ADVERTISEMENT

‘ಇನ್ವೆಸ್ಟ್‌ ಕರ್ನಾಟಕ’ಕ್ಕೆ ಸಂಸ್ಥೆ ರೂಪ

ಉದ್ಯಮ ಹೆಚ್ಚಿನ ಉತ್ತೇಜನಕ್ಕೆ ಕ್ರಮ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 29 ಜೂನ್ 2016, 22:30 IST
Last Updated 29 ಜೂನ್ 2016, 22:30 IST
‘ಇನ್ವೆಸ್ಟ್‌ ಕರ್ನಾಟಕ’ಕ್ಕೆ ಸಂಸ್ಥೆ ರೂಪ
‘ಇನ್ವೆಸ್ಟ್‌ ಕರ್ನಾಟಕ’ಕ್ಕೆ ಸಂಸ್ಥೆ ರೂಪ   

ಬೆಂಗಳೂರು: ‘ರಾಜ್ಯದಲ್ಲಿ ಕೈಗಾರಿಕೆ ಪ್ರಗತಿ ಮತ್ತು  ವಾಣಿಜ್ಯ ವಹಿವಾಟನ್ನು ಮತ್ತಷ್ಟು ಸುಲಲಿತಗೊಳಿಸಲು ರಾಜ್ಯ ಸರ್ಕಾರ, ಉದ್ಯಮದ ಪಾಲುದಾರಿಕೆಯಲ್ಲಿ ‘ಇನ್ವೆಸ್ಟ್‌ ಕರ್ನಾಟಕ’ ಬ್ರ್ಯಾಂಡ್‌ ಅಡಿ ಹೊಸ ಸಂಸ್ಥೆ ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುತ್ತಿದೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ನಗರದಲ್ಲಿ ಬುಧವಾರ ನಡೆದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಸ್ಥೆಯ (ಎಫ್‌ಕೆಸಿಸಿಐ) 99ನೇ ಸರ್ವಸದಸ್ಯರ ಮಹಾಸಭೆ ಹಾಗೂ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು. ‘ರಾಜ್ಯದಲ್ಲಿ ಬಂಡವಾಳ ಆಕರ್ಷಿಸಲು  ‘ಕರ್ನಾಟಕದಲ್ಲಿ ಹೂಡಿಕೆ ಮಾಡಿ’ ಸಮಾವೇಶವೇ ಕೊನೆಯದಲ್ಲ. ಈಗಷ್ಟೇ ಹೂಡಿಕೆಯ ಹೊಸ ಅಧ್ಯಾಯವೊಂದು ಆರಂಭವಾಗಿದೆ. ಇನ್ವೆಸ್ಟ್‌ ಕರ್ನಾಟಕ ಸಂಸ್ಥೆ ಈ ವಾತಾವರಣ ಮುಂದುವರೆಸಿಕೊಂಡು ಹೋಗಲಿದೆ’ ಎಂದರು.

‘ಎರಡು ವರ್ಷಗಳಲ್ಲಿ ರಾಜ್ಯ ಸರ್ಕಾರ ಜಾರಿಗೆ ತಂದ ಅನೇಕ ಕೈಗಾರಿಕ ಪರ ಮತ್ತು ಉದ್ಯಮ ಸ್ನೇಹಿ ನೀತಿಗಳಿಂದಾಗಿ  ಎಲ್ಲ ಕ್ಷೇತ್ರಗಳಲ್ಲಿಯೂ ಕರ್ನಾಟಕ  ಮುಂಚೂಣಿಯಲ್ಲಿದೆ. ‘ದೇಶದ ಶೇ 60ರಷ್ಟು ಜೈವಿಕ ತಂತ್ರಜ್ಞಾನ ಕೈಗಾರಿಕೆಗಳಿಗೆ ರಾಜ್ಯ ಆಶ್ರಯತಾಣವಾಗಿದೆ. ಇದರೊಂದಿಗೆ 700 ಬಹುರಾಷ್ಟ್ರೀಯ ಕಂಪೆನಿ ಮತ್ತು 500 ಫಾರ್ಚೂನ್ ಕಂಪೆನಿಗಳೂ ರಾಜ್ಯದಲ್ಲಿ ನೆಲೆ ನಿಂತಿವೆ.

‘ವಿದೇಶಿ ನೇರ ಬಂಡವಾಳ ಹೂಡಿಕೆಗೆ (ಎಫ್‌ಡಿಐ) ಬೆಂಗಳೂರು ಆಕರ್ಷಣೆಯ ಕೇಂದ್ರವಾಗಿದ್ದು, ಜಾಗತಿಕ ನವೋದ್ಯಮದ ಅತ್ಯುತ್ತಮ ತಾಣಗಳ ಪಟ್ಟಿಯಲ್ಲಿ ಸ್ಥಾನ ಪಡೆದ ಬೆಂಗಳೂರು ದೇಶದ ಏಕೈಕ ನಗರವಾಗಿದೆ’ ಎಂದು ಮುಖ್ಯಮಂತ್ರಿ ಹೆಮ್ಮೆಪಟ್ಟರು.


‘ಈ ಮೊದಲು ದೆಹಲಿ ಮತ್ತು ಮುಂಬೈಗಳಿಗೆ ಮಾತ್ರ ತೆರಳುತ್ತಿದ್ದ  ವಿದೇಶಿ  ವಾಣಿಜ್ಯ ನಿಯೋಗಗಳು ಈಗ ಮೊದಲು ರಾಜ್ಯಕ್ಕೆ ಭೇಟಿ ನೀಡುತ್ತಿವೆ. ರಾಜ್ಯದಲ್ಲಿಯ ಉದ್ಯಮ ಸ್ನೇಹಿ ವಾತಾವರಣದಿಂದಾಗಿ ಕರ್ನಾಟಕ ಮತ್ತು ಬೆಂಗಳೂರು ಬಹುರಾಷ್ಟ್ರೀಯ ಕಂಪೆನಿಗಳ ಮೊದಲ  ನೆಚ್ಚಿನ ತಾಣವಾಗಿ ಬದಲಾಗಿದೆ’ ಎಂದು ಸಿದ್ದರಾಮಯ್ಯ ಸಂತಸ ವ್ಯಕ್ತಪಡಿಸಿದರು.

‘ರಾಜ್ಯವನ್ನು ಭಾರತದ ಪ್ರಗತಿಯ ಎಂಜಿನ್‌  ಮಾಡುವ ಮಹತ್ವಾಕಾಂಕ್ಷೆಯೊಂದಿಗೆ ಸರ್ಕಾರ ದಿಟ್ಟ ಹೆಜ್ಜೆ ಇಡುತ್ತಿದೆ.  ರಾಜರ್ಷಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರ ದೂರದರ್ಶಿತ್ವ ಮತ್ತು ಉದಾರತೆ ಹಾಗೂ ಹಾಕಿಕೊಟ್ಟ ಮಾರ್ಗ ನಮಗೆ ಪ್ರೇರಣೆಯಾಗಿದೆ’ ಎಂದರು. ಮೂಲಸೌಕರ್ಯ ಕಲ್ಪಿಸಲು ಬದ್ಧ: ‘ವಿದೇಶಿ ಹೂಡಿಕೆದಾರರು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಿದ್ದು ಅವರಿಗೆ ಅಗತ್ಯ ಮೂಲಸೌಕರ್ಯ ಕಲ್ಪಿಸಲು ರಾಜ್ಯ ಸರ್ಕಾರ ಬದ್ಧವಾಗಿದೆ’ ಎಂದು ಬೃಹತ್‌ ಕೈಗಾರಿಕಾ ಮತ್ತು ಮೂಲಸೌಕರ್ಯ ಸಚಿವ ಆರ್‌.ವಿ. ದೇಶಪಾಂಡೆ  ಭರವಸೆ ನೀಡಿದರು.

ಸ್ಟಾರ್ಟ್‌ಅಪ್‌ ಇಂಡಿಯಾ, ಮೇಕ್‌ ಇನ್‌ ಇಂಡಿಯಾ, ಡಿಜಿಟಲ್‌ ಇಂಡಿಯಾ ಯೋಜನೆಗಳಲ್ಲಿ ಕರ್ನಾಟಕದ ಮುಂಚೂಣಿ ಪಾತ್ರದ ಕುರಿತ ವಿಚಾರ ಸಂಕಿರಣದಲ್ಲಿ ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕೆ. ರತ್ನಪ್ರಭ, ಐ.ಟಿ ಮತ್ತು ಬಿ.ಟಿ ಇಲಾಖೆ ಪ್ರಧಾನ ಕಾರ್ಯದರ್ಶಿ ವಿ. ಮಂಜುಳಾ, ಮಾಜಿ ಮುಖ್ಯ ಕಾರ್ಯದರ್ಶಿ ಕೌಶಿಕ್‌ ಮುಖರ್ಜಿ  ಮಾತನಾಡಿದರು. ಎಫ್‌ಕೆಸಿಸಿಐ ಅಧ್ಯಕ್ಷ ತಲ್ಲಂ ಆರ್‌. ದ್ವಾರಕನಾಥ್‌, ಉಪಾಧ್ಯಕ್ಷ ಎಂ.ಸಿ. ದಿನೇಶ್‌ ವೇದಿಕೆಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT