ADVERTISEMENT

ಸಿಕ್ಕಾ ರಾಜೀನಾಮೆಗೆ ತತ್ತರಿಸಿದ ಪೇಟೆ

ಷೇರುದಾರರಿಗೆ ಅಚ್ಚರಿ ಮೂಡಿಸಿದ ಇನ್ಫೊಸಿಸ್ ಬೆಳವಣಿಗೆ

ಪಿಟಿಐ
Published 19 ಆಗಸ್ಟ್ 2017, 4:00 IST
Last Updated 19 ಆಗಸ್ಟ್ 2017, 4:00 IST
ಸಿಕ್ಕಾ ರಾಜೀನಾಮೆಗೆ ತತ್ತರಿಸಿದ ಪೇಟೆ
ಸಿಕ್ಕಾ ರಾಜೀನಾಮೆಗೆ ತತ್ತರಿಸಿದ ಪೇಟೆ   

ಮುಂಬೈ (ಪಿಟಿಐ): ಬೆಂಗಳೂರು ಮೂಲದ ಐ.ಟಿ ಕಂಪೆನಿ ಇನ್ಫೊಸಿಸ್‌ನ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ (ಸಿಇಒ) ವಿಶಾಲ್ ಸಿಕ್ಕಾ ಶುಕ್ರವಾರ  ರಾಜೀನಾಮೆ ನೀಡಿರುವ ಹಠಾತ್‌ ಬೆಳವಣಿಗೆ ಷೇರುಪೇಟೆಯಲ್ಲಿ ಸೂಚ್ಯಂಕಗಳ ಕುಸಿತಕ್ಕೆ ಕಾರಣವಾಯಿತು.

ಮೂರು ದಿನಗಳಿಂದ ಏರುಮುಖವಾಗಿದ್ದ ಷೇರುಪೇಟೆ ವಹಿವಾಟು ವಾರದ ವಹಿವಾಟಿನ ಅಂತಿಮ ದಿನ ದಿಢೀರ್‌ ಕುಸಿತ ಕಂಡಿತು. ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ (ಬಿಎಸ್‌ಇ) 271 ಅಂಶಗಳಷ್ಟು ಇಳಿಕೆ ಕಂಡು, 31,525 ಅಂಶಗಳಲ್ಲಿ ವಹಿವಾಟು ಅಂತ್ಯವಾಗಿದೆ.

ರಾಷ್ಟ್ರೀಯ ಷೇರುಪೇಟೆ ಸೂಚ್ಯಂಕ (ಎನ್‌ಎಸ್ಇ) ನಿಫ್ಟಿ 68 ಅಂಶ ಇಳಿಕೆಯಾಗಿ 9,837 ಅಂಶಗಳಲ್ಲಿ ವಹಿವಾಟು ಅಂತ್ಯಕಂಡಿದೆ.

ADVERTISEMENT

ವಿದೇಶಿ ಸಾಂಸ್ಥಿಕ ಹೂಡಿಕೆ ಹೊರಹರಿವಿನಿಂದಾಗಿ ಷೇರುಪೇಟೆಯಲ್ಲಿ ವಾರವಿಡೀ ಮಾರಾಟದ ಒತ್ತಡ ಸೃಷ್ಟಿಸಿತ್ತು. ಇದರ ಜತೆಗೆ 3ನೇ ತ್ರೈಮಾಸಿಕ ಫಲಿತಾಂಶ ಪ್ರಕಟಣೆ ಅಂತ್ಯವಾಗಿರುವುದೂ ಸಹ ಸೂಚ್ಯಂಕದ ವೇಗಕ್ಕೆ ಕಡಿವಾಣ ಹಾಕಿದೆ.

ವಾರದ ವಹಿವಾಟನ್ನು ಗಮನಿಸುವುದಾದರೆ ಏಳುವಾರಗಳಲ್ಲಿ ಆರನೇ ಬಾರಿಗೆ ಸೂಚ್ಯಂಕಗಳು ಏರಿಕೆ ಕಂಡಿವೆ.

***

ದೇಶದ ಪ್ರಮುಖ ಸಾಫ್ಟ್‌ವೇರ್ ಸೇವಾ ಕಂಪೆನಿ ಇನ್ಫೊಸಿಸ್ ಸಿಇಒ ವಿಶಾಲ್ ಸಿಕ್ಕಾ ಅವರು ರಾಜೀನಾಮೆ ನೀಡಿರುವ ಸುದ್ದಿಯು ಷೇರುಪೇಟೆಯಲ್ಲಿ ಅನಿಶ್ಚಿತ ವಾತಾವರಣ ಸೃಷ್ಟಿಸಿತು. ಹೂಡಿಕೆದಾರರು ಮತ್ತು ಷೇರುದಾರರನ್ನು ಡೋಲಾಯಮಾನ ಸ್ಥಿತಿಗೆ ದೂಡಿತು.

ಇನ್ಫೊಸಿಸ್ ಕಂಪೆನಿ ದಿನದ ವಹಿವಾಟಿನಲ್ಲಿ ಅತ್ಯಂತ ಗರಿಷ್ಠ ನಷ್ಟಕ್ಕೆ ಒಳಗಾಯಿತು. ಕಂಪೆನಿ ಷೇರುಗಳು ಶೇ 9.60ರಷ್ಟು ಕುಸಿತ ಕಂಡು ಪ್ರತಿ ಷೇರಿನ ಬೆಲೆ 923.10ಕ್ಕೆ ಇಳಿಕೆ ಕಂಡಿತು.

2017 ಮೇ 2ರ ನಂತರ ಷೇರಿನ ಅತ್ಯಂತ ಕನಿಷ್ಠ ಮೌಲ್ಯ ಇದಾಗಿದೆ. ಮಧ್ಯಂತರ ವಹಿವಾಟಿನಲ್ಲಿ 52 ವಾರಗಳ ಕನಿಷ್ಠ ಮಟ್ಟವನ್ನೂ ತಲುಪಿತ್ತು.

ದಿನದ ವಹಿವಾಟಿನಲ್ಲಿ ಕಂಪೆನಿಯ ಮಾರುಕಟ್ಟೆ ಮೌಲ್ಯದಲ್ಲಿ  ₹24,839 ಕೋಟಿಗಳಷ್ಟು ನಷ್ಟವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.