಡಿತ್ತು. ಇತ್ತಿಚಿನ ವರ್ಷಗಳಲ್ಲೇ ಸೂಚ್ಯಂಕದ ಉತ್ತಮ ಗಳಿಕೆ ಇದಾಗಿದೆ. ವಾರದ ವಹಿವಾಟಿನಲ್ಲಿ ಸೂಚ್ಯಂಖ 116 ಅಂಶ ಏರಿಕೆಯಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್‌ಇ) ನಿಫ್ಟಿ 53 ಅಂಶ ಹೆಚ್ಚಾಗಿ 10,530 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ. ವಾರದ ವಹಿವಾಟಿನಲ್ಲಿ 38 ಅಂಶ ಹೆಚ್ಚಾಗಿದೆ.

ADVERTISEMENT

ಜಾಗತಿಕ ಮಟ್ಟದಲ್ಲಿ ಅನಿಶ್ಚಿತ ವಾತಾವರಣ ಹಾಗೂ ದೇಶಿ ಕಂಪೆನಿಗಳ ತ್ರೈಮಾಸಿಕ ಸಾಧನೆ ಮಾರುಕಟ್ಟೆ ನಿರೀಕ್ಷೆಗಿಂತಲೂ ಕಡಿಮೆ ಇದ್ದರೂ ಬಿಎಸ್‌ಇ ಮತ್ತು ನಿಫ್ಟಿ ಇದೇ ಮೊದಲಿಗೆ ಕ್ರಮವಾಗಿ 34,000 ಮತ್ತು 10,500ರ ಗಡಿ ದಾಟಿ ವಹಿವಾಟು ನಡೆಸಿದವು.

ದೇಶದಾದ್ಯಂತ ಏಕರೂಪದ ತೆರಿಗೆ ವ್ಯವಸ್ಥೆಯಾದ ಜಿಎಸ್‌ಟಿ ಜಾರಿಯಿಂದ ಅಲ್ಪಾವಧಿಯಲ್ಲಿ ವಾಣಿಜ್ಯ ವಹಿವಾಟು ಮತ್ತು ದೇಶದ ಅರ್ಥ ವ್ಯವಸ್ಥೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿತು. ಹೀಗಿದ್ದರೂ ಸರ್ಕಾರ ತೆಗೆದುಕೊಂಡ ಸುಧಾರಣಾ ಕ್ರಮಗಳು ಹೂಡಿಕೆಗೆ ಉತ್ತೇಜನ ನೀಡಿತು. ಗುಜರಾತ್‌ ಮತ್ತು ಹಿಮಾಚಲ ಪ್ರದೇಶ ಚುನಾವಣೆಯಲ್ಲಿ ಬಿಜೆಪಿ ಗೆಲುವು ಸಾಧಿಸಿರುವುದೂ ಸಹ ಷೇರುಪೇಟೆಗಳಲ್ಲಿ ಹೊಸ ಉತ್ಸಾಹ ಮೂಡಿಸಿತು ಎಂದು ದಲ್ಲಾಳಿಗಳು ಹೇಳಿದ್ದಾರೆ.

ನಷ್ಟದಲ್ಲಿರುವ ರಿಲಯನ್ಸ್ ಕಮ್ಯುನಿಕೇಷನ್ಸ್‌ ಸಂಪತ್ತು ಖರೀದಿಸಲು ರಿಲಯನ್ಸ್ ಜಿಯೊ ಸಂಸ್ಥೆ ನಿರ್ಧರಿಸಿದೆ. ಇದರ ಪ್ರಭಾವದಿಂದ ರಿಲಯನ್ಸ್‌ ಕಮ್ಯುನಿಕೇಷನ್ಸ್‌ ಷೇರುಗಳು ಸತತ ನಾಲ್ಕನೇ ವಾರವೂ ಏರಿಕೆ ಕಂಡುಕೊಂಡವು. ಒಟ್ಟಾರೆ ಶೇ 17 ರಷ್ಟು ಏರಿಕೆ ಕಂಡಿದೆ. ಮಾರುಕಟ್ಟೆ ಮೌಲ್ಯ ₹ 5,507 ಕೋಟಿ ಹೆಚ್ಚಾಗಿದೆ.

‘ವರ್ಷಾಂತ್ಯದ ವಹಿವಾಟಿನ ದಿನವಾದ ಶುಕ್ರವಾರ ಸಕಾರಾತ್ಮಕ ಮಟ್ಟದಲ್ಲಿಯೇ ಚಟುವಟಿಕೆ ಆರಂಭವಾಯಿತು. ಸಾರ್ವಕಾಲಿಕ ಗರಿಷ್ಠ ಮಟ್ಟದಲ್ಲಿ ವಹಿವಾಟು ಅಂತ್ಯವಾಗಿದೆ. ದೇಶದ ಷೇರುಪೇಟೆ ದೃಷ್ಟಿಯಿಂದ ಇದೊಂದು ಅವಿಸ್ಮರಣೀಯ ವರ್ಷವಾಗಿದೆ’ ಎಂದು ಏಂಜಲ್ ಬ್ರೋಕಿಂಗ್‌ನ ಮುಖ್ಯ ವಿಶ್ಲೇಷಕ ಸಮೀತ್ ಚವಾಣ್‌ ಅಭಿಪ್ರಾಯಪಟ್ಟಿದ್ದಾರೆ.

ಸೆಬಿ ಕೈಗೊಂಡ ಹಲವು ಸುಧಾರಣಾ ಕ್ರಮಗಳು ಮತ್ತು ಮುಂಬರುವ ಬಜೆಟ್‌ ಕುರಿತ ಸಕಾರಾತ್ಮಕ ಅಂಶಗಳಿಂದಾಗಿ ಷೇರುಪೇಟೆಯಲ್ಲಿ ಉತ್ತಮ ವಹಿವಾಟು ನಡೆಯಿತು ಎಂದು ಜಿಯೋಜಿತ್‌ ಫೈನಾನ್ಶಿಯಲ್‌ ಸರ್ವೀಸಸ್‌ನ ಚೀಫ್‌ ಮಾರ್ಕೆಟ್‌ ಸ್ಟ್ರಾಟೆಜಿಸ್ಟ್ ಆನಂದ್ ಜೇಮ್ಸ್‌ ಹೇಳಿದ್ದಾರೆ.

**

ಕುತೂಹಲ ಮೂಡಿಸಿದ ಬಜೆಟ್‌

ಮುಂಬರುವ ಕೇಂದ್ರ ಬಜೆಟ್‌ ಮತ್ತು ಸರ್ಕಾರದ ಸುಧಾರಣಾ ಕ್ರಮಗಳು ಷೇರುಪೇಟೆಯಲ್ಲಿ ಹೂಡಿಕೆ ಹಾದಿಯನ್ನು ನಿರ್ಧರಿಸಲಿವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಮುಖ ಸೂಚ್ಯಂಕಗಳು ಅಲ್ಪಾವಧಿಗೆ ಮಂದಗತಿಯ ಚಲನೆಯಲ್ಲಿ ಇದ್ದರೂ ದೀರ್ಘ ಅವಧಿಗೆ ಉತ್ತಮ ವೇಗ ಕಂಡುಕೊಳ್ಳಲಿವೆ ಎಂದು ಜಿಯೋಜಿತ್ ಫೈನಾನ್ಶಿಯಲ್ ಸರ್ವೀಸಸ್‌ನ ಸಂಶೋಧನಾ ಮುಖ್ಯಸ್ಥ ವಿನೋದ್ ನಾಯರ್‌ ಹೇಳಿದ್ದಾರೆ.

*

ಹೂಡಿಕೆದಾರರ ಸಂಪತ್ತು ವೃದ್ಧಿ

2017ರಲ್ಲಿ ಸಂವೇದಿ ಸೂಚ್ಯಂಕ ಶೇ 28ರಷ್ಟು ಹೆಚ್ಚಾಗಿರುವುದರಿಂದ ಹೂಡಿಕೆದಾರರ ಸಂಪತ್ತು ಮೌಲ್ಯವು ₹ 45.50 ಲಕ್ಷ ಕೋಟಿಗಳಷ್ಟು ಏರಿಕೆ ಕಂಡಿದೆ. ಇದರಿಂದ ಮಾರುಕಟ್ಟೆ ಬಂಡವಾಳ ಮೌಲ್ಯವು ₹ 152 ಲಕ್ಷ ಕೋಟಿಗಳಿಗೆ ತಲುಪಿದೆ.

ಐಪಿಒ ಪ್ರಭಾವ: ಈ ವರ್ಷ ಒಟ್ಟು 36 ಕಂಪೆನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸಿವೆ. ಬಹುತೇಕ ಎಲ್ಲಾ ಕಂಪೆನಿಗಳೂ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿವೆ. ಇದು ಸಹ ಉತ್ತಮ ವಹಿವಾಟಿಗೆ ನೆರವಾಯಿತು.

**

ಐಪಿಒ ಪ್ರಭಾವ

ಈ ವರ್ಷ ಒಟ್ಟು 36 ಕಂಪೆನಿಗಳು ಆರಂಭಿಕ ಸಾರ್ವಜನಿಕ ಕೊಡುಗೆ (ಐಪಿಒ) ಮೂಲಕ ಷೇರುಪೇಟೆ ಪ್ರವೇಶಿಸಿವೆ. ಬಹುತೇಕ ಎಲ್ಲಾ ಕಂಪೆನಿಗಳೂ ಹೂಡಿಕೆದಾರರಿಂದ ಉತ್ತಮ ಸ್ಪಂದನೆ ಪಡೆದುಕೊಂಡಿವೆ. ಇದು ಸಹ ಉತ್ತಮ ವಹಿವಾಟಿಗೆ ನೆರವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.