ADVERTISEMENT

ಸೇವಾ ಶುಲ್ಕ ಕಡ್ಡಾಯ ಅಲ್ಲ

ಪಿಟಿಐ
Published 22 ಏಪ್ರಿಲ್ 2017, 19:46 IST
Last Updated 22 ಏಪ್ರಿಲ್ 2017, 19:46 IST

ನವದೆಹಲಿ:  ಹೋಟೆಲ್‌ ಮತ್ತು ರೆಸ್ಟೋರೆಂಟ್‌ಗಳ ಬಿಲ್‌ನಲ್ಲಿ ನಮೂದಿಸುವ ಸೇವಾ ಶುಲ್ಕವನ್ನು  (ಸರ್ವಿಸ್‌ ಚಾರ್ಜ್‌) ಗ್ರಾಹಕರು ಇನ್ನು ಮುಂದೆ ಕಡ್ಡಾಯವಾಗಿ ಪಾವತಿಸುವ ಅಗತ್ಯ ಇಲ್ಲ.

ಈ ಬಗ್ಗೆ ನಿರ್ಧಾರಕ್ಕೆ ಬರುವ ಅಧಿಕಾರವನ್ನು ಗ್ರಾಹಕರಿಗೇ ಕೊಡುವ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಕೇಂದ್ರ ಸರ್ಕಾರ ಅನುಮೋದಿಸಿದೆ. ಮಾರ್ಗದರ್ಶಿ ಸೂತ್ರಗಳ ಪ್ರಕಾರ,  ಸೇವಾ ಶುಲ್ಕವು ಸಂಪೂರ್ಣವಾಗಿ ಸ್ವಇಚ್ಛೆಯದಾಗಿದ್ದು, ಕಡ್ಡಾಯವಾಗಿರುವುದಿಲ್ಲ.

ಗ್ರಾಹಕರ ಹಿತಾಸಕ್ತಿ ರಕ್ಷಿಸುವ ಉದ್ದೇಶದಿಂದಲೇ   ಮಾರ್ಗದರ್ಶಿ ಸೂತ್ರ ಹೊರಡಿಸಲಾಗಿದೆ.  ಸೇವಾ ಶುಲ್ಕವನ್ನು ಕಡ್ಡಾಯವಾಗಿ ವಸೂಲಿ ಮಾಡುವುದು ನ್ಯಾಯಯುತವಲ್ಲದ ವ್ಯಾಪಾರ ಆಚರಣೆ ಆಗಿರಲಿದೆ.

ADVERTISEMENT

‘ಗ್ರಾಹಕರು ಪಾವತಿಸಬೇಕಾದ ಸರ್ವಿಸ್‌ ಚಾರ್ಜ್‌ ಅನ್ನು ಹೋಟೆಲ್‌ಗಳು ನಿರ್ಧರಿಸುವಂತಿಲ್ಲ.  ಗ್ರಾಹಕರು ತಮ್ಮ ವಿವೇಚನೆಗೆ ತಕ್ಕಂತೆ ಸೇವಾ ಶುಲ್ಕ ಪಾವತಿಸಬಹುದು’ ಎಂದು  ಕೇಂದ್ರ ಆಹಾರ ಮತ್ತು ನಾಗರಿಕ ವ್ಯವಹಾರ ಸಚಿವ ರಾಂ ವಿಲಾಸ್‌ ಪಾಸ್ವಾನ್‌ ಟ್ಟೀಟ್‌ ಮಾಡಿದ್ದಾರೆ.

ಗ್ರಾಹಕರಿಗೆ ನೀಡುವ ಆಹಾರ ಬಿಲ್‌ನಲ್ಲಿ, ಸೇವಾ ಶುಲ್ಕ ಪಾವತಿಸುವುದನ್ನು ಗ್ರಾಹಕರ ವಿವೇಚನೆಗೆ ಬಿಟ್ಟಿರುವುದನ್ನು ಸ್ಪಷ್ಟವಾಗಿ ನಮೂದಿಸಬೇಕು ಎಂದು ನಿಬಂಧನೆ ವಿಧಿಸಲಾಗಿದೆ.

ಸೇವಾ ಶುಲ್ಕಕ್ಕೆ ಸಂಬಂಧಿಸಿದ ವಿವರವನ್ನು ಖಾಲಿ ಬಿಟ್ಟಿರಬೇಕು. ಗ್ರಾಹಕರು ಇಷ್ಟಪಟ್ಟರೆ ನಗದು ನಮೂದಿಸಿ ಪಾವತಿಸಬಹುದು ಎಂದು ಸೂಚಿಸಲಾಗಿದೆ.

ಬಿಲ್‌ನಲ್ಲಿ ಕಡ್ಡಾಯವಾಗಿ ಸೇವಾ ಶುಲ್ಕ ಪಾವತಿಸಬೇಕು ಎಂದು ನಮೂದಿಸಿದ್ದರೆ,  ನ್ಯಾಯಯುತವಲ್ಲದ ಮತ್ತು ನಿರ್ಬಂಧಿತ ವ್ಯಾಪಾರ ಆಚರಣೆ ಅನ್ವಯ  ಗ್ರಾಹಕರ ದೂರು ಪರಿಹಾರ ವೇದಿಕೆಗೆ ದೂರು ಸಲ್ಲಿಸಬಹುದು ಎಂದು  ಗ್ರಾಹಕ ವ್ಯವಹಾರ ಸಚಿವಾಲಯದ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಮಾಲೀಕರ ಅತೃಪ್ತಿ: ಈ ಮಾರ್ಗದರ್ಶಿ ಸೂತ್ರಗಳಿಗೆ ಹೋಟೆಲ್‌ ಮತ್ತು ರೆಸ್ಟೊರೆಂಟ್‌ ಮಾಲೀಕರು ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಕಾನೂನು ಅಭಿಪ್ರಾಯ ಪಡೆದು ನಿರ್ಧಾರಕ್ಕೆ ಬರಲು ಮತ್ತು ನಾಗರಿಕ ವ್ಯವಹಾರಗಳ ಸಚಿವಾಲಯಕ್ಕೆ ಮನವಿ ಸಲ್ಲಿಸಲು ಮಾಲೀಕರು ನಿರ್ಧರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.